ಸಾಲವನ್ನೇ ಸಾವಿನ ದಾರಿಯಾಗಿಸುವ ನಕಲಿ ಆ್ಯಪ್‌ಗಳ ಕ್ರೂರ ಜಾಲ

ಪ್ರಪಂಚದಾದ್ಯಂತ ವಿವಿಧ ಕಂಪೆನಿಗಳು ಇಂತಹದೇ ಬ್ಲ್ಯಾಕ್‌ಮೇಲ್ ಹಗರಣ ನಡೆಸುತ್ತಿರುವ ಬಗ್ಗೆ ಪುರಾವೆಗಳಿವೆ ಎನ್ನುವ ಬಿಬಿಸಿ ವರದಿ, ಭಾರತದಲ್ಲಿ ಮಾತ್ರ ಸಾಲದ ಆ್ಯಪ್‌ಗಳ ಕಿರುಕುಳಕ್ಕೆ ಒಳಗಾಗಿ ಕನಿಷ್ಠ 60 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುತ್ತದೆ. ಹಾಗೆ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಹೆಚ್ಚಿನವರು 20 ಅಥವಾ 30ರ ಆಸುಪಾಸಿನವರೇ ಆಗಿದ್ದಾರೆ ಎನ್ನುತ್ತದೆ ವರದಿ. ಒಬ್ಬ ಅಗ್ನಿಶಾಮಕ ಸಿಬ್ಬಂದಿ, ಒಬ್ಬ ಪ್ರಶಸ್ತಿ ವಿಜೇತ ಸಂಗೀತಗಾರ, ತಮ್ಮ ಮೂರು ಮತ್ತು ಐದು ವರ್ಷದ ಮಕ್ಕಳನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡ ದಂಪತಿ -ಹೀಗೆ ಹಲವರ ಕಥೆಗಳನ್ನು ವರದಿ ಪರಿಶೀಲಿಸಿದೆ. ಸಾಲದ ವ್ಯೆಹಕ್ಕೆ ಬಲಿಯಾದವರಲ್ಲಿ ನಾಲ್ವರಂತೂ ಇನ್ನೂ ಹದಿಹರೆಯದವರಾಗಿದ್ದರು ಎಂಬುದನ್ನೂ ವರದಿ ಉಲ್ಲೇಖಿಸಿದೆ.

Update: 2023-10-19 09:03 GMT

ಆಕೆ ಮುಂಬೈ ಮೂಲದ ಭೂಮಿ ಸಿನ್ಹಾ. ವಕೀಲೆ. ವಿಧವೆಯಾಗಿದ್ದು, ಮಗಳನ್ನು ಧೈರ್ಯದಿಂದ ಬೆಳೆಸುತ್ತಿರುವ ಗಟ್ಟಿಗಿತ್ತಿ ಮಹಿಳೆ. ಆರ್ಥಿಕ ಅಗತ್ಯ ಪೂರೈಸಿಕೊಳ್ಳಲು ಭೂಮಿ ಹಲವಾರು ಸಾಲದ ಆ್ಯಪ್‌ಗಳಿಂದ ಸುಮಾರು 47,000 ರೂ. ಸಾಲ ಪಡೆದಿದ್ದರು. ಹಣವೇನೋ ತಕ್ಷಣ ಸಿಗುತ್ತಿತ್ತು. ಆದರೆ ಬರುವಾಗಲೇ ಶುಲ್ಕದ ನೆಪದಲ್ಲಿ ದೊಡ್ಡ ಪಾಲನ್ನು ಕಡಿತ ಮಾಡಿಕೊಳ್ಳಲಾಗುತ್ತಿತ್ತು. ಸಾಲ ಪಡೆದ ಏಳು ದಿನಗಳಲ್ಲೇ ಮರುಪಾವತಿ ಮಾಡಬೇಕಿತ್ತು. ಆದರೆ ಆಗಿರಲಿಲ್ಲ. ಅದಕ್ಕಾಗಿ ಮತ್ತೊಂದು ಆ್ಯಪ್‌ನಿಂದ ಸಾಲ ಪಡೆಯುವುದು, ಆಮೇಲೆ ಇನ್ನೊಂದರಿಂದ ತೆಗೆದುಕೊಳ್ಳುವುದು ಇಂತಹ ಅನಿವಾರ್ಯತೆ. ಕಡೆಗೆ ಅವರು 20 ಲಕ್ಷದಷ್ಟು ದೊಡ್ಡ ಸಾಲದ ಸುಳಿಯಲ್ಲಿ ಸಿಲುಕಿಕೊಂಡುಬಿಟ್ಟಿದ್ದರು.

