ವಿಶ್ವದ ಸಮಸ್ಯೆಗಳಿಗೆ ಬಣ್ಣದ ಹೊದಿಕೆ

Update: 2023-09-11 04:44 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಜಿ20 ಘೋಷಣೆ ಸರ್ವಾನುಮತದಿಂದ ಅಂಗೀಕಾರವಾಗಿರುವುದನ್ನು ಭಾರತ ನೇತೃತ್ವದ ಶೃಂಗಸಭೆಯ ಯಶಸ್ವಿಯೆಂದು ಬಿಂಬಿಸಲಾಗಿದೆ. ‘ಸಮಗ್ರ, ನ್ಯಾಯೋಚಿತ, ಶಾಶ್ವತ ಶಾಂತಿ’ಯ ಕಹಳೆಯೊಂದು ಜಿ ೨೦ ಶೃಂಗ ಸಭೆಯಲ್ಲಿ ಮೊಳಗಿದೆ. ಉಕ್ರೇನ್ ವಿದ್ಯಮಾನವನ್ನು ಕೇಂದ್ರವಾಗಿಟ್ಟುಕೊಂಡು ಘೋಷಣೆಗಳನ್ನು ಮಾಡಲಾಗಿದ್ದು, ದುರ್ಬಲ ದೇಶಗಳ ರಕ್ಷಣೆ, ಪರಿಸರ ಮಾಲಿನ್ಯಗಳ ತಡೆಗೆ ಆದ್ಯತೆಗಳನ್ನು ನೀಡಲಾಗಿದೆ. ಮುಖ್ಯವಾಗಿ ಶೃಂಗಸಭೆಯನ್ನು ಭಾರತದ ನೇತೃತ್ವ ಎನ್ನುವ ಬದಲಿಗೆ ಮೋದಿ ನೇತೃತ್ವ ಎಂದೇ ಆರಂಭದಿಂದ ಇಲ್ಲಿಯವರೆಗೆ ಬಿಂಬಿಸಲಾಗಿದೆ ಮತ್ತು ಅದಕ್ಕೆ ಪೂರಕವಾಗಿ ಶೃಂಗಸಭೆಯನ್ನು ಮೋದಿ ವೈಭವೀಕರಣಕ್ಕೆ ಗರಿಷ್ಠ ಮಟ್ಟದಲ್ಲಿ ಬಳಸಲಾಗಿದೆ. ದಿಲ್ಲಿ ಏರ್‌ಪೋರ್ಟ್‌ನಿಂದ ಬೈಡನ್ ಹೊಟೇಲ್‌ವರೆಗೆ ೯೬೦ಕ್ಕೂ ಅಧಿಕ ಜಿ೨೦ ಜಾಹೀರಾತುಗಳಲ್ಲಿ ಶೇ. ೨೫ರಷ್ಟು ಪ್ರಧಾನಿ ಮೋದಿಯವರು ವಿಜೃಂಭಿಸುತ್ತಿದ್ದರು. ಇಂಡಿಯಾದ ವಿರುದ್ಧ ಭಾರತದ ನಾಮಫಲಕವನ್ನೂ ಶೃಂಗಸಭೆಯುದ್ದಕ್ಕೆ ಪ್ರದರ್ಶಿಸಲಾಯಿತು. ಶೃಂಗಸಭೆ ಎನ್ನುವುದು ಪ್ರದರ್ಶನಕ್ಕೆ ಸೀಮಿತ ಎನ್ನುವ ಆರೋಪಕ್ಕೆ ಪುಷ್ಟಿ ನೀಡುವಂತೆ ಸಭೆಯುದ್ದಕ್ಕೂ ಯಶಸ್ವೀ ‘ಪ್ರದರ್ಶನ’ಗಳು ನಡೆದವು.

