ನ್ಯಾಯಾಲಯದ ಕೋಣೆಯಲ್ಲಿ ಕಿರಿಯ ವಕೀಲರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲು ಸೂಚಿಸಿದ ಸಿಜೆಐ ಚಂದ್ರಚೂಡ್!

Update: 2024-04-09 17:25 GMT

ಚಂದ್ರಚೂಡ್ (Photo- PTI)

ಹೊಸದಿಲ್ಲಿ: ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಮಂಗಳವಾರ ಪ್ರಕರಣವೊಂದರ ವಿಚಾರಣೆಯ ವೇಳೆ ವಾದ ಮಂಡಿಸುತ್ತಿದ್ದಂತೆ, ಮಧ್ಯ ಪ್ರವೇಶಿಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ಅವರು ಹಿರಿಯ ವಕೀಲರ ಹಿಂದೆ ನಿಂತಿರುವ ಕಿರಿಯ ವಕೀಲರಿಗೆ ಕುಳಿತುಕೊಳ್ಳಲು ಅವಕಾಶ ಮಾಡಿಕೊಡುವಂತೆ ಸೂಚಿಸಿದ ಅಪರೂಪದ ಘಟನೆ ನಡೆದಿದೆ ಎಂದು ndtv ವರದಿ ಮಾಡಿದೆ.

"ಸಾಲಿಸಿಟರ್ ಜನರಲ್ ಅವರೇ, ನಮ್ಮ ಎಲ್ಲಾ ಯುವ ಕಿರಿಯ ವಕೀಲರು ದಿನದಿಂದ ದಿನಕ್ಕೆ ಹಿರಿಯ ವಕೀಲರ ಹಿಂದೆ ನಿಂತು ನ್ಯಾಯಾಲಯದ ಕಲಾಪಗಳನ್ನು ವೀಕ್ಷಿಸುತ್ತಾರೆ. ಅವರ ಕೈಯಲ್ಲಿ ಲ್ಯಾಪ್‌ಟಾಪ್‌ಗಳಿರುವುದನ್ನು ನಾನು ಗಮನಿಸಿದ್ದೇನೆ. ನ್ಯಾಯಾಲಯದ ರಿಜಿಸ್ಟ್ರಾರ್ ಅವರು ತಕ್ಷಣವೇ ಮಧ್ಯಾಹ್ನದ ವೇಳೆಗೆ ನಿಮ್ಮ ಹಿಂದೆ ಅವರಿಗೆ ಕುಳಿತುಕೊಳ್ಳಲು ಸ್ಥಳಾವಕಾಶ ಮಾಡಿಕೊಡಬಹುದೇ" ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಹೇಳಿದರು.

1990ರಲ್ಲಿ ಏಳು ನ್ಯಾಯಾಧೀಶರ ಪೀಠವು ರಾಜ್ಯದ ಶಾಸಕಾಂಗಕ್ಕೆ ಕೈಗಾರಿಕಾ ಮದ್ಯದ ಮಾರಾಟ ಮತ್ತು ಉತ್ಪಾದನೆಯನ್ನು ನಿಯಂತ್ರಿಸುವ ಅಧಿಕಾರ ನಿರಾಕರಿಸಿರುವುನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಸಿಜಿಐ ನೇತೃತ್ವದ ಒಂಭತ್ತು ನ್ಯಾಯಾಧೀಶರ ಪೀಠವು ವಿಚಾರಣೆ ನಡೆಸುತ್ತಿದ್ದ ವೇಳೆ ಈ ಘಟನೆ ವರದಿಯಾಗಿದೆ.

ಮುಖ್ಯ ನ್ಯಾಯಮೂರ್ತಿಗೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ಮೆಹ್ತಾ, ʼಇದನ್ನು ನಾನೂ ಗಮನಿಸುತ್ತಿದ್ದೇನೆ. ಪ್ರಕರಣಕ್ಕೆ ಸಂಬಂಧಿಸದ, ನ್ಯಾಯಾಲಯದಲ್ಲಿರುವ ವಕೀಲರಿಗೆ ಕುರ್ಚಿಯನ್ನು ಖಾಲಿ ಮಾಡುವಂತೆ ಮನವಿ ಮಾಡಿದ್ದೇನೆʼ ಎಂದು ಹೇಳಿದರು.