ರಿಕವರಿ ಏಜೆಂಟ್‌ಗಳ ಕಾಟ ಆಗಲೇ ಶುರುವಾಗಿತ್ತು. ಅಸಹ್ಯಕರ ರೀತಿಯಲ್ಲಿ ಅವಮಾನಿಸುವುದು ಮತ್ತು ನಿಂದಿಸುವುದು ನಡೆದಿತ್ತು. ಹಣ ಪಾವತಿಸಿದಾಗಲೂ ಅದನ್ನು ಸುಳ್ಳು ಎಂದು ಹೇಳಿ ದೂಷಿಸಲಾಗುತ್ತಿತ್ತು. ದಿನಕ್ಕೆ 200 ಬಾರಿ ಕರೆಗಳು ಬರತೊಡಗಿದ್ದವು. ಅವರ ವಾಸದ ವಿಳಾಸವೂ ಗೊತ್ತೆಂದು ಬೆದರಿಸಲಾಗುತ್ತಿತ್ತು ಮತ್ತೂ ಒಂದು ಬಗೆಯ ಎಚ್ಚರಿಕೆಯಾಗಿ ಮೃತದೇಹದ ಚಿತ್ರಗಳನ್ನು ಕಳುಹಿಸಲಾಗುತ್ತಿತ್ತು.

ನಿಂದನೆ ಇಷ್ಟಕ್ಕೇ ನಿಲ್ಲಲಿಲ್ಲ. ಆಕೆಯ ಫೋನ್‌ನಲ್ಲಿರುವ ಎಲ್ಲಾ 486 ಸಂಪರ್ಕಗಳಿಗೆ ಆಕೆ ಕಳ್ಳಿ ಮತ್ತು ವೇಶ್ಯೆ ಎಂಬ ಸಂದೇಶಗಳನ್ನು ಕಳಿಸಲಾಯಿತು. ಆಕೆಯ ಮಗಳ ಚಾರಿತ್ರ್ಯದ ಬಗ್ಗೆಯೂ ಬೆದರಿಕೆ ಬಂದಾಗ ಮಾತ್ರ ಆ ತಾಯಿ ನಲುಗಿಹೋದರು. ನಿದ್ದೆ ಕೂಡ ಹತ್ತಿರ ಸುಳಿಯದಂತಹ ಸ್ಥಿತಿ ಅವರದಾಯಿತು.

ಆಕೆ ತಮ್ಮ ಸ್ನೇಹಿತರು, ಸಂಬಂಧಿಗಳಿಂದಲೂ ಸಾಲ ಪಡೆದಿದ್ದರು. ಆದರೆ ಹೆಚ್ಚಾಗಿ ಆ್ಯಪ್‌ಗಳಿಂದ ಪಡೆದಿದ್ದರು. ಸುಮಾರು 69 ಆ್ಯಪ್‌ಗಳಿಂದ ಸಾಲ ಪಡೆದಿದ್ದರು. ಯಾವ ಮಟ್ಟದ ಕಿರುಕುಳ ಇತ್ತೆಂದರೆ, ಬೆಳಗಾಗದಿದ್ದರೆ ಸಾಕು ಎಂದು ಪ್ರತೀ ರಾತ್ರಿ ಮಲಗುವಾಗ ಪ್ರಾರ್ಥಿಸುವ ಸ್ಥಿತಿ. ಬೆಳಗಾದರೆ ಸಾಕು, 7 ಗಂಟೆಗೇ ಫೋನ್ ಕರೆ ಶುರುವಾಗಿಬಿಡುತ್ತಿತ್ತು.

ಕಡೆಗೂ ಹೇಗೋ ಮಾಡಿ ಅವರು ಎಲ್ಲ ಸಾಲವನ್ನೂ ತೀರಿಸಿದರು. ಅಷ್ಟಾದರೂ ಒಂದು ಆ್ಯಪ್ ಕಡೆಯಿಂದ ಮಾತ್ರ ಕರೆ ಬರುವುದು ನಿಲ್ಲಲೇ ಇಲ್ಲ. ಅವರು ಕಂಗೆಟ್ಟು ಹೋಗಿದ್ದರು. ಕೆಲಸದಲ್ಲಿ ಮನಸ್ಸು ತೊಡಗಿಸುವುದಕ್ಕೂ ಆಗುತ್ತಿರಲಿಲ್ಲ.

