ವಯನಾಡ್ ದುರಂತ | ಕೇಂದ್ರದಿಂದ ಉತ್ತಮ ಪ್ರಮಾಣದ ನೆರವಿನ ನಿರೀಕ್ಷೆ : ಸಿಎಂ ಪಿಣರಾಯಿ ವಿಜಯನ್
ತಿರುವನಂತಪುರ : ವಯನಾಡ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಭೂಕುಸಿತದ ಘಟನೆಗಾಗಿ 2 ಸಾವಿರ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ನೀಡಬೇಕೆಂದು ಕೇರಳ ಸರಕಾರವು ಕೇಂದ್ರವನ್ನು ಕೋರಿದೆ. ಮೋದಿ ಸರಕಾರವು ಈ ನಿಟ್ಟಿನಲ್ಲಿ ಉತ್ತಮ ಸಹಕಾರವನ್ನು ನೀಡಲಿದೆಯೆಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಪಾರಿಸಾರಿಕವಾಗಿ ಸೂಕ್ಷ್ಮ ಪ್ರದೇಶಗಳಾದ ಪಶ್ಚಿಮಘಟ್ಟ ಪ್ರದೇಶಳ ಕುರಿತಾಗಿ ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿರಂಗನ್ ಸಮಿತಿಗಳು ಮಾಡಿರುವ ಶಿಫಾರಸುಗಳು, ಮುತ್ಸದ್ಧಿತನದ್ದಲ್ಲ ಎಂದು ಅವರು ಟೀಕಿಸಿದ್ದಾರೆ. ತನ್ನ ರಾಜ್ಯದ ಸಾಮಾಜಿಕ ನಿರೀಕ್ಷೆಗಳು ಹಾಗೂ ವಾಸ್ತವಿಕ ಪರಿಸ್ಥಿತಿಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲವೆಂದು ಹೇಳಿದರು.
ವಯನಾಡು ಭೂಕುಸಿತ ದುರಂತಗಳ ಕುರಿತಾಗಿ ಈ ವಾರಾಂತ್ಯದಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನ ಮಾತನಾಡುತ್ತಿದ್ದ ಅವರು, ಸಂತ್ರಸ್ತರ ಕುಟುಂಬಗಳಿಗಾಗಿ ನೂತನ ಟೌನ್‌ಶಿಪ್‌ಗಳನ್ನು ಒಂದು ವರ್ಷದೊಳಗೆ ನಿರ್ಮಿಸಲಾಗುವುದೆಂದು ಅವರು ತಿಳಿಸಿದರು. ನೂತನ ವಸತಿ ಪ್ರದೇಶಗಳು ಪ್ರತಿಕೂಲ ಹವಾಮಾನವನ್ನು ತಾಳಿಕೊಳ್ಳಬಲ್ಲದು ಹಾಗೂ ಸುಸ್ಥಿರವಾಗಿರಲಿವೆ ಎಂದು ಕೇರಳ ಮುಖ್ಯಮಂತ್ರಿ ಮಾಹಿತಿ ನೀಡಿದರು.
ಈ ವಿಷಯದ ಬಗ್ಗೆ ಪ್ರಧಾನಿಯವರು ತುಂಬಾ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಹಾಗೂ
ಕೇಂದ್ರ ಸರಕಾರದಿಂದ ಉತ್ತಮ ಸಹಾಯವನ್ನು ಪಡೆಯುವ ಬಗ್ಗೆ ತನ್ನ ರಾಜ್ಯವು ಆಶಾವಾದವನ್ನು ಹೊಂದಿದೆ ಎಂದರು. ವಯನಾಡ್ ದುರಂತದ ಕುರಿತ ವರದಿಯನ್ನು ಕೇಂದ್ರೀಯ ತಂಡವು ಕೇಂದ್ರ ಸರಕಾರಕ್ಕೆ ವರದಿಯನ್ನು ಸಲ್ಲಿಸಿದ ಬಳಿಕ ಪರಿಹಾರ ಪ್ಯಾಕೇಜ್‌ಗಳು ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ವಯನಾಡು ಭೂಕುಸಿತದ ದುರಂತಗಳು ಒಂದು ರಾಷ್ಟ್ರೀಯ ಅಥವಾ ತೀವ್ರ ವಿಕೋಪ ಎಂದು ಶ್ರೇಣಿಕರಿಸುವುದರಿಂದ ದೇಶದ ಎಲ್ಲಾ ಸಂಸದರು ಕೇರಳ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆಯನ್ನು ನೀಡಬೇಕಾಗುತ್ತದೆ. ಇಲ್ಲದೆ ಇದ್ದಲ್ಲಿ ಸ್ಥಳೀಯ ಎಂಪಿಗಳು ಮಾತ್ರವೇ ದೇಣಿಗೆಯನ್ನು ನೀಡಲು ಸಾಧ್ಯವಾಗಲಿದೆ ಎಂದರು.
ಒಂದು ವೇಳೆ ದುರಂತವು ರಾಷ್ಟ್ರೀಯ ಅಥವಾ ತೀವ್ರ ವಿಕೋಪದ ಶ್ರೇಣಿಗೆ ವಯನಾಡ್ ದುರಂತವನ್ನು ಸೇರ್ಪಡೆಗೊಳಿಸಿದ್ದಲ್ಲಿ ನಾವು ಉತ್ತಮ ಸಹಕಾರವನ್ನು ಪಡೆಯಲಿದ್ದೇವೆ. ಪುನರ್‌ನಿರ್ಮಾಣಕ್ಕೆ ಉತ್ತಮ ವಾತಾವರಣವನ್ನು ಸೃಷ್ಟಿಸಲಿದೆ’ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಜುಲೈ 30ರಂದು ಸಂಭವಿಸಿದ ವಯನಾಡ್ ದುರಂತವು, ಪೂಂಜಿರಿಮಟ್ಟಂ, ಚೂರಾಲ್‌ಮಲ ಹಾಗೂ ಮುಂಡಕ್ಕೈ ಗ್ರಾಮಗಳ ನ್ನು ಸಂಪೂರ್ಣವಾಗಿ ಅಳಿಸಿಹಾಕಿದೆ. ಅಲ್ಲದೆ ಅಟ್ಟಮಲ್‌ನ ಕೆಲವು ಪ್ರದೇಶಗಳು ನಮ್ಮ ಜನರ ಬದುಕನ್ನು ಅಲುಗಾಡಿಸಿಬಿಟ್ಟಿವೆ. ಈ ದುರಂತವು ನಮ್ಮ ಜನರ ಬದುಕನ್ನು ಅಲುಗಾಡಿಸಿ ಬಿಟ್ಟಿದ್ದು, ಅವರು ಕಲ್ಪನೆಗೂ ನಿಲುಕದಂತಹ ಯಾತನೆಯನ್ನು ಅನುಭವಿಸುತ್ತಿದ್ದಾರೆ ಹಾಗೂ ತಮ್ಮ ಭವಿಷ್ಯದ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಿದರು. ದುರಂತದಲ್ಲಿ ಬದುಕುಳಿದವರಿಗೆ ಸಮಗ್ರ ಪುನರ್ವಸತಿ ಪ್ಯಾಕೇಜ್ ಅನ್ನು ಖಾತರಿಪಡಿಸುವುದು ನಮ್ಮ ಸರಕಾರದ ಪ್ರಾಥಮಿಕ ಗುರಿಯಾಗಿದೆ ಎಂದರು.