ಅಂಬೇಡ್ಕರ್ ದ್ವೇಷಿ, ಸಂವಿಧಾನ ದ್ರೋಹಿಗಳ ‘ಸಂವಿಧಾನ ಸನ್ಮಾನ ಅಭಿಯಾನ’

ಸಂಘಪರಿವಾರದ ಅಂಗಸಂಸ್ಥೆಗಳು ಈಗ ನಡೆಸುತ್ತಿರುವ ‘ಸಂವಿಧಾನ ಸನ್ಮಾನ ಅಭಿಯಾನ’ದಲ್ಲಿ ಸಂವಿಧಾನದ ಹಾಗೂ ಅಂಬೇಡ್ಕರ್‌ರ ನಿಜವಾದ ಅನುಯಾಯಿಗಳು ತಾವೇ ಹೊರತು ಕಾಂಗ್ರೆಸ್ ಅಥವಾ ಇತರ ಪಕ್ಷಗಳಲ್ಲ ಎಂದು ನಂಬಿಸಲು ಹಲವಾರು ಸುಳ್ಳುಗಳನ್ನು, ಐತಿಹಾಸಿಕ ಅರ್ಧ ಸತ್ಯಗಳನ್ನು, ಪ್ರಚಾರ ಮಾಡುತ್ತಿದೆ. ಆ ಮೂಲಕ ತನ್ನ ನಿಜ ಸ್ವರೂಪವಾದ ಅಂಬೇಡ್ಕರ್ ದ್ವೇಷ ಹಾಗೂ ಸಂವಿಧಾನ ದ್ರೋಹವನ್ನು ಮರೆಮಾಚುವ ಕುತಂತ್ರ ನಡೆಸಿದೆ.. ಈ ಸರಣಿ ಲೇಖನವು ಸಂಘಿ ಅಭಿಯಾನದ ಸುಳ್ಳುಗಳನ್ನು, ಬಯಲಿಗೆಳೆಯಲಿದೆ ಮತ್ತು ಸಂಘಿಗಳ ಅಸಲಿ ಪಾತ್ರವನ್ನು ಮತ್ತು ಹಾಲಿ ದುರುದ್ದೇಶಗಳನ್ನು ಅನಾವರಣ ಮಾಡಲಿದೆ.. ಕರ್ನಾಟಕದ ರಾಜಕೀಯ ಆರೋಗ್ಯದ ಹಿತದೃಷ್ಟಿಯಿಂದ ಈ ಸರಣಿಯನ್ನು ಪ್ರಕಟಿಸಲಾಗುತ್ತಿದೆ.

Update: 2024-12-14 05:00 GMT
Editor : Ismail | Byline : ಶಿವಸುಂದರ್

ಸರಸಂಘಚಾಲಕರ ‘ಸರೆಂಡರ್’ ಪತ್ರಗಳು

ಇವೆಲ್ಲಕ್ಕಿಂತ ಮುಖ್ಯವಾಗಿ ತುರ್ತುಸ್ಥಿತಿಯಲ್ಲಿ ಬಂಧನಕ್ಕೊಳಗಾಗಿದ್ದ ಆರೆಸ್ಸೆಸ್‌ನ ಪರಮೋಚ್ಚ ನಾಯಕ ಸರಸಂಘಚಾಲಕ ಮಧುಕರ್ ದೇವರಸ್ ಅಲಿಯಾಸ್ ಬಾಳಾಸಾಹೇಬ್ ದೇವರಸ್ ಅವರು ಯರವಾಡ ಜೈಲಿನಿಂದ ಇಂದಿರಾಗಾಂಧಿಯವರಿಗೆ ಬರೆದ ಸರೆಂಡರ್ ಪತ್ರಗಳು ಹಾಗೂ ಅದನ್ನು ಪರಿಗಣಿಸಲು ಇಂದಿರಾ ಅವರ ಮೇಲೆ ಪ್ರಭಾವ ಬೀರಬೇಕೆಂದು ವಿನೋಭಾ ಭಾವೆಯವರಿಗೆ ಬರೆದ ಗೋಗೆರೆವ ಪತ್ರಗಳು ತುರ್ತುಸ್ಥಿತಿಯಲ್ಲಿ ಆರೆಸ್ಸೆಸ್ ಮತ್ತು ಜನಸಂಘದ ನಿಜವಾದ ಪಾತ್ರವೇನಿತ್ತು ಎಂದು ತಿಳಿಯಲು ಹಾಗೂ ಅವರ ಸೋಗಲಾಡಿತನವನ್ನೂ ಅರಿಯಲು ಸಹಾಯ ಮಾಡುತ್ತವೆ.

