ಪಶ್ಚಿಮಬಂಗಾಳ: ಶೌಚ ಗುಂಡಿಗೆ ಇಳಿದ ಇಬ್ಬರು ಕಾರ್ಮಿಕರು ಮೃತ್ಯು
ಕೋಲ್ಕತಾ: ಶೌಚ ಗುಂಡಿಗೆ ಇಳಿದ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಪಶ್ಚಿಮಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟವರನ್ನು ಗಣೇಶ್ ಮನ್ನಾ ಹಾಗೂ ಸುಬ್ರತ ದಾಸ್ ಎಂದು ಗುರುತಿಸಲಾಗಿದೆ. ಇಬ್ಬರ ವಯಸ್ಸು 40 ಎಂದು ಅವರು ಹೇಳಿದ್ದಾರೆ. ‘
‘ಸಿಂಗೂರಿನ ರತನ್ಪುರ ಗ್ರಾಮದಲ್ಲಿರುವ ಮನೆಯೊಂದರ ಶೌಚ ಗುಂಡಿಯ ಒಳಗಿದ್ದ ನಿರ್ಮಾಣ ಹಲಗೆ ತೆಗೆಯಲು ಈ ಇಬ್ಬರು ಕಾರ್ಮಿಕರು ಆಗಮಿಸಿದ್ದರು. ಈ ಶೌಚ ಗುಂಡಿಯನ್ನು ಎರಡರಿಂದ ಮೂರು ತಿಂಗಳ ಹಿಂದೆ ನಿರ್ಮಾಣ ಮಾಡಲಾಗಿತ್ತು’’ ಎಂದು ಅವರು ತಿಳಿಸಿದ್ದಾರೆ.
ಓರ್ವ ಕಾರ್ಮಿಕ ಮೊದಲು ಶೌಚ ಗುಂಡಿಯ ಮುಚ್ಚಳ ತೆಗೆದು ಒಳಗೆ ಇಳಿದ. ಈ ಸಂದರ್ಭ ಇನ್ನೋರ್ವ ಕಾರ್ಮಿಕ ಹೊರಗೆ ಕಾಯುತ್ತಿದ್ದ ಎಂದು ಮನೆಯ ಒಡತಿ ಚಂದನ ಮೈತಿ ಅವರನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ. ‘‘ಕೆಲವು ನಿಮಿಷಗಳು ಕಳೆದ ಬಳಿಕವೂ ಶೌಚ ಗುಂಡಿಗೆ ಇಳಿದ ಕಾರ್ಮಿಕನಿಂದ ಯಾವುದೇ ಪ್ರತಿಕ್ರಿಯೆ ಬರದೇ ಇದ್ದಾಗ, ಇನ್ನೋರ್ವ ಕೂಡ ಇಳಿದ. ಆದರೆ, ಅವರಿಬ್ಬರೂ ಹೊರಗೆ ಬರಲಿಲ್ಲ’’ ಎಂದು ಅವರು ಹೇಳಿದ್ದಾರೆ.
ತಕ್ಷಣ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಮಿಕರನ್ನು ರಕ್ಷಿಸಿದರು ಹಾಗೂ ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅವರಿಬ್ಬರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಅವರು ತಿಳಿಸಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶೌಚ ಗುಂಡಿ ಒಳಗೆ ಸಂಗ್ರಹವಾಗಿದ್ದ ಮೀಥೇನ್ ಅನಿಲ ಇಬ್ಬರು ಕಾರ್ಮಿಕರ ಸಾವಿಗೆ ಕಾರಣವಾಗಿರಬಹುದು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಸಂದೇಹಿಸಿದ್ದಾರೆ. ಮೀಥೇನ್ ಬಣ್ಣ ರಹಿತ ಅನಿಲ ಹಾಗೂ ಮಾರಣಾಂತಿಕ ಎಂದು ತಜ್ಞರು ತಿಳಿಸಿದ್ದಾರೆ.