15 ರೂ.ಗಳಿಗೆ ಪೆಟ್ರೋಲ್ ದೊರೆಯುವ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?
ಪ್ರತಾಪ್‌ಗಢ್ (ರಾಜಸ್ಥಾನ): ಒಂದು ವೇಳೆ ಸರಾಸರಿ ಶೇ. 40ರಷ್ಟು ವಿದ್ಯುಚ್ಛಕ್ತಿ ಹಾಗೂ ಶೇ. 60ರಷ್ಟು ಎಥನಾಲ್ ಬಳಸಲು ಸಾಧ್ಯವಾದರೆ, ಆಗ ಪೆಟ್ರೋಲ್ 15 ರೂಪಾಯಿಗೆ ದೊರೆಯಲಿದ್ದು, ಇದರಿಂದ ಜನರಿಗೆ ಲಾಭವಾಗಲಿದೆ ಎಂದು ರಾಜಸ್ಥಾನದ ಪ್ರತಾಪ್‌ಗಢದಲ್ಲಿ ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ ಎಂದು livemint.com ವರದಿ ಮಾಡಿದೆ.
ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿರುವ ಅವರು, "ಒಂದು ವೇಳೆ ಸರಾಸರಿ ಶೇ. 40ರಷ್ಟು ವಿದ್ಯುಚ್ಛಕ್ತಿ ಹಾಗೂ ಶೇ. 60ರಷ್ಟು ಎಥನಾಲ್ ಬಳಸಲು ಸಾಧ್ಯವಾದರೆ, ಆಗ ಪೆಟ್ರೋಲ್ 15 ರೂಪಾಯಿಗೆ ದೊರೆಯಲಿದ್ದು, ಇದರಿಂದ ಜನರಿಗೆ ಲಾಭವಾಗಲಿದೆ; ಮಾಲಿನ್ಯ ಹಾಗೂ ರಫ್ತು ತಗ್ಗಲಿದೆ. ಆಮದಿಗಾಗಿ ರೂ. 16 ಲಕ್ಷ ಕೋಟಿ ವೆಚ್ಚವಾಗುತ್ತಿದ್ದು, ಇದರ ಬದಲಿಗೆ ಈ ಹಣವು ರೈತರ ಮನೆಗಳಿಗೆ ಹೋಗಲಿದೆ" ಎಂದು ಹೇಳಿದ್ದಾರೆ.
ಸರ್ಕಾರವು ರೈತರನ್ನು ಅನ್ನದಾತ ಹಾಗೂ ಇಂಧನ ಪೂರೈಕೆದಾರ ಎರಡನ್ನೂ ಆಗಿಸುವ ಗುರಿ ಹೊಂದಿದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮಂಗಳವಾರದಂದು ನಿತಿನ್ ಗಡ್ಕರಿ ಅವರು ರಾಜಸ್ಥಾನದ ಪ್ರತಾಪ್‌ಗಢದಲ್ಲಿ ಒಟ್ಟು ರೂ. 5600 ಮೊತ್ತದ 11ನೇ ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ಉದ್ಘಾಟಿಸಿ, ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ಪೈಕಿ 219 ಕಿಮೀ ಉದ್ದದ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳ ಯೋಜನೆಯನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.
