ಇತಿಹಾಸದ ಹುಣ್ಣುಗಳು, ‘ಭಾರತ’ದ ಕುರುಡುಗಳು ಮತ್ತು ಹಿಂದುತ್ವದ ಹುನ್ನಾರಗಳು
ಭಾಗ-2
2021ರಲ್ಲಿ ಮ್ಯಾನ್ಮಾರ್ ದೇಶದಲ್ಲಿ ಸೈನಿಕ ಕ್ಷಿಪ್ರ ಕ್ರಾಂತಿಯಾದ ಮೇಲೆ ಮಣಿಪುರದಲ್ಲಿ ರೋಹಿಂಗ್ಯಾ ಮುಸ್ಲಿಮರ ಹಾಗೂ ಕುಕಿ ಹಾಗೂ ಇನ್ನಿತರ ಜೋ-ಚಿನ್ ಸಮುದಾಯಕ್ಕೆ ಸೇರಿದ ಜನಾಂಗಗಳ ಮೇಲೆ ಭೀಕರ ಹಿಂಸಾಚಾರ ನಡೆಯುತ್ತಿದೆ. ಮ್ಯಾನ್ಮಾರ್ ದೇಶದಲ್ಲಿ ನೆಲೆಯನ್ನು ಹೊಂದಿರುವ ಮಣಿಪುರ ಮೈತೈ ಸಶಸ್ತ್ರ ಸಂಘಟನೆಗಳ ಮಿಲಿಟೆಂಟುಗಳು ಮ್ಯಾನ್ಮಾರ್ ಸೈನಿಕರ ಜೊತೆ ಸೇರಿ ಅಲ್ಲಿನ ಕುಕಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಹೀಗಾಗಿ ಅಲ್ಲಿಂದ ಕುಕಿ ಸಮುದಾಯಕ್ಕೆ ಸೇರುವ ಚಿನ್ ಸಮುದಾಯದ ಜನ ಸಾವಿರಾರು ಸಂಖ್ಯೆಯಲ್ಲಿ ಭಾರತದ ಆಶ್ರಯ ಕೋರಿ ಬರುತ್ತಿದ್ದಾರೆ. ಭಾರತ ಅವರಿಗೆ ನಿರಾಶ್ರಿತರ ಸ್ಥಾನ ಕೊಡುವುದಕ್ಕೆ ನಿರಾಕರಿಸಿದರೂ ಮಿಜೋರಾಂ ರಾಜ್ಯ ಅವರಿಗೆ ನಿರಾಶ್ರಿತರ ಸ್ಥಾನಮಾನ ನೀಡಿ ಮಾನವೀಯ ಸಹಕಾರ ನೀಡುತ್ತಿದೆ. ಅವರಲ್ಲಿ ಕೆಲವು ಸಾವಿರ ಜನ ಮಣಿಪುರದ ಗುಡ್ಡಗಾಡು ಪ್ರದೇಶಗಳಿಗೂ ಬರುತ್ತಿದ್ದಾರೆ. ಅವರಿಗೆ ಮಾನವೀಯ ನೆಲೆಯಲ್ಲಿ ನಿರಾಶ್ರಿತ ಸ್ಥಾನಮಾನ ಕೊಡುವುದು ದೇಶದ ಡಿಎನ್ಎದಲ್ಲೇ ಪ್ರಜಾತಂತ್ರ ಇರುವ ಸರಕಾರದ ಕರ್ತವ್ಯ. ಆದರೆ ಮಣಿಪುರದ ಬಿಜೆಪಿ ಸರಕಾರ ಅವರನ್ನು ಅಕ್ರಮ ವಲಸಿಗರೆಂದು ಹೊರಹಾಕುತ್ತಿರುವುದು ಮಾತ್ರವಲ್ಲದೆ ಮಣಿಪುರದ ಮೂಲನಿವಾಸಿ ಕುಕಿಗಳನ್ನೂ ಕೂಡ ಇದೇ ಹೆಸರಿನಲ್ಲಿ ಹೊರಹಾಕುವ ಅತ್ಯಂತ ಹೇಯ ಪ್ರಯತ್ನಗಳನ್ನು ಮಾಡುತ್ತಿದೆ. ಇವಿಷ್ಟೂ ಮಣಿಪುರ ಹಾಗೂ ರಾಷ್ಟ್ರೀಯ ಬಿಜೆಪಿ ಮತ್ತು