ಭವಿಷ್ಯದಲ್ಲಿ ಮಾನವಸಹಿತ ಗಗನಯಾನಕ್ಕೆ ಮಹಿಳಾ ಫೈಟರ್ ಟೆಸ್ಟ್ ಪೈಲಟ್‌ಗಳಿಗೆ ಆದ್ಯತೆ: ಇಸ್ರೋ ಅಧ್ಯಕ್ಷ ಸೋಮನಾಥ್

Update: 2023-10-22 15:22 GMT

Photo- PTI

ತಿರುವನಂತಪುರ: ಭವಿಷ್ಯದಲ್ಲಿ ತನ್ನ ಬಹುನಿರೀಕ್ಷಿತ ಮಾನವಸಹಿತ ಬಾಹ್ಯಾಕಾಶ ಯಾತ್ರೆಯ ಯೋಜನೆ ‘ಗಗನಯಾನ್’ನಲ್ಲಿ ಫೈಟರ್ ವಿಮಾನಗಳ ಮಹಿಳಾ ಟೆಸ್ಟ್ ಪೈಲಟ್‌ಗಳು ಅಥವಾ ಮಹಿಳಾ ವಿಜ್ಞಾನಿಗಳನ್ನು ಕಳುಹಿಸುವುದಕ್ಕೆ ಇಸ್ರೋ ಆದ್ಯತೆ ನೀಡುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಸೋಮನಾಥ್ ರವಿವಾರ ತಿಳಿಸಿದ್ದಾರೆ.

ದೂರವಾಣಿಯಲ್ಲಿ ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಅವರು ಮುಂದಿನ ವರ್ಷ ಇಸ್ರೋ ಭೂಕಕ್ಷೆಗೆ ಕಳುಹಿಸುವ ಮಾನವರಹಿತ ಬಾಹ್ಯಾಕಾಶ ನೌಕೆಯಲ್ಲಿ ಮಹಿಳಾ ಆಕೃತಿಯ ರೋಬೊಟ್ ಇರಲಿದೆ ಎಂದು ಅವರು ತಿಳಿಸಿದ್ದಾರೆ. ಭೂಮಿಯಿಂದ 400 ಕಿ.ಮೀ. ದೂರದ ಕಕ್ಷೆಗೆ ಮೂರು ದಿನಗಳ ಅವಧಿಗೆ ಮಾನವ ಗಗನಯಾತ್ರಿಕರನ್ನು ಕಳುಹಿಸುವ ಹಾಗೂ ಆನಂತರ ಅವರನ್ನು ಸುರಕ್ಷಿತವಾಗಿ ಭೂಮಿಗೆ ತರುವ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಇಸ್ರೋ ಹಮ್ಮಿಕೊಂಡಿದೆ.

ಭವಿಷ್ಯದಲ್ಲಿನ ಬಾಹ್ಯಾಕಾಶ ಯಾತ್ರೆಗೆ ಸಂಭಾವ್ಯ ಮಹಿಳಾ ಅಭ್ಯರ್ಥಿಗಳನ್ನು ನಾವು ಹುಡುಕಬೇಕಾಗಿದೆ ಎಂದು ಸೋಮನಾಥ್ ಅವರು ದೂರವಾಣಿ ಮೂಲಕ ಪಿಟಿಐಗೆ ನೀಡಿದ ಸಂದರ್ಶದಲ್ಲಿ ತಿಳಿಸಿದ್ದಾರೆ.

ಇಸ್ರೋ ತನ್ನ ಮಾನವಸಹಿತ ಗಗನಯಾನ ಮಿಶನ್‌ನ ಪೂರ್ವಭಾವಿಯಾಗಿ ಶನಿವಾರ ನಡೆಸಿದ ಟಿವಿ-ಡಿ1 ಪರೀಕ್ಷಾ ವಾಹನವನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದ ಮರುದಿನವೇ ಸೋಮನಾಥ್ ಈ ಹೇಳಿಕೆ ನೀಡಿದ್ದಾರೆ.

ಮಾನವಸಹಿತ ಬಾಹ್ಯಾಕಾಶ ಮಿಶನ್ 2025ರೊಳಗೆ ನಡೆಯುವ ನಿರೀಕ್ಷೆಯಿದೆ ಹಾಗೂ ಅದು ಅಲ್ಪಾವಧಿಯದ್ದಾಗಿರುವುದು ಎಂವವರು ಹೇಳಿದರು.

‘‘ಸದ್ಯಕ್ಕೆ ವಾಯುಪಡೆಯ ಫೈಟರ್ ಟೆಸ್ಟ್ ಪೈಲಟ್‌ಗಳು ಪ್ರಾಥಮಿಕಹಂತದ ಅಭ್ಯರ್ಥಿಗಳಾಗಿದ್ದಾರೆ. ಆದರೆ ಪ್ರಸಕ್ತ ನಾವು ಮಹಿಳಾ ಫೈಟರ್ ಟೆಸ್ಟ್ ಪೈಲಟ್‌ಗಳನ್ನು ಹೊಂದಿಲ್ಲ. ಹೀಗಾಗಿ ಮಹಿಳೆಯರನ್ನು ಗಗನಯಾತ್ರೆಗೆ ಕಳುಹಿಸುವ ಸಾಧ್ಯತೆಗಳು ತೀರಾ ಕಡಿಮೆ ಎಂದರು.

2035ರೊಳಗೆ ಸಂಪೂರ್ಣವಾಗಿ ಕಾರ್ಯಾಚರಿಸುವಂತಹ ಬಾಹ್ಯಾಕಾಶ ನಿಲ್ದಾಣವನ್ನು ಸ್ಛಾಪಿಸುವ ಗುರಿಯನ್ನು ಇಸ್ರೋ ಹೊಂದಿದೆ ಎಂದು ಸೋಮನಾಥ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News