ಒಡಿಶಾ: ತಂದೆ, ತಾಯಿ, ಸಹೋದರಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ

Update: 2025-03-04 21:32 IST
ಒಡಿಶಾ: ತಂದೆ, ತಾಯಿ, ಸಹೋದರಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಭುವನೇಶ್ವರ : ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ 22 ವರ್ಷದ ವ್ಯಕ್ತಿಯೊಬ್ಬ ತನ್ನ ಹೆತ್ತವರು ಮತ್ತು ಸಹೋದರಿಯನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಭೀಕರ ಘಟನೆಯು ಜಯಬಾದ ಗ್ರಾಮದಲ್ಲಿ ಮುಂಜಾನೆ 2:30ರ ಸುಮಾರಿಗೆ ನಡೆದಿದೆ. ಮೃತರನ್ನು 65 ವರ್ಷದ ಪ್ರಶಾಂತ್ ಸೇಠಿ, 62 ವರ್ಷದ ಕನಕಲತಾ ಸೇಠಿ ಮತ್ತು ಅವರ ಮಗಳು 25 ವರ್ಷ ರೋಸಲಿನ್ ಎಂಬುದಾಗಿ ಗುರುತಿಸಲಾಗಿದೆ. ಈ ಹತ್ಯಾಕಾಂಡವನ್ನು ಅವರ ಕಿರಿಯ ಮಗ ಸೂರ್ಯಕಾಂತ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದರು.

‘‘ಆರೋಪಿಯು ಹಲವು ವಿಷಯಗಳಲ್ಲಿ ತನ್ನ ಕುಟುಂಬ ಸದಸ್ಯರೊಂದಿಗೆ ವಾಗ್ವಾದ ನಡೆಸಿದ್ದನು. ಕಳೆದ ಐದಾರು ದಿನಗಳಿಂದ ತಾನು ತೀವ್ರ ಒತ್ತಡದಲ್ಲಿದ್ದೆ ಹಾಗೂ ಸರಿಯಾಗಿ ನಿದ್ದೆ ಮಾಡಲು ಆಗಿರಲಿಲ್ಲ ಎಂಬುದಾಗಿ ಅವನು ಪೊಲೀಸರಿಗೆ ತಿಳಿಸಿದ್ದಾನೆ. ನಾನು ಮಾದಕ ದ್ರವ್ಯ ಸೇವಿಸಿದ್ದೇನೆ ಎಂದು ಆರೋಪಿಸಿ ತಂದೆಯು ನನಗೆ ಹೊಡೆದಿದ್ದು ನನ್ನ ಒಂದು ಹಲ್ಲು ಮುರಿದಿದೆ ಎಂಬುದಾಗಿಯೂ ಅವನು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ, ಕೋಪದ ಭರದಲ್ಲಿ ಅವನು ಈ ಕೃತ್ಯ ನಡೆಸಿರಬಹುದು’’ ಎಂದು ಜಗತ್‌ಸಿಂಗ್‌ಪುರ ಪೊಲೀಸ್ ಸೂಪರಿಂಟೆಂಡೆಂಟ್ ಭವಾನಿ ಶಂಕರ್ ಉದ್ಗಟ ಹೇಳಿದರು.

ಆರೋಪಿಯ ವಿಚಾರಣೆ ನಡೆಸಲಾಗುತ್ತಿದ್ದು ಅವನು ಮಾನಸಿಕ ಅಸ್ವಸ್ಥ ಎನ್ನುವ ಯಾವುದೇ ಲಕ್ಷಣ ಕಂಡುಬಂದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅವನು ಮೊಬೈಲ್ ಫೋನ್‌ನಲ್ಲಿ ಗೇಮ್ಸ್ ಆಡುವ ಚಟಕ್ಕೆ ಒಳಗಾಗಿದ್ದನು ಮತ್ತು ಕುಟುಂಬ ಸದಸ್ಯರೊಂದಿಗೆ ಆಗಾಗ ಜಗಳವಾಡುತ್ತಿದ್ದನು ಎಂದು ನೆರೆಕರೆಯವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News