ಪ್ಯಾರಿಸ್ ಒಲಿಂಪಿಕ್ಸ್ ಗೆ ಉತ್ತಮವಾಗಿ ಸಿದ್ಧರಾಗಿದ್ದೇವೆ : ಕೇಂದ್ರ ಸಚಿವ ಅನುರಾಗ್ ಠಾಕೂರ್
ಹೊಸದಿಲ್ಲಿ : 2024ರ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯಲು ಹಾಗೂ ಉತ್ತಮವಾಗಿ ತಯಾರಿ ನಡೆಸಲು ನಾವು ನಮ್ಮ ಕ್ರೀಡಾಪಟುಗಳನ್ನು ಸಂಪೂರ್ಣವಾಗಿ ಬೆಂಬಲಿಸಿದ್ದೇವೆ. ನಮ್ಮ ಕ್ರೀಡಾಪಟುಗಳು ಒಲಿಂಪಿಕ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ಮರಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಕೇಂದ್ರ ಯುವಜನ ವ್ಯವಹಾರಗಳು ಹಾಗೂ ಕ್ರೀಡಾ ಸಚಿವರಾದ ಅನುರಾಗ್ ಠಾಕೂರ್ ಹೇಳಿದ್ದಾರೆ.
ನಮ್ಮ ಕ್ರೀಡಾಪಟುಗಳು ನಿರ್ಭೀತರಾಗಿದ್ದು, ವಿಶ್ವದ ಅತ್ಯುತ್ತಮ ಕ್ರೀಡಾಳುಗಳೊಂದಿಗೆ ಸರಿಸಮಾನವಾಗಿ ಸ್ಪರ್ಧಿಸುತ್ತಾರೆ. ಭಾರತೀಯ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾರಿಸ್ ಒಲಿಂಪಿಕ್ ಗೆ ಅರ್ಹತೆ ಪಡೆಯುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ನಾವು ಯಾವುದೇ ಅವಕಾಶವನ್ನು ಬಿಟ್ಟುಕೊಟ್ಟಿಲ್ಲ. ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ ಗೆ ಉತ್ತಮವಾಗಿ ಸಿದ್ಧರಾಗಿದ್ದೇವೆ ಎಂದರು.
ಈ ಒಲಿಂಪಿಕ್ ಸಂದರ್ಭದಲ್ಲಿ ಆಯ್ದ ಒಲಿಂಪಿಕ್ ವಿಭಾಗಗಳಲ್ಲಿ ತರಬೇತಿ ಮತ್ತು ಸ್ಪರ್ಧೆಗಳಿಗಾಗಿ 350 ಕ್ಕೂ ಹೆಚ್ಚು ವಿದೇಶಿ ತರಬೇತಿ ಪ್ರವಾಸಗಳನ್ನು ಅನುಮೋದಿಸಲಾಗಿದೆ. ಒತ್ತಡ ಮುಕ್ತರಾಗಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಸಿದ್ಧರಾಗುವಂತೆ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲಾಗಿದೆ. ಸದ್ಯಕ್ಕೆ, ನಮ್ಮ 58 ಕ್ರೀಡಾಪಟುಗಳು ಪ್ಯಾರಿಸ್ 2024 ರ ಒಲಿಂಪಿಕ್ ಗೇಮ್ಸ್ ಗೆ ಅರ್ಹತೆ ಪಡೆದಿದ್ದಾರೆ. ಮೊದಲ ಬಾರಿಗೆ ಪುರುಷರ ಹಾಗೂ ಮಹಿಳೆಯರ ಟೇಬಲ್ ಟೆನಿಸ್ ತಂಡಗಳು ಒಲಿಂಪಿಕ್ ಡ್ರಾದಲ್ಲಿ ಸ್ಥಾನ ಗಳಿಸಿವೆ. ಅದೇ ರೀತಿ, ಭಾರತವು ಮೊದಲ ಬಾರಿ ಮಹಿಳೆಯರ ಸ್ಕೀಟ್ ಶೂಟಿಂಗ್ ಹಾಗೂ ಈಕ್ವೆಸ್ಟ್ರಿಯನ್ (ಡ್ರೆಸೇಜ್) ನಲ್ಲಿ ತಲಾ ಒಂದು ಕೋಟಾವನ್ನು ಗೆದ್ದಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರಕಾರ ತನ್ನ ಖೇಲೋ ಇಂಡಿಯಾ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ ಒಟ್ಟು 156.43 ಕೋಟಿ ರೂ. ವೆಚ್ಚದಲ್ಲಿ 23 ಮೂಲಸೌಕರ್ಯ ಯೋಜನೆಗಳನ್ನು ಮಂಜೂರು ಮಾಡಿದೆ. 31 ಜಿಲ್ಲೆಗಳಲ್ಲಿ ಒಟ್ಟು 34 ಖೇಲೋ ಇಂಡಿಯಾ ಕೇಂದ್ರಗಳು (ಕೆಐಸಿ) ಹಾಗೂ 1 ಖೇಲೋ ಇಂಡಿಯಾ ರಾಜ್ಯ ಶ್ರೇಷ್ಠತಾ ಕೇಂದ್ರ (ಕೆ ಐ ಎಸ್ ಸಿ ಇ) ಇವೆ. ರಾಜ್ಯದಿಂದ ಒಟ್ಟು 122 ಖೇಲೋ ಇಂಡಿಯಾ ಕ್ರೀಡಾಪಟುಗಳು ಇದ್ದಾರೆ. ರಾಜ್ಯವು ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದ ಒಂದು ಆವೃತ್ತಿಯನ್ನು ಸಹ ಆಯೋಜಿಸಿದೆ ಎಂದು ಸಚಿವರು ತಿಳಿಸಿದರು.
ರಿಯೊ ಒಲಿಂಪಿಕ್ಸ್ ನಂತರ ಕ್ರೀಡಾಪಟುಗಳ ತರಬೇತಿ ಹಾಗೂ ಸ್ಪರ್ಧೆಗಾಗಿ ಅವರ ಪ್ರಸ್ತಾಪಗಳನ್ನು ಹಿಂದೆಂದಿಗಿಂತಲೂ ವೇಗವಾಗಿ ಅನುಮೋದಿಸಲಾಗುತ್ತಿದೆ, ನಾವು ಸೈಕ್ಲಿಂಗ್ ಮತ್ತು ಈಜು ಮುಂತಾದ ಕ್ರೀಡೆಗಳನ್ನು ಪ್ರೋತ್ಸಾಹಿಸಿದ್ದೇವೆ, ಇದು ಪದಕ ಪಟ್ಟಿಗೆ ಕೊಡುಗೆ ನೀಡಬಹುದು ಎಂದರು.
ಕ್ರೀಡಾ ಅಭಿವೃದ್ಧಿಗಾಗಿ ಸರಕಾರವು ಕಳೆದ ದಶಕದಲ್ಲಿ ಕ್ರೀಡಾ ಸಚಿವಾಲಯದ ಬಜೆಟ್ ನ ಗಾತ್ರವನ್ನು 2013-14 ರಲ್ಲಿದ್ದ 1,093 ಕೋಟಿ ರೂ.ಗಳಿಂದ 2023-24 ರಲ್ಲಿ 3,397.32 ಕೋಟಿ ರೂ.ಗಳಿಗೆ ಮೂರು ಪಟ್ಟು ಹೆಚ್ಚಿಸಿದೆ. ಸರಕಾರದ ಬಜೆಟ್ ಬೆಂಬಲದ ಜೊತೆಗೆ, ಸಿ ಎಸ್ ಆರ್ ನಿಧಿಗಳ ಮೂಲಕ ಕ್ರೀಡೆಗಳಲ್ಲಿ ಕಾರ್ಪೊರೇಟ್ ಹಾಗೂ ಖಾಸಗಿ ಹೂಡಿಕೆಗಳು ಭಾರತೀಯ ಕ್ರೀಡೆಯ ವಿಕಾಸಕ್ಕೆ ಕೊಡುಗೆ ನೀಡಿವೆ ಎಂದು ಸಚಿವರು ಹೇಳಿದರು.
