ಜಗತ್ತಿನ ಅತ್ಯಂತ ಪ್ರಬಲ ಪಾಸ್‌ಪೋರ್ಟ್: ಫ್ರಾನ್ಸ್, ಜರ್ಮನಿ, ಇಟಲಿ ಸಹಿತ 6 ದೇಶಗಳಿಗೆ ಅಗ್ರ ಸ್ಥಾನ
ಹೊಸದಿಲ್ಲಿ: ಜಗತ್ತಿನ ಅತ್ಯಂತ ಪ್ರಬಲ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ದೇಶಗಳಾಗಿ ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸಿಂಗಾಪುರ ಮತ್ತು ಸ್ಪೇನ್ ಅಗ್ರ ಸ್ಥಾನವನ್ನು ಪಡೆದುಕೊಂಡಿವೆ. ಈ ದೇಶಗಳು 194 ಜಾಗತಿಕ ಸ್ಥಳಗಳಿಗೆ ವೀಸಾ ಮುಕ್ತ ಪ್ರವೇಶವೊದಗಿಸಿವೆ ಎಂದು ಇತ್ತೀಚಿನ ಹೆನ್ಲೆ ಪಾಸ್‌ಪೋರ್ಟ್ ಇಂಡೆಕ್ಸ್ ಹೇಳಿದೆ. ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಶನ್ ಅಂಕಿಅಂಶಗಳ ಆಧಾರದಲ್ಲಿ ಈ ರ್ಯಾಂಕಿಂಗ್ ನೀಡಲಾಗಿದೆ. ಈ ಪಟ್ಟಿಯಲ್ಲಿ ಭಾರತ 80ನೇ ಸ್ಥಾನದಲ್ಲಿದ್ದು ಭಾರತವು 62 ದೇಶಗಳಿಗೆ ವೀಸಾ ಮುಕ್ತ ಪ್ರವೇಶ ಒದಗಿಸುತ್ತಿದೆ.
ಕಳೆದ ಐದು ವರ್ಷಗಳಿಂದ ಜಪಾನ್ ಮತ್ತು ಸಿಂಗಾಪುರ ಮೊದಲ ಸ್ಥಾನ ಪಡೆದುಕೊಂಡಿದ್ದವು. ಆದರೆ ಈ ವರ್ಷ ಯುರೋಪಿಯನ್ ರಾಷ್ಟ್ರಗಳೂ ಅಗ್ರ ಸ್ಥಾನದಲ್ಲಿವೆ. ಎರಡನೇ ಸ್ಥಾನವನ್ನು ಫಿನ್‌ಲ್ಯಾಂಡ್ ಮತ್ತು ಸ್ವೀಡನ್ ಹಂಚಿಕೊಂಡಿವೆ. ಈ ದೇಶಗಳು 193 ದೇಶಗಳಿಗೆ ವೀಸಾ ಮುಕ್ತ ಪ್ರವೇಶ ಒದಗಿಸುತ್ತವೆ. ಮೂರನೇ ಸ್ಥಾನದಲ್ಲಿ ಆಸ್ಟ್ರಿಯಾ ಡೆನ್ಮಾರ್ಕ್, ಐಯರ್ಲ್ಯಾಂಡ್ ಮತ್ತು ನೆದರ್‌ಲ್ಯಾಂಡ್ಸ್ ಇವೆ. ಈ ದೇಶಗಳು 192 ದೇಶಗಳಿಗೆ ವೀಸಾ ಮುಕ್ತ ಪ್ರವೇಶ ಒದಗಿಸುತ್ತವೆ.
ಎಂಬತ್ತನೇ ಸ್ಥಾನದಲ್ಲಿರುವ ಭಾರತವು ಇಂಡೋನೇಷ್ಯಾ, ಮಲೇಷ್ಯಾ, ಥೈಲ್ಯಾಂಡ್ ಸಹಿತ 62 ದೇಶಗಳಿಗೆ ವೀಸಾಮುಕ್ತ ಪ್ರವೇಶ ನೀಡುತ್ತಿದೆ. ಭಾರತದ ಜೊತೆ ಉಜ್ಬೆಕಿಸ್ತಾನ ಕೂಡ 80ನೇ ಸ್ಥಾನದಲ್ಲಿದ್ದರೆ ಪಾಕಿಸ್ತಾನ 101ನೇ ಸ್ಥಾನದಲ್ಲಿದೆ.