ನಾನು ಯಾವುದೇ ನಿರ್ಧಾರ ಕೈಗೊಂಡರೂ ವಯನಾಡ್‌,ರಾಯ್‌ಬರೇಲಿ ಜನರು ಸಂತೋಷ ಪಡುವರೆಂಬ ನಂಬಿಕೆಯಿದೆ: ರಾಹುಲ್‌ ಗಾಂಧಿ

Update: 2024-06-12 09:24 GMT

ರಾಹುಲ್‌ ಗಾಂಧಿ | PTI 

ತಿರುವನಂತಪುರಂ: ತಾವು ಆಯ್ಕೆಯಾಗಿರುವ ಕೇರಳದ ವಯನಾಡ್‌ ಮತ್ತು ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರಗಳ ಪೈಕಿ ಯಾವುದನ್ನು ಉಳಿಸಿಕೊಳ್ಳಬೇಕೆಂಬ ಸಂದಿಗ್ಧತೆ ತನಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ವಿಜೇತರಾದ ನಂತರ ವಯನಾಡ್‌ ಕ್ಷೇತ್ರದಲ್ಲಿ ಅವರಿಗೆ ನಡೆದ ಮೊದಲ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್‌, ನಾನು ಯಾವುದೇ ನಿರ್ಧಾರ ಕೈಗೊಂಡರೂ ವಯನಾಡ್‌ ಮತ್ತು ರಾಯ್‌ಬರೇಲಿ ಜನತೆ ಅದರಿಂದ ಖುಷಿಪಡುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.

“ದುರದೃಷ್ಟವಶಾತ್‌ ಪ್ರಧಾನಿ ನರೇಂದ್ರ ಮೋದಿ ಅವರಂತೆ ನನಗೆ ದೇವರು ಮಾರ್ಗದರ್ಶನ ನೀಡುತ್ತಿಲ್ಲ, ಬದಲು ಈ ದೇಶದ ಬಡವರು ಮಾರ್ಗದರ್ಶನ ನೀಡುತ್ತಾರೆ. ಹೀಗಿರುವಾಗ ನಿರ್ಧಾರ ತೆಗೆದುಕೊಳ್ಳುವುದು ನನಗೆ ಅಷ್ಟು ಸುಲಭವಲ್ಲ. ಆದರೆ ನಾನೇನೇ ನಿರ್ಧಾರ ಕೈಗೊಂಡರೂ ಎರಡೂ ಕ್ಷೇತ್ರದ ಜನತೆಗೆ ಸಂತೋಷವಾಗುವುದೆಂಬ ನಂಬಿಕೆ ಇದೆ,” ಎಂದು ರಾಹುಲ್‌ ಹೇಳಿದರು.

ತಮ್ಮ ಕೈಯ್ಯಲ್ಲಿ ದೇಶದ ಸಂವಿಧಾನದ ಪ್ರತಿಯೊಂದನ್ನು ಹಿಡಿದುಕೊಂಡಿದ್ದ ರಾಹುಲ್‌, ತಾವು ಸಂವಿಧಾನದ ರಕ್ಷಣೆಗಾಗಿ ಈ ಚುನಾವಣೆಯಲ್ಲಿ ಹೋರಾಡಿದ್ದಾಗಿ ತಿಳಿಸಿದರು.

ವಯನಾಡ್‌ಗೆ ಒಂದು ದಿನದ ಭೇಟಿಗೆ ಆಗಮಿಸಿದ ರಾಹುಲ್‌ ಗಾಂಧಿ ಅವರಿಗೆ ಅಭೂತಪೂರ್ವ ಸ್ವಾಗತ ದೊರಕಿದೆ. ವಯನಾಡ್‌ ಕ್ಷೇತ್ರದ ಭಾಗವಾಗಿರುವ ಮಲಪ್ಪುರಂ ಎಡವನ್ನ ಎಂಬಲ್ಲಿ ಆಯೋಜಿಸಲಾದ ರೋಡ್‌ ಶೋದಲ್ಲಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News