ಕರ್ನಾಟಕವನ್ನೇ ಪ್ರಯೋಗಶಾಲೆಯನ್ನಾಗಿಸಿಕೊಂಡ ಅರಸು

Update: 2015-10-17 07:32 GMT
ನಿರೂಪಣೆ: ಬಸು ಮೇಗಲ್ಕೇರಿ ಮುತ್ಸದ್ದಿ ಅರಸುಕರ್ನಾಟಕದ ಮಟ್ಟಿಗೆ ಭೂ ಮಾಲಕರೆಂದರೆ ಲಿಂಗಾಯತರು ಮತ್ತು ಒಕ್ಕಲಿಗರೇ. ರಾಜಕೀಯ ಅಕಾರವೂ ಅವರ ಕೈಯಲ್ಲಿ ಯೇ. ಇಂತಹ ಬಲಾಢ್ಯ ಮತ್ತು ಬಹುಸಂಖ್ಯಾತರ ಭೂಮಿಗೆ ಕೈ ಹಾಕುವುದೆಂದರೆ, ಸಿಎಂ ಸ್ಥಾನಕ್ಕೆ ಸಂಚಕಾರ ತಂದುಕೊಂಡಂತೆಯೇ ಸರಿ. ಆದರೆ ಮುಖ್ಯಮಂತ್ರಿ ದೇವರಾಜ ಅರಸು ಭೂ ಸುಧಾರಣಾ ಕಾಯ್ದೆಯಂತಹ ಸೂಕ್ಷ್ಮ ಸಂಗತಿಯನ್ನು ನಿಭಾಯಿಸಿದ ರೀತಿ ನಿಜಕ್ಕೂ ಮುತ್ಸದ್ದಿಗೆ ಮಾತ್ರ ಸಾಧ್ಯವಾಗುವಂಥದ್ದು. ಹಾಗೆ ನೋಡಿದರೆ, ಭೂ ಸುಧಾರಣೆ ಹೊಸದಲ್ಲ, 1962ರಲ್ಲಿ ಬಿ.ಡಿ. ಜತ್ತಿಯವರಿಂದ ಇದಕ್ಕೊಂದು ಮೂರ್ತರೂಪ ಸಿಕ್ಕಿತ್ತು. ಆ ನಂತರ ಅಲ್ಲಲ್ಲಿ ಸಣ್ಣಪುಟ್ಟ ಹೋರಾಟಗಳು, ಕಾಗೋಡು ಸತ್ಯಾಗ್ರಹ ಸದ್ದು ಮಾಡಿತ್ತು. ಕಡಿದಾಳ್ ಮಂಜಪ್ಪ, ಶಾಂತವೇರಿ ಗೋಪಾಲಗೌಡ, ಕಾಗೋಡು ತಿಮ್ಮಪ್ಪ, ಬಂಗಾರಪ್ಪ, ಗಣಪತಿಯಪ್ಪರಂತಹ ನಾಯಕರು ಗೇಣಿದಾರರ ಪರ ಹೋರಾಟ ದಾಖಲಾಗಿತ್ತು. ಹಳೆ ಮೈಸೂರು ಪ್ರಾಂತದಲ್ಲಿ ಉಳುವವನೇ ಹೊಲದೊಡೆಯನಾಗಬೇಕೆಂಬ ಕ್ರಾಂತಿಕಾರಿ ಹೋರಾಟ ನಡೆದಿತ್ತು. ಶಿವರಾಮ ಕಾರಂತರ ‘ಜೋಮನ ದುಡಿ’ ಎಂಬ ಮನೋಜ್ಞ ಕಾದಂಬರಿ ಕೂಡ ಭೂರಹಿತನ ಬರ್ಬರ ಬದುಕನ್ನು ಬಿಡಿಸಿಟ್ಟಿತ್ತು. ಇಂಥದ್ದೆ ಶಾಸನವನ್ನು ಜಾರಿಗೆ ತಂದ ದಕ್ಷಿಣ ಅಮೆರಿಕದಲ್ಲಿ ಸಾಲ್ವಡಾರ್ ಅಲಾಂಡೆಯವರನ್ನು ನಡುಬೀದಿಯಲ್ಲಿ ಕೊಲೆ ಮಾಡಲಾಗಿತ್ತು. ಹಾಗೆಯೇ ಶಿವಮೊಗ್ಗ ಜಿಲ್ಲೆಯಿಂದ ಸಂಸತ್ತಿಗೆ ಆಯ್ಕೆಯಾಗುತ್ತಿದ್ದ, ತಮ್ಮದೇ ಪಕ್ಷದ ಬಹುದೊಡ್ಡ ಜಮೀನ್ದಾರರಾದ ಕೆ.