ಬಾಳಾಸಾಹೇಬ್ ದೇವರಸ್ ಅವರು ಹಿಂದಿಯಲ್ಲಿ ಬರೆದ ‘ಹಿಂದೂ ಸಂಘಟನ್ ಔರ್ ಸತ್ತಾವದಿ ರಾಜನೀತಿ’ ಎಂಬ ಪುಸ್ತಕದ ಕೊನೆಯಲ್ಲಿ ಅಪೆಂಡಿಕ್ಸ್‌ನ ರೂಪದಲ್ಲಿ ಈ ಎಲ್ಲಾ ಪತ್ರಗಳನ್ನೂ ಸೇರಿಸಲಾಗಿದೆ. ವಿದ್ವಾಂಸ ಹಾಗೂ ರಾಜಕೀಯ ಕಾರ್ಯಕರ್ತರೂ ಆದ ಯೋಗೇಂದ್ರ ಯಾದವ್ ಅವರು ಹಿಂದಿಯಲ್ಲಿರುವ ಆ ಇಡೀ ಪುಸ್ತಕವನ್ನು ತಮ್ಮ ಟ್ವಿಟರಿನಲ್ಲಿಯೂ ಪ್ರಕಟಿಸಿದ್ದಾರೆ. ಆಸಕ್ತರು ಅದನ್ನು ನೇರವಾಗಿ ಈ ವೆಬ್ ವಿಳಾಸದಲ್ಲಿ ಓದಬಹುದು:

https://images.app.goo.gl/MXPKDDSwtniZFp1n9

ಈ ಎಲ್ಲಾ ಪತ್ರಗಳ ಇಂಗ್ಲಿಷ್ ಆವೃತ್ತಿಯನ್ನು ಆಗ ಭಾರತೀಯ ಲೋಕದಳದ ನಾಯಕರಾಗಿದ್ದ ಬ್ರಹ್ಮದತ್ ಅವರು ಬರೆದಿರುವ ‘Five headed monster: A factual narrative of the genesis of Janata Party'ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಅದೇ ರೀತಿ ಕಳೆದ ಮೂರು ನಾಲ್ಕು ದಶಕಗಳಿಂದ ಭಾರತದ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಗಳ ಬಗ್ಗೆ ತಳಮಟ್ಟದ ಅಧ್ಯಯನ ಮಾಡಿ ಹಲವಾರು ಮೌಲಿಕ ಗ್ರಂಥಗಳನ್ನು ಬರೆದಿರುವ ಕ್ರಿಸ್ಟೋಫೋ ಜಾಫರ್ಲೆಯವರು ಮತ್ತೊಬ್ಬ ವಿದ್ವಾಂಸ ಪ್ರತಿನಾವ್ ಅನಿಲ್ ಅವರ ಜೊತೆಗೂಡಿ ತುರ್ತುಪರಿಸ್ಥಿತಿಯ ಬಗ್ಗೆ ನಡೆಸಿದ ಹಲವಾರು ವರ್ಷಗಳ ಸಂಶೋಧನೆಯ ನಂತರ 2021ರಲ್ಲಿ ಪ್ರಕಟಿಸಿರುವ ‘Indias First Dictatorship-The Emergency-1975-77’ ಎಂಬ ಪುಸ್ತಕದಲ್ಲೂ ಈ ಪತ್ರಗಳ ಇಂಗ್ಲಿಷ್ ಅನುವಾದವಿದೆ. ಆಸಕ್ತರು ಪುಸ್ತಕದ ಆ ಭಾಗವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು:

https://www.rediff.com/news/special/christophe-jaffrelot-pratinav-anil-emergency-was-a-windfall-for-the-rss/20210625.htms

ಮೊದಲ ಸರೆಂಡರ್ ಪತ್ರ- 22 ಆಗಸ್ಟ್ 1975

1975ರ ಜೂನ್ 25ರಂದು ತುರ್ತುಸ್ಥಿತಿಯನ್ನು ಘೋಷಿಸಿದ ನಂತರ 1975ರ ಆಗಸ್ಟ್ 15ರಂದು ಇಂದಿರಾಗಾಂಧಿಯವರು ಕೆಂಪುಕೋಟೆಯಿಂದ ಸ್ವಾತಂತ್ರ್ಯ ದಿನದ ಭಾಷಣವನ್ನು ಮಾಡಿದರು. ಅದರಲ್ಲಿ ಎಲ್ಲಾ ಸರ್ವಾಧಿಕಾರಿಗಳಂತೆ ತಾವು ಕೈಗೊಂಡ ತುರ್ತುಸ್ಥಿತಿ ನಿರ್ಣಯ ಹೇಗೆ ದೇಶದ ಭದ್ರತೆಗೆ ಅತ್ಯಗತ್ಯವಾಗಿದೆಯೆಂದೂ ಅದನ್ನು ವಿರೋಧಿಸುವವರು ದೇಶದ್ರೋಹಿಗಳೆಂದೂ ಭಾಷಣ ಮಾಡಿದರು. ದೇಶಾದ್ಯಂತ ಸಕಲ ಪ್ರಜಾತಂತ್ರವಾದಿಗಳೂ ಈ ಭಾಷಣವನ್ನೂ ಹಾಗೂ ಇಂದಿರಾಗಾಂಧಿಯವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿದರು.

ಆದರೆ ಆರೆಸ್ಸೆಸ್‌ನ ಸರಸಂಘ ಚಾಲಕ ದೇವರಸ್ ಅವರು ಮಾತ್ರ ಇಂದಿರಾಗಾಂಧಿಯವರಿಗೆ ಬರೆದ 1975ರ ಆಗಸ್ಟ್ 22ರಂದು ಬರೆದ ಪ್ರಥಮ ಪತ್ರದಲ್ಲಿ ಆ ಭಾಷಣವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಾರೆ!!

ಅಷ್ಟು ಮಾತ್ರವಲ್ಲ ಅವರ ಭಾಷಣವು ‘‘ಸಮಯೋಚಿತವೂ ಆಗಿತ್ತು ಹಾಗೂ ಸಮತೋಲದಿಂದಲೂ ಕೂಡಿತ್ತು’’ ಎಂದು ಕೊಂಡಾಡುತ್ತಾರೆ. ಆ ನಂತರ ಇಂದಿರಾ ಸರಕಾರಕ್ಕೆ ಆರೆಸ್ಸೆಸ್ ಬಗ್ಗೆ ಇರುವ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸಲು ಈ ಪತ್ರ ಬರೆಯುತ್ತಿದ್ದೇನೆಂದು ಹೇಳುತ್ತಾ ಹೇಗೆ ಆರೆಸ್ಸೆಸ್ ಹಿಂದೂಗಳ ಸಂಘಟನೆಯನ್ನು ಮಾಡುತ್ತಿದ್ದರೂ ಯಾವತ್ತಿಗೂ ಇಂದಿರಾ ಸರಕಾರದ ವಿರೋಧಿಯಾಗಿರಲಿಲ್ಲವೆಂಬ ಭರವಸೆಯನ್ನು ಕೊಡುತ್ತಾರೆ. ಹಾಗೂ ಅಂತಿಮವಾಗಿ:

‘‘This is my humble prayer to you that you shall kindly keep the above in view and shall lift the ban on RSS. If you think it proper, my meeting with you will be a source of pleasure to me’’

(ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಆರೆಸ್ಸೆಸ್ಸಿನ ಮೇಲಿನ ನಿಷೇಧವನ್ನು ತೆಗೆಯಬೇಕೆಂದು ಪ್ರಾರ್ಥಿಸುತ್ತೇನೆ. ನಿಮಗೆ ಸೂಕ್ತವೆಂದು ಕಂಡುಬಂದಲ್ಲಿ ತಮ್ಮನ್ನು ಖುದ್ದು ಭೇಟಿಯಾಗುವುದು ನನಗೆ ಅತ್ಯಂತ ಸಂತೋಷದ ವಿಷಯವಾಗಿರುತ್ತದೆ)..

ಹೀಗೆ ಮೊದಲನೆ ಪತ್ರದಲ್ಲಿ ತುರ್ತುಸ್ಥಿತಿಯ ಬಗ್ಗೆ ಸಮ್ಮತಿಯನ್ನು ವ್ಯಕ್ತಪಡಿಸಿದ್ದು ಮಾತ್ರವಲ್ಲದೆ ಅಂತಿಮವಾಗಿ ಅವರು ವಿನಂತಿಸಿದ್ದು ಆರೆಸ್ಸೆಸ್‌ನ ಮೇಲಿನ ನಿಷೇಧವನ್ನು ಕಿತ್ತುಹಾಕಬೇಕೆಂದೇ ವಿನಾ ತುರ್ತುಸ್ಥಿತಿಯನ್ನು ತೆಗೆಯಬೇಕೆಂದಲ್ಲ! ಇದು ಆರೆಸ್ಸೆಸ್!

