ವಯನಾಡ್ ಭೂಕುಸಿತ | ರಕ್ಷಣಾ ಕಾರ್ಯಾಚರಣೆಯ 11ನೇ ದಿನ ನಾಲ್ಕು ಶವಗಳು ಪತ್ತೆ ; 131 ಜನರು ಇನ್ನೂ ನಾಪತ್ತೆ

Update: 2024-08-09 16:09 GMT

PC : PTI 

ವಯನಾಡ್ : ವಯನಾಡ್ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳು ಶುಕ್ರವಾರ 11ನೇ ದಿನಕ್ಕೆ ಕಾಲಿರಿಸಿದ್ದು, ಇನ್ನೂ ನಾಲ್ಕು ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಜಿಲ್ಲಾಡಳಿತವು ಪೀಡಿತ ಪ್ರದೇಶಗಳಲ್ಲಿ ಬದುಕುಳಿದವರನ್ನು ಮತ್ತು ನಾಪತ್ತೆಯಾಗಿರುವ ಶವಗಳನ್ನು ಪತ್ತೆ ಹಚ್ಚಲು ಅಂತಿಮ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ.

ವರದಿಗಳ ಪ್ರಕಾರ ರಕ್ಷಣಾ ತಂಡಗಳು ಸೂಚಿಪರಾ-ಕಂತನ್‌ಪರಾ ಅರಣ್ಯ ಪ್ರದೇಶದಲ್ಲಿ ನಾಲ್ಕು ಮೃತದೇಹಗಳು ಮತ್ತು ಒಂದು ಕಾಲನ್ನು ಪತ್ತೆ ಹಚ್ಚಿದೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ನಾಪತ್ತೆಯಾಗಿರುವವರ ಶೋಧಕ್ಕಾಗಿ ಅಂತಿಮ ಕಾರ್ಯಾಚರಣೆಯಲ್ಲಿ ಪೋಲಿಸ್, ಸೇನೆ, ಅರಣ್ಯ, ಅಗ್ನಿಶಾಮಕ ಪಡೆಗಳು, ರಕ್ಷಣಾಸಿಬ್ಬಂದಿಗಳು, ಸ್ವಯಂಸೇವಕರು ಮತ್ತು ದುರಂತದಲ್ಲಿ ಸಂತ್ರಸ್ತರನ್ನು ತೊಡಗಿಸಿದೆ.

ಶೋಧ ಕಾರ್ಯಾಚರಣೆಯಲ್ಲಿ ಎಲ್ಲರನ್ನೂ ತೊಡಗಿಸಿಕೊಳ್ಳುವುದು ಮತ್ತು ಎಲ್ಲ ನೈಪುಣ್ಯವನ್ನು ಬಳಸಿಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದು ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುತ್ತಿರುವ ಸಚಿವಾಲಯಗಳ ಮಟ್ಟದ ಉಪಸಮಿತಿಯು ತಿಳಿಸಿದೆ.

ಶೋಧ ಕಾರ್ಯಾಚರಣೆಯ ಅಂತಿಮ ಸುತ್ತಿನಲ್ಲಿ ಭಾಗವಹಿಸಲು ಸಂಬಂಧಿಗಳಿಗೆ ಅವಕಾಶವನ್ನು ಒದಗಿಸಲು ಸಂತ್ರಸ್ತರನ್ನು ಸೇರಿಸಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೆ.ರಾಜನ್ ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿದಾಗ ಯಾವುದೇ ಮಾನಸಿಕ ಆಘಾತವನ್ನು ಎದುರಿಸಬಹುದಾದ ಸಂತ್ರಸ್ತರಿಗೆ ನೆರವಾಗಲು ವೈದ್ಯಕೀಯ ತಂಡಗಳನ್ನೂ ಭೂಕುಸಿತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ, ಆ.10ರಂದು ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News