ಜಿ. ಒಡೆಯರ್‌ರಿಂದ ಎದುರಾಗಬಹುದಾದ ದ್ವೇಷದ ಅರಿವು ಅರಸು ಅವರಿಗಿತ್ತು. ಇದೆಲ್ಲವನ್ನು ಅವಲೋಕಿಸಿದ ಅರಸು ಭೂ ಸುಧಾರಣೆಯ ಶಾಸನ ರಚನೆ ಮಾಡುವ, ಜಾರಿಗೆ ತರುವ, ವಿಧಾನಸಭೆಯಲ್ಲಿ ಈ ಶಾಸನವನ್ನು ಮಂಡಿಸುವ ಮಹತ್ವದ ಜವಾಬ್ದಾರಿಯನ್ನು ಅಂದಿನ ಕಂದಾಯ ಸಚಿವ ಹುಚ್ಚಮಾಸ್ತಿಗೌಡರಿಗೆ ವಹಿಸಿಕೊಟ್ಟರು. ಭೂ ಸುಧಾರಣೆ ಖಾತೆ ಮಂತ್ರಿ ಸುಬ್ಬಯ್ಯ ಶೆಟ್ಟರನ್ನು ಜಂಟಿ ಸಮಿತಿಗೆ ನೇಮಕ ಮಾಡಿದರು. ಜೆ.ಎಚ್.ಪಟೇಲ್‌ರಂತಹ ಬಹುದೊಡ್ಡ ಜಮೀನ್ದಾರರು ಅರಸು ಬೆಂಬಲಕ್ಕಿದ್ದರು. ಅಲ್ಲಿಗೆ ಭೂ ಮಾಲಕರಾದ ಒಕ್ಕಲಿಗರು, ಕರಾವಳಿಯ ಬಂಟರು ಮತ್ತು ಲಿಂಗಾಯತರು ಅರಸು ಅವರ ಪರ ನಿಂತಂತಾಯಿತು. ಅದೆಲ್ಲಕ್ಕಿಂತ ಹೆಚ್ಚಾಗಿ ಬಹುಸಂಖ್ಯಾತ ಬಡವರು, ಭೂರಹಿತರು ಅರಸರ ಬೆನ್ನಿಗಿದ್ದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬಹುಮತ ಗೇಣಿದಾರರ ಪರವಾಗಿ, ಸೋಲು ಭೂ ಮಾಲಕರದ್ದಾಯಿತು. ಮತ್ತೊಂದು ಮುಖ್ಯವಾದ ಗಮನಿಸಲೇಬೇಕಾದ ಅಂಶವೆಂದರೆ, ಭೂ ಶಾಸನ ಮಸೂದೆಯನ್ನು ಬಹಳ ಪ್ರಮುಖವಾಗಿ ಕೋರ್ಟ್ ಗಳ ವ್ಯಾಪ್ತಿಯಿಂದ ಹೊರಗಿಟ್ಟು ಶಾಸನಸಭೆ ತೀರ್ಮಾನಿಸಿತ್ತು. ಕಾಯ್ದೆಯನ್ನು ಜಾರಿಗೆ ತರುವಾಗ ಹಿಂದುಳಿದ ವರ್ಗಗಳ ವರ್ಗೀಕರಣ, ಅರ್ಹರನ್ನು ಆಯ್ಕೆ ಮಾಡಲು ತಾಲೂಕು ಮಟ್ಟದಲ್ಲಿ ಭೂ ನ್ಯಾಯಮಂಡಳಿ ರಚಿಸಲಾಗಿತ್ತು. ಮಂಡಳಿಯಲ್ಲಿ ಸ್ಥಳೀಯ ಶಾಸಕರು, ಹಿಂದುಳಿದ ವರ್ಗದವರೊಬ್ಬರು, ಎಸ್ಸಿಎಸ್ಟಿ ವರ್ಗದವರೊಬ್ಬರು, ಗೇಣಿದಾರ ರೈತರೊಬ್ಬರು ಸದಸ್ಯರಾಗಿರಬೇಕೆಂದು ಕಡ್ಡಾಯ ಮಾಡಿದ್ದಲ್ಲದೇ, ಭೂಮಾಲಕ ಮೇಲಿನ ಕೋರ್ಟಿಗೆ ಹೋಗದಂತೆ ಭೂನ್ಯಾಯಮಂಡಳಿ ತೀರ್ಮಾನವೇ ಅಂತಿಮ ಎಂಬ ಆದೇಶವನ್ನು ಹೊರಡಿಸಿ, ಗೇಣಿದಾರರನ್ನು ರಕ್ಷಿಸುವ ಕೆಲಸವೂ ನಡೆದಿತ್ತು. ಇದರ ಲವಾಗಿ 7,80,000ಕ್ಕಿಂತ ಹೆಚ್ಚು ಬಡ ಗೇಣಿದಾರರು ಭೂ ಮಾಲಕರಾದರು. ಇದು ದೇಶದ ಯಾವ ರಾಜ್ಯದಲ್ಲೂ ಆಗದ, ಕರ್ನಾಟಕದಲ್ಲಿ ಮಾತ್ರ ಸಾಧ್ಯವಾದ ಕ್ರಾಂತಿಕಾರಕ ಕಾರ್ಯಕ್ರಮ.
