ಗತವರ್ಚಸ್ಸಿನ ಮರುಗಳಿಕೆಗೆ ಮೋದಿಯವರಿಗಿನ್ನೂ ಅವಕಾಶವಿದೆ

Update: 2016-01-03 06:11 GMT

2016


 ಮನುಷ್ಯನ ನಡವಳಿಕೆಯಲ್ಲಿ ನಿಜವಾಗಿಯೂ ಒಂದು ಪ್ರವಾಹವಿರುವುದೇ ಆದಲ್ಲಿ, ಅದಕ್ಕೆ 2015ರ ಉಜ್ವಲ ಉದಾಹರಣೆ: ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು. ಇವರು ತಮ್ಮ ಸ್ವರ್ಣಸ್ಪರ್ಷದ ಮೂಲಕ ಭಾರತದ ಸಂಸತ್ತಿನ 21 ವರ್ಷಗಳ ಕರ್ಮವನ್ನು ನಿವಾರಿಸಿ ಏಕಪಕ್ಷ ಬಹುಮತದೊಂದಿಗೆ ದೇಶವನ್ನು ಮರುರೂಪಿಸುವ ಹುಮ್ಮಸ್ಸಿನಲ್ಲಿ ಅಧಿಕಾರ ಹಿಡಿದಿದ್ದಾರೆ. ಇವರ ಕನಸಿನ ನಡಿಗೆ ಬಹುಪಾಲು 2015ಕ್ಕೇ ಕೊನೆಯಾಗಿದೆ. ಆರಂಭದಲ್ಲೇ ಬಂದು ಅಪ್ಪಳಿಸಿದ ದಿಲ್ಲಿ ವಿಧಾನಸಭಾ ಚುನಾವಣೆಯ ಹೀನಾಯ ಸೋಲು ಮತ್ತು ದೀಪಾವಳಿಯ ಕೆಟ್ಟ ಉಡುಗೊರೆಯಾದ ಬಿಹಾರದ ಅನೂಹ್ಯ ಪರಾಭವಗಳು ಮೋದಿಯವರ ರಾಜಕೀಯ ಬದುಕಿನಲ್ಲಿ ಬಿಕ್ಕಟ್ಟನ್ನು ಸೃಷ್ಟಿಸಿರುವುದಂತೂ ನಿಜ. ವಿರೋಧಪಕ್ಷದ ಗಟ್ಟಿ ವಿರೋಧ ಮತ್ತು ಅವರದೇ ಸಹವರ್ತಿ ಪಕ್ಷಗಳ ಅಪನಂಬಿಕೆಯಿಂದಾಗಿ ಭೂಸ್ವಾಧೀನ ಕಾಯ್ದೆ ಹಳಿತಪ್ಪಿಬಿದ್ದಿತು. ಕಾಂಗ್ರೆಸ್ ತನ್ನ ನಿರ್ದಾಕ್ಷಿಣ್ಯ ನಡವಳಿಕೆಯ ಮೂಲಕ ಸರಕಾರವನ್ನು ಎಷ್ಟು ಗೋಳುಹೊಯ್ದುಕೊಳ್ಳಬಹುದೋ ಅಷ್ಟು ಮಾಡುತ್ತಿದೆ. ಸರಕು ಮತ್ತು ಸೇವಾ ತೆರಿಗೆಗಳ ಕಾಯ್ದೆ ತಿದ್ದುಪಡಿಯನ್ನು ರಾಜ್ಯಸಭೆಯಲ್ಲಿ ತಡೆದುಹಾಕಿರುವುದು ಅದರಲ್ಲೊಂದು. ಇದರೊಂದಿಗೆ ಸರಕಾರದ ನಡವಳಿಕೆಗಳು ದೇಶದಲ್ಲಿ ಅಸಹಿಷ್ಣುತೆಯನ್ನು ಹುಟ್ಟಿಹಾಕಿ ಬುದ್ಧಿಜೀವಿಗಳ ಆಕ್ರೋಶವನ್ನು ಮೈಮೇಲೆಳೆದುಕೊಂಡಿದೆ. ಅಸಂಖ್ಯಾತ ವಿದೇಶಿ ಪ್ರವಾಸಗಳ ಮೂಲಕ ಮಾಡಲು ಹೊರಟಿರುವ ಜಾಗತಿಕ ರಾಜಕೀಯ ಧ್ರುವೀಕರಣ ದೇಶದೊಳಗಡೆ ಹೆಚ್ಚಿನ ಪ್ರಭಾವ ಬೀರುತ್ತಿಲ್ಲ. ಸರಕಾರ 2015ರಲ್ಲಿ ತನಗೆ ಮಾನ್ಯತೆ ಸಿಗಬಹುದಾಗಿದ್ದ ಜಾಗಗಳೂ ಸೇರಿದಂತೆ ಎಲ್ಲೆಡೆ ಹೆಜ್ಜೆ ಹೆಜ್ಜೆಗೂ ಸವಾಲನ್ನು ಎದುರಿಸುತ್ತಿತ್ತು. ಇದು ಮೋದಿಯವರ ಆಶ್ಚರ್ಯಕರ ಹಠಾತ್ ಲಾಹೋರ್ ಭೇಟಿಯ ನಿರ್ಧಾರದಂತಹ ಧಾರ್ಷ್ಟ್ಯದವರೆಗೂ ವಿಸ್ತರಿಸಿಕೊಂಡಿದೆ. ಹಾಗೆಯೇ ಇದು ಇವರ ಉಳಿದಿರುವ ಮೂರು ವರ್ಷಗಳ ಆಡಳಿತ ವೈಖರಿಗೆ ಸಂಕೇತವೂ ಆಗಿದೆ. ಒಟ್ಟಾರೆ ಮೋದಿಯವರ ಸರಕಾರ ಬಿಗುವಿಲ್ಲದೆ ಬಳಲಿ ದುರ್ಬಲಗೊಂಡಿದೆ.
ನವಾಝ್ ಶರೀಫ್‌ರೊಂದಿಗೆ ಬಾಂಧವ್ಯ ಗಟ್ಟಿಮಾಡಿಕೊಳ್ಳಲು ಮೋದಿಯವರು ಲಾಹೋರಿಗೆ ನೀಡಿದ ಅನಿರೀಕ್ಷಿತ ಭೇಟಿ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚು ಮೆಚ್ಚುಗೆ ಗಿಟ್ಟಿಸಿಕೊಂಡಿದೆ. ಇದು ನಮಗೆ ಎರಡು ಮುಖ್ಯವಾದ ಪಾಠಗಳನ್ನು ಹೇಳುತ್ತದೆ.
ಮೊದಲನೆಯದಾಗಿ, ಮುಕ್ತಚಿಂತನೆಯ ಗುಂಪುಗಳೂ ಸೇರಿದಂತೆ ಬಹುಜನರು ಹೇಳುವುದೇನೆಂದರೆ ಅವರ ಜನಪ್ರಿಯತೆಯ ದಾಸ್ತಾನು ಮುಗಿದಿದೆ ಎಂದು, ಆದರೆ ಇದು ಬಿಡುಬೀಸಾದ ಅವಸರದ ಅನಿಸಿಕೆ. ಯಾವ ಭಾರತ ವಿಕಾಸದ ಕನಸನ್ನು ಜನರ ಮುಂದಿಡಲಾಗಿತ್ತೋ ಆದು 2014ರ ನಂತರ ಗೋಚರವಾಗುವ ಮಟ್ಟಿಗೆ ಸಾಕಾರಗೊಳ್ಳಲಿಲ್ಲ ಅನ್ನುವ ಬಗ್ಗೆ ಅಸಮಾಧಾನ ಹೊಂದಿರುವ ಜನರಿಗೆ ಹೀಗೆ ಅನಿಸಿರಬಹುದು. ಆದರೆ ಇದು ಮೋದಿಯವರಿಗಾಗಲಿ ಅಥವಾ ಅವರ ಸರಕಾರಕ್ಕಾಗಲಿ ಅಪಾಯಕಾರಿಯಾಗುವ ಸೂಚನೆಗಳಿಲ್ಲ. ಇನ್ನು ಮೋದಿಯವರಿಗೆ ಅವರೇನು ‘ಅಚ್ಛ್ಚೆೇದಿನ್’ ಆಶ್ವಾಸನೆ ಕೊಟ್ಟಿದ್ದರು ಅದನ್ನು ನೆರವೇರಿಸಲು ಅವಕಾಶವಿದೆ. 2014ರಲ್ಲಿ ಮೋದಿಯವರಲ್ಲಿದ್ದ ಆ ಸ್ಫೂರ್ತಿ-ಉತ್ಸಾಹಗಳಿಗೆ ಅಂಥಾ ಧಕ್ಕೆಯೇನೂ ಆಗಿಲ್ಲವಾದ್ದರಿಂದ ನಿರಾಶೆಗೊಳ್ಳುವ ಅಗತ್ಯವಿಲ್ಲ.
