ಮಣಿಪುರಕ್ಕೆ ಕೇಂದ್ರದ ತಂಡವನ್ನೇಕೆ ಕಳುಹಿಸಲಿಲ್ಲ?:ಮಮತಾ ಬ್ಯಾನರ್ಜಿ ಪ್ರಶ್ನೆ
ಕೋಲ್ಕತಾ: ಮಣಿಪುರ ಬಿಕ್ಕಟ್ಟಿನ ಕುರಿತು ಕೇಂದ್ರದ ವಿರುದ್ಧ ತನ್ನ ವಾಗ್ದಾಳಿಯನ್ನು ಮುಂದುವರಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರು,ಬಿಜೆಪಿಯ ‘ಬೇಟಿ ಬಚಾವೊ’ ಯೋಜನೆ ಈಗ ‘ಬೇಟಿ ಜಲಾವೊ (ನಮ್ಮ ಹೆಣ್ಣುಮಕ್ಕಳನ್ನು ಸುಟ್ಟು ಬಿಡಿ) ’ಆಗಿ ಮಾರ್ಪಟ್ಟಿದೆ ಎಂದು ಶುಕ್ರವಾರ ಇಲ್ಲಿ ಹೇಳಿದರು.
ಮಣಿಪುರದಲ್ಲಿ ಜನಾಂಗೀಯ ಸಂಘರ್ಷವು ಈವರೆಗೆ 160ಕ್ಕೂ ಅಧಿಕ ಜೀವಗಳನ್ನು ಬಲಿತೆಗೆದುಕೊಂಡಿದೆ,ಹೀಗಿದ್ದರೂ ಅಲ್ಲಿಗೆ ಕೇಂದ್ರೀಯ ತಂಡಗಳನ್ನು ಕಳುಹಿಸಲು ಕೇಂದ್ರವೇಕೆ ಎಂದಿಗೂ ಚಿಂತಿಸಲಿಲ್ಲ ಎಂದು ಅವರು ಅಚ್ಚರಿಯನ್ನು ವ್ಯಕ್ತಪಡಿಸಿದರು.
ಪಕ್ಷದ ವಾರ್ಷಿಕ ಹುತಾತ್ಮರ ದಿನ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಬ್ಯಾನರ್ಜಿ, ‘ನಾವು ಮಣಿಪುರದೊಂದಿಗೆ ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಲು ಬಯಸುತ್ತೇವೆ. ಬಿಜೆಪಿ ಪಂಚಾಯತ್ ಚುನಾವಣೆಗಳ ಬಳಿಕ ಬಂಗಾಳಕ್ಕೆ ಹಲವಾರು ತಂಡಗಳನ್ನು ಕಳುಹಿಸಿತ್ತು. ಮಣಿಪುರಕ್ಕೇಕೆ ಕೇಂದ್ರೀಯ ತಂಡವನ್ನು ಕಳುಹಿಸಲಿಲ್ಲ ’ ಎಂದು ಪ್ರಶ್ನಿಸಿದರು.
ಹೊಸದಾಗಿ ರಚನೆಯಾಗಿರುವ ಪ್ರತಿಪಕ್ಷ ಮೈತ್ರಿಕೂಟ ‘ಇಂಡಿಯಾ’ದೊಂದಿಗೆ ತನ್ನ ಏಕತೆಯನ್ನು ವ್ಯಕ್ತಪಡಿಸಿದ ಬ್ಯಾನರ್ಜಿ,ಕೇಸರಿ ಪಾಳಯವನ್ನು ಅಧಿಕಾರದಿಂದ ಕಿತ್ತೊಗೆಯುವದು ತಮ್ಮ ಗುರಿಯಾಗಿದೆ ಎಂದರು.
ಬಿಜೆಪಿ ಸರಕಾರ ಅಧಿಕಾರಕ್ಕೆ ಮರಳುವುದು ಪ್ರಜಾಪ್ರಭುತ್ವದ ಅವಸಾನಕ್ಕೆ ಸಂಕೇತವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಬಿಜೆಪಿಯನ್ನು ಪದಚ್ಯುತಗೊಳಿಸಲು ಸ್ಪಷ್ಟ ಕರೆಯನ್ನು ನೀಡಿದ ಬ್ಯಾನರ್ಜಿ,‘ನಾವು ಬೇರೆ ಯಾವುದೇ ಬೇಡಿಕೆಯನ್ನು ಹೊಂದಿಲ್ಲ. 2024ರಲ್ಲಿ ಕೇಂದ್ರದಿಂದ ಬಿಜೆಪಿಯನ್ನು ಹೊರಹಾಕುವುದನ್ನು ಬಿಟ್ಟರೆ ಯಾವುದೇ ಕುರ್ಚಿಯೂ ನಮಗೆ ಬೇಕಾಗಿಲ್ಲ ’ ಎಂದರು.
‘26 ಪ್ರತಿಪಕ್ಷಗಳು ಒಗ್ಗೂಡಿರುವುದು ನನಗೆ ಖುಷಿಯನ್ನು ನೀಡಿದೆ. ಪ್ರತಿಪಕ್ಷ ಮೈತ್ರಿಕೂಟದಡಿ ನಾವು ಕೇಂದ್ರದ ವಿರುದ್ಧ ಪ್ರತಿಭಟನೆಗಳನ್ನು ಸಂಘಟಿಸುತ್ತೇವೆ ಮತ್ತು ಟಿಎಂಸಿ ಯೋಧನಂತೆ ಬೆಂಗಾವಲಾಗಲಿದೆ ’ ಎಂದು ಅವರು ಹೇಳಿದರು.