ವೈವಾಹಿಕ ಕ್ರೌರ್ಯ ನಿಬಂಧನೆಯನ್ನು ಮಹಿಳೆಯರು ದುರ್ಬಳಕೆ ಮಾಡುತ್ತಿದ್ದಾರೆ: ಬಾಂಬೆ ಹೈಕೋರ್ಟ್
ಮುಂಬೈ, : ಪತಿ ಮತ್ತು ಆತನ ಕುಟುಂಬ ಸದಸ್ಯರಿಂದ ಕೌರ್ಯಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಕಲಂ 498ಎ ಅನ್ನು ಮಹಿಳೆಯರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿರುವ ಬಾಂಬೆ ಉಚ್ಛ ನ್ಯಾಯಾಲಯವು, ಇಂತಹ ನಿಬಂಧನೆಗಳಡಿ ಪ್ರಕರಣ ದಾಖಲಾದಾಗ ವಾಸ್ತವಿಕತೆಯ ಅಂಶದೊಂದಿಗೆ ಅದನ್ನು ನೋಡಬೇಕೇ ಹೊರತು ಕೇವಲ ನಿಯಮ ನಿಷ್ಠುರವಾಗಿ ಅಲ್ಲ ಎಂದು ಹೇಳಿದೆ.
ಪುಣೆ ಪೋಲಿಸರು 2012ರಲ್ಲಿ ಮಹಿಳೆಯೋರ್ವಳು ಕ್ರೌರ್ಯವನ್ನು ಆರೋಪಿಸಿ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಆಕೆಯ ಪತಿ ಮತ್ತು ಆತನ ಇಬ್ಬರು ಚಿಕ್ಕಮ್ಮಂದಿರ ವಿರುದ್ಧ ದಾಖಲಿಸಿದ್ದ ಎಫ್ಐಆರ್ ಅನ್ನು ನ್ಯಾಯಾಲಯವು ರದ್ದುಗೊಳಿಸಿದೆ. ಮಹಿಳೆಯು 2006ರಲ್ಲಿಯೂ ಪತಿ ಮತ್ತು ಆತನ ಹೆತ್ತವರ ವಿರುದ್ಧ ಇಂತಹುದೇ ಆರೋಪದೊಂದಿಗೆ ದೂರು ಸಲ್ಲಿಸಿದ್ದರು. ಬಳಿಕ ಅವರ ನಡುವೆ ರಾಜಿಯ ನಂತರ ಅದನ್ನು ಹಿಂದೆಗೆದುಕೊಳ್ಳಲಾಗಿತ್ತು ಎನ್ನುವುದನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತ್ತು.
ಇದು,ಮಹಿಳೆಯರಿಗೆ ವರದಕ್ಷಿಣೆ ಸಂಬಂಧಿತ ಕಿರುಕುಳಗಳು ಮತ್ತು ಇತರ ದೈಹಿಕ ಮತ್ತು ಮಾನಸಿಕ ಕ್ರೌರ್ಯಗಳನ್ನು ಪರಿಹರಿಸಲು ಐಪಿಸಿಯಲ್ಲಿನ 498ಎ ಕಲಮ್ನಂತಹ ಹಿತಚಿಂತನೆ ನಿಬಂಧನೆಗಳನ್ನು ಪತಿಯ ಕುಟುಂಬವನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಅವರಿಗೆ ಕಿರುಕುಳ ನೀಡಲು ದುರ್ಬಳಕೆ ಮಾಡಿಕೊಂಡಿರುವ ಇನ್ನೊಂದು ನಿದರ್ಶನವಾಗಿದೆ ಎಂದು ಬಾಂಬೆ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಅಜೇಯ ಗಡ್ಕರಿ ಮತ್ತು ನೀಲಾ ಗೋಖಲೆ ಅವರ ಪೀಠವು ಶುಕ್ರವಾರ ವಿಚಾರಣೆ ಸಂದರ್ಭದಲ್ಲಿ ಹೇಳಿತು.
