ಲೋಕಸಭೆಯಲ್ಲಿ ಭಾರತದ ಸಂವಿಧಾನದ 75 ವರ್ಷಗಳ ಕುರಿತ ಚರ್ಚೆಯ ಸಂದರ್ಭದಲ್ಲಿ ಗಮನ ಸೆಳೆದ ಎರಡು ಭಾಷಣಗಳು
‘‘ಸಂವಿಧಾನವು ಕೇವಲ ದಾಖಲೆಯಲ್ಲ, ಇದು ನ್ಯಾಯ, ಅಭಿವ್ಯಕ್ತಿ ಮತ್ತು ಆಶಯಗಳ ದೀಪವಾಗಿದೆ. ಆದರೆ ಇಂದು ಚರ್ಚೆಯ ವಾತಾವರಣವೇ ಇಲ್ಲ, ಜನರು ಸತ್ಯ ಹೇಳಲು ಹೆದರುತ್ತಿದ್ದಾರೆ. ಅವರಿಗೆ ಬೆದರಿಕೆಗಳನ್ನು ಒಡ್ಡಲಾಗುತ್ತಿದೆ. ಪತ್ರಕರ್ತರು, ವಿಪಕ್ಷ ನಾಯಕರು, ವಿಶ್ವವಿದ್ಯಾಲಯದ ಅಧ್ಯಾಪಕರು, ಕಾರ್ಮಿಕ ಸಂಘಟನೆಯವರು ಯಾರೇ ಸತ್ಯ ಹೇಳಲು ಮುಂದಾಗದಂತೆ ಬಾಯಿ ಮುಚ್ಚಿಸಲಾಗುತ್ತಿದೆ’’ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಭಾರತದ ಸಂವಿಧಾನದ 75 ವರ್ಷಗಳ ಕುರಿತ ಚರ್ಚೆಯ ಸಂದರ್ಭದಲ್ಲಿ ಶುಕ್ರವಾರ ಎರಡು ಭಾಷಣಗಳು ಗಮನ ಸೆಳೆದವು.
ಮುಸ್ಲಿಮರ ಹೆಸರು ಹೇಳಿದರೆ ಹಿಂದೂ ಮತದಾರರಿಗೆ ಸಿಟ್ಟು ಬರುತ್ತದೆ ಎಂಬ ಹಿಂಜರಿಕೆಯಿಂದ ಅಖಿಲೇಶ್ ಯಾದವ್ ಹೊರಬರುತ್ತಿರುವ ಹಾಗೆ ಕಾಣುತ್ತಿದೆ.
ಮುಸ್ಲಿಮರ ಬಗ್ಗೆ ಮಾತಾಡುವುದಕ್ಕಾಗಲೀ ಅವರಿಗೆ ಟಿಕೆಟ್ ನೀಡುವುದಕ್ಕಾಗಲೀ ಹಿಂದೇಟು ಹಾಕುವ ಕಾಲವಿತ್ತು. ಆದರೆ ಅವರ ಬಗ್ಗೆ ಮಾತಾಡಲೇಬೇಕಾದುದು ಅಗತ್ಯ ಎಂಬುದನ್ನು ಗ್ರಹಿಸಿದ ಬಗ್ಗೆ ಅವರ ಮಾತಿನ ಧಾಟಿಯಲ್ಲಿತ್ತು.
ದ್ವೇಷ ರಾಜಕಾರಣ ಯಾರಿಗೂ ಒಳ್ಳೆಯದಲ್ಲ ಎಂಬುದನ್ನು ತಮ್ಮ ಭಾಷಣದಲ್ಲಿ ಅವರು ಪ್ರತಿಪಾದಿಸಿದರು.