ಸಂಘಪರಿವಾರ ಮಣಿಪುರದ ಹಿಂಸಾಚಾರದ ಕಾರಣ ಹಾಗೂ ಸಮಸ್ಯೆಯ ಸ್ವರೂಪದ ಬಗ್ಗೆ ಮಾಡುತ್ತಿರುವ ಅಪಪ್ರಚಾರದ ಕುರಿತು ಕೆಲವು ಸ್ಪಷ್ಟೀಕರಣಗಳು. ಆದರೆ ಇಷ್ಟರಿಂದಲೇ ಮಣಿಪುರದ ಜನಾಂಗೀಯ ಸಮಸ್ಯೆಗಳ ಬಿಕ್ಕಟ್ಟಾಗಲೀ, ಅದನ್ನು ಬಳಸಿಕೊಂಡು ಬಿಜೆಪಿ ಮಾಡುತ್ತಿರುವ ಹಿಂದುತ್ವವಾದಿ ಫ್ಯಾಶಿಸ್ಟ್ ರಾಜಕಾರಣವಾಗಲೀ ಅಥವಾ ನೈಜ ಪರಿಹಾರದ ಮಾರ್ಗೋಪಾಯವಾಗಲೀ ಅರ್ಥವಾಗುವುದಿಲ್ಲ. ಸಮಸ್ಯೆಯ ಒಟ್ಟಾರೆ ಸ್ವರೂಪವನ್ನು ಸಮಗ್ರವಾಗಿ ಮತ್ತು ಐತಿಹಾಸಿಕವಾಗಿ ಅರ್ಥಮಾಡಿಕೊಂಡಾಗ ಮಾತ್ರ ಒಂದು ಸ್ಪಷ್ಟ ಚಿತ್ರಣ ಸಿಗುತ್ತದೆ. ಆದರೆ ಈ ಸುಳ್ಳು-ನಿಜಗಳು ಸರಿಯಾಗಿ ಅರ್ಥವಾಗಬೇಕೆಂದರೆ, ಸ್ವಾತಂತ್ರ್ಯಪೂರ್ವದ, ಮಣಿಪುರದ ಇತಿಹಾಸ, ಬ್ರಿಟಿಷ್ ಕಾಲದಲ್ಲಿ ಅದು ಬದಲಾದ ಬಗೆ ಮತ್ತು ಸ್ವಾತಂತ್ರ್ಯೋತ್ತರ ಭಾರತದೊಳಗೂ ಮುಂದುವರಿದ ಭಾರತ ರಾಷ್ಟ್ರೀಯತೆಯ ಹೆಸರಿನ ದಮನ ಹಾಗೂ ಕಳೆದ ಹತ್ತು ವರ್ಷಗಳಲ್ಲಿ ಹಿಂದುತ್ವವಾದಿ ಶಕ್ತಿಗಳು ಇಡೀ ಈಶಾನ್ಯ ಭಾರತದ ಬುಡಕಟ್ಟು ಸಮುದಾಯಗಳನ್ನು ಬ್ರಾಹ್ಮಣೀಯ ಹಿಂದುತ್ವದ ಚೌಕಟ್ಟಿನೊಳಗೆ ತರಲು ಹುಟ್ಟುಹಾಕಿರುವ ದಾಯಾದಿ ಕಲಹ, ಸಾಂಸ್ಕೃತಿಕ ಮತ್ತು ರಾಜಕೀಯ ಹಿಂಸಾಚಾರಗಳನ್ನು ಅರ್ಥಮಾಡಿಕೊಳ್ಳಬೇಕು. ಅದರಲ್ಲೂ ಮಣಿಪುರ ಮತ್ತು ನಾಗಾಲ್ಯಾಂಡಿನ ಹೆಸರುಗಳನ್ನು ‘ಬಭ್ರುವಾಹನ’ ಚಿತ್ರದಲ್ಲಿ ಬಿಟ್ಟರೆ ಮತ್ತೆಲ್ಲೂ ಕೇಳಿರದ ಕರ್ನಾಟಕದ ಬಹುಸಂಖ್ಯಾತ ಜನರನ್ನು ಸಂಘ ಪರಿವಾರದವರ ವಾಟ್ಸ್ಆ್ಯಪ್ ಶಾಲೆಗಳು ಸುಲಭವಾಗಿ ತಪ್ಪುದಾರಿಗೆ ಎಳೆಯುತ್ತಿರುವ ಹೊತ್ತಿನಲ್ಲಿ ಇದನ್ನು ಇನ್ನಷ್ಟು ಕೂಲಂಕಶವಾಗಿ ಅರಿಯುವ ಅಗತ್ಯವಿದೆ.
ಕಾಂಗ್ಲೆಪಾಕ್ ಮಣಿಪುರವಾಯಿತೇಕೆ?
ಮಣಿಪುರದ ಮೂಲ ಹೆಸರು ಕಾಂಗ್ಲೆಪಾಕ್. ಇದು ಸ್ಥಳೀಯ ಮೈತೈ ಜನಾಂಗವು ತನ್ನನ್ನು ಗುರುತಿಸಿಕೊಂಡ ರೀತಿ. ಬುಡಕಟ್ಟುಗಳ ಕಾಂಗ್ಲೆಪಾಕ್, ಮಣಿಪುರವಾಗಿ ಬದಲಾದ ಇತಿಹಾಸದಲ್ಲೇ ಇಂದಿನ ದಾರುಣ ವರ್ತಮಾನದ ಕೆಲವು ಕಾರಣಗಳೂ ಅಡಕವಾಗಿವೆ. ಮೇನ್ಸ್ಟ್ರೀಮ್ ಭಾರತ ಪ್ರಧಾನವಾಗಿ ಹಿಂದೂ ಭಾರತ ಕೆಲ ಶತಮಾನಗಳ ಹಿಂದಿನವರೆಗೂ ಈಶಾನ್ಯ ಭಾಗವನ್ನು ತನ್ನ ನಾಗರಿಕ ಕಥನಕ್ಕೆ ಅಂಚಿನ ಮತ್ತು ಅಗತ್ಯವಿಲ್ಲದ ಭಾಗ ಎಂದೇ ಭಾವಿಸಿಕೊಂಡು ಬಂದಿತ್ತು. ಆದರೆ ಅಲ್ಲಿನ ಭಾಗದ ಜನರದ್ದೂ ತಮ್ಮದೇ ಪ್ರತ್ಯೇಕ ನಾಗರಿಕತೆ ಹಾಗೂ ಕಥನಗಳು ಇರುತ್ತವಲ್ಲ. ಮೇನ್ ಸ್ಟ್ರೀಮ್ ಭಾರತ ಅಥವಾ ಪ್ರಧಾನ ಧಾರೆ ಭಾರತ ಎಂಬುದು ಅಲ್ಲಿರುವ ಜನರ ದುರಭಿಮಾನದ ಸೂಚಕವೇ. ಏಕೆಂದರೆ ತಾವೇ ಮೇನ್ ಸ್ಟ್ರೀಮ್ ಎಂದು ಭಾವಿಸಿಕೊಂಡಿರುವುದರಿಂದ. 1993ರಲ್ಲಿ ಕೊಲಂಬಸ್ ಅಮೆರಿಕವನ್ನು ಕಂಡುಹಿಡಿದ 500ನೇ ವರ್ಷವನ್ನು ಅಚರಿಸಿದಾಗ ಬಿಳಿಯರು ಬರುವುದಕ್ಕಿಂತ ಮುಂಚಿನಿಂದ ಅಲ್ಲಿ ಜೀವಿಸುತ್ತಿರುವ ಮೂಲನಿವಾಸಿಗಳು ಲೇವಡಿ ಮಾಡಿದರು. ‘‘ನಿಮಗೆ ನಾವು ಹೊಸಬರು. ನಮಗೆ ನಾವು ಹೊಸಬರು ಹೇಗಾಗುತ್ತೇವೆ’’ ಎಂಬುದು ಅವರ ಪ್ರಶ್ನೆ. ಈಶಾನ್ಯ ಭಾರತವು ಸಹ ಪ್ರಧಾನವಾಗಿ ಹಲವಾರು ಬುಡಕಟ್ಟುಗಳು ಸಹಸ್ರಾರು ವರ್ಷಗಳಿಂದ ಜೀವಿಸಿಕೊಂಡು ಬಂದ ಭೂಭಾಗವಾಗಿದೆ. ಅಲ್ಲಿ ಈಗಿನ ಅಸ್ಸಾಮಿನ ಬ್ರಹ್ಮಪುತ್ರಾ ಕಣಿವೆ ಮತ್ತು ಈಗಿನ ಮಣಿಪುರದ ಇಂಫಾಲ ಕಣಿವೆಯಲ್ಲಿನ ಫಲವತ್ತಾದ ಮೈದಾನ ಪ್ರದೇಶ ಬಿಟ್ಟರೆ ಕೃಷಿಯಾಧಾರಿತ ಸಮಾಜಬೆಳೆಯಲು ಅವಕಾಶಗಳಿರಲಿಲ್ಲ. ಆದರೂ ಗುಡ್ಡಗಾಡು ಪ್ರದೇಶಗಳಲ್ಲಿ ಹಲವಾರು ಕಡೆ ಪೋಡ್ ವ್ಯವಸಾಯ ಆಧಾರಿತ ಸಮಾಜಗಳು ಅರಳಿಕೊಂಡವು. ಐದಾರು ಶತಮಾನಗಳ ಹಿಂದೆ ಬಂಗಾಳ ಪ್ರಾಂತದಿಂದ ವೈಷ್ಣವ ಪಂಥಾನುಯಾಯಿ ಶಂಕರ ದೇವ ಬಂಗಾಳದಿಂದ ಅಸ್ಸಾಮಿನ ಬ್ರಹ್ಮಪುತ್ರಾ ಕಣಿವೆಯ ಅಹೋಮ್ ಸಮುದಾಯದ ಮತ್ತು ಸಾಮ್ರಾಜ್ಯದ ಕೃಷಿಕರನ್ನು ಹಿಂದುವೀಕರಿಸಿದ. ಆದರೆ ಆ ವೈಷ್ಣವತೆ ಬ್ರಾಹ್ಮಣ್ಯಕ್ಕೆ ವಿರುದ್ಧವಾಗಿತ್ತು. ಇಂಫಾಲ ಕಣಿವೆಯಲ್ಲಿ ನೆಲೆನಿಂತ ಬುಡಕಟ್ಟು ಮೈತೈ ಸಮುದಾಯವು ಸರಾಮಹಿ ಎಂಬ ಪ್ರಕೃತಿ ಆರಾಧನೆಯ ಪಂಥವನ್ನು ಅನುಸರಿಸುತ್ತಿತ್ತು. ಹಾಗೂ ತಮ್ಮದೇ ಆದ ಕಾಂಗ್ಲೆಪಾಕ್ ಸಾಮ್ರಾಜ್ಯವನ್ನು ಕಟ್ಟಿಕೊಂಡಿತ್ತು. ಈ ಕೃಷಿ ಸಮಾಜದಲ್ಲೂ ಮಧ್ಯಪ್ರವೇಶಿಸಿದ ಹಿಂದೂ ಬ್ರಾಹ್ಮಣ ವಿಸ್ತಾರಕರು ಮೈತೈಗಳನ್ನು ಹಿಂದೂಗಳನ್ನಾಗಿ ಮಾಡಿದರಲ್ಲದೆ, ಜಾತಿ ವ್ಯವಸ್ಥೆಯನ್ನು ಪರಿಚಯಿಸಿದರು. ಆದರೆ ಮೈತೈ ದೊರೆಗಳನ್ನು ಅವರು ಕ್ಷತ್ರಿಯರನ್ನಾಗಿ ಒಪ್ಪಿಕೊಳ್ಳದೆ ಶೂದ್ರ ರಾಜರ ಸ್ಥಾನಮಾನ ನೀಡಿದರು. ಉಳಿದವರು ಅಸ್ಪಶ್ಯ ದಲಿತರಾಗಿ ಮಾರ್ಪಾಡಾದರು. ಇದರ ಭಾಗವಾಗಿಯೇ ಕಾಂಗ್ಲೆಪಾಕ್ ಮಣಿಪುರವೆಂದು ಬದಲಾಯಿತು. ಈ ಹೊಸ ಸಾಮ್ರಾಜ್ಯಕ್ಕೆ ಮಹಾಭಾರತ, ಭಾಗವತ ಮತ್ತು ರಾಮಾಯಣಗಳಲ್ಲಿ ಕೆಲವು ಪಾತ್ರಗಳಾಗುವ ಅವಕಾಶವನ್ನು ಈ ಹೊಸ ಬ್ರಾಹ್ಮಣೀಯ ಹಿಂದೂ ವ್ಯವಸ್ಥೆ ಒದಗಿಸಿತು. ಎಲ್ಲಕ್ಕಿಂತ ಹೆಚ್ಚಾಗಿ ಹಿಂದೂ ಬ್ರಾಹ್ಮಣೀಯ ಸಂಸ್ಕಾರದ ಜೊತೆಗೆ ಮೇಲು-ಕೀಳೆಂಬ, ಶ್ರೇಷ್ಠ-ಕನಿಷ್ಠವೆಂಬ ಸಂಸ್ಕಾರವನ್ನೂ ಕಲಿತುಕೊಂಡ ನವಹಿಂದೂ ಮೈತೈಗಳು ತಮ್ಮ ಸಹೋದರ ಬುಡಕಟ್ಟು ಸಮುದಾಯಗಳನ್ನು ತಮಗಿಂತ ಕೀಳಾದವರೆಂದು ತುಚ್ಛವಾಗಿ ಅಸ್ಪಶ್ಯವಾಗಿ ಕಾಣಲಾರಂಭಿಸಿದರು. ಕೆಲವೊಮ್ಮೆ ತಮ್ಮ ಸಾಮ್ರಾಜ್ಯದ ವಿಸ್ತರಣೆಯ ಭಾಗವಾಗಿ ಬುಡಕಟ್ಟುಗಳ ಮೇಲೆ ಯುದ್ಧವನ್ನು ನಡೆಸಲಾರಂಭಿಸಿದರು. ಇದು ಬ್ರಿಟಿಷರು ಭಾರತದಲ್ಲಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿ ಇಡೀ ಭಾರತವನ್ನು ತಮ್ಮ ಅಡಿ ತಂದುಕೊಳ್ಳುವವರೆಗೂ ನಡೆಯುತ್ತಿತ್ತು.
ಬ್ರಿಟಿಷ್ ಮಣಿಪುರ-ಕಾಡು-ಕಣಿವೆ ಎಂಬ ಬಿರುಕು ಶಾಶ್ವತವಾಯಿತು
ಬ್ರಿಟಿಷರು ಭಾರತವನ್ನು ಹಂತಹಂತವಾಗಿ ಆಕ್ರಮಿಸುತ್ತಾ ಬಂದಂತೆ 1824-26ರಲ್ಲಿ ಆಂಗ್ಲೋ-ಬರ್ಮಾ ಯುದ್ಧದಲ್ಲಿ ಬರ್ಮಾವನ್ನು ಸೋಲಿಸಿತು. ಯಾಂದಬೂ ಒಪ್ಪಂದದ ಭಾಗವಾಗಿ ಬರ್ಮಾ ತೆಕ್ಕೆಯಲ್ಲಿದ್ದ ಇದು ನಾವು ‘ಈಶಾನ್ಯ ಭಾರತ’ ಎಂದು ಕರೆಯುವ ಬಹುದೊಡ್ಡ ಪ್ರಧಾನವಾಗಿ ಗುಡ್ಡಗಾಡುಗಳಿಂದ ಕೂಡಿದ ಪ್ರದೇಶವನ್ನು ಪಡೆದುಕೊಂಡಿತು. ಇದರಲ್ಲಿ ಅಸ್ಸಾಮಿನ ಗುಡ್ಡಗಾಡುಗಳಲ್ಲಿ ಕೂಡಲೇ ಟೀ ತೋಟ ಪ್ರಾರಂಭಿಸಿದ ಬ್ರಿಟಿಷ್ ಉದ್ಯಮಿಗಳಿಗಾಗಿ 1873ರಲ್ಲೇ ಅಸ್ಸಾಮಿನಲ್ಲಿ ಬ್ರಿಟಿಷರು ಒಂದು ಚೀಫ್ ಕಮಿಷನರ್ ಕಾರ್ಯಾಲಯ ಹಾಗೂ ಸೇನಾ ತುಕಡಿಗಳನ್ನು ನಿಯೋಜಿಸಿತು. ಅವರ ಜೊತೆಜೊತೆಗೆ ಮಾರ್ವಾಡಿ ವ್ಯಾಪಾರಿಗಳು ಈಶಾನ್ಯದಲ್ಲಿ ವ್ಯಾಪಾರ ಪ್ರಾರಂಭಿಸಿದರು. ಆಗಲೂ ತ್ರಿಪುರಾ ಮತ್ತು ಮಣಿಪುರಗಳು ಎರಡು ಪ್ರತ್ಯೇಕ ಸಂಸ್ಥಾನಗಳಾಗಿ ಉಳಿದುಕೊಂಡಿದ್ದವು. 1907ರಲ್ಲಿ ಮಣಿಪುರ ರಾಜನನ್ನು ನಾಮಕಾವಸ್ಥೆ ಹುದ್ದೆಯಲ್ಲಿ ಕೂಡಿಸಿ ಬ್ರಿಟಿಷ್ ರೆಸಿಡೆಂಟರೇ ನೇರವಾಗಿ ಮಣಿಪುರದ ಆರ್ಥಿಕ-ರಾಜಕೀಯ-ಸಾಮಾಜಿಕ ವ್ಯವಹಾರಗಳನ್ನು ನಿರ್ವಹಿಸಲಾರಂಭಿಸಿ ದರು. ಗುಡ್ಡಗಾಡು ಜನರು ವಿಶೇಷವಾಗಿ ಕುಕಿ ಮತ್ತು ನಾಗಾಗಳ ಬಗ್ಗೆ ಮೈತೈ ರಾಜನಿಗೆ ಅಪಾರವಾದ ತಾತ್ಸಾರವಿತ್ತು. ಹಾಗೆಯೇ ಬ್ರಿಟಿಷರಿಗೆ ಫಲವತ್ತಾದ ಕಣಿವೆಯ ಮತ್ತು ಅಲ್ಲಿ ಉತ್ಪಾದನೆಯಾಗುತ್ತಿದ್ದ ಅಕ್ಕಿ ಮತ್ತದರ ರಫ್ತಿನ ಬಗ್ಗೆ ಕಣ್ಣಿತ್ತೇ ವಿನಾ ಯಾವುದೇ ರೀತಿಯ ಆದಾಯವಿರದ ಮಣಿಪುರದ ಕುಕಿ ಮತ್ತು ನಾಗಾಗಳು ವಾಸಿಸುತ್ತಿದ್ದ ಕಾಡಿನ ಬಗ್ಗೆ ವಿಶೇಷ ಅಸ್ಥೆಯಿರಲಿಲ್ಲ. ಹೀಗಾಗಿ ಅವನ್ನು ಸಂಸ್ಥಾನದಿಂದ ಎಕ್ಸ್‌ಕ್ಲೂಡೆಡ್- ಹೊರಗುಳಿಸಲ್ಪಟ್ಟ ಸಂಸ್ಥಾನಗಳೆಂದೇ ಪರಿಗಣಿಸಿದರು. ಮಣಿಪುರದಲ್ಲೂ ರಾಜನ ಆಳ್ವಿಕೆ ಮತ್ತು ಆತನ ದರ್ಬಾರಿನ ಆಳ್ವಿಕೆ ಗುಡ್ಡಗಾಡು ಜನರ ಮೇಲೆ ಇರಲಿಲ್ಲ. ಗುಡ್ಡಗಾಡು ಜನರ ಆಳ್ವಿಕೆ ಮತ್ತು ವ್ಯವಹಾರ ಸಂಪೂರ್ಣವಾಗಿ ಬ್ರಿಟಿಷ್ ರೆಸಿಡೆಂಟರ ಜವಾಬ್ದಾರಿಯಾಗಿತ್ತು. ಹೀಗಾಗಿ ಬ್ರಿಟಿಷರ ಕಾಲದಲ್ಲಿ ಮಣಿಪುರದ ಒಳಗೆ ಕಾಡು ಮತ್ತು ಕಣಿವೆ ಯೆಂಬ ಎರಡು ಪ್ರತ್ಯೇಕ ಆಡಳಿತ ವ್ಯವಸ್ಥೆಯೇ ಜಾರಿಯಲ್ಲಿತ್ತು. ಹೀಗಾಗಿ ನಾಗಾಗಳು ಮತ್ತು ಕುಕಿಗಳು ಹಾಗೂ ಮೈತೈಗಳು ಒಟ್ಟಾಗಿ ಬೆರೆತು ಒಂದು ಸಮಗ್ರ ಮಣಿಪುರ ಸಮಾಜವಾಗಿ ಅರಳುವ ಸಾಧ್ಯತೆಯೇ ಇರಲಿಲ್ಲ.