ಎರಡನೇ ಸರೆಂಡರ್ ಪತ್ರ- 1975ರ ನವೆಂಬರ್ 10

ಆರೆಸ್ಸೆಸ್‌ನ ಸರಸಂಘಚಾಲಕರ ಪತ್ರಕ್ಕೆ ಇಂದಿರಾಗಾಂಧಿಯವರು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ಈ ಮಧ್ಯೆ ತುರ್ತುಸ್ಥಿತಿಯಲ್ಲಿ ಇಂದಿರಾಗಾಂಧಿಯವರು ಬಗ್ಗಿರಿ ಎಂದರೆ ತೆವಳಲೂ ಸಿದ್ಧವಾಗಿದ್ದ ಮಾಧ್ಯಮಗಳು ಹಾಗೂ ಸುಪ್ರೀಂ ಕೋರ್ಟ್ ಇಂದಿರಾಗಾಂಧಿ ಹೇಳಿದಂತೆ ಕೇಳುತ್ತಿದ್ದವು. ಆದ್ದರಿಂದಲೇ ಇಂದಿರಾಗಾಂಧಿಯವರ ಚುನಾವಣಾ ಆಯ್ಕೆಯನ್ನು ಅಸಿಂಧುಗೊಳಿಸಿದ್ದ ಅಲಹಾಬಾದಿನ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟಿನ ಐದು ನ್ಯಾಯಾಧೀಶರ ಪೀಠ ಅನೂರ್ಜಿತಗೊಳಿಸಿ ಇಂದಿರಾಗಾಂಧಿಯವರ ಆಯ್ಕೆಯನ್ನು ಎತ್ತಿಹಿಡಿಯಿತು. ಸ್ವತಂತ್ರ ನ್ಯಾಯಾಂಗದ ಈ ದುಸ್ಥಿತಿಯು ಸರ್ವಾಧಿಕಾರದ ಮುಂದುವರಿಕೆಯೆಂದು ಜೈಲಿನಲ್ಲಿ ಹಾಗೂ ಬಯಲಿನಲ್ಲಿ ಇದ್ದ ಎಲ್ಲಾ ಪ್ರಜಾತಂತ್ರವಾದಿಗಳು ಒಕ್ಕೊರಲಿನಿಂದ ಖಂಡಿಸಿದರು.

ಆದರೆ ಸರಸಂಘಚಾಲಕರು ಮಾಡಿದ್ದೇನು?

1975ರ ನವೆಂಬರ್ 10ರಂದು ಇಂದಿರಾಗಾಂಧಿಯವರ ನ್ನುದ್ದೇಶಿಸಿ ಎರಡನೇ ಪತ್ರವನ್ನು ಬರೆಯುವ ದೇವರಸ್ ಅವರು ಪತ್ರವನ್ನು ಪ್ರಾರಂಭಿಸುವುದೇ ಸುಪ್ರೀಂಕೋರ್ಟ್ ಅವರ ಪರವಾಗಿ ಕೊಟ್ಟ ಆದೇಶಕ್ಕೆ ಅಭಿನಂದನೆ ಸಲ್ಲಿಸುವ ಮೂಲಕ!

‘‘Let me congratulate you as five judges of the Supreme Court have declared the validity of your election’’.

(ನಿಮ್ಮ ಚುನಾವಣೆಯನ್ನು ಸಿಂಧು ಎಂದು ಘೋಷಿಸಿದ ಸುಪ್ರೀಂಕೋರ್ಟಿನ ಐದು ಸದಸ್ಯರ ಪೀಠದ ಆದೇಶಕ್ಕೆ ಮೊದಲಿಗೆ ಅಭಿನಂದನೆಗಳು)

ಆ ನಂತರ ಮತ್ತೊಮ್ಮೆ ಆ ಪತ್ರದುದ್ದಕ್ಕೂ ಹೇಗೆ ಆರೆಸ್ಸೆಸ್ ಸರಕಾರದ ಹಾಗೂ ತುರ್ತುಸ್ಥಿತಿಯ ವಿರೋಧಿಯಲ್ಲ ಎಂದು ಮನವರಿಕೆ ಮಾಡಿಕೊಡಲು ಯತ್ನಿಸುವ ದೇವರಸ್ ಅವರು ಕೊನೆಗೆ ಹೇಳುವುದೇನೆಂದರೆ:

ಆರೆಸ್ಸೆಸ್ ಮೇಲಿನ ನಿಷೇಧವನ್ನು ಹಿಂದೆಗೆದುಕೊಂಡಲ್ಲಿ:

‘‘…power of selfless work on the part of lakhs of RSS volunteers will be utilized for the national upliftment (government as well as non-government’’

(ಲಕ್ಷಾಂತರ ಆರೆಸ್ಸೆಸ್ ಸ್ವಯಂಸೇವಕರ ನಿಸ್ವಾರ್ಥ ಕಾರ್ಯಶಕ್ತಿಯನ್ನು ಸರಕಾರದ ದೇಶಾಭಿವೃದ್ಧಿ ಕೆಲಸಕ್ಕೆ ಬಳಸಬಹುದು)

ಆರ್ಥಾತ್ ಆರೆಸ್ಸೆಸ್‌ನ ಮೇಲೆ ನಿಷೇಧವನ್ನು ತೆಗೆದುಹಾಕಿದರೆ ಆರೆಸ್ಸೆಸ್‌ನ ಕಾರ್ಯಕರ್ತರು ಇಂದಿರಾಗಾಂಧಿಯವರ ಸರ್ವಾಧಿಕಾರಿ ಸರಕಾರದ ಜೊತೆಗೂಡಿ ಕೆಲಸ ಮಾಡುವುದಾಗಿ ಖುಲ್ಲಂಖುಲ್ಲಾ ಆಶ್ವಾಸನೆಯನ್ನು ಸರಸಂಘಚಾಲಕರು ನೀಡುತ್ತಾರೆ.

ಮೂರನೇ ಸರೆಂಡರ್ ಪತ್ರ- 1976ರ ಫೆಬ್ರವರಿ 24

ಆದರೆ ಇಂದಿರಾ ಸರಕಾರ ಅದನ್ನೂ ಪರಿಗಣಿಸುವುದಿಲ್ಲ. ಆಗ ಇಂದಿರಾಗಾಂಧಿಯವರ ಮೇಲೆ ಪ್ರಭಾವವಿದ್ದ ಹಾಗೂ ಆರೆಸ್ಸೆಸ್‌ನ ಸೈದ್ಧಾಂತಿಕ ಮಿತ್ರರೂ ಆಗಿದ್ದ ವಿನೋಭಾ ಭಾವೆಯವರ ಮಧ್ಯಸ್ಥಿಕೆಯನ್ನು ಗೋಗೆರೆಯುತ್ತಾ ಸರಸಂಘಚಾಲಕರು ಮತ್ತೊಂದು ಪತ್ರ ಬರೆಯುತ್ತಾರೆ. ಏಕೆಂದರೆ ಫೆಬ್ರವರಿಯ ಕೊನೆಯ ವೇಳೆಗೆ ಇಂದಿರಾಗಾಂಧಿಯವರು ಭಾವೆಯವರ ಆಶ್ರಮಕ್ಕೆ ಭೇಟಿ ನೀಡುವ ಕಾರ್ಯಕ್ರಮವಿರುತ್ತದೆ. ಹೀಗಾಗಿ ದೇವರಸ್ ಅವರು ಆ ಭೇಟಿಯಲ್ಲಿ ಆರೆಸ್ಸೆಸ್‌ನ ಪರವಾಗಿ ಆರೆಸ್ಸೆಸ್ ಮೇಲಿನ ನಿಷೇಧವನ್ನು ತೆಗೆದುಹಾಕಲು ಪ್ರಭಾವ ಬೀರಬೇಕೆಂದು ಗೋಗೆರೆಯುತ್ತಾರೆ ಹಾಗೂ ಆರೆಸ್ಸೆಸ್‌ನ ಮೇಲಿನ ನಿಷೇಧವನ್ನು ತೆಗೆದುಹಾಕಿದಲ್ಲಿ

‘‘…a condition will prevail as to enable the volunteers of the Sangh to participate in the planned programme of action relating to country's progress and prosperity under the leadership of the prime minister’’.