ಇಲ್ಲೇ, ಅರಸು ಅವರ ಮುತ್ಸದ್ದಿತನಕ್ಕೆ ಮತ್ತೊಂದು ಉದಾಹರಣೆಯನ್ನೂ ಕೊಡಬಹುದು. ಅದು ಮೈಸೂರು ನಗರದ ಜನಕ್ಕೆ ವರುಣಾ ನಾಲೆಯಿಂದ ಕುಡಿಯುವ ನೀರು ನೀಡುವ ಯೋಜನೆಗೆ ಸಂಬಂಸಿದ್ದು. ವರುಣಾ ನಾಲೆಯಿಂದ ಮೈಸೂರಿಗೆ ನೀರು ಎನ್ನುತ್ತಿದ್ದಂತೆ ಮಂಡ್ಯದ ಜನ ಎದ್ದು ಕೂತರು. ಅರಸು ಅವರಿಗೆ ಕ್ಕಾರ ಎಂದರು. ಮಂಡ್ಯಕ್ಕೆ ಕಾಲಿಡಲಿ ಎಂದು ಧಮ್ಕಿ ಹಾಕಿದರು. ಇವರಿಗೆ ಬೆಂಬಲವಾಗಿ ದೇವೇಗೌಡರು ನಿಂತರು. ಅದು ಸರಕಾರದ ವಿರುದ್ಧ ಜನ ಬಂಡೇಳುವಂತಹ ಸೂಕ್ಷ್ಮ ವಿಚಾರವಾಗಿತ್ತು. ಆದರೆ ಅರಸು ಯಾವುದಕ್ಕೂ ಹೆದರಲಿಲ್ಲ. ಇಲ್ಲೂ ಸಮಸ್ಯೆಯನ್ನು ಬಹಳ ನಾಜೂಕಾಗಿ ನಿಭಾಯಿಸಿದರು. ವರುಣಾ ನಾಲೆಯ ಸಂಪೂರ್ಣ ಉಸ್ತುವಾರಿಯನ್ನು ನನಗೆ ವಹಿಸಿದರು. ಅಷ್ಟೇ ಅಲ್ಲ, 15 ಕೋಟಿ ರೂ.ಗಳನ್ನು ಕೊಟ್ಟು ಮೊದಲ ವರ್ಷದ ಕಾಮಗಾರಿ ಪ್ರಾರಂಭಿಸಲು ಆದೇಶಿಸಿದರು. ನಾನು ಇದನ್ನು ಸವಾಲಾಗಿ ಸ್ವೀಕರಿಸಿದೆ. ನನ್ನ ಹೆಸರಿನಲ್ಲಿ ಜಾತಿಯೂ ಇರುವುದರಿಂದ, ಮಂಡ್ಯದ ಬಹುಸಂಖ್ಯಾತ ಸಮುದಾಯವೂ ಒಕ್ಕಲಿಗರೇ ಆಗಿದ್ದು, ನಿಭಾಯಿಸುವುದು ಕೊಂಚ ಕಷ್ಟವಾದರೂ ಅಂತಿಮವಾಗಿ ಗೆಲುವು ನಮ್ಮದೇ ಆಗಿತ್ತು. ಭೂ ಸುಧಾರಣೆ ಮತ್ತು ವರುಣಾ- ಇವೆರಡೂ ತೀರ್ಮಾ ನಗಳಲ್ಲಿ ಬಹಳ ಮುಖ್ಯವಾದದ್ದು ಜನಹಿತ. ಅರಸು ಒಲವು-ನಿಲುವು ಜನಪರವಾಗಿತ್ತು. ಅವರ ನಡೆ-ನುಡಿ ಪ್ರಾಮಾಣಿಕತೆಯಿಂದ ಕೂಡಿತ್ತು. ವಿರೋಧ ಮಾಡುವವರು ಎಷ್ಟೇ ಪ್ರಬಲರಾದರೂ ಅಂತಿಮವಾಗಿ ಬಹುಸಂಖ್ಯಾತರ ಹಿತ ಮುಖ್ಯವಾಗಿ, ಗೆಲುವು ಅವರದ್ದಾಗುತ್ತಿತ್ತು. ಅದು ಸಹಜವಾಗಿಯೇ ಅರಸು ಖಾತೆಗೆ ಜಮಾ ಆಗುತ್ತಿತ್ತು.
ಇನ್ನೊಂದು ಕ್ರಾಂತಿಕಾರಕ ಹೆಜ್ಜೆ...
ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದ್ದು ಅರಸು ಅವರ ಪ್ರಯೋಗಶೀಲತೆಗೆ ಮತ್ತೊಂದು ಸಾಕ್ಷಿ. 1880ರಲ್ಲಿ ಆಗಿನ ಮೈಸೂರು ಅರಸರು ಹಿಂದುಳಿದ ವರ್ಗಗಳನ್ನು ಗುರುತಿಸುವುದಕ್ಕಾಗಿ ಮಿಲ್ಲರ್ ಕಮಿಷನ್ ನೇಮಕ ಮಾಡಿದ್ದರು. ಈ ವರದಿಯ ಪ್ರಕಾರ ಶೇ. 98ರಷ್ಟು ಸಣ್ಣಪುಟ್ಟ ಜಾತಿಗಳ ಜನ ಸರಕಾರಿ ಕೆಲಸಗಳಿಂದ ವಂಚಿತರಾಗಿರುವುದು ಬೆಳಕಿಗೆ ಬಂತು. 1920-21ರ ಸುಮಾರಿಗೆ ಶೇ. 