ಒಂದು ದಿನ ಆಕೆಯ ಸಹೋದ್ಯೋಗಿ ಯೊಬ್ಬ ಕರೆದು, ತನ್ನ ಫೋನ್‌ಗೆ ಆಕೆಯ ಬೆತ್ತಲೆ ಚಿತ್ರ ಬಂದಿರುವುದನ್ನು ತೋರಿಸಿದ ಮೇಲಂತೂ ದಿಕ್ಕೆಟ್ಟ ಸ್ಥಿತಿ ಅವರದಾಯಿತು.

ಅದು ಯಾರದೋ ದೇಹದ ಚಿತ್ರಕ್ಕೆ ಅವರ ಮುಖವನ್ನು ಜೋಡಿಸಿ ಫೋಟೊಶಾಪ್ ಮೂಲಕ ಸೃಷ್ಟಿಸಿದ್ದ ಚಿತ್ರವಾಗಿತ್ತು. ಅತ್ಯಂತ ಅಸಹ್ಯ ಮತ್ತು ಅವಮಾನದಿಂದ ಆಕೆ ತತ್ತರಿಸಿಬಿಟ್ಟರು. ಇದೇ ಚಿತ್ರವನ್ನು ಆ ಆ್ಯಪ್ ಆಕೆಯ ಎಲ್ಲಾ ಸಂಪರ್ಕಗಳಿಗೂ ಕಳಿಸಿತ್ತು. ಆಗಲೇ ಭೂಮಿ ಆತ್ಮಹತ್ಯೆಯ ಯೋಚನೆ ಮಾಡಿದ್ದು. ಅವರ ಮಗಳಿಗೆ ಚಿಕ್ಕಮ್ಮ ಕರೆ ಮಾಡಿ, ಹುಷಾರು, ಎಲ್ಲೂ ಹೋಗಲು ಬಿಡಬೇಡ, ಬಿಟ್ಟರೆ ಅವರು ಬದುಕಿರುವುದಿಲ್ಲ ಎಂದು ಎಚ್ಚರಿಸಿದ್ದು.

ಮೊದಲು ತುರ್ತು ಸಾಲದ ಆಮಿಷ ಹುಟ್ಟಿಸುವುದು. ಸಾಲದ ಸುಳಿಯಲ್ಲಿ ಸಿಲುಕಿಸುವುದು. ಆನಂತರ ಬೆತ್ತಲೆ ಚಿತ್ರಗಳ ಮೂಲಕ ಹೀಗೆ ಬ್ಲ್ಯಾಕ್‌ಮೇಲ್ ಮಾಡುವುದು. ಇದು ನಾಯಿಕೊಡೆಗಳಂತೆ ಹುಟ್ಟಿಕೊಂಡು ಆರ್ಥಿಕ ಅಸಹಾಯಕತೆಯಿರುವವರ ಸುತ್ತ ಆಕ್ಟೋಪಸ್‌ನಂತೆ ಬಿಗಿದುಕೊಳ್ಳುವ, ಬಹಳ ಸಲ, ಸಾಲ ಪಡೆದವರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತಹ ಮಟ್ಟಕ್ಕೂ ಮುಟ್ಟಿಸುವ ನಕಲಿ ಸಾಲದ ಆ್ಯಪ್‌ಗಳ ಜಾಲದ ಕಥೆ.

ಸ್ವತಃ ವಕೀಲೆಯಾಗಿದ್ದ ಭೂಮಿಯಂಥವರೂ ಈ ಜಾಲದಿಂದ ಮಾನಸಿಕ ಕಿರುಕುಳಕ್ಕೆ ತುತ್ತಾಗಿ, ಪ್ರಾಣವನ್ನೇ ಕಳೆದುಕೊಳ್ಳಬೇಕು ಎನ್ನುವಂತಹ ಹತಾಶ ಸ್ಥಿತಿ ಮುಟ್ಟಿದ್ದರೆಂದರೆ, ಇನ್ನು ಜನಸಾಮಾನ್ಯರ ಪಾಡು ಎಂತಹದಿರಬಹುದು ಎಂಬುದನ್ನು ಊಹಿಸಲೂ ಕಷ್ಟ.