ಅಂದರೆ-‘‘ಪ್ರಧಾನಿ ಇಂದಿರಾಗಾಂಧಿ ಅವರ ನೇತೃತ್ವದಲ್ಲಿ ಯೋಜಿತವಾದ ದೇಶದ ಅಭಿವೃದ್ಧಿ ಮತ್ತು ಪ್ರಗತಿಯನ್ನು ಸಾಧಿಸುವ ಕಾರ್ಯಕ್ರಮಗಳಲ್ಲಿ ಸಂಘದ ಕಾರ್ಯಕರ್ತರೂ ಭಾಗವಹಿಸಬಹುದು’’ ಎಂದು ಮುಕ್ತವಾಗಿ ಇಂದಿರಾಗಾಂಧಿಯವರ ಸರ್ವಾಧಿಕಾರಿ ಸರಕಾರದ ಜೊತೆ ಕೈಜೋಡಿಸುವ ಇರಾದೆಯನ್ನು ಮತ್ತೊಮ್ಮೆ ಪ್ರಕಟಿಸುತ್ತಾರೆ.

ಇದು ತುರ್ತುಪರಿಸ್ಥಿತಿಯಲ್ಲಿ ಆರೆಸ್ಸೆಸ್‌ನ ನಾಯಕರ ನಿಜವಾದ ರೂಪ. ಇಡೀ ದೇಶದಲ್ಲಿ ಇಂದಿರಾಗಾಂಧಿಯವರು ಯೋಜಿತವಾಗಿ ಹಕ್ಕುಗಳ ದಮನವನ್ನು ನಡೆಸುತ್ತಿದ್ದಾಗ, ಪ್ರಜಾತಂತ್ರದ ಕಗ್ಗೊಲೆ ನಡೆಯುತ್ತಿದ್ದಾಗ ಆರೆಸ್ಸೆಸ್ ಮತ್ತು ಜನಸಂಘ ಹಿಂಬಾಗಿಲ ಮೂಲಕ ಆ ದಮನಕಾಂಡಕ್ಕೆ ಜೊತೆಯಾಗುವ ಆಶ್ವಾಸನೆ ಕೊಟ್ಟು ಹೊರಬರುವ ಯತ್ನದಲ್ಲಿತ್ತು.

ಇದರ ಮುಂದುವರಿಕೆಯಾಗಿಯೇ ಉತ್ತರಪ್ರದೇಶದ ಜನಸಂಘವು ತುರ್ತುಸ್ಥಿತಿಯ ಮೊದಲನೇ ವಾರ್ಷಿಕೋತ್ಸವದ ದಿನವಾದ1976ರ ಜೂನ್ ೨೫ರಂದು ಇಂದಿರಾ ಸರಕಾರಕ್ಕೆ ‘ಸಂಪೂರ್ಣ’ ಬೆಂಬಲ ಘೋಷಿಸಿದ್ದು ಮಾತ್ರವಲ್ಲದೆ ಯಾವುದೇ ಸರಕಾರ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲವೆಂದು ಪ್ರತಿಜ್ಞೆ ತೊಟ್ಟಿದ್ದು. ಅಷ್ಟು ಮಾತ್ರವಲ್ಲ, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದ 34 ಜನಸಂಘದ ನಾಯಕರು ಇಂದಿರಾಗಾಂಧಿ ಕಾಂಗ್ರೆಸನ್ನು ಸೇರಿಕೊಂಡರು.

ಇದೆಲ್ಲದರ ಕ್ಲೈಮ್ಯಾಕ್ಸೇ 1977ರ ಜನವರಿ ಕೊನೆಯ ವೇಳೆಗೆ ಇಂದಿರಾ ಸರಕಾರದ ಜೊತೆ ಒಪ್ಪಂದಕ್ಕೆ ಬಂದು ಆರೆಸ್ಸೆಸ್ ಸಹಿ ಹಾಕಲು ಸಿದ್ಧವಾಗಿದ್ದ ‘ಸರೆಂಡರ್ ಡಾಕ್ಯುಮೆಂಟ್’.

ಅದಕ್ಕೆ ಮುಂಚೆಯೇ ಇಂದಿರಾಗಾಂಧಿಯವರು ತುರ್ತುಸ್ಥಿತಿಯನ್ನು ಹಿಂದೆಗೆದುಕೊಂಡಿದ್ದರಿಂದ ಆ ಸರೆಂಡರ್ ದಸ್ತಾವೇಜಿಗೆ ಸಹಿಹಾಕುವ ಅಗತ್ಯ ಆರೆಸ್ಸೆಸ್‌ಗೆ ಬೀಳಲಿಲ್ಲ ಅಷ್ಟೆ.

