ಜನವರಿ 14 ಎಂಬ ಗುಮ್ಮ!
ಜನವರಿ 14ರ ಬಳಿಕ ಸಚಿವ ಸಂಪುಟವನ್ನು ಪ್ರಧಾನಿ ನರೇಂದ್ರ ಮೋದಿ ಪುನರ್ರಚಿಸಲಿದ್ದಾರೆ ಎಂಬ ವದಂತಿಗಳು ಹರಡಿದ್ದು, ಕೇಂದ್ರ ಸಚಿವರು ಆತಂಕದಿಂದ ದಿನಗಳನ್ನು ಕಳೆಯುತ್ತಿದ್ದಾರೆ. ನೀವು ಏನೇ ಕೇಳಿ. ಬಿಜೆಪಿ ನಾಯಕರು ಮತ್ತು ಕೇಂದ್ರ ಸಚಿವರ ಬಳಿ ಸಿದ್ಧ ಉತ್ತರವೊಂದು ಇದೆ- ಜನವರಿ 14ರವರೆಗೆ ಕಾಯಿರಿ! ಹಾಗಾದರೆ, ಜನವರಿ 14ರಲ್ಲಿ ಅಂಥ ವಿಶೇಷವಾದರೂ ಏನಿದೆ?
ಅಂದು ಹಿಂದೂ ತಿಂಗಳು ಪೌಷ ಮುಗಿಯುತ್ತದೆ. ಹಾಗೂ ಈ ತಿಂಗಳಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಹಾಗಾಗಿ, ಈ ತಿಂಗಳು ಮುಗಿಯಲಿ ಎಂದು ಎಲ್ಲರೂ ಕಾಯುತ್ತಿದ್ದಾರೆ.
ಸಚಿವ ಸಂಪುಟ ಪುನಾರಚನೆಯಲ್ಲಿ ತಾವು ಸ್ಥಾನ ಕಳೆದುಕೊಳ್ಳುವುದು ಖಚಿತ ಎಂಬ ನಿರ್ಧಾರಕ್ಕೆ ಕೆಲವು ಸಚಿವರಂತೂ ಬಂದು ಬಿಟ್ಟಿದ್ದಾರೆ. ಆದರೆ, ತಾನು ಯಾರನ್ನು ಉಳಿಸಿಕೊಳ್ಳುತ್ತೇನೆ ಹಾಗೂ ಯಾರನ್ನು ಹೊರಗೆ ಅಟ್ಟುತ್ತೇನೆ ಎಂಬ ಕುರಿತ ಗುಟ್ಟನ್ನು ಮೋದಿ ಬಿಟ್ಟುಕೊಟ್ಟಿಲ್ಲ. ಸ್ಮತಿ ಇರಾನಿ ಮತ್ತು ಬಬುಲ್ ಸುಪ್ರಿಯೊ ಹೆಸರುಗಳು ಸಂಪುಟದಿಂದ ಹೊರಗೆ ಹೋಗುವವರ ಪಟ್ಟಿಯಲ್ಲಿದೆ ಎಂಬ ಬಗ್ಗೆ ಊಹಾಪೋಹಗಳು ಹಬ್ಬಿವೆ. ಆದರೆ, ಸ್ಮತಿ ಇರಾನಿ ಸಂಪುಟದಿಂದ ಹೊರಬೀಳಲಿದ್ದಾರೆ ಎಂಬುದನ್ನು ನಂಬಲು ಹೆಚ್ಚಿನವರು ತಯಾರಿಲ್ಲ. ಯಾಕೆಂದರೆ, ಮೋದಿಯ ನೆಚ್ಚಿನ ಸಚಿವರ ಪೈಕಿ ಅವರೂ ಒಬ್ಬರು ಎನ್ನುವುದು ಹೆಚ್ಚಿನವರ ತಿಳುವಳಿಕೆ. ಆದರೆ, ಓರ್ವ ಸಚಿವೆಯಾಗಿ ಆಕೆಯ ನಿರ್ವಹಣೆ ಬಗ್ಗೆ ಮೋದಿ ಯಾವ ಅಭಿಪ್ರಾಯ ಹೊಂದಿದ್ದಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಈ ಬಗ್ಗೆ ನೀವು ಯಾರನ್ನಾದರೂ ಕೇಳಿದರೆ, ಉತ್ತರ ಒಂದೇ- ಜನವರಿ 14. ಹಾಗಾಗಿ, ಅಲ್ಲಿವರೆಗೆ ಕಾಯದೆ ಬೇರೆ ದಾರಿಯಿಲ್ಲ!
ಕೇಂದ್ರ ಸಚಿವರಿಗೆ ಮದುವೆ?
ಬಬುಲ್ ಸುಪ್ರಿಯೊ ಕೇಂದ್ರ ನಗರಾಭಿವೃದ್ಧಿ ಖಾತೆಯ ಸಹಾಯಕ ಸಚಿವರು. ಅದೇ ಖಾತೆಯ ಹಿರಿಯ ಸಚಿವ ವೆಂಕಯ್ಯ ನಾಯ್ಡುಗೆ ಇವರನ್ನು ಕಂಡರೆ ಅಷ್ಟಕ್ಕಷ್ಟೆ. ಸಚಿವಾಲಯದ ಪ್ರಮುಖ ಕಾರ್ಯಕ್ರಮಗಳಲ್ಲಿ ಸುಪ್ರಿಯೊರನ್ನು ನಾಯ್ಡು ನಿರ್ಲಕ್ಷಿಸಿಬಿಡುತ್ತಾರೆ. ಸುಪ್ರಿಯೊರನ್ನು ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಿಂದಲೇ ಕೈಬಿಡಬಹುದು ಎಂಬ ಖಚಿತ ನಿಲುವನ್ನು ಸಚಿವಾಲಯದ ಕೆಲವರು ಹೊಂದಿದ್ದಾರೆ.
ಸುಪ್ರಿಯೊರನ್ನು ಕೈಬಿಡಲು ಇನ್ನೊಂದು ಸಂಭಾವ್ಯ ಕಾರಣವೂ ಇದೆ. ಪಶ್ಚಿಮಬಂಗಾಳದ ಬಗ್ಗೆ ಬಿಜೆಪಿಗೆ ಹೆಚ್ಚಿನ ನಿರೀಕ್ಷೆಯೇನೂ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಉತ್ತಮ ನಿರ್ವಹಣೆಯ ಬಳಿಕ ರಾಜ್ಯದಲ್ಲಿ ಅದರ ಅಸ್ತಿತ್ವ ದಿನೇ ದಿನೇ ದುರ್ಬಲಗೊಳ್ಳುತ್ತಾ ಸಾಗಿದೆ. ಹಾಗಾಗಿ, ಬೇರೆ ರಾಜ್ಯದ ಇನ್ನೊಬ್ಬರಿಗೆ ಅವಕಾಶ ಕೊಡುವುದು ಒಳ್ಳೆಯದು ಎಂಬ ನಿರ್ಧಾರಕ್ಕೆ ಬಿಜೆಪಿ ಬಂದಿರುವ ಸಾಧ್ಯತೆಯಿದೆ.
ಈ ನಡುವೆ, ಸುಪ್ರಿಯೊ ಶೀಘ್ರದಲ್ಲೇ ಮದುವೆಗೆ ತಯಾರಾಗುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಅವರಿಗೆ ಮೊದಲ ಹೆಂಡತಿಯಿಂದ ಹದಿಹರೆಯದ ಮಗಳಿದ್ದರೂ, ಮೊದಲ ಹೆಂಡತಿಗೆ ಸೋಡಾಚೀಟಿ ಕೊಡಲು ನಿರ್ಧರಿಸಿದ್ದಾರೆ ಎಂಬ ಊಹಾಪೋಹಗಳಿವೆ.
ಪರಿಸ್ಥಿತಿಯನ್ನು ಅವಲೋಕಿಸಿ ಹೇಳುವುದಾದರೆ, ಎರಡನೆ ಮದುವೆಯಾಗಲು ಅವರು ಸರ್ವ ಸನ್ನದ್ಧರಾಗಿದ್ದಾರೆ. ಹೌದು, ನಿಮ್ಮ ಊಹೆ ಸರಿ... ಈ ಕುರಿತ ಸುದ್ದಿ ಜನವರಿ 14ರ ಬಳಿಕ ಹೊರಬೀಳಬಹುದು.
ತಣ್ಣಗಿರುವ ಜೇಟ್ಲಿ
ಕುತ್ತಿಗೆಯವರೆಗೆ ನೀರಿನಲ್ಲಿ ಮುಳುಗಿದ್ದರೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಣ್ಣಗಿದ್ದಾರೆ. ಡಿಡಿಸಿಎ ಅವ್ಯವಹಾರದಲ್ಲಿ ತನ್ನ ಶಾಮೀಲಾತಿ ಕುರಿತು ಬಿರುಗಾಳಿ ಎದ್ದಿರುವ ಹೊರತಾಗಿಯೂ ಕೇಂದ್ರ ಸಚಿವರು ಏನೂ ಆಗದವರಂತಿದ್ದಾರೆ. ತನ್ನದೇ ಸಂಸದ ಕೀರ್ತಿ ಆಝಾದ್‌ರನ್ನು ಬಿಜೆಪಿ ಅಮಾನತುಗೊಳಿಸಿದ ದಿನದಂದು ಜೇಟ್ಲಿ ಆಯ್ದ ಪತ್ರಕರ್ತರು ಮತ್ತು ಎನ್‌ಡಿಎಯ ಕೆಲವು ಸಂಸದರಿಗೆ ಔತಣಕೂಟ ಏರ್ಪಡಿಸಿದ್ದರು. ಔತಣಕೂಟದಲ್ಲಿ ನೀಡಲಾದ 'ಮಾರ್ವಾರಿ' ಊಟ ರುಚಿಕರ ಹಾಗೂ ಸ್ವಾದಭರಿತವಾಗಿತ್ತು ಎಂದು ಔತಣಕೂಟದಲ್ಲಿ ಭಾಗವಹಿಸಿದವರು ಹೇಳುತ್ತಾರೆ. 20 ನಮೂನೆಯ ಖಾದ್ಯಗಳಿದ್ದ ಊಟದಲ್ಲಿ ದಾಲ್ ಬಟಿ ಚೂರ್ಮ, ತುಪ್ಪದಲ್ಲಿ ಅದ್ದಿದ ಬಟಿ, ಪಂಚಕುಟಿ ದಾಲ್ ಮತ್ತು ಚೂರ್ಮಗಳಿದ್ದವು. ಜೊತೆಗೆ ನೀಡಲಾದ ಬಜ್ರಾ ಪೂರಿ, ಕೇರ್ ಸಾಂಗ್ರಿ, ಬೂಂದಿ ರೈಟ ಮತ್ತು ದಿಲ್‌ಕುಶರ್ ಊಟದ ಕಳೆಯನ್ನು ಮತ್ತಷ್ಟು ಹೆಚ್ಚಿಸಿದವು.
ತನ್ನ ಸ್ನೇಹಿತರು ಮತ್ತು ಪತ್ರಕರ್ತರನ್ನು ಖುಷಿಯಾಗಿಡುವಲ್ಲಿ ಜೇಟ್ಲಿ ಪ್ರಸಿದ್ಧರು. ಮತ್ತೊಮ್ಮೆ ಅವರು ಅದನ್ನು ಸಾಬೀತುಪಡಿಸಿದ್ದಾರೆ. ತನ್ನ ಬಗ್ಗೆ ಅಗಾಧ ನಂಬಿಕೆ ಹೊಂದಿರುವ ವ್ಯಕ್ತಿಯ ಚಿತ್ರಣವಿದು!
ಆಝಾದ್ ಉಚ್ಚಾಟನೆ ಸನ್ನಿಹಿತ?
