ಪಠ್ಯಗಳಲ್ಲಿ ಇಂಡಿಯಾ ಹೆಸರು ಮುಂದುವರಿಕೆ: ಕೇರಳ

Update: 2023-10-27 02:39 GMT
File Photo (PTI)

ತಿರುವನಂತಪುರಂ: ಎನ್ ಸಿಇಆರ್ ಟಿ ಶಾಲಾ ಪಠ್ಯಪುಸ್ತಕಗಳಲ್ಲಿ ಇಂಡಿಯಾ ಬದಲಾಗಿ ಭಾರತ ಎಂಬ ಹೆಸರನ್ನು ಬಳಕೆ ಮಾಡುವ ಪ್ರಸ್ತಾವ ಮಾಡಿರುವ ಬೆನ್ನಲ್ಲೇ, ಇಂತಹ ಬದಲಾವಣೆಯನ್ನು ರಾಜ್ಯದ ಮೇಲೆ ಹೇರಿದರೆ, ಮತ್ತೆ ಇಂಡಿಯಾ ಎಂದೇ ಉಲ್ಲೇಖಿಸಿ ಪಠ್ಯಪುಸ್ತಕಗಳನ್ನು ಪ್ರತ್ಯೇಕವಾಗಿ ಮುದ್ರಿಸಲಾಗುವುದು ಎಂದು ಕೇರಳ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟು ಎಚ್ಚರಿಕೆ ನೀಡಿದ್ದಾರೆ.

ಸಮಾಜ ವಿಜ್ಞಾನ ವಿಷಯಕ್ಕಾಗಿ ಎನ್ ಸಿಇಆರ್ ಟಿ ನೇಮಕ ಮಾಡಿರುವ ಸಲಹಾ ಸಮಿತಿ ಮಾಡಿದೆ ಎನ್ನಲಾದ ಶಿಫಾರಸ್ಸುಗಳು ಶಿಕ್ಷಣವನ್ನು ಕೇಸರೀಕರಿಸುವ ವಿಸ್ತೃತ ಯೋಜನೆಯ ಒಂದು ಭಾಗ ಎಂದು ಅವರು ಆಪಾದಿಸಿದ್ದಾರೆ.

"ಇದು ಭಾರತದ ಇತಿಹಾಸವನ್ನು ತಿರುಚುವ ಪ್ರಯತ್ನ. ಇದು ಶಿಕ್ಷಣದ ಬಗ್ಗೆ ಅಲ್ಪಗೌರವ ಹೊಂದಿರುವ ಮತ್ತು ಸಂಕುಚಿತ ಮನೋಭಾವವನ್ನು ತೋರಿಸುತ್ತದೆ" ಎಂದು ಟೀಕಿಸಿದ್ದಾರೆ.

ಇತಿಹಾಸಕಾರ ಸಿ.ಐ.ಇಸಾಕ್ ಅವರ ನೇತೃತ್ವದ ಸಲಹ ಸಮಿತಿ, "1858ರಲ್ಲಿ ಈಸ್ಟ್ ಇಂಡಿಯಾ ಕಂಪನಿಯಿಂದ ಬ್ರಿಟಿಷ್ ಸಾಮ್ರಾಜ್ಯ ಅಧಿಕಾರವನ್ನು ವಹಿಸಿಕೊಂಡ ಬಳಿಕ ಈ ಉಪಖಂಡವನ್ನು ಇಂಡಿಯಾ ಎಂದು ಕರೆದಿದೆ ಎಂಬ ಆಧಾರದಲ್ಲಿ ಈ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಇದಕ್ಕೂ ಮುನ್ನ ಎಲ್ಲ ಪುರಾಣಗಳು ಹಾಗೂ ಕಾಳಿದಾಸ ಸೇರಿದಂತೆ ಎಲ್ಲರು ಸಿದ್ಧಪಡಿಸಿದ ಇತರ ಸಾಹಿತ್ಯಕ ಬರಹಗಳಲ್ಲಿ ಈ ಇಡೀ ಪ್ರದೇಶಕ್ಕೆ ಭಾರತ ಎಂಬ ಹೆಸರಿದೆ" ಎಂದು ಕೇರಳ ಮೂಲದ ಇಸಾಕ್ ಸ್ಪಷ್ಟಪಡಿಸಿದ್ದಾರೆ.

7ನೇ ತರಗತಿಯಿಂದ ಹನ್ನೆರಡನೇ ತರಗತಿವರೆಗಿನ ಪುಸ್ತಕಗಳಲ್ಲಿ ಭಾರತ ಎಂಬ ಪದವನ್ನು ಬಳಸುವಂತೆ ಎನ್ ಸಿಇಆರ್ ಟಿ ಗೆ ಕಳೆದ ವರ್ಷ ಸಲ್ಲಿಸಿದ ಪ್ರಸ್ತಾವದಲ್ಲಿ ಸಮಿತಿ ಶಿಫಾರಸ್ಸು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News