ಕುರಿ ಚರ್ಮ ಹೊದೆಯುವ ಸರ್ವಾಧಿಕಾರದ ತೋಳ

Update: 2015-11-30 10:33 GMT

ಕ್ರೌರ್ಯ ಮತ್ತು ಹಿಂಸಾಚಾರದಿಂದ ತುಂಬಿದ್ದ ರಕ್ತಸಿಕ್ತ ರಾಜಪ್ರಭುತ್ವಗಳು ಬಹುತೇಕ ಇತಿಹಾಸದ ಮರೆಗೆ ಸರಿದಿವೆ. ಹಲವಾರು ದೇಶಗಳಲ್ಲಿ ಅವು ಉಳಿದುಕೊಂಡಿವೆಯಾದರೂ, ಕೆಲವು ಕಡೆಗಳಲ್ಲಿ ಅವು ಕೇವಲ ಸಾಂಕೇತಿಕವಾಗಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಜನರಿಂದ ಆಯ್ಕೆಯಾದ ಮಂತ್ರಿಮಂಡಲಗಳಿಗೂ ಅವಕಾಶವಿದೆ. ಕೆಲವೇ ಕೆಲವು ದೇಶಗಳಲ್ಲಿ ಏಕವ್ಯಕ್ತಿ ಸರ್ವಾಧಿಕಾರ ಉಳಿದುಕೊಂಡಿದೆ.

ನರಮೇಧಗಳಿಂದ ಕುಖ್ಯಾತರಾದ 20ನೆ ಶತಮಾನದ ಸರ್ವಾಧಿಕಾರಿಗಳ ಪೈಕಿ ಜರ್ಮನಿಯ ಅಡಾಲ್ಫ್ ಹಿಟ್ಲರ್, ಇಟಲಿಯ ಬೆನಿಟೋ ಮುಸ್ಸೋಲಿನಿ, ಸೋವಿಯತ್ ಒಕ್ಕೂಟದ ಜೋಸೆಪ್ ಸ್ಟಾಲಿನ್, ಉತ್ತರ ಕೊರಿಯಾದ ಕಿಮ್ ಇಲ್ ಸಂಗ್, ಕಾಂಬೋಡಿಯಾದ ಪಾಲ್‌ಪಾಟ್, ಯುಗಾಂಡದ ಇದಿ ಅಮೀನ್, ಚಿಲಿಯ ಅಗಸ್ಟೋ ಪಿನೋಷೆ, ಫಿಲಿಪೈನ್ಸ್‌ನ ಪರ್ಡಿನಂಡ್ ಮಾರ್ಕೋಸ್, ಇರಾಕ್‌ನ ಸದ್ದಾಂ ಹುಸೇನ್, ಲಿಬಿಯಾದ ಗಡ್ಡಾಫಿ ಮುಂತಾದ ಹೆಸರುಗಳು ತಟ್ಟನೆ ನೆನಪಿಗೆ ಬರುತ್ತವೆ. ಏಕವ್ಯಕ್ತಿ ಆಡಳಿತವಲ್ಲದಿದ್ದರೂ, ಸರ್ವಾಧಿಕಾರಿ ಎನ್ನಬಹುದಾದ ಜನಾಂಗೀಯ ಭೇದದ ಅಪಾರ್ಥೀಡ್ ಆಡಳಿತ ದಕ್ಷಿಣ ಆಫ್ರಿಕಾದಲ್ಲಿ ಇಪ್ಪತ್ತನೆ ಶತಮಾನದ ಕೊನೆಯ ದಶಕದವರೆಗೆ ಇತ್ತು. ನಮ್ಮದೇ ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲೂ ಜನರಲ್ ಜಿಯಾ ಉಲ್ ಹಕ್, ಜನರಲ್ ಪರ್ವೇಜ್ ಮುಶರ್ರಪ್, ಬಾಂಗ್ಲಾದೇಶದಲ್ಲಿ ಜನರಲ್ ಇರ್ಷಾದ್, ಜನರಲ್ ಝಿಯಾವುರ್ ರೆಹಮಾನ್ ಮುಂತಾ ದವರು ಸರ್ವಾಧಿಕಾರಿಗಳಾಗಿ ಮೆರೆದಿದ್ದಾರೆ. ಮ್ಯಾನ್ಮಾರ್ ಕೂಡಾ ಸರ್ವಾಧಿಕಾರದ ಕಹಿಯನ್ನು ಅನುಭವಿಸುತ್ತಾ ಬಂದಿದೆ. ಆಫ್ರಿಕಾ ಖಂಡ ಮತ್ತು ಲ್ಯಾಟಿನ್ ಮತ್ತು ಮಧ್ಯ ಅಮೆರಿಕದ ಹಲವಾರು ದೇಶಗಳು ಸರ್ವಾಧಿಕಾರಗಳನ್ನು ಕಾಣುತ್ತಾಬಂದಿವೆ. ಕೆಲವು ದೇಶಗಳು ಹೆಸರಿಗೆ ಪ್ರಜಾಪ್ರಭುತ್ವಗಳಾಗಿದ್ದರೂ, ವಾಸ್ತವಿಕವಾಗಿ ಸರ್ವಾಧಿಕಾರಿ ಆಡಳಿತವಿದೆ. ಇಂತಹ ಹಲವಾರು ದೇಶಗಳಲ್ಲಿ ಅಮೆರಿಕದ ಕೈಗೊಂಬೆ ಸರಕಾರಗಳಿವೆ. ಇತಿಹಾಸದ ಉದ್ದಕ್ಕೂ ಅನೇಕ ಸರ್ವಾಧಿಕಾರಗಳನ್ನು ಸ್ಳಾಪಿಸುತ್ತಾ ಬಂದಿರುವ ಅಮೆರಿಕ ಅವುಗಳನ್ನು ತನ್ನ ಹಿತಾಸಕ್ತಿಗೆ ಬಳಸಿಕೊಂಡಿದೆ. ತನ್ನ ಹಿತಾಸಕ್ತಿಗಳಿಗೆ ಒಗ್ಗದ ಸರ್ವಾಧಿಕಾರಗಳನ್ನು ಉರುಳಿಸಿ, ಒಗ್ಗುವ ಸರ್ವಾಧಿಕಾರಗಳನ್ನು ಪ್ರೋತ್ಸಾಹಿಸುವುದು, ಅಥವಾ ಅವುಗಳ ಕಡೆಗೆ ಕುರುಡುಗಣ್ಣು ಬೀರುವುದು ಪ್ರಜಾಪ್ರಭುತ್ವದ ವಕ್ತಾರನಂತೆ ವರ್ತಿಸುವುದು ಅಮೇರಿಕದ ಜಾಯಮಾನ. ಆಧುನಿಕ ಇತಿಹಾಸವನ್ನು ಗಮನಿಸಿದವರಿಗೆ ಇದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇದರ ಪರಿಣಾಮವಾಗಿಯೇ ಹಲವು ದೇಶಗಳಲ್ಲಿ ಅಧಿಕಾರಕ್ಕಾಗಿ ಅಂತರ್ಯುದ್ಧಗಳು ನಡೆಯುತ್ತಿವೆ. ಇವರಿಗೆ ಬೆಂಬಲ ನೀಡಿ ಶಸ್ತ್ರಾಸ್ತ್ರ ಒದಗಿಸುವವರು ಯಾರು, ನಂತರ ನೆರವಿನ ನೆಪದಲ್ಲಿ ತಮ್ಮ ನೆಲೆ ಮತ್ತು ಹಿಡಿತವನ್ನು ಭದ್ರಗೊಳಿಸುವವರು ಯಾರೆಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.
