ಇಬ್ಬರು ಸಹ ಪ್ರಯಾಣಿಕರು, ಸಿಐಎಸ್ಎಫ್ ಸಿಬ್ಬಂದಿ ಮೇಲೆ ಮಹಿಳೆ ಹಲ್ಲೆ; ಪ್ರಕರಣ ದಾಖಲು
ಪುಣೆ: ವಿಮಾನ ಏರುವ ಹಂತದಲ್ಲಿ ಇಬ್ಬರು ಸಹಪ್ರಯಾಣಿಕರು ಹಾಗೂ ಸಿಐಎಸ್ಎಫ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಕೆಳಕ್ಕಿಳಿಸಿ ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ ಪ್ರಕರಣ ಭಾನುವಾರ ನಡೆದಿದೆ. ಪುಣೆಯ ಲೋಹೆಗಾಂವ್ ನಿಂದ ದೆಹಲಿಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ.
ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ತಮಗೆ ಹಂಚಿಕೆಯಾಗಿದ್ದ ಆಸನದಲ್ಲಿ ಕುಳಿತಿದ್ದ ಸಹೋದರ- ಸಹೋದರಿಯ ಮೇಲೆ ಮಹಿಳೆ ಹಲ್ಲೆ ನಡೆಸಿದರು. ಸಿಬ್ಬಂದಿ ಮಧ್ಯಪ್ರವೇಶಿಸಿ ಸಿಐಎಸ್ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದರು. ಸಿಐಎಸ್ಎಫ್ ನ ಪ್ರಿಯಾಂಕಾ ರೆಡ್ಡಿ ಹಾಗೂ ಸೋನಿಕಾ ಪಾಲ್ ಅವರನ್ನು ವಿಮಾನಕ್ಕೆ ಕಳುಹಿಸಲಾಯಿತು. ಇವರ ಜತೆಗೆ ಕೂಡಾ ಅನುಚಿತವಾಗಿ ವರ್ತಿಸಿದ ಮಹಿಳೆ, ಇವರನ್ನೂ ಹೊಡೆದಿದ್ದಲ್ಲದೇ ಕಚ್ಚಿದಳು. ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದಾಗ ಸಿಐಎಸ್ಎಫ್ ಅಧಿಕಾರಿಗಳು ಮಹಿಳೆ ಹಾಗೂ ಆಕೆಯ ಪತಿಯನ್ನು ವಿಮಾನದಿಂದ ಕೆಳಗೆ ಇಳಿಸಿದರು.
ವಿಮಾನ ನಿಲ್ದಾಣ ಪೊಲೀಸರಿಗೆ ಅವರನ್ನು ಹಸ್ತಾಂತರಿಸಲಾಗಿದ್ದು, ಪ್ರಕರಣ ದಾಖಲಾಗಿದೆ. ತನಿಖೆಗೆ ಸಹಕರಿಸುವಂತೆ ಸೂಚನೆ ನೀಡಿ ಮತ್ತು ತನಿಖಾಧಿಕಾರಿಗಳು ಸಮನ್ಸ್ ನೀಡಿದಾಗ ಹಾಜರಾಗುವಂತೆ ಆದೇಶಿಸಿ ಆಕೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ಹಿರಿಯ ಇನ್ಸ್ಪೆಕ್ಟರ್ ಅಜಯ್ ಸಂಕೇಶ್ವರಿ ಹೇಳಿದ್ದಾರೆ.
ಮಹಿಳೆ ಗೃಹಿಣಿಯಾಗಿದ್ದು, ಆಕೆಯ ಪತಿ ಪುಣೆಯಲ್ಲಿ ಸಾಫ್ಟ್ವೇರ್ ಎಂಜಿನಿಯರ್. ಸಂಬಂಧಿಕರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸುವ ಸಲುವಾಗಿ ದೆಹಲಿಗೆ ಹೊರಟಿದ್ದರು. "ವೈಯಕ್ತಿಕ ತುರ್ತು ಸ್ಥಿತಿಯಿಂದಾಗಿ ಅವರು ತೀರಾ ಹತಾಶ ಸ್ಥಿತಿಯಲ್ಲಿದ್ದರು. ಸಹ ಪ್ರಯಾಣಿಕರ ಜತೆ ಜಗಳವಾಡಿದ ಬಳಿಕ, ಆಕೆಯ ಪ್ರಯಾಣಕ್ಕೆ ಪೈಲಟ್ ನಿರಾಕರಿಸಿದ. ಆಕೆ ಮತ್ತಷ್ಟು ವ್ಯಗ್ರವಾಗಿದ್ದರಿಂದ ನಾವು ಮಧ್ಯಪ್ರವೇಶಿಸಬೇಕಾಯಿತು" ಎಂದು ಸಿಐಎಸ್ಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.