‘‘ಕಾನೂನಿನ ಎದುರು ಎಲ್ಲರೂ ಸಮಾನರು ಎಂಬ 14ನೇ ವಿಧಿಯ ಪ್ರತಿಪಾದನೆಯನ್ನು ಯಾರೂ ನಿರಾಕರಿಸಲು ಆಗದು. ಆದರೆ ನ್ಯಾಯ ಕೇಳಲು ಹೋದವರ ಮೇಲೆ ಲಾಠಿ ಪ್ರಹಾರ ನಡೆಯುತ್ತದೆಂದಾರೆ, 14ನೇ ವಿಧಿಯ ಅನುಸರಣೆ ಎಲ್ಲಿ ಆಗುತ್ತಿದೆ?’’ ಎಂದು ಅವರು ಪ್ರಶ್ನಿಸಿದ್ದಾರೆ.
‘‘ಯಾರನ್ನೂ ಅವರ ಹಕ್ಕಿನಿಂದ, ಸ್ವಾತಂತ್ರ್ಯದಿಂದ ವಂಚಿತರನ್ನಾಗಿಸಲು ಸಾಧ್ಯವಿಲ್ಲ. ಆದರೆ ಜೈಲಿನೊಳಗೆ ಹತ್ಯೆಗಳಾಗುತ್ತಿವೆ. ಪೊಲೀಸರ ವಶದಲ್ಲೂ ಹತ್ಯೆಗಳಾಗುತ್ತಿವೆ. ಜನರು ಎಲ್ಲೂ ಸುರಕ್ಷಿತವಾಗಿಲ್ಲ. ನೋಟಿಸ್ ಇಲ್ಲದೆ, ಎಫ್‌ಐಆರ್ ಇಲ್ಲದೆ ಈ.ಡಿ. ಯಾರನ್ನೂ ಬಂಧಿಸುವಂತಿಲ್ಲ ಎಂಬ ಕಾನೂನನನ್ನು ಜಾರಿಗೆ ತರುವುದು ಅಗತ್ಯವಿದೆ. ಹಾಗಾದಾಗ ಪ್ರಜಾಸತ್ತೆಯಲ್ಲಿ ದೊಡ್ಡ ಬದಲಾವಣೆಯಾಗುತ್ತದೆ. ಅನ್ಯಾಯದ ವಿರುದ್ಧ ಮಾತಾಡಿದರೆ ಜೈಲು, ದೇಶದ್ರೋಹ ಎಂಬ ಟೀಕೆ ಬರುತ್ತದೆ’’ ಎಂದಿದ್ದಾರೆ ಅವರು.
ಇದೇ ವೇಳೆ ಪ್ರಿಯಾಂಕಾ ಗಾಂಧಿ ದುರ್ಬಲರ ಪಾಲಿಗೆ ನ್ಯಾಯ ಎಂಬುದು ಎಷ್ಟು ದೊಡ್ಡದು ಎಂಬುದನ್ನು ಹೇಳಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಆಗ್ರಾದ ಅರುಣ್ ವಾಲ್ಮೀಕಿ ಮನೆಗೆ ಹೋಗಿದ್ದುದನ್ನು ನೆನಪಿಸಿಕೊಂಡು ಆತನ ವಿಧವೆ ಪತ್ನಿ ತಮಗೆ ನ್ಯಾಯ ಬೇಕಿದೆ, ಅದಕ್ಕಾಗಿ ಏನೇ ಆದರೂ ಹೋರಾಟ ನಡೆಸುವುದಾಗಿ ಹೇಳಿದ್ದನ್ನು ಪ್ರಸ್ತಾಪಿಸಿದ್ದಾರೆ.
‘‘ಆ ಮಹಿಳೆಗೆ ಇಂಥ ತಾಕತ್ತನ್ನು ಕೊಟ್ಟಿರುವುದು ನಮ್ಮ ಸಂವಿಧಾನ’’ ಎಂದಿದ್ದಾರೆ.
‘‘ಸಂಭಲ್ ಹಿಂಸಾಚಾರದಲ್ಲಿ ತಂದೆಯನ್ನು ಕಳೆದುಕೊಂಡ 17 ವರ್ಷದ ಹುಡುಗ ತಾನು ಡಾಕ್ಟರ್ ಆಗಬೇಕೆಂದು ಅಪ್ಪ ಕಂಡಿದ್ದ ಕನಸನ್ನು ಪೂರ್ತಿಗೊಳಿಸುವುದಾಗಿ ಹೇಳುತ್ತಾನೆ. ಅತನೊಳಗೆ ಅಂಥ ಭರವಸೆಯನ್ನು ತುಂಬಿರುವುದು ನಮ್ಮ ಸಂವಿಧಾನ’’ ಎಂದರು.