 ಎರಡನೆಯದಾಗಿ, ಆಂತರಿಕ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳೆರಡರಲ್ಲೂ ಮೋದಿ ಸರಕಾರ ತನ್ನ ಎಂದಿನ ಅನಗತ್ಯ ಧಾರ್ಷ್ಟ್ಯದಿಂದ ಜನಪ್ರಿಯ ದಾರಿಯನ್ನು ಹಿಡಿಯಿತು. ಅವುಗಳಲ್ಲಿ, ಎಲ್‌ಪಿಜಿ ಸಬ್ಸಿಡಿಯಲ್ಲಿ ಉಳಿಯುವ 12,000 ಕೋಟಿ ರೂಪಾಯಿಗಳನ್ನು ಬೇರೆ ಉತ್ಪಾದಕ ಕ್ಷೇತ್ರಕ್ಕೆ ಬಳಸಬಹುದೆಂದು ಹೇಳಿ ಸಬ್ಸಿಡಿಯನ್ನು ಸ್ವಯಂಸ್ಫೂರ್ತಿಯಿಂದ ಬಿಟ್ಟುಕೊಡುವಂತೆ ಕೇಳಿದ್ದು, ಹಾಗೆಯೇ ಅಹ್ಮದಾಬಾದ್-ಮುಂಬೈ ಬುಲೆಟ್ ಟ್ರೈನ್ ಘೋಷಣೆ ಮತ್ತು ಸ್ವಚ್ಛ ಭಾರತ ಅಭಿಯಾನಗಳು. ಇವುಗಳಿಗೆ ದೊರೆತ ಪ್ರತಿಕ್ರಿಯೆ ತುಂಬಾ ನೀರಸವಾಗಿತ್ತು. ಬೃಹತ್ ಯೋಜನೆಗಳ ಬಗ್ಗೆ ಮಾತಾಡುವಾಗ ಮೋದಿಯವರ ಮಾತುಗಳು ಸಾಮಾನ್ಯವಾಗಿ ಸ್ಫೂರ್ತಿದಾಯಕವಾಗಿರುತ್ತವೆ ಮತ್ತು ಭಾರತವನ್ನು 21ನೆ ಶತಮಾನದತ್ತ ಕೊಂಡೊಯ್ಯುವ ಕನಸುಗಳನ್ನು ಹೊಂದಿರುತ್ತವೆ. ಇಲ್ಲಿ ಸಮಸ್ಯೆ ಇರುವುದು ಚರ ಪರಿಣಾಮಗಳ ಹೆಚ್ಚಳ ಸಿದ್ಧಾಂತ ಮತ್ತು ತೀವ್ರಗಾಮಿ ಸಿದ್ಧಾಂತಗಳ ನಡುವಿನ ಘರ್ಷಣೆಯ ಚರ್ಚೆಯಲ್ಲಲ್ಲ. ಬದಲಾಗಿ ನೀತಿ ವಿಶ್ಲೇಷಕರನ್ನು ಚಿಂತೆಗೀಡುಮಾಡಿರುವುದು ಮೋದಿಯವರಿಂದ ನಿರೀಕ್ಷಿತವಲ್ಲದ ಜನಪ್ರಿಯ ಯೋಜನೆಗಳ ಜಾರಿ ಬಗ್ಗೆ. ದೇಶ ಸಮಸ್ಯೆಯಲ್ಲಿದ್ದಾಗ ಅದನ್ನು ನಯವಾಗಿ ಸರಿದಿಕ್ಕಿನಡೆಗೆ ತಿರುಗಿಸಿದ ಅನೇಕ ಉದಾಹರಣೆಗಳು ಇತಿಹಾಸದಲ್ಲಿ ಕಾಣುತ್ತವೆ.
