ಮಧ್ಯಪ್ರದೇಶ| ರಸ್ತೆಯಲ್ಲೇ ಮಹಿಳೆಯ ಮೇಲೆ ದೊಣ್ಣೆಯಿಂದ ಹಲ್ಲೆ: ಸಹಾಯಕ್ಕೆ ಬಾರದೆ ವಿಡಿಯೋ ಮಾಡುತ್ತಾ ನಿಂತ ಸಾರ್ವಜನಿಕರು!
ಭೋಪಾಲ್: ರಸ್ತೆಯಲ್ಲೇ ಮಹಿಳೆಯೊಬ್ಬರ ಮೇಲೆ ದೊಣ್ಣೆಯಿಂದ ಬರ್ಬರವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯ ತಂಡೆ ಪ್ರದೇಶದಲ್ಲಿ ನಡೆದಿದ್ದು, ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೊದಲ್ಲಿ ಪುರುಷರ ಗುಂಪೊಂದು ಮಹಿಳೆಯೊಬ್ಬಳ ಮೇಲೆ ದೊಣ್ಣೆಗಳಿಂದ ನಿರ್ದಯವಾಗಿ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಹಾಗೆಯೇ, ಸಂತ್ರಸ್ತ ಮಹಿಳೆಗೆ ನೆರವು ನೀಡುವ ಬದಲು, ದಾರಿಹೋಕರು ಈ ಘಟನೆಯ ವಿಡಿಯೊ ಚಿತ್ರೀಕರಣ ಮಾಡುತ್ತಿರುವುದೂ ಕಂಡು ಬಂದಿದೆ.
ಈ ಆಘಾತಕಾರಿ ವಿಡಿಯೊ ಗಮನಕ್ಕೆ ಬಂದ ಕೂಡಲೇ ಸ್ಥಳೀಯ ಪ್ರಾಧಿಕಾರಗಳು ತ್ವರಿತ ಕ್ರಮ ಕೈಗೊಂಡಿವೆ. ತಕ್ಷಣವೇ ಧಾರ್ ಪೊಲೀಸರು ಈ ಘಟನೆಯ ಕುರಿತು ತನಿಖೆ ಕೈಗೊಂಡಿದ್ದಾರೆ. .
ಪೊಲೀಸರ ತನಿಖೆಯಿಂದ ಈ ಹಲ್ಲೆಯಲ್ಲಿ ಭಾಗಿಯಾಗಿರುವ ಮೊದಲ ಶಂಕಿತ ವ್ಯಕ್ತಿಯ ಗುರುತು ಪತ್ತೆ ಹಚ್ಚಿ, ಆತನನ್ನು ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿಯನ್ನು ಕೋಕ್ರಿ ಥಾಣಾ ಗಂಧ್ವಾನಿ ಗ್ರಾಮದ ನಿವಾಸಿ ನೀರ್ ಸಿಂಗ್ ಎಂದು ಗುರುತಿಸಲಾಗಿದೆ. ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಡಿಯೊದಲ್ಲಿ ಕಂಡು ಬಂದಿರುವ ಇನ್ನಿತರ ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಈ ಘಟನೆಗೂ ಮುನ್ನ, ಮೇ ತಿಂಗಳಲ್ಲಿ ಹಿರಿಯ ದಲಿತ ದಂಪತಿಯನ್ನು ಥಳಿಸಿದ್ದ ದುಷ್ಕರ್ಮಿಗಳು, ಅವರಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿಸಿದ್ದ ಘಟನೆ ಮಧ್ಯಪ್ರದೇಶದ ಅಶೋಕ್ ನಗರ ಜಿಲ್ಲೆಯಲ್ಲಿ ನಡೆದಿತ್ತು.