‘‘ದೇಶದ ಕೋಟ್ಯಂತರ ಜನರ ಹೋರಾಟದಲ್ಲಿ, ಅವರ ಅಸ್ಮಿತೆಯಲ್ಲಿ, ಎಂಥದೇ ಕಠಿಣ ಪರಿಸ್ಥಿತಿಯಲ್ಲೂ ಹೋರಾಡುವ ಅಪಾರ ಸ್ಥೈರ್ಯದಲ್ಲಿ ಮತ್ತು ದೇಶದ ನ್ಯಾಯಾಕಾಂಕ್ಷೆಯಲ್ಲಿ ನಮ್ಮ ಸಂವಿಧಾನದ ಜ್ಯೋತಿ ಬೆಳಗುತ್ತಿದೆ’’ ಎಂದರು.
‘‘ಸಂವಿಧಾನವು ನ್ಯಾಯ, ಏಕತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣಾತ್ಮಕ ಕವಚವಾಗಿದೆ’’ ಎಂದು ಪ್ರಿಯಾಂಕಾ ಹೇಳಿದ್ದಾರೆ.
ತಮ್ಮ ಮೊದಲ ಭಾಷಣದಲ್ಲಿಯೇ ಅವರು ಗಮನ ಸೆಳೆದಿದ್ದಾರೆ.
‘ಈಗಿನದು ಹಿಂದೂ ಮುಸ್ಲಿಮ್ ಸಂಘರ್ಷವಲ್ಲ. ಸ್ಪಷ್ಟವಾಗಿ ಅದು ಮುಸ್ಲಿಮ್ ವಿರೋಧಿ ರಾಜಕೀಯ ಸಂಚು. ಮನುಷ್ಯನನ್ನು ಮಾನವ ಬಾಂಬ್ ಆಗಿ ಬದಲಿಸಬಲ್ಲ ವಿಚಿತ್ರ ಹತಾಶ ಸ್ಥಿತಿಯಲ್ಲಿ ನಾವಿದ್ದೇವೆ.
ಬಿಜೆಪಿ ನಾಯಕರ ಮಕ್ಕಳು ವಿದೇಶದಲ್ಲಿ ಓದುತ್ತಾರೆ. ಆದರೆ ಬಡವರ ಮಕ್ಕಳು ಹಿಂದೂ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ದಂಗೆ ನಡೆಸುತ್ತಾರೆ. ಸಾವೂ ಸಂಭವಿಸುತ್ತದೆ. ಅವರ ವಿರುದ್ಧ ಮೊಕದ್ದಮೆಯೂ ಇರುತ್ತದೆ. ಇಂತಹ ಕಟು ವಾಸ್ತವವನ್ನು ಅಖಿಲೇಶ್ ತಮ್ಮದೇ ರೀತಿಯಲ್ಲಿ ವಿವರಿಸಿದ್ದಾರೆ.