ಸಂಸದ ಕೀರ್ತಿ ಆಝಾದ್‌ರನ್ನು ಬಿಜೆಪಿ ಅಮಾನತುಗೊಳಿಸಿ ದಿನಗಳೇ ಸಂದವು. ಈಗ ಅವರನ್ನು ಪಕ್ಷದಿಂದಲೇ ಹೊರಹಾಕುವ ಪ್ರಯತ್ನಗಳನ್ನು ಬಿಜೆಪಿ ತೀವ್ರಗೊಳಿಸಿದೆ. ಆಝಾದ್‌ರಿಗೆ ಬಿಜೆಪಿ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, ''ಪಕ್ಷ ವಿರೋಧಿ ಚಟುವಟಿಕೆ''ಗಳಿಗಾಗಿ ನಿಮ್ಮನ್ನು ಪಕ್ಷದಿಂದ ಯಾಕೆ ಉಚ್ಚಾಟಸಬಾರದು ಎಂಬುದಕ್ಕೆ ವಿವರಣೆ ನೀಡುವಂತೆ ಸೂಚಿಸಲಾಗಿದೆ.
ಶೋಕಾಸ್ ನೋಟಿಸ್‌ಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಹಿ ಹಾಕಿದ್ದು, 10 ದಿನಗಳ ಒಳಗೆ ಉತ್ತರ ನೀಡುವಂತೆ ಕ್ರಿಕೆಟಿಗ-ರಾಜಕಾರಣಿಯನ್ನು ಕೇಳಲಾಗಿದೆ.
ನೋಟಿಸ್‌ನಲ್ಲಿ ನಿರ್ದಿಷ್ಟ ವಿಷಯಗಳ ಬಗ್ಗೆ ಪ್ರಸ್ತಾಪವಿಲ್ಲ ಎಂದು ಹೇಳಿರುವ ಕೀರ್ತಿ ಆಝಾದ್, ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತ ಬಳಿಕ ತಾನು ಬಿಜೆಪಿ ಮತ್ತು ಕೆಲವು ಪದಾಧಿಕಾರಿಗಳ ವಿರುದ್ಧ ಹಾಗೂ ಬಿಹಾರ ವಿಧಾನಸಭೆಯಲ್ಲಿ ಸೋತ ಬಳಿಕ ಪಕ್ಷದ ವಿರುದ್ಧ ಮಾತನಾಡಿರುವ ಬಗ್ಗೆ ಅದರಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಅಂದರೆ, ಡಿಡಿಸಿಎ ಹಗರಣಕ್ಕೆ ಸಂಬಂಧಿಸಿ ಆಝಾದ್‌ರಿಂದ ಏನೂ ಕೇಳಲಾಗಿಲ್ಲ. ಈ ನೋಟಿಸ್‌ಗೆ ಹೇಗೆ ಉತ್ತರಿಸುವುದು ಎನ್ನುವ ಬಗ್ಗೆ ಆಝಾದ್ ಯೋಚಿಸಬೇಕಾಗಿದೆ.
ಆದರೆ, ಪಕ್ಷದಿಂದ ತನ್ನನ್ನು ಉಚ್ಚಾಟಿಸುವುದು ಖಚಿತ ಎನ್ನುವುದು ಆಝಾದ್‌ಗೆ ಮನವರಿಕೆಯಾಗಿದೆ. ಹಾಗಾಗಿ, ಡಿಡಿಸಿಎಯಲ್ಲಿ ನಡೆಯಿತೆನ್ನಲಾದ ಹಗರಣಗಳಲ್ಲಿ ಜೇಟ್ಲಿ ಶಾಮೀಲಾತಿಯ ಕುರಿತಂತೆ ನಿರಂತರವಾಗಿ ವಾಗ್ದಾಳಿ ನಡೆಸುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಅವರು ಬಂದಂತಿದೆ.