ಖೇಲೋ ಇಂಡಿಯಾ ಯೋಜನೆಯು ಫಲಿತಾಂಶಗಳನ್ನು ನೀಡಿದೆ. ಇದು ಕೇವಲ ಒಂದು ಯೋಜನೆಯಾಗಿರದೆ, ರಾಷ್ಟ್ರವ್ಯಾಪಿ ಆಂದೋಲನವಾಗಿ ಮಾರ್ಪಟ್ಟಿದೆ. ನಾವು ಪ್ರಸ್ತುತ 2,800 ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ವಾರ್ಷಿಕ 6.28 ಲಕ್ಷ ರೂ.ಗಳ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದು, ಅವರ ತರಬೇತಿ, ಊಟ, ವಸತಿ, ತಮ್ಮ ಸ್ವಂತ ಖರ್ಚಿಗೆ ಭತ್ಯೆಯನ್ನು ನೀಡುತ್ತೇವೆ. ಪ್ರತಿ ವರ್ಷವೂ ಹೊಸ ಕ್ರೀಡಾಪಟುಗಳನ್ನು ಈ ಯೋಜನೆಗೆ ಸೇರಿಸಲಾಗುತ್ತದೆ. ಅಸಮರ್ಥರನ್ನು ಹೊರಗಿಡಲು ಕಾರ್ಯಕ್ಷಮತೆಯ ನಿರಂತರ ಮೇಲ್ವಿಚಾರಣೆ ಇರುತ್ತದೆ ಎಂದು ಸಚಿವರು ಹೇಳಿದರು.
ಆಧುನಿಕ ಕ್ರೀಡಾ ಸೌಲಭ್ಯಗಳನ್ನು ತಳಮಟ್ಟದ ಪ್ರತಿಭಾವಂತರ ಮನೆ ಬಾಗಿಲಿಗೆ ಕೊಂಡೊಯ್ಯುವ ಅವಶ್ಯಕತೆಯಿದೆ, ಇದು ಕ್ರೀಡಾಪಟುಗಳು ದೂರಕ್ಕಿಂತ ಮನೆಯ ಹತ್ತಿರದಲ್ಲಿಯೇ ಬೆಂಬಲ ಪಡೆಯುವುದನ್ನು ಖಚಿತಪಡಿಸುತ್ತದೆ. ಇಂತಹ ಚಿಂತನೆಯೇ 331 ಯೋಜನೆಗಳಿಗೆ ಕಾರಣವಾಗಿದ್ದು, 2016ರಿಂದ 3000 ಕೋಟಿ ರೂ.ಗೂ ಹೆಚ್ಚು ಅನುದಾನ ಮಂಜೂರಾಗಿದೆ. ಕ್ರೀಡಾ ಮೂಲಸೌಕರ್ಯಗಳ ಸೃಷ್ಟಿ ಮತ್ತು ಉನ್ನತೀಕರಣಕ್ಕಾಗಿ, ಹಣಕಾಸು ಸಚಿವಾಲಯವು 2024-25 ರವರೆಗೆ 1,879 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಸೂಕ್ತವಾದ ತಿಳುವಳಿಕೆ ಒಪ್ಪಂದದ (ಎಂಒಯು) ಮೂಲಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ ಕ್ರೀಡಾ ಮೂಲಸೌಕರ್ಯವನ್ನು ಅತ್ಯುತ್ತಮವಾಗಿ ಬಳಸುವುದು ನಮ್ಮ ಪ್ರಯತ್ನವಾಗಿದೆ. ಒಂದು ರಾಜ್ಯ, ಒಂದು ಆಟ ಯೋಜನೆಯಡಿಯಲ್ಲಿ ರಾಜ್ಯದಿಂದ ಆಯ್ಕೆಯಾದ ಆದ್ಯತೆಯ ಕ್ರೀಡೆಗಾಗಿ ರಾಜ್ಯ ಶ್ರೇಷ್ಠತಾ ಕೇಂದ್ರಗಳು ಮತ್ತು ಖೇಲೋ ಇಂಡಿಯಾ ಕೇಂದ್ರಗಳಿಗೆ ಗರಿಷ್ಠ ಹಣವನ್ನು ಒದಗಿಸಲಾಗುತ್ತಿದೆ ಎಂದರು.