2014ರಲ್ಲಿ ಮೋದಿಯೆಡೆಗೆ ಜನ ಆಕರ್ಷಿತವಾಗಿದ್ದು ಅವರ ಈ ರೀತಿಯ ವಾಗಾಡಂಬರದ ನೀರಸ ಆಡಳಿತವನ್ನು ನಿರೀಕ್ಷಿಸಿ ಅಲ್ಲ. ಆ ಜನಾದೇಶ ನೀಡಿದ್ದು ಇದ್ದ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಗಳನ್ನು ಒಡೆದು ಬಿಸಾಕಿ ಹೊಸದನ್ನು ಕಟ್ಟಲು. ಈ ನಾಡಿ ಬಡಿತವನ್ನು ಗ್ರಹಿಸಲು ಸಾಧ್ಯವಾದಲ್ಲಿ ಮೋದಿ ಜನಮನವನ್ನು ಗೆಲ್ಲಬಲ್ಲರು.
ಈ ರಾಷ್ಟ್ರೀಯ ಮನಃಸ್ಥಿತಿಯ ಅಂದಾಜು ಸರಿಯಾಗಿದ್ದುದೇ ಆದಲ್ಲಿ, ದೋಷಪೂರಿತ ಆಡಳಿತದಿಂದ ಸಂಭವಿಸಿದ ಈ ಹಿಂಜರಿತ 2015ರಲ್ಲಿಯೂ ಮುಂದುವರಿಯಲಿದೆ. ಈ ನಡುವೆ ತಪ್ಪು ಹೋಲಿಕೆಗಳಿಂದಾದ ಎಡವಟ್ಟುಗಳಲ್ಲಿ ಕೆಲವಕ್ಕೆ (ಉದಾಹರಣೆಗೆ: ಬಿಹಾರದಲ್ಲಿ ಮೋದಿಯನ್ನು ನಿತೀಶ್ ಕುಮಾರ್ ಎದುರಿಗೆ ನಿಲ್ಲಿಸುವ ಮೂಲಕ ‘ರಾಷ್ಟ್ರೀಯ ಮೋದಿ’ಯನ್ನು ‘ಸ್ಥಳೀಯ ಮೋದಿ’ಯನ್ನಾಗಿ ಮಾಡಿದ್ದು) ರಿಯಾಯಿತಿ ನೀಡಬಹುದು. ಆದರೆ ಇಲ್ಲಿ ಭಾರೀ ಪ್ರಮಾಣದ ವಿಷಮಸಂಬಂಧದ ಸಮಸ್ಯೆ ಮೂಲಬೇರುಗಳಲ್ಲಿದೆ, ಅಂದರೆ ಇಲ್ಲಿ ಮೋದಿ ಪೂರೈಸಬೇಕಾಗಿರುವುದು ಅಥವಾ ಸ್ಪಂದಿಸ ಬೇಕಾಗಿರುವುದು ಅವರ ಸಂಘಪರಿವಾರದ ಕಾರ್ಯಕರ್ತರ ನಿರೀಕ್ಷೆಗಳನ್ನೋ? ಇಲ್ಲಾ ತಮ್ಮ ಚಲನಶೀಲತೆಯ ಮೂಲಕ ರಾಜಕೀಯ ಫಲಿತಾಂಶಗಳನ್ನೇ ಬದಲಿಸಬಲ್ಲ ಮತದಾರರ ನಿರೀಕ್ಷೆಗಳನ್ನೋ?