75ರಷ್ಟು ಬ್ರಾಹ್ಮಣೇತರರಿಗೆ ಮೀಸಲಾತಿ ಕಲ್ಪಿಸಲಾಗಿತ್ತು. ಆ ನಂತರ 1968ರಲ್ಲಿ ನಾಗನಗೌಡ ಕಮಿಷನ್ ವರದಿಯೂ ಇತ್ತು. ಮುಂದೆ ಅದೇ ಹಿಂದುಳಿದವರ ಮೀಸಲಾತಿ ಆಗಿ ಪರಿವರ್ತನೆ ಆಯಿತು. ಭೂ ಸುಧಾರಣೆ ಮತ್ತು ಮೀಸಲಾತಿಗಳ ಬಗ್ಗೆ ಸಂಪೂರ್ಣ ಪರಿಚಯ ಅರಸು ಅವರಿಗಿತ್ತು. 1972ರ ಚುನಾವಣೆ, ಬಹುಮತ, ಸಿಎಂ ಆಗಿ ಅರಸು ಅಕಾರಕ್ಕೆ ಏರಿದ್ದು ಎಲ್ಲವೂ ಈ ಕಾರ್ಯಕ್ರಮಗಳನ್ನು ಜಾರಿಗೊಳಿಸಲೆಂದೇ ಸಿದ್ಧಗೊಳಿಸಿದ ಶಾಸನ ಸಭೆ ಅದಾಗಿತ್ತು. ಹಾವನೂರು ಕಮಿಷನ್ ನೇಮಕ ಮಾಡಲಿಕ್ಕೆ ಇದು ಹಿನ್ನೆಲೆ. ಹಾವನೂರು ಕೂಡ ಇಡೀ ಕರ್ನಾಟಕ ಸುತ್ತಾಡಿ ವೈಜ್ಞಾನಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಿದ್ದರು. ಈ ವರದಿಯಲ್ಲಿ, ಕರ್ನಾಟಕದಲ್ಲಿ ಶೇ. 52ರಷ್ಟು ಹಿಂದುಳಿದ ವರ್ಗದವರಿದ್ದಾರೆ, ಅವರಿಗೆ ಸರಕಾರಿ ನೌಕರಿಯಲ್ಲಿ ಆದ್ಯತೆ ಸಿಕ್ಕಿಲ್ಲ, ಅದಕ್ಕಾಗಿ ಮೀಸಲಾತಿಯನ್ನು ಶೇ. 50ರಷ್ಟು ಕೊಡಬೇಕೆಂದು ಶಿಾರಸು ಮಾಡಲಾಗಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯ ಮೀಸಲಾತಿಗೆ ಸಂಬಂಸಿದಂತೆ ಶೇ. 50ಕ್ಕಿಂತ ಹೆಚ್ಚು ಮೀಸಲಾತಿ ಇರಬಾರದು ಎಂದು ತೀರ್ಪಿತ್ತ ಕಾರಣ, ಕರ್ನಾಟಕದಲ್ಲಿ ಶೇ. 27ರಷ್ಟು ಮೀಸಲಾತಿ ಜಾರಿಗೆ ಬಂತು. ಇದಲ್ಲದೆ ಆರ್ಥಿಕವಾಗಿ ಹಿಂದುಳಿದವರನ್ನು ಕೂಡ ಮುಂದುವರಿದ ಜನಾಂಗಗಳಿಂದ ಬೇರ್ಪಡಿಸಿ, ಅವರಿಗೂ ಕೂಡ ಈ ಮೀಸಲಾತಿಯ ಪಾಲು ಸಿಗುವಂತೆ ನೋಡಿಕೊಳ್ಳಲಾಯಿತು. ಭಾರತದಲ್ಲಿ ಅನೇಕ ಹಿಂದುಳಿದ ವರ್ಗಗಳ ಆಯೋಗಗಳು ಕೆಲಸ ಮಾಡಿದ್ದವು. ಆದರೆ ಅವು ಮೀಸಲಾತಿಯಾಗಿ ಪರಿವರ್ತಿಸುವ ಶಾಸನಗಳಾಗಿರಲಿಲ್ಲ. ಅದನ್ನು ಮೊದಲು ಮಾಡಿದ ರಾಜ್ಯ ಕರ್ನಾಟಕ. ಅದಕ್ಕೆ ಕಾರಣ ಅರಸು ಅವರ ರಾಜಕೀಯ ಇಚ್ಛಾಶಕ್ತಿ. ತಳಸಮುದಾಯದಿಂದ ಬಂದ ಹಾವನೂರು ಅವರನ್ನು ಗುರುತಿಸಿದ್ದು, ಸಮೀಕ್ಷೆ ಮಾಡಲು ನೇಮಕ ಮಾಡಿದ್ದು, ಅವರು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಹಿಂದುಳಿದ ವರ್ಗಗಳನ್ನು ಗುರುತಿಸಿದ್ದು, ಅದಕ್ಕೆ ಒತ್ತಾಸೆಯಾಗಿ ಅರಸು ನಿಂತಿದ್ದು-ಎಲ್ಲವೂ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ್ದು. ಕರ್ನಾಟಕವನ್ನೇ ಪ್ರಯೋಗಶಾಲೆಯನ್ನಾಗಿಸಿಕೊಂಡಿದ್ದಕ್ಕೆ ಇನ್ನಷ್ಟು ಹೇಳುವುದಾದರೆ, ಒಕ್ಕಲಿಗ ಸಮುದಾಯದ ಕಡಿದಾಳ್ ದಿವಾಕರ್, ಕ್ರಿಶ್ಚಿಯನ್ ಸಮುದಾಯದ ಈವಾ ವಾಜ್, ಬ್ಯಾರಿ ಸಮುದಾಯದ ಬಿ.ಎ. ಮೊಹಿದಿನ್, ಕಡೂರಿನ ಹೊನ್ನಪ್ಪ, ಬ್ರಾಹ್ಮಣ ಸಮುದಾಯದ ರಮೇಶ್‌ಕುಮಾರ್, ನಾಯ್ಡು ಸಮುದಾಯದ ರಘುಪತಿ, ಕೊಡವರ ಎಂ.ಸಿ. ನಾಣಯ್ಯ, ದೇವಾಡಿಗರ ವೀರಪ್ಪ ಮೊಯ್ಲಿ ಹೀಗೆ ಹೇಳ್ತಾ ಹೋಗಬಹುದು. ಹಾಗೆಯೇ, 1972ರಲ್ಲಿ ಕರ್ನಾಟಕ ಅಂತ ನಾಮಕರಣ ಮಾಡಿದ್ದು, ಆಡಳಿತದಲ್ಲಿ ಕನ್ನಡ ಜಾರಿಗೆ ತಂದದ್ದು, ಮಲ ಹೊರುವ ಪದ್ಧತಿಯನ್ನು ನಿಷೇಸಿದ್ದು, ಜೀತವಿಮುಕ್ತಿ ಶಾಸನಗಳನ್ನು ಹೆಸರಿಸಬಹುದು. ಅರಸು ಅಂತಃಕರಣ
ಬಡವರನ್ನು ರೈತರನ್ನು ಬಡ್ಡಿ ನೆಪದಲ್ಲಿ ಶೋಷಿಸುತ್ತಿದ್ದುದೇ ಆತ್ಮಹತ್ಯೆಗೆ ಕಾರಣ ಎಂದು ಅರಿತ ಅರಸು, ಬಡ್ಡಿಗೆ ಸಾಲ ಕೊಟ್ಟವರಿಗೆ ವಾಪಸ್ ಮಾಡಬೇಕಿಲ್ಲ ಎಂದು ಋಣಮುಕ್ತ ಕಾಯ್ದೆ ಜಾರಿಗೊಳಿಸಿದರು. ಲಕ್ಷಾಂತರ ಮಂದಿ ಸಾಲದ ದವಡೆಯಿಂದ ಪಾರಾಗಿದ್ದರು. ಹಾಗೆಯೇ ಭೂ ಸುಧಾರಣೆಯ ನಂತರ, ಮೇಲ್ವರ್ಗದ ಶಾನುಭೋಗರು, ಪಟೇಲರು ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿದ್ದರು. ಅದೇ ಸಂದರ್ಭದಲ್ಲಿ ಕೊಪ್ಪದಲ್ಲಿ ನಡೆದ ಸಮಾವೇಶಕ್ಕೆ ಇಸಿ ಬಟ್ಟೆ, ಕೋಟು, ಕಚ್ಚೆಪಂಚೆ, ಟೋಪಿ ಹಾಕಿಕೊಂಡು ಐದು ಸಾವಿರ ಮಂದಿ ಪಾಲ್ಗೊಂಡಿದ್ದರು. ನೀಟಾಗಿದ್ದ ಕೋಟು ಅಲ್ಲಲ್ಲಿ ಹರಿದಿದ್ದರಿಂದ ತೇಪೆ ಹಚ್ಚಿಕೊಂಡಿದ್ದರು. ಹರಿದಿದ್ದರೂ ಅದನ್ನು ಬದಲಿಸಲಾಗದ ಬಡತನ ಕಂಡ ಅರಸು ಅವರು, ಸಚಿವ ಸಂಪುಟದಲ್ಲಿನ ವಿರೋಧ ಲೆಕ್ಕಿಸದೇ ಶಾನುಭೋಗ, ಪಟೇಲರಿಗೆ ಮಾಸಾಶನ ನೀಡುವ ನಿರ್ಣಯ ಕೈಗೊಂಡರು. ಬಡತನದ ಸೂಕ್ಷ್ಮತೆಯನ್ನು ಅರಸು ಅರಿತ್ತಿದ್ದುದು ಈ ರೀತಿಯಾಗಿತ್ತು.
ಸೆಟೆದು ನಿಂತರು, ಸೋತರು, ರಾಜೀನಾಮೆ ಕೊಟ್ಟರು
ರಾಜ್ಯದಲ್ಲಿ ಪ್ರಬಲವಾಗಿದ್ದ ಕಾಂಗ್ರೆಸ್ 1978 ರ ನಂತರ, 2ನೆ ಬಾರಿಗೆ ವಿಭಜನೆಯಾದ ಮೇಲೆ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಾ ಸಾಗಿತು. ಹಾಗೆಯೇ ಅರಸು ಅವರ ಜನಪ್ರಿಯತೆಯ ಗ್ರ್ಾ ಕೂಡ. ಇದು ನಿಚ್ಚಳವಾಗಿ ಕಂಡಿದ್ದು 1980ರಲ್ಲಿ ಲೋಕಸಭಾ ಚುನಾವಣೆ ಮತ್ತದರ ಲಿತಾಂಶದಿಂದ. ಇಂದಿರಾ ಗಾಂಯವರಿಗೆ ಸಡ್ಡು ಹೊಡೆದ ಅರಸು ತಮ್ಮದೇ ಒಂದು ಪಕ್ಷ ಕಟ್ಟಿದರು. ಆಶ್ಚರ್ಯವೆಂದರೆ, ಇಡೀ ಮಂತ್ರಿಮಂಡಲ ಅರಸು ಬೆಂಬಲಿಸಿತು. ಆ ಧೈರ್ಯದ ಮೇಲೆ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ದುರದೃಷ್ಟಕರ ಸಂಗತಿ ಎಂದರೆ, ಅರಸು ಪಕ್ಷದ ಅಷ್ಟೂ ಅಭ್ಯರ್ಥಿಗಳು ಸೋತರು. ಅಷ್ಟೇ ಅಲ್ಲ, 24 ಅಭ್ಯರ್ಥಿಗಳ ಠೇವಣಿ ಜಪ್ತ್ತಿಯಾಗಿತ್ತು. ತಮಾಷೆ ಏನೆಂದರೆ, ಲೋಕಸಭೆ ಚುನಾವಣೆ ಲಿತಾಂಶದ ಹಿಂದಿನ ದಿನ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಸಂಪುಟ ಸದಸ್ಯರೆಲ್ಲರೂ ನಿಷ್ಠೆ ತೋರಿ, ಬಾವಿಗೆ ಬೀಳು ಅಂದರೆ ಬೀಳಲೂ ಸಿದ್ಧ ಎಂದಿದ್ದರು. ಮಾರನೆ ದಿನ ಲಿತಾಂಶ ಬಂದಾಗ, ಅರಸು ಕಾಂಗ್ರೆಸ್‌ನಿಂದ ಸ್ಪರ್ಸಿದ್ದ ಅಭ್ಯರ್ಥಿಗಳು ಸೋತಾಗ, ಬಾವಿಗೆ ಬೀಳ್ತೀವಿ ಎಂದವರು ನಾಪತ್ತೆಯಾಗಿದ್ದರು. ಅರಸು ಅವರ ಹಿಂದೆ ಮುಂದೆ ಸುಳಿದಾಡುತ್ತಿದ್ದ ವರು ಇಂದಿರಾ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರು. ನಮ್ಮ ಜೊತೆಗಿದ್ದವರೇ ಪಕ್ಷಾಂತರ ಮಾಡಿದಾಗ, ಪರಿಸ್ಥಿತಿಯ ಸೂಕ್ಷ್ಮತೆ ಅರಿತ ನಾನು, ಕೆ.ಎಚ್. ಶ್ರೀನಿವಾಸ್, ಸುಬ್ಬಯ್ಯಶೆಟ್ಟಿ, ಮೊಹಿದಿನ್ ಅಥವಾ ಹಾವನೂರು ಹೀಗೆ ನಾಲ್ಕೆದು ಮಂದಿ ಅರಸು ಮನೆಗೆ ಹೋದೆವು. ಮುಂದೇನು ಎಂದಾಗ, ‘ರಾಜಭವನಕ್ಕೆ ಹೋಗೋಣ’ ಎಂದರು. ನಾವು ಡ್ರೈವರ್-ಕಾರ್ ಎಂದು ಹುಡುಕುತ್ತಿದ್ದಾಗ ಅರಸು, ‘ಸಿಎಂ, ಕಾರು ಎಲ್ಲಾ ಮುಗೀತು, ನಿಮ್ಮ ಕಾರಲ್ಲಿಯೇ ಹೋಗೋಣ’ ಎಂದರು. ನಂದೇ ಕಾರು, ನಾನೇ ಡ್ರೈವರ್, ಅರಸು ಮುಂಭಾಗದಲ್ಲಿದ್ದರು. ಹಿಂದೆ ಕೆ.ಎಚ್. ಶ್ರೀನಿವಾಸ್, ಸುಬ್ಬಯ್ಯಶೆಟ್ಟಿ, ಹಾವನೂರು ಇದ್ದರು. ರಾಜಭವನಕ್ಕೆ ಹೋಗಿ, ‘ಸಿಎಂ ಬಂದಿದ್ದಾರೆ ಎಂದು ತಿಳಿಸಪ್ಪಾ’ಎಂದಾಗ, ‘ದೇವರಾಜ ಅರಸು ಎಂದು ಹೇಳಪ್ಪಾ’ ಎಂದರು ಅರಸು. ನಿಂತ ನಿಲುವಿನಲ್ಲಿಯೇ ಮುಖ್ಯಮಂತ್ರಿ ಹುದ್ದೆಯನ್ನು ನಿರಾಕರಿಸುವಷ್ಟು ದೊಡ್ಡತನ ಅವರಲ್ಲಿತ್ತು. ಅದನ್ನು ಹಾಗೆಯೇ ರಾಜ್ಯಪಾಲರ ಮುಂದೆಯೂ ಹೇಳಿದರು. ‘ಅಸೆಂಬ್ಲಿಯಲ್ಲಿ ಸೋತಿಲ್ಲ, ರಾಜೀನಾಮೆ ಏಕೆ’ ಎಂದು ರಾಜ್ಯಪಾಲರು ಕೇಳಿದಾಗ, ‘ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುವೆ’ ಎಂದರು. ಆಡಿದ ಮಾತಿಗೆ ತಪ್ಪದ ಅರಸು ಯಾರನ್ನೂ ಕೇಳದೆ, ಮಂತ್ರಿಮಂಡಲದ ಸಭೆಯನ್ನೂ ಕರೆಯದೆ, ಸೋಲನ್ನು ಒಪ್ಪಿಕೊಂಡು ರಾಜೀನಾಮೆ ಕೊಟ್ಟು ತಣ್ಣಗೆ ಮನೆಗೆ ಬಂದರು. ಅದೇ ಅರಸು.
