ವಯನಾಡ್ ದುರಂತದ ಬಗ್ಗೆ ಮೊದಲ ಸಂದೇಶ ಕಳುಹಿಸಿದ್ದ ಮಹಿಳೆಯೂ ಸಾವು
ಕೊಚ್ಚಿನ್: ಮಂಗಳವಾರ ರಾತ್ರಿ 1.30ರ ಸುಮಾರಿಗೆ ದೂರವಾಣಿ ಕರೆ ಮಾಡಿ ಹೊರಜಗತ್ತಿಗೆ ವಯನಾಡ್ ದುರಂತದ ಬಗ್ಗೆ ಮೊದಲು ಮಾಹಿತಿ ನೀಡಿದ್ದ ಮಹಿಳೆ ನೀತು ಜೋಜೊ ದುರಂತದಲ್ಲಿ ಮೃತಪಟ್ಟಿದ್ದಾರೆ.
ಚೂರಲ್ಮಲ ನಿವಾಸಿ ನೀತು ಗಾಳಿಯ ಘರ್ಜನೆ, ಕಲ್ಲುಬಂಡೆಗಳು ಉರುಳಿ ಬರುವ ಭಯಾನಕ ಸದ್ದು, ಮನೆಗೆ ನುಗ್ಗಿದ ನೀರು ಮುಂತಾದ ವಿಪತ್ತಿನ ಸಂಕೇತದಿಂದಲೇ ಅಪಾಯದ ಮುನ್ಸೂಚನೆ ಅರಿತು ತಕ್ಷಣವೇ ತಾವು ಎಕ್ಸಿಕ್ಯೂಟಿವ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಯನಾಡ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ಗೆ ಕರೆ ಮಾಡಿದ್ದರು.
"ಆಕೆ ಮಧ್ಯರಾತ್ರಿ ಬಳಿಕ 1.30ರ ಸುಮಾರಿಗೆ ಕರೆ ಮಾಡಿದ್ದರು. ಬೃಹತ್ ಪ್ರಮಾಣದ ಭೂಕುಸಿತ ತಮ್ಮ ಪ್ರದೇಶದಲ್ಲಿ ಆಗಿದೆ ಎಂಬ ಮಾಹಿತಿ ನೀಡಿದ್ದರು. ಜನರ ರಕ್ಷಣೆಗೆ ವಾಹನ ಕಳುಹಿಸಿಕೊಡುವಂತೆ ಕೋರಿದ್ದರು" ಎಂದು ವಿಐಎಂಎಸ್ ನ ಡಿಜಿಎಂ ಶಾನವಾಸ್ ಪಲ್ಲಿಯಾಲ್ ಹೇಳಿದ್ದಾರೆ. ತಕ್ಷಣವೇ ನೆರವಿನ ಹಸ್ತ ಚಾಚಲಾಗುತ್ತದೆ. ಅಗತ್ಯ ಸಿದ್ಧತೆ ಮಾಡುತ್ತಿದ್ದೇವೆ ಎಂದು ದೂರವಾಣಿ ಮೂಲಕ ನೀತು ಅವರಿಗೆ ಮಾಹಿತಿ ನೀಡಲಾಗಿತ್ತು.
"ನಮ್ಮ ಆಸ್ಪತ್ರೆಯಿಂದ ಅಲ್ಲಿಗೆ ಸುಮಾರು ಮುಕ್ಕಾಲು ಗಂಟೆಯ ಪ್ರಯಾಣವಿತ್ತು. ತಕ್ಷಣವೇ ಮೆಪ್ಪಾಡಿ ಪೊಲೀಸ್ ಠಾಣೆಗೆ ಕರೆ ಮಾಡಿದಾಗ ಬ್ಯುಸಿ ಇತ್ತು. ಬಳಿಕ ಕಾಲ್ಪೆಟ್ಟ ಠಾಣೆಗೆ ಕರೆ ಮಾಡಿದಾಗ ಭೂಕುಸಿತದ ಬಗ್ಗೆ ಅವರಿಗೆ ಏನೂ ತಿಳಿದಿರಲಿಲ್ಲ. ಬಳಿಕ 100ಕ್ಕೆ ಕರೆ ಮಾಡಿ ತಿರುವನಂತಪುರ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದೆ” ಎಂದು ಪಲ್ಲಿಯಾಲ್ ವಿವರಿಸಿದರು.
ನೀತು ಮನೆಗೆ ಆ್ಯಂಬುಲೆನ್ಸ್ ಕಳುಹಿಸಲಾಯಿತು. ಆದರೆ ಚೂರಲ್ ಮಲ ಪಟ್ಟಣದ ಹೊರಗಿದ್ದ ಸೇತುವೆಯ ಮೇಲೆ ಮರಬಿದ್ದು ವಾಹನ ನಿಲ್ಲಿಸಬೇಕಾಯಿತು. ಸಣ್ಣ ಓಮ್ನಿ ವಾಹನವನ್ನು ಕಳುಹಿಸಲಾಗಿತ್ತು. ಆದರೆ ಆಗ ಕಾಲ ಮೀರಿತ್ತು. ನೀತು ನಿವಾಸದ ಒಳಗೆ ಪರಿಸ್ಥಿತಿ ಗಂಭೀರವಾಗಿತ್ತು. ನಿಮಿಷ ನಿಮಿಷಕ್ಕೂ ನೀರಿನ ಮಟ್ಟ ಹೆಚ್ಚುತ್ತಿತ್ತು. ಐದು ವರ್ಷದ ಮಗು ಮತ್ತು ಪೋಷಕರನ್ನು ಕರೆದುಕೊಂಡು ಹೋಗುವಂತೆ ಆಕೆ ಪತಿ ಜೋಜೊಗೆ ಒತ್ತಾಯಿಸಿದರು. ಆರೋಗ್ಯಕ್ಷೇತ್ರದ ಕಾರ್ಯಕರ್ತೆಯಾಗಿ ನೀತು ಅವರ ಸೂಚನೆ ಸ್ಪಷ್ಟವಾಗಿತ್ತು. ತಾನು ಕೆಲ ನೆರೆಹೊರೆಯವರನ್ನು ಸೇರಿಕೊಂಡು ಹಿಂಬಾಲಿಸುವುದಾಗಿ ಆಕೆ ತಿಳಿಸಿದರು. ಮುಂಜಾನೆ 4ರ ಸುಮಾರಿಗೆ ಎರಡನೇ ಭೀಕರ ಭೂಕುಸಿತ ಸಂಭವಿಸಿತು.
“ಮತ್ತೆ ನೀತುಗೆ ಕರೆ ಮಾಡಿದಾಗ ಹತ್ತಿರದವರ ರೋದನದ ಧ್ವನಿ ಮಾತ್ರ ಕೇಳಿಸುತ್ತಿತ್ತು. ನದಿ ತನ್ನ ಮಾರ್ಗ ಬದಲಿಸಿ ಮನೆಗಳನ್ನು ಕೊಚ್ಚಿಕೊಂಡು ಹೋಗುತ್ತಿತ್ತು. ಆಕೆ ಹಾಗೂ ನೆರೆಯವರೆಲ್ಲರೂ ಕೊಚ್ಚಿಕೊಂಡು ಹೋದರು” ಎಂದು ಪಲ್ಲಿಯಾಲ್ ವಿವರಿಸಿದರು. ಸೂಚಿಮಲ ಜಲಪಾತದ ಬಳಿ ನೀತು ಅವರ ಮೃತದೇಹ ಪತ್ತೆಯಾಗಿದೆ.