ಎಲ್ಲ ರೀತಿಯ ಸರ್ವಾಧಿಕಾರಗಳಲ್ಲಿ ಅಧಿಕಾರದಾಹ, ಭ್ರಷ್ಟಾ ಚಾರ, ಸ್ವಜನ ಪಕ್ಷಪಾತ, ಅಧಿಕಾರಶಾಹಿಯ ಪ್ರಾಬಲ್ಯ, ಹಿಂಸೆ ಮತ್ತು ವ್ಯವಸ್ಥಿತ ದಮನಗಳನ್ನು ಕಾಣಬಹುದು. ಇವೆಲ್ಲವುಗಳಿಗೂ ಮೇಲ್ವರ್ಗ ಗಳ ಒತ್ತಾಸೆ, ಬಂಡವಾಳಶಾಹಿಗಳ ಬೆಂಬಲ ಅಥವಾ ಮತೀಯವೂ ಸೇರಿದಂತೆ ಭ್ರಮಾಧೀನ ರಾಜಕೀಯ ತತ್ತ್ವಗಳ ಪೊರೆಯಿರುತ್ತದೆ.
ಹಾಗಿದ್ದರೂ, ಎಲ್ಲಾ ಸರ್ವಾಧಿಕಾರಗಳು ಒಂದೇ ರೀತಿಯವುಗಳಲ್ಲ. ರಾಜಸತ್ತೆಯನ್ನು ಹೊರತುಪಡಿಸಿದರೂ, ಕೆಲವು ರೀತಿಯ ಸರ್ವಾ ಧಿಕಾರಗಳನ್ನು ನಾವು ಗಮನಿಸಬಹುದು.

 
ಮೊದಲನೆಯದು ಹಿಟ್ಲರ್ ಅಡಿಯಲ್ಲಿ ಜರ್ಮನಿ, ಮುಸ್ಸೋಲಿ ನಿಯ ಅಡಿಯಲ್ಲಿ ಇಟಲಿ ಕಂಡಂತಹ ಸರ್ವಾಧಿಕಾರ. ಇಂತಹ ಸರ್ವಾಧಿಕಾರಗಳು ಜನಾಂಗ, ಧರ್ಮ, ರಾಷ್ಟ್ರೀಯತೆಗಳ ಶ್ರೇಷ್ಠತೆಯ ಹೆಸರಿನಲ್ಲಿ ನಡೆಯುತ್ತವೆ. ಪ್ರಬಲ ಜನಾಂಗಗಳನ್ನು ದುರ್ಬಲ ಜನಾಂಗಗಳ ವಿರುದ್ಧ ಎತ್ತಿಕಟ್ಟುವ ಮೂಲಕ ಇಂತಹ ಸರ್ವಾಧಿಕಾರಗಳು ಅಚ್ಚರಿ ಎನಿಸಬಹುದಾದಂತಹ ಜನಪ್ರಿಯತೆ ಗಳಿಸುತ್ತವೆ. ಜನಾಂಗಗಳನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಿ ಒಂದೊಂದಾಗಿಯೇ ಅವುಗಳನ್ನು ನಿರ್ಮೂಲನ ಮಾಡಿ ಪ್ರಾಬಲ್ಯ ಸ್ಥಾಪಿಸುವುದು ಅವುಗಳ ಗುರಿ. ಇಂತಹ ಪ್ರಜಾಪ್ರಭುತ್ವಗಳು ದೇಶದ ಮೇಲೆ ಹಿಡಿತ ಸಾಧಿಸುವುದಲ್ಲದೆ, ಸಾಮ್ರಾಜ್ಯಶಾಹಿ ಆಕಾಂಕ್ಷೆಗಳನ್ನೂ ಹೊಂದಿರುತ್ತವೆ. ವ್ಯವಸ್ಥಿತವಾದ ಪ್ರಚಾರ, ಬೇರೆ ಬೇರೆ ರೀತಿಯ ಅಂಗ ಸಂಸ್ಥೆಗಳ ತಣ್ಣಗಿನ ಕ್ರೌರ್ಯ ಮತ್ತು ಭಯೋತ್ಪಾದನೆಯ ಮೂಲಕ ಸಮಾಜದ ಎಲ್ಲ ಕ್ಷೇತ್ರಗಳನ್ನು ನಿಯಂತ್ರಿಸುವುದು ಅವುಗಳ ಕಾರ್ಯತಂತ್ರ. ತಮ್ಮ ವಿಚಾರ-ತತ್ವಗಳನ್ನು ಬೇರೆಯವರ ಮೇಲೆ ಹೇರುವ ಹುನ್ನಾರ ಮತ್ತು ಅಧಿಕಾರ ದಾಹ ಇವುಗಳಿಗೆ ಮೂಲ ಕಾರಣ. ನಿರುದ್ಯೋಗ, ಸಾಂಸ್ಕೃತಿಕ ದಿವಾಳಿತನ ಮತ್ತು ನೆರೆಯ ದೇಶಗಳ ಜೊತೆಗೆ ಇರುವ ವೈಮನಸ್ಸು ಇವುಗಳಿಗೆ ಗೊಬ್ಬರವಿದ್ದಂತೆ. ಎರಡನೆಯದು ಸೇನಾಕ್ರಾಂತಿಗಳಿಂದ ಸ್ಥಾಪಿಸಲ್ಪಡುವ ಸರ್ವಾಧಿಕಾರ. ಇಂತಹ ಕ್ರಾಂತಿಗಳನ್ನು ಪ್ರಪಂಚದ ದುರ್ಬಲ ದೇಶಗಳಲ್ಲಿ ನೋಡಬಹುದು. ಸಂಪತ್ತು ಮತ್ತು ಅಧಿಕಾರದ ದಾಹವೇ ಇಂತಹ ಸೇನಾಕ್ರಾಂತಿಗಳಿಗೆ ಪ್ರೇರಣೆ. ದೇಶದ ನೈಸರ್ಗಿಕ ಸಂಪತ್ತುಗಳನ್ನು ದೋಚುವುದೇ ಅವುಗಳ ಗುರಿ. ಉದಾಹರಣೆಗೆ ಅಪೂರ್ವ ವಜ್ರಗಳಿಂದ ಶ್ರೀಮಂತವಾಗಿರುವ ಆಫ್ರಿಕಾದ ಬಡ ದೇಶವಾದ ಸಿಯೆರಾ ಲಿಯೋನ್‌ನ ಬೇರೆಬೇರೆ ಭಾಗಗಳ ನಿಯಂತ್ರ ಣವು ವರ್ಷಗಳಿಂದ ಬಹುರಾಷ್ಟ್ರೀಯ ಕಂಪೆನಿಗಳಿಂದ ಪ್ರಾಯೋಜಿತ ವಾದ ಬೇರೆಬೇರೆ ಸೇನಾ ಮಾಫಿಯಾಗಳ ನಿಯಂತ್ರಣದಲ್ಲಿದೆ. ದುರ್ಬಲ ಸಾಂವಿಧಾನಿಕ ಪರಂಪರೆ, ಬಡತನ, ಜನಸಮುದಾಯಗಳ ನಡುವಿನ ಧಾರ್ಮಿಕ, ಜನಾಂಗೀಯ ಬಿಕ್ಕಟ್ಟು ಇಂತಹ ಸರ್ವಾಧಿಕಾರಗಳಿಗೆ ಬಂಡವಾಳ.
