ವಯನಾಡ್ ನಲ್ಲಿ ಮೂರು ಕಡೆ ಭೂಕುಸಿತ: ಕೊಚ್ಚಿ ಹೋದ ಸೇತುವೆ
Update: 2024-07-30 06:28 GMT
ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ಕೇವಲ 4 ಗಂಟೆಯ ಅವಧಿಯಲ್ಲಿ ಮೂರು ಕಡೆ ಭೂಕುಸಿತ ಸಂಭವಿಸಿದ್ದು, ಮಣ್ಣಿನಡಿ ನೂರಾರು ಮಂದಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ಈ ಭೂಕುಸಿತದಿಂದ ಮೆಪ್ಪಾಡಿ, ಚೂರಲ್ ಮಾಲಾ, ವೈತಿರಿ ಹಾಗೂ ಮುಂಡಕ್ಕೈ ಗ್ರಾಮಗಳು ಅತಿ ಹೆಚ್ಚು ಹಾನಿಗೊಳಗಾಗಿವೆ.
ವಯನಾಡ್ ಜಿಲ್ಲೆಯ ಇತರ ಭಾಗಗಳನ್ನು ಸಂಪರ್ಕಿಸಲು ಇದ್ದ ಏಕೈಕ ಸೇತುವೆಯು ಭೂಕುಸಿತದಿಂದ ಕೊಚ್ಚಿಕೊಂಡು ಹೋಗಿರುವುದರಿಂದ ಮುಂಡಕ್ಕೈ ಗ್ರಾಮದಲ್ಲಿ ರಕ್ಷಣಾ ಕಾರ್ಯಾಚರಣೆಗೆ ತೀವ್ರ ತೊಡಕುಂಟಾಗಿದೆ. ಈಗಾಗಲೇ 36ಕ್ಕೂ ಹೆಚ್ಚು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಗ್ಗಗಳ ನೆರವಿನಿಂದ ನದಿಯನ್ನು ದಾಟುವ ಮೂಲಕ ಮುಂಡಕ್ಕೈ ಗ್ರಾಮವನ್ನು ತಲುಪಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ಸದ್ಯ ತನ್ನ ಪ್ರಯತ್ನ ಮುಂದುವರಿಸಿದೆ.