ಕಾಂಗ್ರೆಸ್ ಸೇರ್ಪಡೆಯಾಗಲಿರುವ ಜಗನ್ ಮೋಹನ್ ರೆಡ್ಡಿ ಸಹೋದರಿ ವೈ.ಎಸ್. ಶರ್ಮಿಳಾ

Update: 2024-01-02 05:44 GMT

ವೈ.ಎಸ್. ಶರ್ಮಿಳಾ (PTI)

ಹೊಸದಿಲ್ಲಿ: ವೈಎಸ್‍ಆರ್ ತೆಲಂಗಾಣ ಪಕ್ಷದ ಸಂಸ್ಥಾಪಕ ಅಧ್ಯಕ್ಷೆ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈ.ಎಸ್. ಶರ್ಮಿಳಾ ಈ ವಾರ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ತೆಲಂಗಾಣ ರಾಜ್ಯದಲ್ಲಿ ಭಾರತ್ ರಾಷ್ಟ್ರ ಸಮಿತಿಯ ಪ್ರಾಬಲ್ಯಕ್ಕೆ ಕೊನೆ ಹಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ ಎಂದು ndtv.com ವರದಿ ಮಾಡಿದೆ.

ಮೂಲಗಳ ಪ್ರಕಾರ, ಲೋಕಸಭಾ ಚುನಾವಣೆಯೊಂದಿಗೆ ಆಂಧ್ರಪ್ರದೇಶ ವಿಧಾನಸಭೆಗೆ ನಡೆಯುಲಿರುವ ಚುನಾವಣೆಗೆ ವೈ.ಎಸ್.ಶರ್ಮಿಳಾಗೆ ಕಾಂಗ್ರೆಸ್ ಪಕ್ಷವು ಪ್ರಮುಖ ಪಾತ್ರ ನೀಡಲಿದೆ ಎಂದು ತಿಳಿಸಿವೆ. ಈ ನಡೆಯು ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಪುನಶ್ಚೇತನಗೊಳಿಸುವ ಉದ್ದೇಶ ಹೊಂದಿದೆ ಎಂದು ಹೇಳಲಾಗಿದೆ. ವೈಎಸ್‍ಆರ್ಸಿಪಿ ಪಕ್ಷವನ್ನು ತೊರೆಯಲು ಬಯಸುವವರು ಇದೀಗ ಕಾಂಗ್ರೆಸ್ ಪಕ್ಷವನ್ನು ಆಯ್ದುಕೊಳ್ಳಬಹುದು ಎಂದು ಕಾಂಗ್ರೆಸ್ ಆಶಿಸುತ್ತಿದೆ. ಈ ನಡುವೆ ಆಂಧ್ರಪ್ರದೇಶದ ಪ್ರಮುಖ ವಿರೋಧ ಪಕ್ಷವಾದ ತೆಲುಗು ದೇಶಂ ಪಕ್ಷವು ತನ್ನ ಪ್ರಭಾವವನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ.

ತೆಲಂಗಾಣ ರಾಜ್ಯಕ್ಕಾಗಿನ ಬೇಡಿಕೆ ಬಿರುಸು ಪಡೆಯುತ್ತಿದ್ದಂತೆಯೇ ಕಾಂಗ್ರೆಸ್ ನೊಂದಿಗೆ ಭಿನ್ನಾಭಿಪ್ರಾಯ ತಳೆದಿದ್ದ ಜಗನ್ ಮೋಹನ್ ರೆಡ್ಡಿ, ಕಾಂಗ್ರೆಸ್ ಪಕ್ಷವನ್ನು ತೊರೆದು ತಮ್ಮದೇ ಆದ ವೈಎಸ್‍ಆರ್‍ಸಿಪಿ ಪಕ್ಷವನ್ನು ಸ್ಥಾಪಿಸಿದ್ದರು. ಅವರೊಂದಿಗೆ ಹೆಜ್ಜೆ ಹಾಕಿದ್ದ 18 ಶಾಸಕರು ಹಾಗೂ ಓರ್ವ ಸಂಸದ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದರು. ಇದರಿಂದ ಹಲವಾರು ಉಪ ಚುನಾವಣೆಗಳಿಗೆ ದಾರಿಯಾಗಿತ್ತು. ಭ್ರಷ್ಟಾಚಾರದ ಆರೋಪದಲ್ಲಿ ಜಗನ್ ಮೋಹನ್ ರೆಡ್ಡಿ ಅವರನ್ನು ಜೈಲಿನಲ್ಲಿರಿಸಿದ್ದಾಗ, ಅವರ ತಾಯಿ ವೈ.ಎಸ್.ವಿಜಯಮ್ಮ ಹಾಗೂ ಸಹೋದರಿ ವೈ.ಎಸ್.ಶರ್ಮಿಳಾ ಚುನಾವಣಾ ಪ್ರಚಾರದ ನೇತೃತ್ವ ವಹಿಸಿದ್ದರು. ಆ ಚುನಾವಣೆಯಲ್ಲಿ ವೈಎಸ್‍ಆರ್‍ಸಿಪಿ ಜಯಭೇರಿ ಬಾರಿಸಿತ್ತು.

ಒಂಬತ್ತು ವರ್ಷಗಳ ನಂತರ 2021ರಲ್ಲಿ ತಮ್ಮ ಸಹೋದರನೊಂದಿಗೆ ರಾಜಕೀಯ ಭಿನ್ನಾಭಿಪ್ರಾಯ ಕಂಡು ಬಂದಿದ್ದರಿಂದ ಅವರನ್ನು ಶರ್ಮಿಳಾ ತೊರೆದಿದ್ದರು. ಅಲ್ಲದೆ ತೆಲಂಗಾಣದಲ್ಲಿ ವೈಎಸ್ಆರ್ಸಿಪಿಗೆ ಯಾವುದೇ ಅಸ್ತಿತ್ವವಿಲ್ಲ ಎಂದು ಒತ್ತಿ ಹೇಳಿದ್ದರು. ಆ ವರ್ಷದ ಜುಲೈ ತಿಂಗಳಲ್ಲಿ ವೈಎಸ್ಆರ್ ತೆಲಂಗಾಣ ಪಕ್ಷದ ಸ್ಥಾಪನೆಯನ್ನು ಅವರು ಘೋಷಿಸಿದ್ದರು. ಇದರ ಬೆನ್ನಿಗೇ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಆಡಳಿತಾರೂಢ ಬಿಆರ್ಎಸ್ ಪಕ್ಷದ ವಿರುದ್ಧ ಪ್ರಚಾರ ಆರಂಭಿಸಿದ್ದರು.

ಕಾಂಗ್ರೆಸ್ ಮೂಲಗಳ ಪ್ರಕಾರ, ಆಂಧ್ರದಲ್ಲಿ ಕಾಂಗ್ರೆಸ್ ಪಕ್ಷದ ಮತ ಪ್ರಮಾಣವು ಹಲವಾರು ವರ್ಷಗಳಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಈಗ ಅದರ ಮತ ಪ್ರಮಾಣವು ಕೇವಲ ಶೇ. 1ರಷ್ಟಿದೆ. ತಮ್ಮ ಸಹೋದರನೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಶರ್ಮಿಳಾ ಅವರಿಂದ ದೂರವಾಗಿ ಸ್ಥಾಪಿಸಿರುವ ಪಕ್ಷದ ಚಟುವಟಿಕೆಗಳಿಗೆ ಹಣದ ಮುಗ್ಗಟ್ಟು ಅನುಭವಿಸುತ್ತಿದ್ದಾರೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News