ಕಮ್ಯುನಿಸಂ ಹೆಸರಿನಲ್ಲಿ ನಡೆಯುವ ಏಕಪಕ್ಷ ಸರ್ವಾಧಿಕಾರ ಮೂರನೆ ರೀತಿಯದು. ಹಿಂದಿನ ಸೋವಿಯತ್ ಒಕ್ಕೂಟ ಮತ್ತು ಚೀನಾ ಇದಕ್ಕೆ ಉತ್ತಮ ಉದಾಹರಣೆಗಳು. ದುಡಿಯುವ ವರ್ಗಗಳ ಸರ್ವಾಧಿಕಾರ (ಡಿಕ್ಟೇಟರ್‌ಶಿಪ್ ಆಫ್ ದಿ ಪ್ರೊಲೆಟೇರಿಯೇಟ್) ಎಂಬ ಪರಿಕಲ್ಪನೆಯನ್ನು ದುಡಿಯುವ ವರ್ಗಗಳ ಪಕ್ಷ (ಕಮ್ಯುನಿಸ್ಟ್)ಗಳ ನಾಯಕತ್ವದ ಅಂದರೆ, ಅಧಿಕಾರಶಾಹಿಯ ಸರ್ವಾಧಿಕಾರ ಎಂದು ತಿರುಚಿದ ಇಂತಹ ಆಡಳಿತಗಳು ಭ್ರಷ್ಟಾಚಾರದ ಕೊಂಪೆಗಳಾಗಿದ್ದು ಮತ್ತು ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಚೀನಾದಲ್ಲಿ, ಹಿಂದಿನ ಸೋವಿಯತ್ ಒಕ್ಕೂಟದಲ್ಲಿ ಅಗಾಧ ತಾಂತ್ರಿಕ, ಕೈಗಾರಿಕಾ ಪ್ರಗತಿ ಆಗಿದೆ ಎಂಬುದು ನಿಜ. ಆದರೆ, ವ್ಯಕ್ತಿ ಸ್ವಾತಂತ್ರ್ಯದ ಬೆಲೆ ಏನು? ಸೋವಿಯತ್‌ನಲ್ಲಿ ಸ್ಟಾಲಿನ್ ಅಧಿಕಾರಕ್ಕೆ ಬಂದಾಗ, ಲೆನಿನ್‌ನಿಂದ ನಮ್ಮ ಕ್ರಾಂತಿಯ ಚಿನ್ನದ ಕೂಸು (ಗೋಲ್ಡನ್ ಚೈಲ್ಡ್ ಆಫ್ ಅವರ್ ರೆಮೊಲ್ಯೂಶನ್) ಎಂದು ಕರೆಸಿಕೊಂಡಿದ್ದ, ಕ್ರಿಯಾಶೀಲ ಯುವ ನಾಯಕ ಬುಖಾರಿನ್ ಸಹಿತ ಅರ್ಧದಷ್ಟು ಪಾಲಿಟ್‌ಬ್ಯೂರೊ ಸದಸ್ಯರನ್ನು ದೇಶದ್ರೋಹದ ಆರೋಪ ಹೊರಿಸಿ ಒಂದೇ ವರ್ಷದೊಳಗೆ ಕೊಲೆ ಅಥವಾ ಗಡಿಪಾರು ಮಾಡಿದ್ದು, ಚೀನಾದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವಜನರನ್ನು ಟ್ಯಾಂಕ್ ಹರಿಸಿ, ಗುಂಡಿನ ದಾಳಿ ನಡೆಸಿ ಕೊಲ್ಲಲಾದ ತಿಯಾನೆನ್ಮೆನ್ ಸ್ಕ್ವೇರ್ ಹತ್ಯಾಕಾಂಡ ಕೇವಲ ಎರಡು ಉದಾಹರಣೆಗಳಷ್ಟೆ.
ಪ್ರಜಾಪ್ರಭುತ್ವದ ಮುಖವಾಡದ ಅಡಿಯಲ್ಲಿಯೇ ಕೈಗೊಂಬೆ ಸರಕಾರಗಳು ನಡೆಸುವ ದಮನಕಾರಿ ಸರ್ವಾಧಿಕಾರ ನಾಲ್ಕನೆ ರೀತಿಯದು. ಅನೇಕ ಚಿಕ್ಕ ಪುಟ್ಟ ದೇಶಗಳು ಈ ರೀತಿಯಾಗಿ ವಿಶ್ವಸಂಸ್ಥೆಯಲ್ಲಿ ಅಮೆರಿಕ ನೇತೃತ್ವದ ಪಾಶ್ಚಾತ್ಯ ಬೃಹತ್ ಶಕ್ತಿಗಳಿಗೆ ಮತಬ್ಯಾಂಕ್‌ಗಳಾಗಿವೆ.
ಇದಕ್ಕಿಂತ ಭಿನ್ನವಾದುದೆಂದರೆ ಭಾರತ, ಅಮೆರಿಕ, ಈಗಿನ ರಷ್ಯಾ ದಂತಹ ದೇಶಗಳಲ್ಲಿಯೂ ಗುಪ್ತಗಾಮಿನಿಯಾಗಿ ಮೈದಳೆದಿರುವ ಸರ್ವಾಧಿಕಾರಿ ಪ್ರವೃತ್ತಿ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News