ಅತಿಯಾದ ಅಪಪ್ರಚಾರ
ದೇವರಾಜ ಅರಸು ಅವರ ಕಾರ್ಯಕ್ರಮಗಳು, ಆಡಳಿತಾತ್ಮಕ ನಿಲುವುಗಳು ಮತ್ತು ಅದರಿಂದಾದ ಸಾಮಾಜಿಕ ಬದಲಾವಣೆಗಳ ಬಗ್ಗೆ ನಾನು ಎಷ್ಟೇ ಒಳ್ಳೆಯ ಮಾತುಗಳನ್ನು ಆಡಬಹುದಾದರೂ, ಅವರ ಆಡಳಿತಾವಯಲ್ಲಿ ಭ್ರಷ್ಟಾಚಾರ ಮಿತಿ ಮೀರಿತ್ತು ಎನ್ನುವವರಿದ್ದಾರೆ. ಅದು ಅಷ್ಟು ಸರಿ ಅಲ್ಲ. ಅವರನ್ನು ಹತ್ತಿರದಿಂದ ಬಲ್ಲ ನಾನೂ ಕೂಡ ಕಂಡಿದ್ದನ್ನು ಹೇಳದಿದ್ದರೆ ತಪ್ಪಾಗುತ್ತದೆ. ಭ್ರಷ್ಟಾಚಾರದ ಬಗ್ಗೆ ನಾನು ಅವರ ಮೇಲೆ ಸಿಟ್ಟಾಗಿದ್ದೆ, ಅವರನ್ನೇ ನೇರವಾಗಿ ‘ಏನು ಇದೆಲ್ಲ’ ಎಂದು ಪ್ರಶ್ನೆ ಮಾಡಿದ್ದೆ. ಅದಕ್ಕವರು ಸಿಟ್ಟಾಗಲಿಲ್ಲ. ‘ಬಲಗೈನಲ್ಲಿ ತೆಗೆದುಕೊಂಡು ಎಡಗೈನಲ್ಲಿ ಬಿಸಾಡಿದ್ದೇನೆ. ಆ ಹಣದಲ್ಲಿ ಒಂದು ಲೋಟ ಕಾಫಿ ಕೂಡ ಕುಡಿದಿಲ್ಲ’ ಎಂದು ಖಡಕ್ಕಾಗಿ ಹೇಳಿದ್ದರು. ಇದಕ್ಕೆ ನನ್ನ ಅನುಭವಕ್ಕೆ ಬಂದ ಒಂದು ಉದಾಹರಣೆ ಕೊಡುತ್ತೇನೆ. ಒಮ್ಮೆ ಭದ್ರಾವತಿಯ ಸಿ.ಎಂ. ಇಬ್ರಾಹೀಂ ಬಾಲಬ್ರೂಯಿಯ ಹೊರಗೆ ಕಾಯುತ್ತಾ ಕೂತಿದ್ದರು. ನಾನು ಅರಸು ಅವರ ಆಪ್ತ ಒಡನಾಡಿ, ಅವರ ರೂಮಿಗೆ, ಮನೆಯೊಳಗೆ ಓಡಾಡುವಷ್ಟು ಸ್ವಾತಂತ್ರವಿತ್ತು. ಆದರೆ ಅದೇ ಸ್ವಾತಂತ್ರ ಇಬ್ರಾಹೀಂಗಿರಲಿಲ್ಲ. ಹಾಗಾಗಿ ಆತ ಹೊರಗೆ ಕೂತಿದ್ದ. ನಾನು ಹೋಗಿ ಅರಸು ಅವರಿಗೆ, ‘ಇಬ್ರಾಹೀಂ ಬಂದಿದ್ದಾನೆ, ಹೊರಗೆ ಕೂತಿದ್ದಾನೆ, ಕರೆದು ಮಾತನಾಡಿಸಬಾರದೆ?’ ಎಂದೆ. ಯಾರ್ಯಾರು ಏನೇನಕ್ಕೆ ಬರ್ತಾರೆ ಎನ್ನುವುದು ಅರಸು ಅವರಿಗೆ ತುಂಬಾ ಚೆನ್ನಾಗಿ ಗೊತ್ತಿತ್ತು. ಅದಕ್ಕೆ ಅರಸು, ‘ಇನ್ನೇನಕ್ಕೆ ಬರ್ತಾರೆ...’ ಎಂದಷ್ಟೇ ಹೇಳಿ, ಆಗಿನ ಲಿಕ್ಕರ್ ಧಣಿ ಬಸವರಾಜು ಅವರಿಗೆ ೆನ್ ಮಾಡಿದರು. ೆನ್ ಮಾಡಿ 15 ನಿಮಿಷವಾಗಿಲ್ಲ, ಬಸವರಾಜು ಸೂಟ್‌ಕೇಸ್ ಸಮೇತ ಬಂದರು, ಇಟ್ಟು ಹೊರಟುಹೋದರು. ಬಸವರಾಜು ಅರಸು ಅವರ ಖಜಾಂಚಿಯಂತಿದ್ದರು. ೆನ್ ಎಂದಾಕ್ಷಣ ಅರ್ಥವಾಗುತ್ತಿತ್ತು. ತಂದಿಟ್ಟು ಹೋಗುತ್ತಿದ್ದರು. ಅರಸು ಅವರು, ‘ಕರೀರ್ರೀ... ಅವರನ್ನ’ ಎಂದು ಲಿಕ್ಕರ್ ಬಸವರಾಜು ಕೊಟ್ಟ ಸೂಟ್‌ಕೇಸನ್ನು ಆತನಿಗೆ ಕೊಟ್ಟರು. ನನಗೆ ಆಶ್ಚರ್ಯವಾಗಿದ್ದು, ಆ ಸೂಟ್‌ಕೇಸ್‌ನಲ್ಲಿ ಏನಿದೆ, ಎಷ್ಟಿದೆ ಎಂದು ಸಣ್ಣ ಕುತೂಹಲಕ್ಕಾದರೂ ನೋಡಲಿಲ್ಲ. ಮನುಷ್ಯರು ಹೇಗಿರುತ್ತಾರೆಂದರೆ, ಅವತ್ತು ಹಣಕ್ಕಾಗಿ ಕಾದಿದ್ದು ಸೂಟ್‌ಕೇಸ್ ತೆಗೆದುಕೊಂಡ ಹೋದ ಮನುಷ್ಯ, ಮುಂದೊಂದು ದಿನ ಪವಿತ್ರವಾದ ಶಾಸನ ಸಭೆಯಲ್ಲಿ ನಿಂತು, ‘ಅವರು ಆಟೊದಲ್ಲಿ ಹೋಗುತ್ತಿದ್ದುದು ಎಲ್ಲಿಗೆ, ಸ್ವಲ್ಪ ಾಲೋ ಮಾಡಿದ್ರೆ ಅವರ ಬಂಡವಾಳ ಬಯಲಾಗ್ತಿತ್ತು...’ ಎಂದು ವ್ಯಂಗ್ಯಮಿಶ್ರಿತ ಧಾಟಿಯಲ್ಲಿ ಅರಸು ಅವರ ಚಾರಿತ್ರವಧೆ ಮಾಡಲು ಹವಣಿಸಿದ್ದರು. ಇಂಥವರೆಲ್ಲ ಈಗ ಕಾಂಗ್ರೆಸ್‌ನ ಅಗ್ರಗಣ್ಯ ನಾಯಕರು!
