“ಈ ಸುನಾಮಿಯಂಥ ಮತ ಗಳಿಸಲು ಅವರೇನು ಮಾಡಿದರು?”: ಉದ್ಧವ್ ಠಾಕ್ರೆ ಪ್ರಶ್ನೆ

Update: 2024-11-23 13:52 GMT

 ಉದ್ಧವ್ ಠಾಕ್ರೆ | PC : PTI

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಮೋಘ ಗೆಲುವು ಸಾಧಿಸಿರುವ ಮಹಾಯುತಿ ಮೈತ್ರಿಕೂಟವು ಅಧಿಕಾರಕ್ಕೆ ಮರಳಲು ಸಜ್ಜಾಗಿರುವ ಬೆನ್ನಿಗೇ, “ಈ ಸುನಾಮಿಯಂಥ ಮತ ಗಳಿಸಲು ಅವರೇನು ಮಾಡಿದರು?” ಎಂದು ಶಿವಸೇನೆ (ಉದ್ಧವ್ ಬಣ) ನಾಯಕ ಉದ್ಧವ್ ಠಾಕ್ರೆ ಪ್ರಶ್ನಿಸಿದರು.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ತಮಗೆ ಬೆಂಬಲ ನೀಡಿದ ಮಹಾರಾಷ್ಟ್ರ ಜನತೆಗೆ ಧನ್ಯವಾದ ಸಲ್ಲಿಸಿದರಾದರೂ, NDA ದಿಗ್ವಿಜಯದ ಕುರಿತು ಪ್ರಶ್ನೆಯೆತ್ತಿದರು.

“ಫಲಿತಾಂಶಗಳು ಅಲೆಯ ಬದಲು ಸುನಾಮಿಯನ್ನು ಪ್ರತಿಫಲಿಸುತ್ತಿವೆ. ಆದರೆ, ಅವರು ಈ ಜನಾದೇಶ ಪಡೆಯಲು ಏನು ಮಾಡಿದರು ಎಂಬುದು ನನಗೆ ಅರ್ಥವಾಗುತ್ತಿಲ್ಲ” ಎಂದು ಅವರು ಹೇಳಿದರು

ರಾಜ್ಯ ಎದುರಿಸುತ್ತಿರುವ ಸವಾಲುಗಳತ್ತ ಬೊಟ್ಟು ಮಾಡಿದ ಅವರು, ರೈತರ ಸಂಕಷ್ಟ ಹಾಗೂ ನಿರುದ್ಯೋಗವನ್ನು ಪ್ರಸ್ತಾಪಿಸಿದರು. NDA ಪರವಾಗಿ ಇಂತಹ ಚುನಾವಣಾ ಅಲೆಯೇಳಲು ಅವರೇನಾದರೂ ಈ ಸಮಸ್ಯೆಗಳನ್ನು ಪರಿಹರಿಸಿದ್ದರೆ ಎಂದು ಸಂಶಯ ವ್ಯಕ್ತಪಡಿಸಿದರು.

“ರೈತರು ತೊಂದರೆ ಅನುಭವಿಸುತ್ತಿದ್ದಾರೆ ಹಾಗೂ ನಿರುದ್ಯೋಗ ತಾಂಡವವಾಡುತ್ತಿದೆ. ಈ ಬಗೆಯ ಸುನಾಮಿಯಂಥ ತೀರ್ಪು ಪಡೆಯಲು ಅವರೇನು ಮಾಡಿದ್ದರು? ‘ಬಟೇಂಗೆ ಕಟೇಂಗೆ’ಯಂಥ ಘೋಷಣೆಗಳು ಕೆಲಸ ಮಾಡಿವೆ ಎಂದು ನನಗನ್ನಿಸುತ್ತಿಲ್ಲ” ಎಂದು ಬಿಜೆಪಿ ಪ್ರಚಾರ ತಂತ್ರದ ಕುರಿತು ಉಲ್ಲೇಖಿಸಿದರು.

“ಅವರ ಗೆಲುವಿಗೆ ಅವರನ್ನು ಅಭಿನಂದಿಸುತ್ತೇನೆ. ಲಡ್ಕಿ ಬಹಿನ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಿ ಹಾಗೂ ಅದೊಂದು ಚುನಾವಣಾ ವಂಚನೆ ಆಗದಿರಲಿ ಎಂದು ಬಯಸುತ್ತೇನೆ. ರೈತರ ಸಾಲಗಳನ್ನು ಮನ್ನಾ ಮಾಡಲಿ ಮತ್ತು ತಾವು ನೀಡಿರುವ ಭರವಸೆಗಳನ್ನೆಲ್ಲ ಈಡೇರಿಸಲು ಎಂದು ಆಶಿಸುತ್ತೇನೆ” ಎಂದೂ ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News