ಚಂಪೈ ಸೊರೇನ್ ಬಿಜೆಪಿ ಸೇರ್ಪಡೆ ವದಂತಿಗಳ ಬೆನ್ನಲ್ಲೇ ‘ಎನ್‌ಡಿಎ ಕುಟುಂಬಕ್ಕೆ ಸ್ವಾಗತ’ ಎಂದ ಕೇಂದ್ರ ಸಚಿವ
ಹೊಸದಿಲ್ಲಿ: “ಚಂಪೈ ಅಣ್ಣ, ನೀವು ಹುಲಿಯಾಗಿದ್ದಿರಿ, ಹುಲಿಯಾಗಿದ್ದೀರಿ ಹಾಗೂ ಹುಲಿಯಾಗಿ ಉಳಿಯಲಿದ್ದೀರಿ. ಎನ್‌ಡಿಎ ಕುಟುಂಬಕ್ಕೆ ಸ್ವಾಗತ. ಜೋಹರ್ ಹುಲಿ” ಎಂದು ಪೋಸ್ಟ್ ಮಾಡುವ ಮೂಲಕ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಕುತೂಹಲ ಕೆರಳಿಸಿದ್ದಾರೆ.
ಇದಕ್ಕೂ ಮುನ್ನ, ನನ್ನ ಅವಧಿಯಲ್ಲಿ ನನಗೆ ಅವಮಾನ ಮಾಡಲಾಗಿತ್ತು ಎಂದು ಹೇಳಿದ್ದ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್, ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯವರೆಗೆ ಎಲ್ಲ ಆಯ್ಕೆಗಳು ಮುಕ್ತವಾಗಿದೆ ಎಂದೂ ಹೇಳಿದ್ದರು. ನನಗೆ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲು ಅವಕಾಶ ನೀಡಲಾಗಲಿಲ್ಲ ಹಾಗೂ ದಿಢೀರೆಂದು ನನಗೆ ರಾಜೀನಾಮೆ ನೀಡಲು ಸೂಚಿಸಲಾಯಿತು ಎಂದು ತಮಗಾದ ಹಲವಾರು ಅವಮಾನಗಳ ಪಟ್ಟಿಯನ್ನು ಮುಂದಿಟ್ಟಿದ್ದ ಅವರು, ಇದರಿಂದಾಗಿ ನಾನು ಪರ್ಯಾಯ ಮಾರ್ಗದೆಡೆಗೆ ಗಮನ ಹರಿಸುವಂತಾಯಿತು ಎಂದೂ ಹೇಳಿಕೊಂಡಿದ್ದರು.
ನಿನ್ನೆ ದಿಲ್ಲಿಗೆ ಭೇಟಿ ನೀಡುವ ಮೂಲಕ ಪಕ್ಷಾಂತರದ ವದಂತಿಗೆ ನೀರು ಸುರಿದಿದ್ದ ಚಂಪೈ ಸೊರೇನ್, ನನ್ನ ಆಡಳಿತಾವಧಿಯಲ್ಲಿ ನಾನು ಯಾವುದೇ ತಪ್ಪು ಮಾಡಿರಲಿಲ್ಲ ಎಂದೂ ಪ್ರತಿಪಾದಿಸಿದ್ದರು.
ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯವು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಬಂಧಿಸಿದ್ದರಿಂದ, ಅವರ ಉತ್ತರಾಧಿಕಾರಿಯಾಗಿ ಚಂಪೈ ಸೊರೇನ್ ನೇಮಕಗೊಂಡಿದ್ದರು. ಆದರೆ, ಜುಲೈ ತಿಂಗಳಲ್ಲಿ ಹೇಮಂತ್ ಸೊರೇನ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಬೆನ್ನಿಗೇ, ಚಂಪೈ ಸೊರೇನ್ ಅವರಿಂದ ರಾಜೀನಾಮೆ ಪಡೆದಿದ್ದ ಜೆಎಂಎಂ, ಹೇಮಂತ್ ಸೊರೇನ್ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಪುನರಾಯ್ಕೆ ಮಾಡಿತ್ತು. ಇದರ ಬೆನ್ನಿಗೇ ಹೇಮಂತ್ ಸೊರೇನ್ ಹಾಗೂ ಚಂಪೈ ಸೊರೇನ್ ನಡುವೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿತ್ತು.