ಕಾನೂನು ಜಾರಿ ಯಂತ್ರದ ಅತಿ ಕ್ರಿಯಾಶೀಲತೆಯು ಅಮಾಯಕ ಕುಟುಂಬ ಸದಸ್ಯರ ಮೇಲೆ ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತದೆ. ಹೆಚ್ಚಿನ ಸಲ ಆರೋಪಿಯ ವೃದ್ಧ ತಂದೆ-ತಾಯಿ, ಒಡಹುಟ್ಟಿದವರು ಮತ್ತು ದೂರದ ಸಂಬಂಧಿಗಳನ್ನು ಅವರ ನೇರವಾದ ಪಾತ್ರವಿಲ್ಲದಿದ್ದರೂ ದೂರಿನಲ್ಲಿ ಹೆಸರಿಸಲಾಗುತ್ತದೆ. ಈ ಪ್ರಕರಣವು ದೂರುದಾರ ಮಹಿಳೆ ಮತ್ತು ಆಕೆಯ ಕುಟುಂಬಸ್ಥರು ಕಾನೂನು ಜಾರಿ ಸಂಸ್ಥೆಯ ಪಾವಿತ್ರ್ಯವನ್ನು ಉಲ್ಲಂಘಿಸಿರುವ ನಿದರ್ಶನವಾಗಿದೆ. ಅವರು ನ್ಯಾಯಾಂಗ ವ್ಯವಸ್ಥೆಯನ್ನೂ ಅಣಕವಾಡಿದ್ದಾರೆ ಎಂದು ಪೀಠವು ಕಟುವಾಗಿ ಹೇಳಿತು.
ಮಹಿಳೆಯು 2006ರಲ್ಲಿ ಮತ್ತು 2012ರಲ್ಲಿ ನೀಡಿದ್ದ ದೂರುಗಳಲ್ಲಿ ಮಾಡಿದ್ದ ಆರೋಪಗಳನ್ನು ಹೋಲಿಸಿದ ನ್ಯಾಯಾಲಯವು, ಅವುಗಳಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸವಿಲ್ಲ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡಿತು. ಅಚ್ಚರಿದಾಯಕವಾಗಿ ಈ ಎರಡೂ ಎಫ್ಐಆರ್ ಗಳಲ್ಲಿ ಅಪರಾಧದ ಸಮಯವನ್ನು 2006, ಎ.16ರಿಂದ ಈವರೆಗೆ ಎಂದು ಉಲ್ಲೇಖಿಸಲಾಗಿದೆ.
ಮಹಿಳೆ ಮತ್ತು ಆಕೆಯ ತಂದೆ 2006ರ ಎಫ್ಐಆರ್ ನಲ್ಲಿ ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ದಾಖಲಿಸುವಾಗ ತಮ್ಮ ಆರೋಪಗಳಿಂದ ಹಿಂದೆ ಸರಿದಿದ್ದರು. ಇದು ಆಕೆಯ ಪತಿ ಮತ್ತು ಆತನ ಹೆತ್ತವರ ಖುಲಾಸೆಗೆ ಕಾರಣವಾಗಿತ್ತು.
ಮಹಿಳೆಯ ವಾದಗಳನ್ನು ತಳ್ಳಿ ಹಾಕಿದ ನ್ಯಾಯಾಲಯವು, ಆಕೆ ಸಕ್ಷಮ ನ್ಯಾಯಾಲಯದಲ್ಲಿ ಪ್ರಮಾಣಪೂರ್ವಕವಾಗಿ ಹೇಳಿಕೆ ನೀಡಿ ತನಗೆ ಕಿರುಕುಳವನ್ನು ನಿರಾಕರಿಸಿದ್ದಾಗ ಆಕೆಯ ಹೇಳಿಕೆಯ ಆಧಾರದಲ್ಲಿ ಆರೋಪಿಗಳು ಖುಲಾಸೆಗೊಂಡ ಬಳಿಕ ಅವೇ ಆರೋಪಗಳನ್ನು ಪುನರಾವರ್ತಿಸುವಂತಿಲ್ಲ ಎಂದು ಸ್ಪಷ್ಟಪಡಿಸಿತು.
ನ್ಯಾಯಾಲಯದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪತಿಯ ಪರ ವಕೀಲರು, ದಂಪತಿ 2017, ಎ.1ರಂದು ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.