‘‘20 ಕೋಟಿಗೂ ಹೆಚ್ಚು ಜನರು, ವಿಶೇಷವಾಗಿ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಲಾಗುತ್ತಿದೆ. ಅವರ ವಿರುದ್ಧದ ದೌರ್ಜನ್ಯಗಳು ದಿನೇ ದಿನೇ ಹೆಚ್ಚುತ್ತಿವೆ. ಅವರ ಆಸ್ತಿಗಳನ್ನು ಲೂಟಿ ಮಾಡಲಾಗುತ್ತಿದೆ, ಮನೆಗಳನ್ನು ಕೆಡವಲಾಗುತ್ತಿದೆ ಮತ್ತು ಆಡಳಿತಾತ್ಮಕ ಸಹಾಯದಿಂದ ಪೂಜಾ ಸ್ಥಳಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ’’ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
‘‘ಉತ್ತರ ಪ್ರದೇಶ ಚುನಾವಣೆಯ ಸಂದರ್ಭದಲ್ಲಿ ಅನೇಕರಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಯಿತು. ಮಹಿಳೆಯರಿಗೆ ಬೆದರಿಕೆ ಹಾಕಲಾಯಿತು ಮತ್ತು ಪೊಲೀಸ್ ಅಧಿಕಾರಿಗಳು ಬಹಿರಂಗವಾಗಿ ರಿವಾಲ್ವರ್ ತೋರಿಸಿ ಅವರನ್ನು ಬೆದರಿಸಿದರು. ಆದರೂ, ಆ ದಿಟ್ಟ ಮಹಿಳೆಯರು ಬೆದರಿಕೆಯನ್ನು ಧಿಕ್ಕರಿಸಿ ಮತ ಚಲಾಯಿಸಿದರು. ಅವರನ್ನು ಮತ ಹಾಕದಂತೆ ಬೆದರಿಸಿದ ಇದು ನಾವು ವಾಸಿಸುತ್ತಿರುವ ಪ್ರಜಾಪ್ರಭುತ್ವವೆ?’’ ಎಂದು ಪ್ರಶ್ನಿಸಿದರು.
‘‘ನಿಜವಾದ ಪ್ರಜಾಪ್ರಭುತ್ವದಲ್ಲಿ ಜನರು ತಮ್ಮ ಇಷ್ಟದಂತೆ ಮತ ಚಲಾಯಿಸಿ ಪ್ರತಿನಿಧಿಯನ್ನು ಆರಿಸುತ್ತಾರೆ. ಆದರೆ ನಮ್ಮಲ್ಲಿ ಪ್ರಜಾಪ್ರಭುತ್ವದ ತತ್ವಗಳಿಗೆ ಹಿನ್ನಡೆಯಾಗುತ್ತಿದೆ. ಈ ವ್ಯವಸ್ಥೆ ಸರ್ವಾಧಿಕಾರದತ್ತ ವೇಗವಾಗಿ ಸಾಗುತ್ತಿದೆ. ಹಿಟ್ಲರ್ ಕೂಡ ದಬ್ಬಾಳಿಕೆ ನಡೆಸಲು, ಚುನಾಯಿತನಾದ ನಂತರ ಸಂವಿಧಾನ ತಿದ್ದುಪಡಿ ಮಾಡಿದ್ದ. ನಮ್ಮ ಸರಕಾರ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ’’ ಎಂದು ಅವರು ಹೇಳಿದರು.
ಸಾಮಾಜಿಕ ನ್ಯಾಯದ ವಿಚಾರವನ್ನು ಅಖಿಲೇಶ್ ವಿಸ್ತಾರವಾಗಿ ಪ್ರತಿಪಾದಿಸಿದರು.
ಜಾತಿ ಗಣತಿಯ ಬಗ್ಗೆ ಅವರು ಮಾತನಾಡಿದರು. ಸಾಮಾಜಿಕ ಅಂತರವನ್ನು ಕಡಿಮೆ ಮಾಡಲು ಮತ್ತು ಸಾಮಾಜಿಕ ನ್ಯಾಯವನ್ನು ಸಾಧಿಸಲು ಇದು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ. ‘‘ಜಾತಿ ಗಣತಿಯು ಜಾತಿ ವಿಭಜನೆ ಮಾಡುವುದಿಲ್ಲ, ಬದಲಾಗಿ ಅವುಗಳನ್ನು ಕಡಿಮೆ ಮಾಡುತ್ತದೆ. ಇದು ದೀರ್ಘಕಾಲದಿಂದ ವಂಚಿತರಾದವರಿಗೆ ಹಕ್ಕುಗಳು ಮತ್ತು ಸಮಾನತೆಯನ್ನು ಖಾತರಿಪಡಿಸುತ್ತದೆ’’ ಎಂದು ಅವರು ಹೇಳಿದ್ದಾರೆ.
