ನ್ಯಾಯಾಲಯದಲ್ಲಿ ನಡೆಯುತ್ತಿರುವುದರ ಬಗ್ಗೆ ಅರಿವಿಲ್ಲದಷ್ಟು ಅಮಾಯಕರು ನೀವಲ್ಲ: ರಾಮದೇವ್‌ಗೆ ಸುಪ್ರೀಂ ತರಾಟೆ

Update: 2024-04-16 07:38 GMT

ಬಾಬಾ ರಾಮದೇವ್‌ | PC : ANI 

ಹೊಸದಿಲ್ಲಿ: ದಾರಿತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಇಂದು ಪತಂಜಲಿ ಸಂಸ್ಥೆಯ ಸ್ಥಾಪಕರಾದ ಯೋಗ ಗುರು ಬಾಬಾ ರಾಮದೇವ್‌ ಮತ್ತು ಬಾಲಕೃಷ್ಣ ಅವರು ಇಂದು ಸುಪ್ರೀಂ ಕೋರ್ಟಿಗೆ ಹಾಜರಾಗಿದ್ದು ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ವೇಳೆ ಬಾಬಾ ರಾಮದೇವ್‌ ಅವರ “ಬೇಜವಾಬ್ದಾರಿಯ ಧೋರಣೆ” ಕುರಿತಂತೆ ಸುಪ್ರೀಂ ಕೋರ್ಟ್‌ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

“ನಿಮ್ಮನ್ನು ಕ್ಷಮಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಾವು ನಿರ್ಧರಿಸಿಲ್ಲ. ನೀವು ಮೂರು ಬಾರಿ ನಮ್ಮ ನಿರ್ದೇಶನಗಳನ್ನು ಉಲ್ಲಂಘಿಸಿದ್ದೀರಿ. ಈ ಹಿಂದಿನ ಆದೇಶಗಳನ್ನೂ ಪರಿಗಣಿಸುತ್ತಿದ್ದೇವೆ. ನ್ಯಾಯಾಲಯದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದಿಲ್ಲದೇ ಇರುವಷ್ಟು ನೀವು ಅಮಾಯಕರಲ್ಲ,” ಎಂದು ನ್ಯಾಯಾಲಯ ಹೇಳಿದೆ.

ಮುಂದಿನ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್‌ ಅಮಾನುಲ್ಲಾ ಅವರ ಪೀಠ ಎಪ್ರಿಲ್‌ 23ಕ್ಕೆ ನಿಗದಿಪಡಿಸಿದೆ. ಮುಂದಿನ ವಿಚಾರಣೆಯ ವೇಳೆಯೂ ರಾಮದೇವ್‌ ಮತ್ತು ರಾಮಕೃಷ್ಣ ಅವರನ್ನು ಖುದ್ದು ಹಾಜರಾಗಲು ಸೂಚಿಸಿದೆ.

ಇದಕ್ಕೂ ಮುಂಚೆ ಎಪ್ರಿಲ್‌ 10ರಂದು ನಡೆದ ವಿಚಾರಣೆ ವೇಳೆ ಬಾಬಾ ರಾಮದೇವ್‌ ಮತ್ತು ಆಚಾರ್ಯ ಬಾಲಕೃಷ್ಣ ಅವರ ಭೇಷರತ್‌ ಕ್ಷಮೆಯನ್ನು ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತಲ್ಲದೆ ಅವರ ಕೃತ್ಯಗಳು ಉದ್ದೇಶಪೂರ್ವಕ ಹಾಗೂ ಸತತ ಉಲ್ಲಂಘನೆಗಳನ್ನು ಮಾಡಲಾಗಿದೆ ಎಂದು ಹೇಳಿತ್ತು.

ನ್ಯಾಯಾಂಗ ನಿಂದನೆ ಪ್ರಕರಣವನ್ನು ಹಗುರವಾಗಿ ಪರಿಗಣಿಸಿದ್ದಕ್ಕೂ ನ್ಯಾಯಾಲಯ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿತ್ತಲ್ಲದೆ ಅವರು ಸಲ್ಲಿಸಿದ್ದ ಅಫಿಡವಿಟ್‌ನಿಂದ ಸಮಾಧಾನವಾಗಿಲ್ಲ ಎಂದು ಹೇಳಿತ್ತು.

ಪತಂಜಲಿ ಆಯುರ್ವೇದದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು.

ಸುಪ್ರೀಂ ವಿಚಾರಣೆಯ ನಂತರ ನ್ಯಾಯಾಲಯದ ಹೊರಗಿದ್ದ ಮಾಧ್ಯಮ ಮಂದಿಯ ಜೊತೆ ಮಾತನಾಡಿದ ಬಾಬಾ ರಾಮದೇವ್‌, “ನಾನು ಹೇಳಬೇಕಾಗಿದ್ದನ್ನು ಹೇಳಿದೆ. ನ್ಯಾಯಾಂಗದಲ್ಲಿ ನನಗೆ ಸಂಪೂರ್ಣ ಭರವಸೆ ಇದೆ,” ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News