ಸರ್ವಾನುಮತದಿಂದ ಅಂಗೀಕರಿಸಿದಾಕ್ಷಣ ಈ ಘೋಷಣೆಗಳು ಅನುಷ್ಠಾನಗೊಳ್ಳುವುದಿಲ್ಲ ಎನ್ನುವ ವಾಸ್ತವ ಎಲ್ಲರಿಗೂ ಗೊತ್ತಿದೆ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಮುಖ್ಯವಾಗಿ ವಿಶ್ವ ಎದುರಿಸುತ್ತಿರುವ ಹತ್ತು ಹಲವು ಜ್ವಲಂತ ಸಮಸ್ಯೆಗಳಿಗೆ ತಮ್ಮ ಕೊಡುಗೆಗಳನ್ನು ನೀಡುತ್ತಿರುವ ದೇಶಗಳು ಜಿ20 ಶೃಂಗಸಭೆಯಲ್ಲಿ ಕೈಗೆ ಕೈ ಜೋಡಿಸಿ ಅವುಗಳನ್ನು ನಿವಾರಿಸುವ ಮಾತುಗಳನ್ನಾಡಿವೆ. ಆದರೆ ವೇದಿಕೆಯ ಶ್ರೀಮಂತ ದೇಶಗಳ ಧೋರಣೆ ಇತರರನ್ನು ಸರಪಡಿಸುವುದಾಗಿತ್ತೇ ಹೊರತು, ತನ್ನನ್ನು ತಾನು ಸರಿಪಡಿಸಿಕೊಳ್ಳುವುದಲ್ಲ. ಇನ್ನು ಮುಂದೆ ಇಂತಹ ತಪ್ಪುಗಳು ತನ್ನಿಂದಾಗುವುದಿಲ್ಲ ಎನ್ನುವ ಭರವಸೆಗಳಲ್ಲ. ಬದಲಿಗೆ ಶ್ರೀಮಂತ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ಅಥವಾ ಬಡ ರಾಷ್ಟ್ರಗಳಿಗೆ ನೀಡುವ ಉಪದೇಶಗಳು ಮತ್ತು ಒತ್ತಡಗಳಾಗಿಯಷ್ಟೇ ಉಳಿಯಲಿವೆ. ಇದೇ ಸಂದರ್ಭದಲ್ಲಿ ಚೀನಾ, ರಶ್ಯದಂತಹ ಬಲಾಢ್ಯ ರಾಷ್ಟ್ರಗಳ ಪಾಲುದಾರಿಕೆಯಿಲ್ಲದೆ ಶಾಂತಿಯನ್ನು ಸ್ಥಾಪಿಸಲು ಸಾಧ್ಯವಿಲ್ಲ ಎನ್ನುವ ಅರಿವು ಎಲ್ಲರಿಗೂ ಇದೆ. ಒಂದು ವೇಳೆ ಅವರನ್ನು ಪಾಲುದಾರಿಕೆಯಿಂದ ಹೊರಗಿಟ್ಟು ಶಾಂತಿ ಸ್ಥಾಪಿಸಲು ಹೊರಟರೆ ಅದು ಶಾಂತಿಯ ಬದಲಿಗೆ ವಿಶ್ವದಲ್ಲಿ ಇನ್ನಷ್ಟು ಅಶಾಂತಿಗೆ ಕಾರಣವಾಗಬಹುದು. ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಯಾಗಬೇಕಾದರೆ ಅದಕ್ಕೆ ರಶ್ಯದ ಕೊಡುಗೆ ಅತ್ಯಗತ್ಯವಾಗಿ ಬೇಕಾಗಿದೆ. ಆದರೆ ಇದನ್ನು ಜಿ ೨೦ ಒತ್ತಡದ ಮೂಲಕ ಸಾಧಿಸಲು ಮುಂದಾಗುತ್ತದೆಯೆ? ಇದೇ ಸಂದರ್ಭದಲ್ಲಿ ಉಕ್ರೇನ್‌ನ ಇಂದಿನ ಸ್ಥಿತಿಗೆ ಅಮೆರಿಕ, ಬ್ರಿಟನ್‌ನಂತಹ ಶ್ರೀಮಂತ ರಾಷ್ಟ್ರ ಗಳ ಪಾತ್ರಗಳೇ ಇಲ್ಲವೆ? ಅಣ್ವಸ್ತ್ರಗಳ ಮೂಲಕವೇ ಇತರ ದೇಶಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಅಮೆರಿಕ, ಅಣ್ವಸ್ತ್ರ ಬೆದರಿಕೆಯ ವಿರುದ್ಧ ಕೈ ಜೋಡಿಸಿದೆ.ಹಾಗಾದರೆ ಈ ಘೋಷಣೆಗಳನ್ನು ಅನುಷ್ಠಾನಕ್ಕೆ ತರುವ ಬಗೆ ಹೇಗೆ ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಭಾರತ ಉಪಖಂಡದಲ್ಲಿ ಪಾಕಿಸ್ತಾನ-ಭಾರತದ ನಡುವೆ ಶಸ್ತ್ರಾಸ್ತ್ರ ಪೈಪೋಟಿಗೂ ಕಾರಣವಾಗಿರುವ ಅಮೆರಿಕ, ವಿಶ್ವ ಶಾಂತಿಯ ಬಗ್ಗೆ ಕೈ ಎತ್ತಿದರೆ ಅದನ್ನು ನಂಬುವುದು ಸಾಧ್ಯವೆ?

ಜಾಗತಿಕ ತಾಪಮಾನ ಇಳಿಸುವಲ್ಲಿ ಜಿ ೨೦ಯಲ್ಲಿರುವ ಶ್ರೀಮಂತ ದೇಶಗಳ ದೇಣಿಗೆ ತೀರಾ ಕಡಿಮೆ ಎನ್ನುವುದನ್ನು ಆಕ್ಸ್‌ಫಾಮ್ ವರದಿ ಬಹಿರಂಗಪಡಿಸಿದೆ. ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ಜರ್ಮನಿಯನ್ನು ಈ ನಿಟ್ಟಿನಲ್ಲಿ ಉಲ್ಲೇಖಿಸಿದೆ. ಪ್ರಕೃತಿಗೆ ಇವುಗಳು ಮಾಡುತ್ತಿರುವ ಹಾನಿಗೆ ಹೋಲಿಸಿದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಏನೂ ಅಲ್ಲ. ಜಾಗತಿಕ ತಾಪಮಾನ ಏರಿಕೆಯನ್ನು ೧.೫ ಡಿಗ್ರಿ ಸೆಲ್ಸಿಯಸ್‌ಗೆ

ಮಿತಿಗೊಳಿಸಲು ಅಗತ್ಯವಾಗಿರುವಷ್ಟು ಅಗಾಧ ಪ್ರಮಾಣದ ಮಾಲಿನ್ಯ ಹೊರಸೂಸುವಿಕೆಯನ್ನು ತಡೆಯಲು ಜಿ ೨೦ ಗುಂಪು ಸಾಮೂಹಿಕವಾಗಿ ಹಾಗೂ ಅಧಿಕ ಆದಾಯದ ದೇಶಗಳು ವೈಯಕ್ತಿಕವಾಗಿ ವಿಫಲವಾಗುತ್ತಿವೆ ಎಂದು ಆಕ್ಸ್ ಫಾಮ್ ವರದಿ ಹೇಳುತ್ತಿರುವಾಗ, ಶ್ರೀಮಂತ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸಾಲ ನೀಡಿ, ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ನಿಯಂತ್ರಿಸಲು