ಅ ನಂತರವೂ ಬಾಳಾಸಾಹೇಬ್ ದೇವರಸ್ ಅವರಿಗೆ ಇಂದಿರಾಗಾಂಧಿಯವರು ಅಚ್ಚುಮೆಚ್ಚಿನ ನಾಯಕರಾಗಿದ್ದರು.1980ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಇಂದಿರಾಗಾಂಧಿಯವರು ತಮ್ಮ ಹಿಂದಿನ ‘ಸಮಾಜವಾದಿ-ಸೆಕ್ಯುಲರ್ ನೀತಿಗಳನ್ನೆಲ್ಲ ತೊರೆದಿದ್ದರು. ‘‘ಕಾಶ್ಮೀರ ಮತ್ತು ಪಂಜಾಬಿನಲ್ಲಿ ಹಿಂದೂ ಅಪಾಯದಲ್ಲಿದ್ದಾನೆ, ಹಿಂದೂ ಅಪಾಯದಲ್ಲಿದ್ದಾನೆ ಎಂದರೆ ದೇಶ ಅಪಾಯದಲ್ಲಿದೆ. ಹೀಗಾಗಿ ದೇಶವನ್ನು ರಕ್ಷಿಸಲು ಬಲಿಷ್ಠ ನಾಯಕತ್ವದ ಅಗತ್ಯವಿದೆ’’ ಎಂಬ ಅಪಾಯಕಾರಿ ಹಿಂದುತ್ವ ರಾಜಕೀಯವನ್ನು ಪ್ರಾರಂಭಿಸಿದ ಇಂದಿರಾ ಗಾಂಧಿಯವರನ್ನು ಸರಸಂಘಚಾಲಕ ಬಹಿರಂಗವಾಗಿ ಕೊಂಡಾಡಲು ಪ್ರಾರಂಭಿಸಿದರು. ಆರೆಸ್ಸೆಸ್‌ನ ಅಜೆಂಡಾಗಳನ್ನು ಇಂದಿರಾ ಅವರೇ ಜಾರಿ ಮಾಡುತ್ತಿರುವಾಗ ತಮಗೆ ಬಿಜೆಪಿ ಅನಿವಾರ್ಯವಲ್ಲ ಎಂಬ ಘೋಷಣೆಯನ್ನು ಮಾಡಿದರು. ಇಂದಿರಾಗಾಂಧಿಯವರ ಹತ್ಯೆಯಾದ ನಂತರ ನಡೆದ ಸಿಖ್ ಹತ್ಯಾಕಾಂಡದಲ್ಲಿ ತಾನೂ ಭಾಗವಹಿಸಿ ಆರೆಸ್ಸೆಸ್ ಋಣ ಸಂದಾಯ ಮಾಡಿತು.

ಇದು ಆರೆಸ್ಸೆಸ್. ಇದು ಬಿಜೆಪಿ. ಇದು ಇವರ ಪ್ರಜಾತಂತ್ರ ಪ್ರೇಮ!

ಆತ್ಮೀಯ ಬಂಧುಗಳೇ,

ಮೇಲಿನ ಸಂಗತಿಗಳು ಹಾಗೂ ಐತಿಹಾಸಿಕ ದಾಖಲೆಗಳು ಹಲವು ವಿಷಯಗಳನ್ನು ಸ್ಪಷ್ಟಪಡಿಸುತ್ತದೆ.

-ಸಂಘಿಗಳು ನಡೆಸುತ್ತಿರುವ ಈ ‘ಸಂವಿಧಾನ ಸನ್ಮಾನ’ ಅಭಿಯಾನ ತಳಸಮುದಾಯಗಳಿಗೆ ಅರ್ಧ ಸತ್ಯ ಮತ್ತು ಸುಳ್ಳುಗಳನ್ನು ಹೇಳಿ ನಯವಂಚನೆ ಮಾಡುವ ದುರುದ್ದೇಶವನ್ನು ಹೊಂದಿವೆ.