ಇಂತಹ ಬ್ಲ್ಯಾಕ್‌ಮೇಲ್ ಹಗರಣ ಭಾರತದಾದ್ಯಂತ ಮತ್ತು ಏಶ್ಯ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ಇತರ ದೇಶಗಳಾದ್ಯಂತ ಜನರನ್ನು ವಿಚಿತ್ರ ವ್ಯೆಹದಲ್ಲಿ ಸಿಲುಕಿಸುತ್ತದೆ ಮತ್ತು ಅವಮಾನಿಸುತ್ತದೆ, ಕಿರುಕುಳ ನೀಡುತ್ತದೆ. ಈ ಸುಳಿಯಲ್ಲಿ ಸಿಲುಕಿ ನಿಂದನೆ ಮತ್ತು ಬೆದರಿಕೆಗೆ ತುತ್ತಾಗಿ, ಕಡೆಗೆ ಮಾನಕ್ಕಂಜಿ ಕನಿಷ್ಠ 60 ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತದೆ ಇತ್ತೀಚಿನ ಬಿಬಿಸಿ ತನಿಖಾ ವರದಿ.

ಭಾರತ ಮತ್ತು ಚೀನಾದಲ್ಲಿ ಈ ಹಗರಣದಿಂದ ಲಾಭ ಗಳಿಸುತ್ತಿರುವವರನ್ನು ಬಿಬಿಸಿಯ ರಹಸ್ಯ ತನಿಖೆ ಬಯಲಿಗೆಳೆದಿದೆ. ಅದೇ ವೇಳೆ ಈ ಭಯಾನಕ ಬ್ಲ್ಯಾಕ್‌ಮೇಲ್ ಘಾತುಕತನಕ್ಕೆ ತುತ್ತಾಗಿ ನೆಮ್ಮದಿಯನ್ನೇ ಕಳೆದುಕೊಂಡ ಅದೆಷ್ಟೋ ಕುಟುಂಬಗಳ ಕಥೆಯನ್ನೂ ಈ ವರದಿ ಬಿಚ್ಚಿಟ್ಟಿದೆ.

ಸಾಲ ಕೇಳಿದಾಗ ನಿಮಿಷದಲ್ಲೇ ಸಾಲ ಕೊಟ್ಟುಬಿಡುವ ಈ ಆ್ಯಪ್‌ಗಳು ಆ ಬಳಿಕವೇ ತಮ್ಮ ಅಸಲಿಯತ್ತು ತೋರಿಸುವುದು. ಹಣ ವಸೂಲಿಗಾಗಿ ಎಂತಹ ನೀಚಮಟ್ಟಕ್ಕೂ ಇಳಿಯಬಲ್ಲ ಇವು, ಸಾಲ ಪಡೆದವರ ಮಾನವನ್ನೇ ಅವರ ಸ್ನೇಹಿತರು ಮತ್ತು ಬಂಧುಬಳಗದ ವಲಯದಲ್ಲಿ ಹರಾಜಿಗಿಡಬಲ್ಲವು. ನಿರಂತರ ಮಾನಸಿಕ ಕಿರುಕುಳ ನೀಡಿ, ಸಾವಿನ ದಾರಿಯನ್ನೂ ತೋರಿಸಿಬಿಡುವಷ್ಟು ಅಪಾಯಕಾರಿಯಾಗಬಲ್ಲವು.

ಬಿಬಿಸಿ ವರದಿ ಹೇಳುವ ಪ್ರಕಾರ, ಇದೊಂದು ಜಾಗತಿಕ ಮಟ್ಟದಲ್ಲಿ ಸಕ್ರಿಯವಾಗಿರುವ ಬ್ಲ್ಯಾಕ್‌ಮೇಲ್ ಜಾಲ. ಕನಿಷ್ಠ 14 ದೇಶಗಳಲ್ಲಿ ಇಂಥದೇ ತಂತ್ರ ಬಳಸಿ ಹಣ ಮಾಡಿಕೊಳ್ಳುವ ಖದೀಮರ ದೊಡ್ಡ ದಂಡೇ ಇದೆ ಮತ್ತು ಅದು ತನ್ನ ಲಾಭಕ್ಕೋಸ್ಕರ ಎಷ್ಟೋ ಜೀವಗಳಿಗೇ ಸಂಚಕಾರ ತರುವಂತಹ ಕ್ರೂರತನವನ್ನು ತೋರಿಸುವುದಕ್ಕೂ ಹೇಸುವುದಿಲ್ಲ.