ಒಂದು ವೇಳೆ, ಬಿಹಾರದ ದರ್ಭಾಂಗದ ಸಂಸದನನ್ನು ಬಿಜೆಪಿಯಿಂದ ಉಚ್ಚಾಟಿಸಿದರೆ ಅವರು ಲೋಕಸಭೆಯ ಅವಧಿ ಮುಗಿಯುವವರೆಗೂ ಪಕ್ಷೇತರ ಸಂಸದರಾಗಿ ಉಳಿಯುತ್ತಾರೆ. ಸದನದಲ್ಲಿ ಯಾವುದೇ ಪಕ್ಷ ಅಥವಾ ಮೈತ್ರಿಕೂಟಕ್ಕೆ ಅವರು ಬೆಂಬಲ ನೀಡಬಹುದು. ಆಝಾದ್‌ರ ಮುಂದಿನ ನಡೆ ಏನು ಎನ್ನುವುದನ್ನು ಕಾದು ನೋಡಬೇಕಾಗಿದೆ.
ಪ್ರಿಯಾಂಕಾ ಗಾಂಧಿಯ ಮೋಡಿ!
ಕಾಂಗ್ರೆಸ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಬ್ಬರ ತಲೆಯ ಮೇಲೂ ನ್ಯಾಶನಲ್ ಹೆರಾಲ್ಡ್ ಪ್ರಕರಣ ತೂಗುಗತ್ತಿಯಾಗಿರುವಂತೆಯೇ, ಸಂಕಷ್ಟದಲ್ಲಿರುವ ಪಕ್ಷದ ನೆರವಿಗೆ ಧಾವಿಸುವಂತೆ ಪ್ರಿಯಾಂಕಾ ಗಾಂಧಿಯನ್ನು ಓಲೈಕೆ ಮಾಡಲಾಗುತ್ತಿದೆ.
ತನ್ನದೇ ಶೈಲಿಯಲ್ಲಿ ಕಾರ್ಯಾಚರಿಸಿದ ಪ್ರಿಯಾಂಕಾ, ಬೆಂಬಲಿಗರನ್ನು ಒಟ್ಟು ಸೇರಿಸಲು, ಕಾನೂನು ಸಮರವನ್ನು ಸಮನ್ವಯಗೊಳಿಸಲು ಹಾಗೂ ಮಾಧ್ಯಮವನ್ನು ಜಾಗರೂಕವಾಗಿ ನಿಭಾಯಿಸಲು ಪಕ್ಷದಲ್ಲಿರುವ ಎಲ್ಲ ಪ್ರತಿಭೆಗಳನ್ನು ನಿಯೋಜಿಸಿದರು.
ಹೀಗೆ ಮಾಡುವಾಗ, ತಾವು ಟೀಮ್ ರಾಹುಲ್‌ನ ಭಾಗ ಎಂದು ಹೇಳಿಕೊಳ್ಳುವವರು ಹಾಗೂ ಹೇಳಿಕೊಳ್ಳದವರ ನಡುವೆ ಅವರು ಯಾವುದೇ ಭೇದಭಾವವನ್ನು ಮಾಡಲಿಲ್ಲ. ಇದರ ಫಲಿತಾಂಶ ಅದ್ಭುತವಾಗಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿದ ಬಳಿಕ ಪಕ್ಷವು ಮೊದಲ ಬಾರಿಗೆ ಆಕ್ರಮಣಕಾರಿಯಾಗಿ, ಸಂಘಟಿತವಾಗಿ ಹಾಗೂ ಚೇತೋಹಾರಿಯಾಗಿದ್ದಂತೆ ಕಂಡುಬಂತು. ನಿಜವಾಗಿಯೂ ಅದೊಂದು ಅಪರೂಪದ ಕ್ಷಣವಾಗಿತ್ತು. ಆದರೆ, ಈ ವೇಗವನ್ನು ಉಳಿಸಿಕೊಳ್ಳಲು ಪ್ರಿಯಾಂಕಾ ಮತ್ತು ಅವರ ಪಕ್ಷಕ್ಕೆ ಸಾಧ್ಯವಾಗುವುದೇ?