ಇನ್ನು ಕಾಂಗ್ರೆಸ್ ವಿಭಜನೆಯ ನಂತರ, ಕೇಂದ್ರದಲ್ಲಿ ಜನತಾ ಸರಕಾರವಿದ್ದಾಗ, ಅರಸು ಅವರಿಗೆ ಮುಜುಗರವನ್ನುಂಟುಮಾಡಲು ಅವರ ಭ್ರಷ್ಟಾಚಾರಗಳನ್ನು ತನಿಖೆ ಮಾಡಲು ಗ್ರೋವರ್ ಕಮಿಷನ್; ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಡೆದ ಹಿಂಸಾಚಾರದ ತನಿಖೆಗೆ ಷಾ ಕಮಿಷನ್ ನೇಮಕ ಮಾಡಲಾಯಿತು. ಸಾಕಷ್ಟು ಜಾಲಾಡಿದ ನಂತರ ಕೊನೆಗೆ ಈ ಎರಡೂ ಕಮಿಷನ್‌ಗಳು ಅರಸು ಅವರ ಮೇಲಿದ್ದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ವರದಿ ನೀಡಲಾಯಿತು. ಕಣ್ಣೀರಿಟ್ಟರು ಕಣ್ಮರೆಯಾದರು
ಮೇ 18, 1982 ರ ಬೆಳಗ್ಗೆ ದೇವರಾಜ ಅರಸು ಅವರು ೆನ್ ಮಾಡಿ ‘ಮಾತನಾಡಬೇಕು ಬಂದ್ಹೋಗಿ’ ಎಂದರು. ನನಗೆ ಅವತ್ತು ಕೋಲಾರಕ್ಕೆ ಹೋಗುವುದಿತ್ತು. ಅರಸು ಅವರನ್ನು ಕಾಣಲು ಅವರ ಮನೆಗೆ ಹೋದೆ. ಕೆಂಪರಾಜ್ ಅರಸು ಬಿಟ್ಟರೆ ಇನ್ನೊಬ್ಬರಿರಲಿಲ್ಲ. ಒಬ್ಬ ಜನಪ್ರಿಯ ಜನನಾಯಕ ಒಂಟಿಯಾಗಿ ಬದುಕುವುದು ಜೀವಂತ ನರಕ ಎನ್ನಿಸಿತು. ನಾನು ಹೋಗಿ ಅವರಿಗೆ ನಮಸ್ಕರಿಸುತ್ತಿದ್ದಂತೆ ಮಗನನ್ನು ಕಳೆದುಕೊಂಡ ತಂದೆಯಂತೆ ಗಳಗಳನೆ ಅತ್ತುಬಿಟ್ಟರು. ಮಡುಗಟ್ಟಿದ ವೇದನೆ ಕರಗಿ ಕಣ್ಣೀರಿನ ಮೂಲಕ ಹೊರಬಂದಿತ್ತು. ನನಗೆ ನಿಂತ ನೆಲವೇ ಕುಸಿದಂತಾಗಿ, ನಾನು ಕೋಲಾರಕ್ಕೆ ಹೋಗಿ ಬರುತ್ತೇನೆ, ಸಂಜೆ ನಮ್ಮ ಸಮಾನ ಮನಸ್ಕರ ಸಭೆ ಇದೆ, ಆ ಸಭೆಯ ನಂತರ ಬಂದು ನಿಮ್ಮನ್ನು ಕಾಣುತ್ತೇನೆ, ನಮ್ಮದೇನಿದ್ದರೂ ತಾತ್ವಿಕ ಭಿನ್ನಾಭಿಪ್ರಾಯ, ಪರಿಹರಿಸಿಕೊಳ್ಳೋಣ ಎಂದೆಲ್ಲ ಹೇಳಿ ಬಿಟ್ಟುಹೋಗದ ಮನಸ್ಸಿನಲ್ಲಿ ಹೋದೆ. ಹೋಗಿ ಕೆಲವೇ ಹೊತ್ತಿನಲ್ಲಿ ಸುದ್ದಿ ಬಂತು- ಅರಸು ಇನ್ನಿಲ್ಲ ಎಂದು. ನನ್ನ ಪಾಲಿಗೆ ಆ ದಿನ, ಆ ಕೊನೆಯ ಭೇಟಿ, ಒಬ್ಬರೆ ಕೂತಿದ್ದು, ಗಳಗಳನೆ ಅತ್ತಿದ್ದು ನಾನಿರುವವರೆಗೂ ನನ್ನ ಮನಸ್ಸಿನ ಮೂಲೆಯಲ್ಲಿ ಕೊರೆಯುತ್ತಿರುತ್ತದೆ. ಹಾಗೆಯೇ ಮರೆಯಲಾರದ ಕ್ಷಣವಾಗಿ ನೆನಪಿನಲ್ಲಿ ಉಳಿದಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News