ಹೀಗೆ ನಿಮಿಷಗಳಲ್ಲೇ ಸಾಲ ನೀಡುವ ಹಲವು ಆ್ಯಪ್‌ಗಳಿವೆ. ಎಲ್ಲವೂ ಫೇಕ್ ಅಲ್ಲ. ಆದರೆ ಬಹಳಷ್ಟು ಇದೇ ಉದ್ದೇಶಕ್ಕಾಗಿಯೇ ಹುಟ್ಟಿಕೊಂಡವುಗಳು. ಅಂಥವನ್ನು ಒಮ್ಮೆ ಡೌನ್‌ಲೋಡ್ ಮಾಡಿದರೆ ಮೊಬೈಲ್‌ನಲ್ಲಿರುವ ಸಂಪರ್ಕ ಸಂಖ್ಯೆಗಳು, ಫೋಟೊಗಳು ಮತ್ತು ನಿಮ್ಮ ಎಲ್ಲ ಮಾಹಿತಿಗಳನ್ನೂ ಜಾಲಾಡಿಕೊಂಡುಬಿಡುತ್ತವೆ ಮತ್ತು ಆನಂತರ ನಿಮ್ಮನ್ನು ಸುಲಿಗೆ ಮಾಡಲು ಅವೇ ಮಾಹಿತಿಗಳನ್ನು ಬಳಸತೊಡಗುತ್ತವೆ.

ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡದಿದ್ದಾಗ ಮಾತ್ರವಲ್ಲ, ಕೆಲವೊಮ್ಮೆ ಸರಿಯಾಗಿಯೇ ಮರುಪಾವತಿ ಮಾಡಿದರೂ, ಅವು ಕಿರುಕುಳ ಕೊಡುವುದನ್ನೇ, ಮಾನಹಾನಿ ಮಾಡುವುದನ್ನೇ ಉದ್ದೇಶವಾಗಿಸಿಕೊಂಡಿರುತ್ತವೆ. ಗ್ರಾಹಕರ ಮಾಹಿತಿಗಳನ್ನೆಲ್ಲ ಸಂಗ್ರಹಿಸಿಕೊಂಡಿರುವ ಕಾಲ್ ಸೆಂಟರ್‌ಗಳಿಂದ ಏಜೆಂಟ್‌ಗಳ ಕಾಟ ಶುರುವಾಗುತ್ತದೆ. ಸಾಲ ಪಡೆದವರಿಗೆ ಮರುಪಾವತಿ ಮಾಡುವಂತೆ ಕಿರುಕುಳ ನೀಡುವುದಕ್ಕೆ ಮತ್ತು ಅವಮಾನಿಸುವುದಕ್ಕೆಂದೇ ಅವರಿಗೆಲ್ಲ ತರಬೇತಿ ನೀಡಲಾಗಿರುತ್ತದೆ.

ಪ್ರಪಂಚದಾದ್ಯಂತ ವಿವಿಧ ಕಂಪೆನಿಗಳು ಇಂತಹದೇ ಬ್ಲ್ಯಾಕ್‌ಮೇಲ್ ಹಗರಣ ನಡೆಸುತ್ತಿರುವ ಬಗ್ಗೆ ಪುರಾವೆಗಳಿವೆ ಎನ್ನುವ ಬಿಬಿಸಿ ವರದಿ, ಭಾರತದಲ್ಲಿ ಮಾತ್ರ ಸಾಲದ ಆ್ಯಪ್‌ಗಳ ಕಿರುಕುಳಕ್ಕೆ ಒಳಗಾಗಿ ಕನಿಷ್ಠ 60 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುತ್ತದೆ. ಹಾಗೆ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಹೆಚ್ಚಿನವರು 20 ಅಥವಾ 30ರ ಆಸುಪಾಸಿನವರೇ ಆಗಿದ್ದಾರೆ ಎನ್ನುತ್ತದೆ ವರದಿ. ಒಬ್ಬ ಅಗ್ನಿಶಾಮಕ ಸಿಬ್ಬಂದಿ, ಒಬ್ಬ ಪ್ರಶಸ್ತಿ ವಿಜೇತ ಸಂಗೀತಗಾರ, ತಮ್ಮ ಮೂರು ಮತ್ತು ಐದು ವರ್ಷದ ಮಕ್ಕಳನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡ ದಂಪತಿ -ಹೀಗೆ ಹಲವರ ಕಥೆಗಳನ್ನು ವರದಿ ಪರಿಶೀಲಿಸಿದೆ. ಸಾಲದ ವ್ಯೆಹಕ್ಕೆ ಬಲಿಯಾದವರಲ್ಲಿ ನಾಲ್ವರಂತೂ ಇನ್ನೂ ಹದಿಹರೆಯದವರಾಗಿದ್ದರು ಎಂಬುದನ್ನೂ ವರದಿ ಉಲ್ಲೇಖಿಸಿದೆ.

