“ಚುನಾವಣೆಗಿಂತ ಮೊದಲು ಚುನಾವಣಾ ಬಾಂಡ್ ವಿವರ ಬಹಿರಂಗವಾಗಬಾರದು ಎಂದು ಎಸ್ ಬಿ ಐ ಯಾಕೆ ಬಯಸುತ್ತಿದೆ?” : ರಾಹುಲ್ ಗಾಂಧಿ
Update: 2024-03-05 15:12 GMT
ಹೊಸದಿಲ್ಲಿ : ಚುನಾವಣಾ ಬಾಂಡ್ ದೇಣಿಗೆದಾರರ ವಿವರಗಳನ್ನು ನೀಡುವ ಸಮಯಾವಕಾಶವನ್ನು ವಿಸ್ತರಿಸುವಂತೆ ಕೋರಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿ ಐ) ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿರುವುದಕ್ಕೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೌಸ್ ನ ಒಂದು ಕ್ಲಿಕ್ ನಲ್ಲಿ ಸಿಗುವ ಮಾಹಿತಿಯನ್ನು ನೀಡಲು ಜೂನ್ 30ರವರೆಗೆ ಸಮಯಾವಕಾಶ ವಿಸ್ತರಣೆ ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.
‘‘ಚುನಾವಣಾ ಬಾಂಡ್ ಗಳ ಕುರಿತ ಸತ್ಯವನ್ನು ತಿಳಿಯುವುದು ನಾಗರಿಕರ ಹಕ್ಕು ಎಂದು ಸುಪ್ರೀಂ ಕೋರ್ಟ್ ಹೇಳಿರುವಾಗ, ಈ ಮಾಹಿತಿಯು ಚುನಾವಣೆಗಿಂತ ಮೊದಲು ಬಹಿರಂಗವಾಗಬಾರದು ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಯಾಕೆ ಬಯಸುತ್ತಿದೆ?’’ ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದರು.
‘‘ಇದು, ಮುಂಬರುವ ಲೋಕಸಭಾ ಚುನಾವಣೆಗಳ ಮುನ್ನ ಮೋದಿಯ ನೈಜ ಮುಖವನ್ನು ಅಡಗಿಸಲು ನಡೆಸಲಾಗುತ್ತಿರುವ ಕೊನೆಯ ಪ್ರಯತ್ನ’’ ಎಂದು ಅವರು ಬಣ್ಣಿಸಿದರು.