ಪಶ್ಚಿಮ ಬಂಗಾಳ: ಕೇಂದ್ರ ಸಚಿವ ಸುಭಾಶ್ ಸರ್ಕಾರ್ ರನ್ನು ಪಕ್ಷದ ಕಚೇರಿಯಲ್ಲಿ ಕೂಡಿ ಹಾಕಿದ ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು
ಕೋಲ್ಕತ್ತಾ: ಮಂಗಳವಾರ ಕೇಂದ್ರ ಸಚಿವ ಸುಭಾಶ್ ಸರ್ಕಾರ್ ಅವರನ್ನು ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ಪಕ್ಷದ ಕಚೇರಿಯಲ್ಲಿ ಕೂಡಿ ಹಾಕಿರುವ ಘಟನೆ ಪಶ್ಚಿಮ ಬಂಗಾಳದ ಬಂಕೂರದಲ್ಲಿ ನಡೆದಿದೆ ಎಂದು Times of India ವರದಿ ಮಾಡಿದೆ.
ಕೇಂದ್ರ ಸಚಿವ ಸುಭಾಶ್ ಸರ್ಕಾರ್ ಜಿಲ್ಲಾ ಘಟಕವನ್ನು ಸರ್ವಾಧಿಕಾರಿಯಂತೆ ನಿರ್ವಹಿಸುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರು ಆರೋಪಿಸಿದರು.
ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಸಚಿವ ಹಾಗೂ ಬಂಕೂರ ಲೋಕಸಭಾ ಕ್ಷೇತ್ರದ ಸುಭಾಶ್ ಸರ್ಕಾರ್ ಸುಮಾರು ಮಧ್ಯಾಹ್ನ 1 ಗಂಟೆಗೆ ಸಭೆಯೊಂದನ್ನು ನಡೆಸುವಾಗ, ಪಕ್ಷದ ಜಿಲ್ಲಾ ಕಚೇರಿಗೆ ಘೋಷಣೆಗಳನ್ನು ಕೂಗುತ್ತಾ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಅವರನ್ನು ಕಚೇರಿಯಲ್ಲಿ ಕೂಡಿ ಹಾಕಿದರು.
ಸುಭಾಶ್ ಸರ್ಕಾರ್ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಗೆ ಪ್ರಾಮುಖ್ಯತೆ ನೀಡಿಲ್ಲ ಹಾಗೂ ತಮಗೆ ನಿಕಟವಾಗಿರುವವರನ್ನು ಜಿಲ್ಲಾ ಸಮಿತಿಯ ಸದಸ್ಯರನ್ನಾಗಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರ ಮೋಹಿತ್ ಶರ್ಮ ಆರೋಪಿಸಿದರು.
“ನಮ್ಮಲ್ಲಿ ಕೆಲವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ನಾವು ಪಕ್ಷವನ್ನು ರಕ್ಷಿಸಲು ಪ್ರತಿಭಟನೆ ಮಾಡುತ್ತಿದ್ದೇವೆ. ಸರ್ಕಾರ್ ಅಸಾಮರ್ಥ್ಯದಿಂದ ನಾವು ಈ ಬಾರಿ ಬಂಕೂರ ಮಹಾನಗರ ಪಾಲಿಕೆಯಲ್ಲಿ ಯಾವುದೇ ಸ್ಥಾನ ಪಡೆಯಲಾಗಿಲ್ಲ. ಇದಕ್ಕೂ ಮುನ್ನ, ಬಿಜೆಪಿಯು ಎರಡು ವಾರ್ಡ್ ಗಳಲ್ಲಿ ಗೆಲುವು ಸಾಧಿಸಿತ್ತು. ಅವರು ಪಂಚಾಯತ್ ಚುನಾವಣೆಯ ಹಲವಾರು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಇದು ನಾಚಿಕೆಗೇಡು” ಎಂದು ಅವರು ಹೇಳಿದರು ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಯಾವುದೇ ಪ್ರತಿಕ್ರಿಯೆಗೆ ಸಚಿವ ಸುಭಾಶ್ ಸರ್ಕಾರ್ ಲಭ್ಯರಾಗಲಿಲ್ಲ.