 ಇಲ್ಲಿ ಮೋದಿಯವರ ಒಲವು-ನಿಲುವು ಸ್ಪಷ್ಟವಾಗಿದೆ, ಕ್ಷಿಪ್ರ ಅಭಿವೃದ್ಧಿ ಮತ್ತು ಈ ಮೂಲಕ ಭಾರತದ ಆರ್ಥಿಕತೆಯ ಉನ್ನತೀಕರಣ. ಇಲ್ಲೊಂದು ಪಕ್ಷ ಅವರಿಗೆ ಪ್ರಜ್ಞಾಪೂರ್ವಕ ಸಾಂಸ್ಕೃತಿಕ ಕಾರ್ಯಸೂಚಿ ಇದ್ದಲ್ಲಿ ಅದು ರಾಷ್ಟ್ರೀಯ ಲಾಂಛನಗಳನ್ನು ಆಧರಿಸಿ ರಾಷ್ಟ್ರೀಯ ಪ್ರಜ್ಞೆಯನ್ನು ಸೃಷ್ಟಿಸುವಂತಿರಬೇಕಿತ್ತು ಮತ್ತು ಆ ಲಾಂಛನಗಳು ಆಧುನಿಕ ಜಾತ್ಯತೀತೆಯಿಂದ ಅಥವಾ ಪರಂಪರೆಯ ಬೇರುಗಳಿಂದ ಬಂದವಾಗಿರಬೇಕಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಕಾಂಗ್ರೆಸ್ ‘ಸಾಂವಿಧಾನಿಕ ರಾಷ್ಟ್ರಭಕ್ತಿ’ಯಂತಹ ಮಾದರಿಯೊಂದನ್ನು ಹುಡುಕಿಕೊಂಡಿದೆ. ಆದರೆ ಮೋದಿಯವರದು ಬಹುಪಾಲು ಅರೆಬರೆ ‘ಸಾವಯವ ರಾಷ್ಟ್ರೀಯತೆ’ಯಾಗಿದೆ. ಅದು ಹೇಗಾದರಿರಲಿ, ಇಲ್ಲಿ ಈ ಸಾಂಸ್ಕೃತಿಕ ಕಾರ್ಯಸೂಚಿ ಮತದಾರ ವೃಂದಕ್ಕೆ ಮುಖ್ಯವಾಗಿರುತ್ತದೆ ಮತ್ತು ಅದರಲ್ಲಿನ ಭಾವನಾತ್ಮಕತೆಯ ಅಂಶಗಳನ್ನು ಅದು ನಿರಂತರವಾಗಿ ಹುಡುಕುತ್ತಿರುತ್ತದೆ. ಹಾಗಾಗಿ ಇನ್ನಾವುದೇ ಭೌತಿಕ ಪರಿವರ್ತನೆಯನ್ನು ಮಾತ್ರ ತೋರಿಸುವ ಬೃಹತ್ ಯೋಜನೆಗಳು ಭಾರತದಲ್ಲಿ ಅಪ್ರಧಾನವಾಗಿ ಬಿಡುತ್ತವೆ. ಬಹುಪಾಲು ಕಳೆದ ವರ್ಷದಲ್ಲಿ ನಡೆದ ಹಲವಾರು ಸಾಂಸ್ಕೃತಿಕ ಹೇರಿಕೆಯ ಪ್ರಯತ್ನಗಳು ಮತ್ತು ಅವುಗಳ ವಿರುದ್ಧ ನಡೆದ (ದೃಶ್ಯ ಮಾಧ್ಯಮಗಳಿಂದ ‘ರಣರಂಗ’ವೆಂದು ಬಿಂಬಿಸಲ್ಪಟ್ಟ) ಭಿನ್ನ ಧಾರೆಯ ಚಿಂತಕರ ಹೋರಾಟಗಳು ಪ್ರತಿನಿತ್ಯ ಸರಕಾರವನ್ನು ಪ್ರಪಾತದತ್ತ ತಳ್ಳಿದ್ದು ಸುಳ್ಳಲ್ಲ!!. ಮೋದಿಯವರೇನೋ ರಾಜಕೀಯ ಸಂಸ್ಕೃತಿಯನ್ನು ಪರಿವರ್ತಿಸಲು ಬಯಸಿದ್ದರು! ಆದರೆ ಅವರನ್ನು ಪ್ರಧಾನಿಯನ್ನಾಗಿ ಮಾಡಿದ ರಾಜಕೀಯ ಶಕ್ತಿ ನಿರಂತರವಾಗಿ ಬೇರೆ ರಾಗಗಳನ್ನೇ ನುಡಿಸುತ್ತಿತ್ತು!! ಹಾಗಾಗಿ, ಪ್ರಧಾನಿ ತಲೆಗೆ ಬಂದ ಈ ವಿರೋಧಾಭಾಸಗಳನ್ನು ನಿರಾಕರಿಸಲು ಪ್ರಧಾನಿಯೇ ಮಾಡಿದ ಪ್ರಯತ್ನಗಳು ‘ಪ್ರಧಾನಿ ಆ ಕೆಡುಕು ತಲೆಗಳೊಂದಿಗೆ ಸೇರಿ ಪಿತೂರಿ ಮಾಡುತ್ತಿದ್ದಾರೆ’ ಎಂಬ ಬಲವಾದ ಅಭಿಪ್ರಾಯ ಸೃಷ್ಟಿಸುವಲ್ಲಿ ಯಶಸ್ವಿಯಾದವು.
 ಇದೂ ಸಹ ಸಂವಹನದಲ್ಲಾದ ಸಮಸ್ಯೆ. ಕೇಂದ್ರ ