ಭಾರತ ಮಾತೆಯ ಹಂತಕರು ನೀವು: ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

Update: 2023-08-09 13:05 GMT

ರಾಹುಲ್‌ ಗಾಂಧಿ. | Photo: PTI 

ಹೊಸದಿಲ್ಲಿ: ಸಂಸದ ಸ್ಥಾನ ಪುನಸ್ಥಾಪನೆಯಾದ ಬಳಿಕ ಲೋಕಸಭೆಯಲ್ಲಿ ನಡೆದ ಅವಿಶ್ವಾಸ ನಿರ್ಣಯದ ಚರ್ಚೆಯಲ್ಲಿ ಮೊದಲ ಬಾರಿಗೆ ಭಾಷಣ ಮಾಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮಣಿಪುರ ಹಿಂಸಾಚಾರದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಟುವಾಗಿ ವಾಗ್ದಾಳಿ ಮಾಡಿದ್ದಾರೆ.

ಭಾರತದ ಧ್ವನಿಯನ್ನು ಕೇಳಲು ಮೋದಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ ಅವರು, “ಈ ದೇಶವು ವಿವಿಧ ಭಾಷೆಗಳನ್ನು ಹೊಂದಿದೆ ಎಂದು ಕೆಲವರು ಹೇಳುತ್ತಾರೆ, ಕೆಲವರು ಇದು ಭೂಮಿ ಎಂದು ಹೇಳುತ್ತಾರೆ, ಕೆಲವರು ಇದು ಧರ್ಮ ಎಂದು ಹೇಳುತ್ತಾರೆ. ಆದರೆ ನನ್ನ ಗೆಳೆಯರೇ ಈ ದೇಶ ಒಂದೇ ಧ್ವನಿ ಎಂಬುದು ಸತ್ಯ. ಈ ದೇಶವು ಜನರ, ಅವರ ನೋವು ಮತ್ತು ಅವರ ಹೋರಾಟದ ಧ್ವನಿಯಾಗಿದೆ” ಎಂದು ಹೇಳಿದ್ದಾರೆ.

“ನಾವು ಅವರ ಮಾತುಗಳನ್ನು ಕೇಳಬೇಕಾದರೆ ನಮ್ಮ ದುರಹಂಕಾರವನ್ನು ಬಿಡಬೇಕು, ದ್ವೇಷವನ್ನು ಬಿಡಬೇಕು. ನಾವು ಹಾಗೆ ಮಾಡಿದಾಗ ನಾವು ಜನರ ಧ್ವನಿಯನ್ನು ಕೇಳಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದ್ದಾರೆ.

"ನೀವು ಭಾರತ ಮಾತೆಯ ರಕ್ಷಕರಲ್ಲ, ನೀವು ಭಾರತ ಮಾತೆಯ ಹಂತಕರು, ನೀವು ಮಣಿಪುರದಲ್ಲಿ ಭಾರತ ಮಾತೆಯನ್ನು ಕೊಂದಿದ್ದೀರಿ ಎನ್ನುವ ಕಾರಣಕ್ಕಾಗಿಯೇ ನೀವು ಅಲ್ಲಿಗೆ ಇದುವರೆಗೂ ಹೋಗಿಲ್ಲ" ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.

ಮಣಿಪುರವನ್ನು ಭಾರತದ ಭಾಗವೆಂದು ಪರಿಗಣಿಸದ ಕಾರಣ ಮೋದಿ ಮಣಿಪುರಕ್ಕೆ ಭೇಟಿ ನೀಡಿಲ್ಲ ಎಂದು ಆರೋಪಿಸಿದ ರಾಹುಲ್‌ ಗಾಂಧಿ “ಕೆಲವು ದಿನಗಳ ಹಿಂದೆ ನಾನು ಮಣಿಪುರಕ್ಕೆ ಭೇಟಿ ನೀಡಿದ್ದೆ. ನಮ್ಮ ಪ್ರಧಾನಿ ಹೋಗಲಿಲ್ಲ. ಅವರು ಇನ್ನೂ ಅಲ್ಲಿ ಹೋಗಿಲ್ಲ ಏಕೆಂದರೆ ಅವರಿಗೆ ಮಣಿಪುರ ಭಾರತದ ಭಾಗವಲ್ಲ. ನೀವು ಮಣಿಪುರವನ್ನು ಎರಡು ಭಾಗಗಳಾಗಿ ವಿಭಜಿಸಿದ್ದೀರಿ. ನೀವು ಮಣಿಪುರವನ್ನು ನಾಶಪಡಿಸಿದ್ದೀರಿ” ಎಂದು ವಾಗ್ದಾಳಿ ನಡೆಸಿದ್ದಾರೆ.

“ಭಾರತವು ಒಂದು ಧ್ವನಿ ಎಂದು ನನ್ನ ಭಾಷಣದ ಆರಂಭದಲ್ಲಿ ನಾನು ಹೇಳಿದಂತೆ, ಇದು ನಮ್ಮ ಜನರ ಧ್ವನಿ, ನಮ್ಮ ಜನರ ಹೃದಯದ ಧ್ವನಿ. ನೀವು ಆ ಧ್ವನಿಯನ್ನು ಕೊಂದಿದ್ದೀರಿ. ಇದರರ್ಥ ನೀವು ಮಣಿಪುರದಲ್ಲಿ ಭಾರತ ಮಾತೆಯನ್ನು ಕೊಂದಿದ್ದೀರಿ. ಮಣಿಪುರದ ಜನರನ್ನು ಕೊಂದ ನೀವು ಭಾರತವನ್ನು ಕೊಂದಿದ್ದೀರಿ. ನೀವು ದೇಶ ವಿರೋಧಿಗಳು, ನೀವು ದೇಶಭಕ್ತರಾಗಲು ಸಾಧ್ಯವಿಲ್ಲ, ನೀವು ದೇಶ ಪ್ರೇಮಿಯಾಗಲು ಸಾಧ್ಯವಿಲ್ಲ. ನೀವು ಭಾರತವನ್ನು ಕೊಲೆ ಮಾಡಿದ್ದೀರಿ,” ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News