ಆ್ಯಪ್‌ಗಳ ಏಜಂಟರಾಗಿದ್ದು ಕಿರುಕುಳ ನೀಡುವವರಲ್ಲಿ ಹೆಚ್ಚಿನವರು ಅನಾಮಧೇಯರಾಗಿರುತ್ತಾರೆ ಮತ್ತು ಎಲ್ಲಿಂದಲೋ ಕರೆ ಮಾಡುತ್ತಾರೆ. ಅಂತಹವರನ್ನು ಹುಡುಕಲು ತಿಂಗಳಾನುಗಟ್ಟಲೆ ಯತ್ನಿಸಿದ ಬಿಬಿಸಿ ಕಡೆಗೂ ಅಂತಹ ಒಬ್ಬ ಏಜಂಟನನ್ನು ಪತ್ತೆ ಹಚ್ಚುತ್ತದೆ. ಸಾಲ ಪಡೆದವರಿಗೆ ಸಾಯುವ ಯೋಚನೆಗೆ ಹೋಗುವ ಮಟ್ಟಕ್ಕೆ ಕಿರುಕುಳ ನೀಡುವುದು ಮತ್ತು ಕೆಟ್ಟದಾಗಿ ನಿಂದಿಸುವುದು ನಡೆಯುತ್ತದೆ ಎಂಬುದನ್ನು ಆತ ಹೇಳಿರುವುದಾಗಿ ವರದಿ ದಾಖಲಿಸಿದೆ. ಕಡೆಗೆ ಈ ಹಗರಣ ಬಯಲಿಗೆಳೆಯುವುದಕ್ಕೂ ಬಿಬಿಸಿಗೆ ಆತನೇ ನೆರವಾಗುತ್ತಾನೆ.

ಆತ ಮಾರುವೇಷದಲ್ಲಿ ಇಂತಹ ಎರಡು ಕಂಪೆನಿಗಳಲ್ಲಿ ಕೆಲಸಕ್ಕೆ ಸೇರಿಕೊಂಡು, ಗ್ರಾಹಕರನ್ನು ನಿಂದಿಸುವ, ಅವರಿಗೆ ಕಿರುಕುಳ ನೀಡುವ ಮತ್ತು ವ್ಯವಸ್ಥಿತ ಸುಲಿಗೆಯ ನೂರಾರು ಸನ್ನಿವೇಶಗಳನ್ನು ಚಿತ್ರೀಕರಿಸುತ್ತಾನೆ. ದಿಲ್ಲಿಯ ಹೊರಗಿರುವ ಒಂದು ಕಂಪೆನಿಯಂತೂ ಅಶ್ಲೀಲ ಮಾತುಗಳಿಂದ ಗ್ರಾಹಕರನ್ನು ನಿಂದಿಸುತ್ತಿದ್ದುದನ್ನು, ಅವಮಾನಿಸುತ್ತಿದ್ದುದನ್ನು ಆತ ಚಿತ್ರೀಕರಿಸಿದ್ದಾನೆ. ಕಡೆಗೆ ಆತನೇ ಆ ಕಂಪೆನಿಯವರ ಜೊತೆ ಹೂಡಿಕೆದಾರರಂತೆ ನಟಿಸಿದ ಪತ್ರಕರ್ತರ ಸಭೆಯನ್ನು ಏರ್ಪಡಿಸುವಲ್ಲೂ ಯಶಸ್ವಿಯಾಗುತ್ತಾನೆ. ಇಡೀ ಲೋನ್ ಆ್ಯಪ್‌ಗಳ ಕಾರ್ಯನಿರ್ವಹಣೆ ಮತ್ತವರು ಹಣ ವಸೂಲಿ ಮಾಡುವ ಎಲ್ಲ ನೀಚ ಮಟ್ಟದ ತಂತ್ರಗಳ ಬಗ್ಗೆಯೂ ಕಾಲ್‌ಸೆಂಟರ್ ಉಸ್ತುವಾರಿಯೊಬ್ಬ ಪತ್ರಕರ್ತರ ಎದುರೇ ಎಲ್ಲವನ್ನೂ ವಿವರಿಸುವುದು ಈ ಸಭೆಯಲ್ಲಿ ನಡೆಯುತ್ತದೆ. ಆದರೆ ಅದೇ ಕಾಲ್‌ಸೆಂಟರ್ ಉಸ್ತುವಾರಿಯಾಗಲೀ, ಕಂಪೆನಿಯ ಇತರರಾಗಲೀ ಬಿಬಿಸಿ ನೇರ ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಲು ಬಯಸಲಿಲ್ಲ ಎಂದು ವರದಿ ಹೇಳಿದೆ.