"ಫತೇನಗರದ ಬಳಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 162A ಮೇಲೆ ನಿರ್ಮಿಸಲಾಗುವ ನಾಲ್ಕು ಪಥದ ರೈಲ್ವೆ ಮೇಲ್ಸೇತುವೆಯು ರೈಲ್ವೆ ಕ್ರಾಸಿಂಗ್ ಬಳಿ ಉಂಟಾಗುತ್ತಿರುವ ಸಂಚಾರ ದಟ್ಟಣೆಯನ್ನು ನಿವಾರಿಸಲಿದೆ" ಎಂದು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
"ಕೇಂದ್ರ ರಸ್ತೆ ಸಾರಿಗೆ ಮತ್ತು ಮೂಲಸೌಕರ್ಯ ನಿಧಿಯಡಿ ಮಂದ್ರಯಾಲ್‌ನಲ್ಲಿ ಚಂಬಲ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಉತ್ಕೃಷ್ಟ ಗುಣಮಟ್ಟದ ಸೇತುವೆಯನ್ನು ಇಂದು ಉದ್ಘಾಟಿಸಲಾಗಿದೆ. ಈ ಸೇತುವೆಯ ನಿರ್ಮಾಣದೊಂದಿಗೆ ರಾಜಸ್ಥಾನದ ಮಂದ್ರಯಾಲ್, ಕರೌಲಿ ಹಾಗೂ ಮಧ್ಯಪ್ರದೇಶದ ಸಬಲ್‌ಗಢ್ ನಡುವೆ ಸಂಪರ್ಕ ಸಾಧ್ಯವಾಗಲಿದೆ" ಎಂದು ಆ ಪ್ರಕಟಣೆಯಲ್ಲಿ ಹೇಳಲಾಗಿದೆ.
"ರಾಜಸ್ಥಾನಕ್ಕೆ ಕೇಂದ್ರ ರಸ್ತೆ ಸಾರಿಗೆ ನಿಧಿಯಡಿ ಅನುಮೋದನೆಗೊಂಡಿರುವ ರೂ. 2,250 ಕೋಟಿ ಮೊತ್ತದ 74 ಯೋಜನೆಗಳನ್ನು ಈ ಕಾರ್ಯಕ್ರಮದಲ್ಲಿ ಪ್ರಕಟಿಸಲಾಯಿತು. ಈ ಯೋಜನೆಯಡಿಯ ಕಾಮಗಾರಿಗಳು ಶೀಘ್ರವೇ ಪ್ರಾರಂಭಗೊಳ್ಳಲಿವೆ."
"ಈ ಪ್ರತಾಪ್‌ಗಢ ಬೈಪಾಸ್ ಹೆದ್ದಾರಿ ನಿರ್ಮಾಣದಿಂದ ನಗರದೊಳಗಿನ ಸಂಚಾರ ದಟ್ಟಣೆ ತಗ್ಗಲಿದೆ. ರಾಸ್‌ನಿಂದ ಬಯೋರಾವರೆಗೆ ನಿರ್ಮಾಣಗೊಳ್ಳಲಿರುವ ರಸ್ತೆಯಿಂದ ಭಿಲಾವರ ಕಡೆಗೆ ಸಾಗಲಿರುವ ವಾಹನಗಳಿಗೆ ಅನುಕೂಲವಾಗಲಿದೆ. ಆದಿವಾಸಿಗಳ ಪ್ರಾಂತ್ಯಗಳಾದ ಡುಂಗರ್‌ಪುರ್, ಉದಯ್‌ಪುರ್ ಹಾಗೂ ಬನ್ಸ್‌ವಾರಾ ಪ್ರಾಂತ್ಯಗಳಿಗೆ ಇದರಿಂದ ಉತ್ತಮ ರಸ್ತೆ ಸಂಪರ್ಕ ದೊರೆಯಲಿದೆ. ಸಂಗ್ವಾರಾ ಹಾಗೂ ಗರ್ಹಿಯಲ್ಲಿ ನಿರ್ಮಾಣವಾಗಲಿರುವ ಈ ಬೈಪಾಸ್ ಹೆದ್ದಾರಿಯಿಂದ ಡುಂಗರ್‌ಪುರ್-ಬನ್ಸ್‌ವಾರಾ ನಡುವಿನ ದೂರವು 10 ಕಿಮೀ ತಗ್ಗಲಿದೆ"
"ವನ್ಯಜೀವಿಗಳನ್ನು ರಕ್ಷಿಸಲು ಬೀವರ್-ಗೋಮ್ಟಿ ರಸ್ತೆಯಲ್ಲಿನ ತೋಡ್‌ಗಢ್ ವನ್ಯಜೀವಿ ಧಾಮದ ಬಳಿ ಹದಿಮೂರು ಪ್ರಾಣಿಗಳ ಸುರಂಗ ಮಾರ್ಗಗಳನ್ನು ನಿರ್ಮಿಸಲಾಗುವುದು" ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.