"ನಾನು ಕೋರ್ಟ್ ಮಾಸ್ಟರ್ ಗೆ ಕಿರಿಯ ವಕೀಲರಿಗೆ ಸ್ಥಳಾವಕಾಶ ಕಲ್ಪಿಸಿ ಕುರ್ಚಿ ಹಾಕಲು ಹೇಳಿದ್ದೇನೆ" ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ಮಧ್ಯಾಹ್ನದ ಊಟದ ನಂತರ ನ್ಯಾಯಾಲಯದಲ್ಲಿ ಮತ್ತೆ ಪ್ರಕರಣದ ವಿಚಾರಣೆ ಮುಂದುವರಿದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು. ನ್ಯಾಯಾಲಯದ ಆವರಣದಲ್ಲಿ ಕಿರಿಯ ವಕೀಲರಿಗೆ ಕುಳಿತುಕೊಳ್ಳಲು ಕುರ್ಚಿಗಳ ಸಾಲು ಕಾಣಿಸಿತು. ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಮೂಲಗಳ ಪ್ರಕಾರ, ಯುವ ವಕೀಲರಿಗೆ ಆಸನ ವ್ಯವಸ್ಥೆ ಮಾಡಲು ಮುಖ್ಯ ನ್ಯಾಯಾಧೀಶರು ಸೂಚನೆಗಳನ್ನು ನೀಡಿದರು.

ನ್ಯಾಯಾಲಯದ ಕಲಾಪ ಪ್ರಾರಂಭವಾಗುವ ಮೊದಲು, ಸಿಜೆಐ ಅವರು ಆಸನ ವ್ಯವಸ್ಥೆಯನ್ನು ಪರಿಶೀಲಿಸಿದರು ಎಂದು ಮೂಲಗಳು ತಿಳಿಸಿವೆ. ನ್ಯಾಯಾಲಯದ ಆವರಣದಲ್ಲಿ ವಕೀಲರು ನಿಂತಿದ್ದ ಸ್ಥಳಕ್ಕೆ ಆಗಮಿಸಿದ ಸಿಜೆಐ ಅವರು ಕುರ್ಚಿಗಳ ಮೇಲೆ ಕುಳಿತು ಕ್ರಮ ಪ್ರಕಾರ ಆಸನಗಳ ವ್ಯವಸ್ಥೆ ಮಾಡಲಾಗಿದೆಯೇ ಎಂದು ಪರಿಶೀಲಿಸಿದರು. ನೂತನ ಆಸನಗಳಿಂದ ಹಿರಿಯ ವಕೀಲರಿಗೆ ವಿಚಾರಣೆಯನ್ನು ಗಮನಿಸಲು ತೊಂದರೆಯಾಗುವುದಿಲ್ಲ ಎಂಬುದನ್ನು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಖಾತರಿಪಡಿಸಿಕೊಂಡರು ಎಂದು ಮೂಲಗಳು ತಿಳಿಸಿವೆ.

"ಮುಖ್ಯ ನ್ಯಾಯಾಧೀಶರು ಇಂದು ಯುವ ವಕೀಲರೆಡೆಗೆ ತೋರಿದ ಔದಾರ್ಯ ಮೆಚ್ಚುವಂಥದ್ದು. ಈ ಅಭೂತಪೂರ್ವ ನಡೆಯನ್ನು ಎಲ್ಲಾ ನ್ಯಾಯಾಲಯಗಳು ಅನುಸರಿಸುವ ಅಗತ್ಯವಿದೆ. ನ್ಯಾಯಾಂಗ ಶ್ರೇಣಿಯ ಅತ್ಯುನ್ನತ ಪೀಠದಲ್ಲಿ ಕುಳಿತಿರುವ ವ್ಯಕ್ತಿಯೊಬ್ಬರು ಯುವ ವಕೀಲರಿಗೆ ಆಗುತ್ತಿರುವ ಅನಾನುಕೂಲವನ್ನು ತಾವೇ ಸ್ವತಃ ಪರಿಶೀಲಿಸುತ್ತಿರುವುದು ಹೆಮ್ಮೆಯ ವಿಚಾರ. ಎಲ್ಲಾ ಯುವ ವಕೀಲರಿಗೆ ಇಂದು ಸಿಜಿಐ ಯವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಪದಗಳೇ ಸಿಗಲಿಲ್ಲ. ನಾನೂ ಭಾವೋದ್ವೇಗಕ್ಕೊಳಗಾದೆʼ ಎಂದು ಸಾಲಿಸಿಟರ್ ಜನರಲ್ ಮೆಹ್ತಾ ndtv ಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News