“ನಾನು ನನ್ನ ಪುತ್ರನಿಗೆ ವಧು ಕೇಳಲು ಹೋದರೆ ನನಗೇ ವಧು ನೀಡಿದರು”
ಬಸ್ತಾರ್ (ಛತ್ತೀಸ್ ಗಢ): ನಾನು ನನ್ನ ಪುತ್ರನಿಗಾಗಿ ಬಸ್ತಾರ್ ಲೋಕಸಭಾ ಕ್ಷೇತ್ರದ ಟಿಕೆಟ್ ಕೇಳಲು ಹೋದರೆ, ಅವರು ನನಗೇ ಟಿಕೆಟ್ ನೀಡಿದರು ಎಂದು ಟಿಕೆಟ್ ಅನ್ನು ವಧುವಿಗೆ ಹೋಲಿಸಿ ಆರು ಬಾರಿಯ ಶಾಸಕ ಹಾಗೂ ಮಾಜಿ ಸಚಿವ ಕವಸಿ ಲಖ್ಮಾ ಹೇಳಿದ್ದಾರೆ.
ಬುಧವಾರ ಬಸ್ತಾರ್ ಜಿಲ್ಲೆಯ ಜಗದಲ್ಪುರ್ ನಲ್ಲಿ ಮಾತನಾಡಿದ ಲಖ್ಮಾ, “ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಬದಲಿಗೆ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೆ ರಾಜ್ ನಂದ್ ಗಾಂವ್ ನಿಂದ ಟಿಕೆಟ್ ಪಡೆದಿದ್ದಾರೆ. ಯಾಕೆ? ನನಗೆ ಏಕೆ ಟಿಕೆಟ್ ದೊರೆತಿದೆ? ನಾನು ಟಿಕೆಟ್ ಗಾಗಿ ಕೇಳಿರಲಿಲ್ಲ. ಆ ಟಿಕೆಟ್ ಅನ್ನು ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಛತ್ತೀಸ್ ಗಢದ ದೊಡ್ಡ ನಾಯಕ ದೀಪಕ್ ಬಾಯ್ ಗೆ ನೀಡುವಂತೆ ಹೇಳಿದ್ದೆ. ಅವರು ನಮಗಾಗಿ 11 ಕ್ಷೇತ್ರಗಳನ್ನು ಗೆಲ್ಲಬೇಕಿದೆ. ಒಂದು ವೇಳೆ ಇದರಲ್ಲಿ ಸಮಸ್ಯೆ ಇದ್ದರೆ, ನನ್ನ ಪುತ್ರನಿಗೆ ಟಿಕೆಟ್ ನೀಡಿ ಎಂದು ಹೇಳಿದ್ದೆ. ನಾನು ನನ್ನ ಪುತ್ರನಿಗಾಗಿ ವಧುವನ್ನು ಕೇಳಲು ಹೋದರೆ, ಅವರು ನನಗೇ ನೀಡಿದರು” ಎಂದು ಹಾಸ್ಯಮಯವಾಗಿ ಹೇಳಿದ್ದಾರೆ.
ಲಖ್ಮಾ ಅವರ ಪುತ್ರ ಹರೀಶ್ ಸುಕ್ಮಾ ಜಿಲ್ಲೆಯ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದಾರೆ.
1988ರಲ್ಲಿ ಚುನಾವಣಾ ರಾಜಕಾರಣಕ್ಕೆ ಪದಾರ್ಪಣೆ ಮಾಡಿದ ಲಕ್ಮಾ ಅವರು ಇದುವರೆಗೂ ಕೊಂತಾ ವಿಧಾನಸಭಾ ಕ್ಷೇತ್ರದಿಂದ ಒಮ್ಮೆಯೂ ಪರಾಭವಗೊಂಡಿಲ್ಲ.