2036ರ ಬೇಸಿಗೆ ಒಲಿಂಪಿಕ್ಸ್ ಗಿಂತ ಮುಂಚಿತವಾಗಿ 2030ರಲ್ಲಿ ಯುವ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಲು ನಾವು ಉತ್ಸುಕರಾಗಿದ್ದೇವೆ. ಅಕ್ಟೋಬರ್ 2023 ರಲ್ಲಿ ಮುಂಬೈನಲ್ಲಿ ನಡೆದ ಐತಿಹಾಸಿಕ ಐಒಸಿ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2036 ರ ಒಲಿಂಪಿಕ್ಸ್ ಹಾಗೂ 2030 ರ ಯುವ ಒಲಿಂಪಿಕ್ಸ್ ಅನ್ನು ಆಯೋಜಿಸಲು ಭಾರತ ಉತ್ಸುಕವಾಗಿದೆ ಮತ್ತು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಘೋಷಿಸಿದ್ದರು. ನಾವು ಭಾರತೀಯ ಒಲಿಂಪಿಕ್ ಸಂಸ್ಥೆಯೊಂದಿಗೆ ನಿಕಟ ಸಮನ್ವಯದಲ್ಲಿ ಕೆಲಸ ಮಾಡುತ್ತಿದ್ದೇವೆ ನಾವು ಈಗಾಗಲೇ ಭವಿಷ್ಯದ ಆತಿಥೇಯರ ಆಯೋಗದೊಂದಿಗೆ 2 ಸುತ್ತಿನ ಫಲಪ್ರದ ಚರ್ಚೆಗಳನ್ನು ನಡೆಸಿದ್ದೇವೆ ಎಂದು ಅನುರಾಗ್ ಠಾಕೂರ್ ತಿಳಿಸಿದರು.
ನಾವು 17 ವರ್ಷದೊಳಗಿನ ಪುರುಷರ ಮತ್ತು ಮಹಿಳೆಯರ ಫಿಫಾ ವಿಶ್ವಕಪ್, 44 ನೇ ಚೆಸ್ ಒಲಿಂಪಿಯಾಡ್, ಎಫ್ ಐ ಹೆಚ್ ಪುರುಷರ ಹಾಕಿ ವಿಶ್ವಕಪ್ ನಂತಹ ಅನೇಕ ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದೇವೆ. ಪ್ರಮುಖ ಕ್ರೀಡಾಕೂಟವನ್ನು ನಡೆಸುವುದರಿಂದ ದೇಶದ ಒಟ್ಟಾರೆ ಕ್ರೀಡಾ ಪೂರಕ ವ್ಯವಸ್ಥೆಯನ್ನು ಬಲಪಡಿಸುತ್ತದೆ 2036 ರ ವೇಳೆಗೆ ಭಾರತವು ಅಂತಾರಾಷ್ಟ್ರೀಯ ಕ್ರೀಡಾ ಕೇಂದ್ರವಾಗಿ ಹೊರಹೊಮ್ಮುತ್ತದೆ ಮತ್ತು ಮುಂಬರುವ ವರ್ಷಗಳಲ್ಲಿ ಭಾರತೀಯ ಕ್ರೀಡಾ ಆರ್ಥಿಕತೆಯು 1 ಲಕ್ಷ ಕೋಟಿ ರೂ.ಗಳ ಮೌಲ್ಯದ್ದಾಗಲಿದೆ. ನಮ್ಮ ಯುವ ಜನರು ಇದರ ಪ್ರಾಥಮಿಕ ಫಲಾನುಭವಿಗಳಾಗುತ್ತಾರೆ ಎಂದು ಪ್ರಧಾನಿ ಮೋದಿಯವರು ಊಹಿಸಿದ್ದಾರೆ ಎಂದು ಠಾಕೂರ್ ಹೇಳಿದ್ದಾರೆ.