ಹೊರಟಿವೆ. ಜಿ ೨೦ ಘೋಷಣೆಗಳಲ್ಲಿ ಇದೂ ಸೇರಿಕೊಂಡಿದೆ. ಜಿ ೨೦ಯಲ್ಲಿ ಶ್ರೀಮಂತ ರಾಷ್ಟ್ರಗಳ ಕೈ ಕುಲುಕಿ ಅವರ ಜೊತೆಗೆ ವೇದಿಕೆ ಹಂಚಿಕೊಳ್ಳುವ ಸಂಭ್ರಮವನ್ನು ಹೊರತು ಪಡಿಸಿದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ದೊಡ್ಡ ಮಟ್ಟದ ಪ್ರಯೋಜನಗಳೇನೂ ಇಲ್ಲ. ಭಾರತವೆಂದರೆ ಮೋದಿ ಎಂದು ನಂಬುವವರ ಪಾಲಿಗೆ ಜಿ ೨೦ ಸಮಾವೇಶ ಯಶಸ್ವಿಯಾಗಿದೆ. ಮಾಧ್ಯಮಗಳಲ್ಲಿ ಮೋದಿಯನ್ನು ಗರಿಷ್ಠ ಮಟ್ಟದಲ್ಲಿ ವಿಜೃಂಭಿಸಲಾಗಿದೆ. ಇದೇ ಸಂದರ್ಭದಲ್ಲಿ ಭಾರತದ ಬಡತನವನ್ನು ಜಿ ೨೦ ರಾಷ್ಟ್ರಗಳ ಮುಂದೆ ಮುಚ್ಚಿಡುವ ಪ್ರಯತ್ನ ನಡೆದಿದೆ. ಶ್ರೀಮಂತ ರಾಷ್ಟ್ರಗಳಿಗೂ ಅವುಗಳನ್ನು ನೋಡುವ ಆಸಕ್ತಿಯೇನೂ ಇರಲಿಲ್ಲ. ಮೋದಿಯ ಬೆನ್ನು ತಟ್ಟುವ ಮೂಲಕ ತಮ್ಮ ತಮ್ಮ ಹಿತಾಸಕ್ತಿಗಳನ್ನು ಸಾಧಿಸಿಕೊಳ್ಳುವುದರಲ್ಲಿ ಅವುಗಳು ತಲ್ಲೀನವಾಗಿದ್ದವು.

ಜಿ ೨೦ ಸಮಾವೇಶ ನಡೆಯುತ್ತಿರುವ ಹೊತ್ತಿನಲ್ಲೇ ದಿಲ್ಲಿಯ ಜೋಪಡಾ ಪಟ್ಟಿಗಳನ್ನು, ಬಡವರನ್ನು ಪ್ಲಾಸ್ಟಿಕ್ ಹೊದಿಗೆಯ ಮೂಲಕ ಮುಚ್ಚಿಡುವ ಪ್ರಯತ್ನ ನಡೆಯಿತು. ಇದರ ವಿರುದ್ಧ ವಿರೋಧ ಪಕ್ಷಗಳ ನಾಯಕರು ತೀವ್ರ ಟೀಕೆಗಳನ್ನು ಮಾಡಿದರು. ವಾಸ್ತವವನ್ನು ಒಪ್ಪಿಕೊಳ್ಳುವ, ಅದನ್ನು ಎದುರಿಸುವ ಶಕ್ತಿಯೇ ಇಲ್ಲದಿದ್ದರೆ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದಾದರೂ ಹೇಗೆ? ಭಾರತದ ಬಡತನ, ಗುಡಿಸಲು ಇವಗಳನ್ನೆಲ್ಲ ಹೊರಗಿನ ಗಣ್ಯರ ಕಣ್ಣಿನಿಂದ ಮುಚ್ಚಿಡುವುದರಿಂದ ಭಾರತದ ವರ್ಚಸ್ಸನ್ನು ಹೆಚ್ಚಿಸಲು ಸಾಧ್ಯವೆ? ಬಹುಶಃ ಸರಕಾರ ಪ್ರಧಾನಿ ಮೋದಿಯ ವರ್ಚಸ್ಸಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಗುಡಿಸಲುಗಳನ್ನು ಹಸಿರು ಪ್ಲಾಸ್ಟಿಕ್‌ಗಳಿಂದ ಮುಚ್ಚಿಟ್ಟಿರಬೇಕು. ಹಾಗೆ ನೋಡಿದರೆ ಜಿ ೨೦ ಶೃಂಗ ಸಭೆಯೂ ವಿಶ್ವದ ಸಮಸ್ಯೆಗಳಿಗೆ ಬಣ್ಣದ ಪ್ಲಾಸ್ಟಿಕ್ ಹೊದಿಕೆಯಂತೇ ಇದೆ. ವಿಶ್ವ ನಾಯಕರಿಗೆ ಭಾರತದಲ್ಲಿ ಹೆಚ್ಚುತ್ತಿರುವ ಹಿಂಸೆ, ದೌರ್ಜನ್ಯಗಳು ಗಮನಕ್ಕೆ ಬರಲಿಲ್ಲ. ಅಥವಾ ಅದರ ಬಗ್ಗೆ ಚರ್ಚಿಸುವ ಆಸಕ್ತಿ ಅವರಿಗೆ ಇದ್ದಿರಲಿಲ್ಲ. ಹಾಗಾದರೆ ಇವರು ಗುರುತಿಸುವ ವಿಶ್ವ ಎಲ್ಲಿದೆ? ಅದು ಚಂದ್ರಲೋಕದಲ್ಲಿದೆಯೆ? ಭಾರತದಲ್ಲಿ ಬೆಳೆಯುತ್ತಿರುವ ಸರ್ವಾಧಿಕಾರ, ಮಾನವ ಹಕ್ಕುಗಳ ಸಮಸ್ಯೆಗಳು ವಿಶ್ವದ ಸಮಸ್ಯೆಯ ಭಾಗವೇ ಆಗಿದ್ದಲ್ಲಿ, ಯಾಕೆ ಅವರ ಮಾತುಗಳಲ್ಲಿ ಈ ಬಗ್ಗೆ ಕಳವಳಗಳು ವ್ಯಕ್ತವಾಗಲಿಲ್ಲ?

ಮುಂದಿನ ಜಿ ೨೦ ಬ್ರೆಝಿಲ್‌ನಲ್ಲಿ ನಡೆಯಲಿದೆ. ಈ ಸಭೆಗೆ ರಶ್ಯವನ್ನೂ ಆಹ್ವಾನಿಸಲಾಗುವುದು ಎಂದು ಬ್ರೆಝಿಲ್ ಅಧ್ಯಕ್ಷರು ಹೇಳಿದ್ದಾರೆ. ಇದು ಆಶಾದಾಯಕವಾಗಿದೆ. ವಿಶ್ವದಲ್ಲಿ ಶಾಂತಿಯನ್ನು ಸ್ಥಾಪಿಸಬೇಕಾದರೆ ಅದಕ್ಕೆ ಕಾರಣರಾದ ಎಲ್ಲ ದೇಶಗಳನ್ನು ಒಂದು ವೇದಿಕೆಗೆ ತರುವ ಅಗತ್ಯವಿದೆ ಮತ್ತು ಶ್ರೀಮಂತ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಉಪದೇಶಗಳನ್ನು ನಿಲ್ಲಿಸಿ, ತಮ್ಮ ಪ್ರಮಾದಗಳನ್ನು ತಿದ್ದಿಕೊಂಡು ವಿಶ್ವವನ್ನು ಅಭಿವೃದ್ಧಿಯ ಕಡೆಗೆ ಮುನ್ನಡೆಸುವ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಇಲ್ಲವಾದರೆ, ಜಿ ೨೦ ಶೃಂಗ ಸಭೆ ವಿಶ್ವ ಮಟ್ಟದ ನಾಯಕರ ಜಾತ್ರೆಯಾಗಿ, ಹೆಮ್ಮೆಗಳಾಗಿ ಮುಗಿದು ಬಿಡಬಹುದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News