ಈ ವ್ಯೆಹಕ್ಕೆ ಸಿಲುಕಿ ಪ್ರಾಣವನ್ನೇ ಕಳೆದುಕೊಂಡ ಕಿರ್ಣಿ ಮೌನಿಕಾಳ ದುರಂತ ಕಥೆಯನ್ನೂ ಬಿಬಿಸಿ ವರದಿ ಉಲ್ಲೇಖಿಸಿದೆ.

24 ವರ್ಷದ ಆ ಸರಕಾರಿ ಉದ್ಯೋಗಿ ಯುವತಿ ಮೂವರು ಅಣ್ಣಂದಿರ ಮುದ್ದಿನ ತಂಗಿಯಾಗಿದ್ದಳು. ರೈತನಾಗಿದ್ದ ಆಕೆಯ ತಂದೆ ಆಕೆ ಮುಂದೆ ಓದುವುದಕ್ಕೂ ಬೆಂಬಲವಾಗಿ ನಿಂತಿದ್ದರು. ಆಸ್ಟ್ರೇಲಿಯಾದಲ್ಲಿ ಓದಿಸಬೇಕೆಂದಿದ್ದರು.

ಮೂರು ವರ್ಷಗಳ ಹಿಂದೆ ಆಕೆ ತನ್ನ ಪ್ರಾಣ ಕಳೆದುಕೊಂಡಳು. ತನ್ನ ಆಪ್ತ ಗೆಳತಿಯ ಮನೆಗೆ ಹೋಗಬೇಕೆಂದು ತಯಾರಾಗಿದ್ದವಳು ಬದುಕು ಮುಗಿಸಿಕೊಂಡಿದ್ದಳು.

ಆಕೆಯ ಫೋನ್ ಮತ್ತು ಬ್ಯಾಂಕ್ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದಾಗಲೇ ಆಕೆ ವಿವಿಧ 55 ಲೋನ್ ಆ್ಯಪ್‌ಗಳಿಂದ 10 ಸಾವಿರ ರೂ. ಸಾಲ ಪಡೆದಿದ್ದುದು ತಿಳಿದಿತ್ತು. ಬರೀ 10 ಸಾವಿರ ಸಾಲ 30ಕ್ಕೂ ಹೆಚ್ಚು ಪಟ್ಟು ಬೆಳೆದಿತ್ತು. ಆತ್ಮಹತ್ಯೆ ಮಾಡಿಕೊಂಡ ಹೊತ್ತಲ್ಲಿ ಆಗಲೇ ಆಕೆ 3 ಲಕ್ಷಕ್ಕಿಂತ ಹೆಚ್ಚು ಹಣವನ್ನು ಮರುಪಾವತಿ ಮಾಡಿದ್ದಳು. ಆ್ಯಪ್‌ಗಳು ನಿಂದನೆಯ ಕರೆ ಮತ್ತು ಅಸಭ್ಯ ಸಂದೇಶಗಳ ಮೂಲಕ ಕಿರುಕುಳ ನೀಡುತ್ತಿದ್ದುದು ಮತ್ತು ಆಕೆಯ ಸಂಪರ್ಕಗಳಿಗೆ ಸಂದೇಶ ಕಳುಹಿಸಲು ಪ್ರಾರಂಭಿಸಿದ್ದು ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು.