-ಸಂಘಪರಿವಾರವು ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮತ್ತು ಅಂಬೇಡ್ಕರ್‌ರ ಮಹಾನ್ ದ್ವೇಷಿಗಳು ಮತ್ತು ಶತ್ರುಗಳು. ಅದಕ್ಕೆ ಅಂಬೇಡ್ಕರ್ ಅವರು ಸಂಘಿಗಳು ಕನಸು ಕಾಣುವ ಹಿಂದೂ ರಾಷ್ಟ್ರ ಸಾಕಾರವಾದರೆ ಅದು ತಳಸಮುದಾಯಗಳ ಮತ್ತು ಈ ದೇಶದ ಬದುಕು ಮತ್ತು ಭವಿಷ್ಯಕ್ಕೆ ಒದಗುವ ಮಹಾ ವಿಪತ್ತು ಎಂದು ಘೋಷಿಸಿದ್ದರು.

-ಸಂಘಿಗಳ ಪ್ರಧಾನ ಉದ್ದೇಶವೇ ಪ್ರಜಾತಂತ್ರದ ಆಶಯಗಳನ್ನುಳ್ಳ ಈ ಸಂವಿಧಾನವನ್ನು ನಿರ್ನಾಮ ಮಾಡುವುದು. ಅದರ ಜಾಗದಲ್ಲಿ ಮನುಸ್ಮತಿ ಆಧಾರಿತ ಬ್ರಾಹ್ಮಣೀಯ ಸಾಮಾಜಿಕ ವ್ಯವಸ್ಥೆಯ, ಕಾರ್ಪೊರೇಟ್ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯ ಸರ್ವಾಧಿಕಾರ ಸ್ಥಾಪಿಸುವುದು. ಮತ್ತೊಮ್ಮೆ ತಳಸಮುದಾಯಗಳನ್ನು ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಗಳ ಗುಲಾಮಗಿರಿಗೆ ಹಚ್ಚುವುದು.

-ಸಂವಿಧಾನದ ಸರ್ವ ನಾಶದ ದಿಕ್ಕಿನಲ್ಲಿ ಸಾಗಲು ಕಾಂಗ್ರೆಸ್ ಭೂಮಿಕೆ ಹಾಕಿಕೊಟ್ಟಿದ್ದರೆ, ಸಂಘಿ ಬಿಜೆಪಿ ತೀವ್ರವಾಗಿ ಮತ್ತು ವೇಗವಾಗಿ ದೇಶವನ್ನು ಆ ಪ್ರಪಾತದೆಡೆಗೆ ತಳ್ಳುತ್ತಿದೆ.

-ಅದಕ್ಕೆ ತೊಡಕಾಗಿದ್ದು ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ. ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಬದಲಿಸುತ್ತೇವೆ ಎಂದು ಬಹಿರಂಗವಾಗಿ ಘೋಷಿಸಿದ್ದರಿಂದ ತಳಸಮುದಾಯಗಳು ಬಿಜೆಪಿಯಿಂದ ವಿಮುಖವಾಗಿ ಸಂಘಿಗಳ ವಿನಾಶದ ವೇಗಕ್ಕೆ ತಡೆ ಬಿದ್ದಿದೆ.

-ಅದನ್ನು ನಿವಾರಿಸಿಕೊಳ್ಳಲೆಂದೇ ಸುಳ್ಳು ಮತ್ತು ಅರ್ಧಸತ್ಯಗಳ ಮೂಲಕ ತಳಸಮುದಾಯಗಳ, ಸಂವಿಧಾನದ ಮತ್ತು ಅಂಬೇಡ್ಕರ್‌ರ ಧೃತರಾಷ್ಟ್ರ ಆಲಿಂಗನ ಮಾಡಲು ಅಭಿಯಾನ ಮಾಡುತ್ತಿವೆ.

ಇದರ ಹಿಂದಿನ ಸಂಚುಗಳನ್ನು ಅರಿತುಕೊಳ್ಳೋಣ. ಉಗ್ರ ಹಾಗೂ ಮೃದು ಸವರ್ಣೀಯ ಮತ್ತು ಬಂಡವಾಳಶಾಹಿ ಸಂಚುಗಳನ್ನು ಸೋಲಿಸಿ ನೈಜ ಅಂಬೇಡ್ಕರ್‌ವಾದಿ ಸಂವಿಧಾನವನ್ನು ಸಾಕಾರ ಮಾಡಿಕೊಳ್ಳಲು ಬೇಕಾದ ಅರಿವನ್ನು ಪಡೆದುಕೊಳ್ಳೋಣ.

(ಮುಗಿಯಿತು)

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಶಿವಸುಂದರ್

contributor

Similar News

ಪತನದ ಕಳವಳ