‘ಹುತಾತ್ಮರ ಸಮಾಧಿ’ಗೆ ಭೇಟಿ ನೀಡುವುದನ್ನು ತಡೆಯಲು ನಮ್ಮನ್ನು ಗೃಹಬಂಧನದಲ್ಲಿ ಇಡಲಾಗಿದೆ: ಮೆಹಬೂಬ ಮುಫ್ತಿ, ಇತರ ರಾಜಕೀಯ ನಾಯಕರ ಆರೋಪ

Update: 2024-07-13 12:25 GMT

ಮೆಹಬೂಬ ಮುಫ್ತಿ | PC : PTI 

ಶ್ರೀನಗರ: ತಾವು ಹುತಾತ್ಮ ಕಾಶ್ಮೀರಿಗಳಿಗೆ ಗೌರವ ಸಲ್ಲಿಸಲು ‘ಹುತಾತ್ಮರ ಸಮಾಧಿ’ಗೆ ಭೇಟಿ ನೀಡುವುದನ್ನು ತಡೆಯಲು ಅಧಿಕಾರಿಗಳು ತಮ್ಮನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಸೇರಿದಂತೆ ಜಮ್ಮು-ಕಾಶ್ಮೀರದ ಹಲವು ರಾಜಕೀಯ ನಾಯಕರು ಶನಿವಾರ ಆರೋಪಿಸಿದ್ದಾರೆ. 1931,ಜು.13ರಂದು ಮಹಾರಾಜ ಹರಿಸಿಂಗ್ ಆಡಳಿತವನ್ನು ವಿರೋಧಿಸಿ ಪ್ರತಿಭಟನೆಯಲ್ಲಿ ತೊಡಗಿದ್ದ 22 ಕಾಶ್ಮೀರಿಗಳು ಡೋಗ್ರಾ ಆಡಳಿತಗಾರನ ಸೇನೆಯಿಂದ ಕೊಲ್ಲಲ್ಲಟ್ಟಿದ್ದರು. ಅವರ ಸ್ಮರಣಾರ್ಥ ಕಾಶ್ಮೀರಿಗಳು ಪ್ರತಿ ವರ್ಷ ಜು.13ನ್ನು ‘ಹುತಾತ್ಮರ ದಿನ’ವನ್ನಾಗಿ ಆಚರಿಸುತ್ತಾರೆ.

‘‘ನನ್ನನ್ನು ಶ್ರೀನಗರದ ಹೊರವಲಯದ ಖಿಂಬರ್‌ನ ನನ್ನ ನಿವಾಸದಲ್ಲಿ ಗೃಹಬಂಧನದಲ್ಲಿ ಇರಿಸಲಾಗಿದೆ. ನಿರಂಕುಶಾಧಿಕಾರ, ದಬ್ಬಾಳಿಕೆ ಮತ್ತು ಅನ್ಯಾಯದ ವಿರುದ್ಧ ಕಾಶ್ಮೀರದ ಪ್ರತಿರೋಧದ ನಿರಂತರ ಸಂಕೇತವಾಗಿರುವ ‘ಮಝರ್ ಎ ಶುಹದಾ’ಕ್ಕೆ ನನ್ನ ಭೇಟಿಯನ್ನು ತಡೆಯಲು ನನ್ನ ನಿವಾಸದ ಪ್ರವೇಶದ್ವಾರಗಳಿಗೆ ಮತ್ತೆ ಬೀಗ ಜಡಿಯಲಾಗಿದೆ ’’ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮುಫ್ತಿ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

‘ನಮ್ಮ ಹುತಾತ್ಮರ ತ್ಯಾಗಗಳು ಕಾಶ್ಮೀರಿಗಳ ಚೈತನ್ಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿವೆ. ಈ ದಿನದಂದು ಹುತಾತ್ಮರಾದ ಪ್ರತಿಭಟನಾಕಾರರ ಸ್ಮರಣಾರ್ಥ ಹುತಾತ್ಮರ ದಿನವನ್ನು ಆಚರಿಸುವುದೂ ಇಂದು ಅಪರಾಧವಾಗಿದೆ’ಎಂದಿದ್ದಾರೆ.

ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಸಜ್ಜಾದ್ ಲೋನೆ ಅವರೂ ತನ್ನನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ)ಯ ಪ್ರಾಂತೀಯ ಅಧ್ಯಕ್ಷ ನಾಸಿರ್ ಅಸ್ಲಾಂ ವಾನಿ ಮತ್ತು ಯುವಘಟಕದ ಅಧ್ಯಕ್ಷ ಸಲ್ಮಾನ್ ಸಾಗರ್ ಅವರ ನಿವಾಸಗಳ ಪ್ರವೇಶದ್ವಾರಗಳಿಗೂ ಪೋಲಿಸರು ಬೀಗ ಜಡಿದಿದ್ದಾರೆ.

ಬೆಳಿಗ್ಗೆ ಪೋಲಿಸರು ಅಪ್ನಿ ಪಾರ್ಟಿಯ ನಾಯಕರು ಹುತಾತ್ಮರ ಸಮಾಧಿಗೆ ಭೇಟಿ ನೀಡುವುದನ್ನು ತಡೆದಿದ್ದರು.

ಹಿಂದಿನ ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಜು.13 ಸಾರ್ವಜನಿಕ ರಜಾದಿನವಾಗಿರುತ್ತಿತ್ತು ಮತ್ತು ಪ್ರತಿ ವರ್ಷ ಈ ದಿನದಂದು ಭವ್ಯ ಅಧಿಕೃತ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿತ್ತು. ಮುಖ್ಯಮಂತ್ರಿಅಥವಾ ರಾಜ್ಯಪಾಲರು ಕಾರ್ಯಕ್ರಮದ ಮುಖ್ಯಅತಿಥಿಯಾಗಿರುತ್ತಿದ್ದರು. ಆದರೆ 370ನೇ ವಿಧಿಯ ರದ್ದತಿಯ ಬಳಿಕ 2020ರಿಂದ ಆಡಳಿತವು ಸಾರ್ವಜನಿಕ ರಜಾದಿನಗಳ ಪಟ್ಟಿಯಿಂದ ಹುತಾತ್ಮರ ದಿನವನ್ನು ಕೈಬಿಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News