ಆಕೆಯ ಕೋಣೆಯನ್ನು ಅವಳ ನೆನಪಾಗಿ ಹಾಗೇ ಇಡಲಾಗಿದೆ. ಬಾಗಿಲಿಗೆ ಆಕೆಯ ಸರಕಾರಿ ಉದ್ಯೋಗದ ಐಡಿ ಕಾರ್ಡ್ ತೂಗುಹಾಕಲಾಗಿದೆ. ಅವತ್ತು ಗೆಳತಿಯ ಮದುವೆಗೆ ಹೋಗಲು ಆಕೆಯ ತಾಯಿ ತುಂಬಿಸಿದ್ದ ಬ್ಯಾಗ್ ಈಗಲೂ ಕೋಣೆಯಲ್ಲಿ ಹಾಗೆಯೇ ಇದೆ ಎಂದು ವರದಿ ದಾಖಲಿಸಿದೆ.

ಭೂಮಿ ಅವರು ಕೂಡ ಎಲ್ಲ ಬಗೆಯ ಕಿರುಕುಳವನ್ನೂ ಎದುರಿಸಿದರು. ಹೇಗೋ ಧೈರ್ಯ ತಂದುಕೊಂಡರು. ಆದರೆ, ಯಾವಾಗ ತಮ್ಮನ್ನು ಅಶ್ಲೀಲವಾಗಿ ಚಿತ್ರಿಸಿ ಎಲ್ಲರೆದುರು ಇಡಲಾಯಿತೊ ಆಗ ಮಾತ್ರ ಕನಲಿಹೋಗಿದ್ದರು. ಇನ್ನು ಬದುಕಿರಲಾಗದು ಎಂದು ನಿರ್ಧರಿಸಿದ ಆ ಹೊತ್ತಲ್ಲಿ ಅವರಿಗೆ ಅವರ ಸಹೋದರಿ, ಆಕೆ ಕೆಲಸ ಮಾಡುತ್ತಿದ್ದ ಕಂಪೆನಿ ಮತ್ತು ಅಂಥದೇ ಮೋಸಕ್ಕೆ ಒಳಗಾಗಿದ್ದವರ ಸಂಘಟನೆ, ಅದೆಲ್ಲಕ್ಕಿಂತ ಹೆಚ್ಚಾಗಿ ಆಕೆಯ 17 ವರ್ಷದ ಮಗಳು ದೊಡ್ಡ ಧೈರ್ಯವಾಗಿ ನಿಂತರು.

ಬಿಬಿಸಿ ಇದರ ಬಗ್ಗೆ ಸಂಬಂಧಿಸಿದ ಕಂಪೆನಿಗಳನ್ನು ಕೇಳಿದ್ದಕ್ಕೆ, ಒಂದೇ ಪ್ರತಿಕ್ರಿಯಿಸದೇ ಇರುವುದು ಅಥವಾ ನಿರಾಕರಿಸುವುದು ನಡೆದಿದೆ. ಹೀಗೆಲ್ಲ ಕಿರುಕುಳ ನೀಡಲಾಗುವುದಿಲ್ಲ. ಏಜಂಟರುಗಳಿಗೂ ನಿಂದಿಸುವ ಮಾತಾಡದಂತೆ ಸೂಚನೆಯಿದೆ ಎಂದೇ ಉತ್ತರ ಬಂದಿರುವುದು ವರದಿಯಲ್ಲಿದೆ.

ಆದರೆ ಸತ್ಯ ಇದೆಲ್ಲದರ ಆಚೆಗಿದೆ ಎಂಬುದು ಕೂಡ ರಹಸ್ಯವಲ್ಲ. ತುರ್ತು ಸಾಲಕ್ಕಾಗಿ ಇಂತಹ ಆ್ಯಪ್‌ಗಳ ಚಕ್ರವ್ಯೆಹದಲ್ಲಿ ಸಿಲುಕಿಕೊಳ್ಳದಿರುವುದೊಂದೇ ಕ್ಷೇಮದ ದಾರಿ ಎಂದು ಮಾತ್ರ ಹೇಳಬಹುದು.

Writer - ವಾರ್ತಾಭಾರತಿ

contributor

Editor - jafar sadik

contributor

Contributor - ವಿನಯ್ ಕೆ.

contributor

Similar News