‘‘ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿ ಅತ್ಯಂತ ಮಹತ್ವದ ಸಾಧನವಾಗಿದ್ದು, ಆದರೆ ಅದನ್ನು ಹೊರಗುತ್ತಿಗೆ ಮತ್ತು ಗುತ್ತಿಗೆ ಆಧಾರಿತ ಉದ್ಯೋಗಗಳ ಮೂಲಕ ದುರ್ಬಲಗೊಳಿಸಲಾಗಿದೆ’’ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಅಸಮಾನತೆಯನ್ನು ಬೆಳೆಸುವ ಮತ್ತು ತಳ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯುವಲ್ಲಿ ಮೋದಿ ನೇತೃತ್ವದ ಎನ್‌ಡಿಎ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ತಮ್ಮ ಭಾಷಣದಲ್ಲಿ ಭಯದ ಅಂತಿಮ ಪರಿಣಾಮ ಏನಾಗಬಹುದು ಎಂಬುದರ ಬಗ್ಗೆ ಹೇಳಿದ್ದಾರೆ. ಒಂದು ದಿನ ಅದು ಪ್ರತೀಕಾರದ ಹಂತ ಮುಟ್ಟಲಿದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.
‘‘ಭಾರತ ಸಾವಿರಾರು ವರ್ಷಗಳ ಸಂವಾದ ಮತ್ತು ಚರ್ಚೆಯ ಸಂಪ್ರದಾಯವನ್ನು ಹೊಂದಿರುವ ದೇಶವಾಗಿದೆ. ಚರ್ಚೆ ಮತ್ತು ಸಂವಾದಗಳು ನಮ್ಮ ಸಂಸ್ಕೃತಿಯಲ್ಲಿ ಆಳವಾದ ಬೇರುಗಳನ್ನು ಹೊಂದಿವೆ. ಇದು ವಿವಿಧ ಧರ್ಮಗಳು ಮತ್ತು ಸಮಾಜಗಳಲ್ಲಿಯೂ ಗೋಚರಿಸುತ್ತದೆ. ಈ ಸಂಪ್ರದಾಯದಿಂದ ಪ್ರೇರಿತರಾಗಿ, ಅಹಿಂಸೆ ಮತ್ತು ಸತ್ಯದ ಆಧಾರದ ಮೇಲೆ ನಮ್ಮ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಯಿತು. ಈ ಆಂದೋಲನವು ಪ್ರಜಾಸತ್ತಾತ್ಮಕವಾಗಿತ್ತು, ಇದರಲ್ಲಿ ಪ್ರತಿಯೊಂದು ವಿಭಾಗವೂ ಭಾಗವಹಿಸಿತು. ನಮ್ಮ ಸಂವಿಧಾನದ ರೂಪವನ್ನು ಪಡೆದ ಈ ಹೋರಾಟದಿಂದ ಸಾಮೂಹಿಕ ಧ್ವನಿ ಹೊರಹೊಮ್ಮಿತು. ಈ ಸಂವಿಧಾನವು ಕೇವಲ ದಾಖಲೆಯಲ್ಲ, ಇದು ನ್ಯಾಯ, ಅಭಿವ್ಯಕ್ತಿ ಮತ್ತು ಆಶಯಗಳ ದೀಪವಾಗಿದೆ. ಆದರೆ ಇಂದು ಚರ್ಚೆಯ ವಾತಾವರಣವೇ ಇಲ್ಲ, ಜನರು ಸತ್ಯ ಹೇಳಲು ಹೆದರುತ್ತಿದ್ದಾರೆ. ಅವರಿಗೆ ಬೆದರಿಕೆಗಳನ್ನು ಒಡ್ಡಲಾಗುತ್ತಿದೆ. ಪತ್ರಕರ್ತರು, ವಿಪಕ್ಷ ನಾಯಕರು, ವಿಶ್ವವಿದ್ಯಾಲಯದ ಅಧ್ಯಾಪಕರು, ಕಾರ್ಮಿಕ ಸಂಘಟನೆಯವರು ಯಾರೇ ಸತ್ಯ ಹೇಳಲು ಮುಂದಾಗದಂತೆ ಬಾಯಿ ಮುಚ್ಚಿಸಲಾಗುತ್ತಿದೆ’’ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.
ಎನ್‌ಡಿಎ ಸರಕಾರ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ಪ್ರಿಯಾಂಕಾ ಆರೋಪಿಸಿದರು.
ವಿರೋಧ ಪಕ್ಷದ ನಾಯಕರ ಧ್ವನಿಯನ್ನು ಹತ್ತಿಕ್ಕಲು ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ, ಈ ಅಧಿಕಾರ ದುರ್ಬಳಕೆ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ ಎಂದರು.
ಎನ್‌ಡಿಎ ಸರಕಾರ ತನ್ನ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಈ.ಡಿ. ಮತ್ತು ಸಿಬಿಐ ನಂತಹ ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ ಎಂದು ಪ್ರಿಯಾಂಕಾ ಹೇಳಿದರು.
‘‘ಮಹಿಳೆಯೊಬ್ಬರು ಪ್ರತಿಭಟನೆ ನಡೆಸುತ್ತಿದ್ದರೆ ಆಕೆಯ ಮೇಲೆಯೂ ದೇಶದ್ರೋಹ ಎಂದು ಮೊಕದ್ದಮೆ ದಾಖಲಿಸುವ ಸರಕಾರ ಇದು’’ ಎಂದು ಟೀಕಿಸಿದ್ದಾರೆ.
‘‘ಇಡೀ ದೇಶವನ್ನು ಭಯದಲ್ಲಿ ಕೆಡವಲಾಗಿದೆ. ಮಾಧ್ಯಮಗಳು ಸುಳ್ಳು ಕಥೆಗಳನ್ನೇ ಹೇಳುತ್ತವೆ, ಬಹುಶಃ ಅವು ಕೂಡ ಭಯದಲ್ಲೇ ಇವೆ. ಇಂತಹ ಭಯದ ವಾತಾವರಣ ಹಿಂದೆ ಈ ದೇಶದಲ್ಲಿ ಬ್ರಿಟಿಷರ ಆಡಳಿದಲ್ಲಿತ್ತು’’ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದವರ ನಡುವೆಯೇ, ಬ್ರಿಟಿಷರ ಜೊತೆ ಸೇರಿಕೊಂಡು ಜನರಿಗೆ ದ್ರೋಹ ಮಾಡಿದವರೂ ಇದ್ದರು. ಆದರೆ ಭಯದ ಒಂದು ಸ್ವರೂಪವಿದೆ. ಭಯಗೊಳಿಸುವವರು ತಾವೇ ಸ್ವತಃ ಭಯಕ್ಕೆ ಬಲಿಯಾಗುತ್ತಾರೆ. ಇದು ಪ್ರಕೃತಿಯ ನಿಯಮ. ಭಯ ಹರಡುತ್ತಿರುವವರು ಸ್ವತಃ ಭಯದಲ್ಲಿದ್ದಾರೆ. ಚರ್ಚೆ ಎಂದರೇ ಹೆದರುತ್ತಿದ್ದಾರೆ. ಆಲೋಚನೆ ಬಗ್ಗೆ ಭಯಗೊಳ್ಳುತ್ತಿದ್ದಾರೆ ಚರ್ಚೆಗೆ ದಿನವೆಲ್ಲಾ ನಾವು ಒತ್ತಾಯಿಸುತ್ತಿದ್ದರೆ, ಚರ್ಚೆ ಮಾಡುವ ಧೈರ್ಯವೇ ಇಲ್ಲ ಎಂದಿದ್ದಾರೆ ಪ್ರಿಯಾಂಕಾ ಗಾಂಧಿ.
ಸಂವಿಧಾನಕ್ಕೆ 75ರ ಸಂದರ್ಭದಲ್ಲಿನ ಇಂಥ ಅರ್ಥಪೂರ್ಣ ಮಾತುಗಳನ್ನು ಮನನ ಮಾಡಿಕೊಳ್ಳುವ ಮೂಲಕವಾದರೂ, ಚರ್ಚೆ, ಸಂವಾದ ಬಹಳ ದೊಡ್ಡ ಮೌಲ್ಯಗಳೆಂಬುದನ್ನು ತಿಳಿಯಬೇಕಾಗಿದೆ.