“ನಮಗೆ 225 ಶಾಸಕರ ಬೆಂಬಲವಿದೆ”: ಮಹಾರಾಷ್ಟ್ರ ಸರಕಾರವನ್ನು ವಜಾಗೊಳಿಸುವ ವಿಪಕ್ಷಗಳ ಬೇಡಿಕೆಗೆ ಅಜಿತ್ ಪವಾರ್ ತಿರುಗೇಟು

Update: 2024-02-11 06:01 GMT

ಅಜಿತ್ ಪವಾರ್ | Photo : PTI 

ಮುಂಬೈ: ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಏಕನಾಥ್ ಶಿಂದೆ ನೇತೃತ್ವದ ಸರಕಾರವನ್ನು ವಜಾ ಮಾಡಬೇಕೆಂಬ ವಿರೋಧ ಪಕ್ಷಗಳ ಆಗ್ರಹಕ್ಕೆ, 288 ಸದಸ್ಯ ಬಲದ ವಿಧಾನಸಭೆಯಲ್ಲಿ ರಾಜ್ಯ ಸರಕಾರಕ್ಕೆ 225 ಶಾಸಕರ ಬೆಂಬಲವಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ತಿರುಗೇಟು ನೀಡಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮುಂಬೈನಲ್ಲಿ ಶನಿವಾರ ಕಾಂಗ್ರೆಸ್ ಮುಖಂಡ ಬಾಬಾ ಸಿದ್ದಿಕ್ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಪವಾರ್, “ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಅಧಿಕಾರದಲ್ಲಿದ್ದಾಗ 26/11ರ ಭಯೋತ್ಪಾದಕ ದಾಳಿಯ ಬಳಿಕ ಆ ರೀತಿಯ ಯಾವುದೇ ಬೇಡಿಕೆ ಬಂದಿರಲಿಲ್ಲ. ಇಂದು ಪ್ರತಿಪಕ್ಷಗಳು ಸರಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿವೆ. ನಮ್ಮ ಮಹಾಯುತಿ (ಬಿಜೆಪಿ-ಶಿವಸೇನೆ-ಎನ್‌ಸಿಪಿ ಮೈತ್ರಿ)ಯು 225 ಶಾಸಕರ ಬೆಂಬಲವನ್ನು ಹೊಂದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಭಯದ ವಾತಾವರಣ ಸೃಷ್ಟಿಸಲು ಕೆಲವರು ಯತ್ನಿಸುತ್ತಿದ್ದಾರೆ” ಎಂದು ಅವರು ಹೇಳಿದರು.

ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಗುರುವಾರ ಮುಂಬೈನ ಬೊರಿವಲಿ ಪ್ರದೇಶದಲ್ಲಿ ತಮ್ಮ ಪಕ್ಷದ ನಾಯಕ ಅಭಿಷೇಕ್ ಘೋಸಲ್ಕರ್ ಅವರ ಹತ್ಯೆ ಮತ್ತು ಈ ತಿಂಗಳ ಆರಂಭದಲ್ಲಿ ಥಾಣೆ ಜಿಲ್ಲೆಯಲ್ಲಿ ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್ ಅವರ ಪೊಲೀಸ್ ಠಾಣೆಯಲ್ಲಿ ಗುಂಡು ಹಾರಿಸಿದ್ದ ಹಿನ್ನೆಲೆಯಲ್ಲಿ ಸರಕಾರವನ್ನು ವಜಾಗೊಳಿಸುವಂತೆ ಕೋರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News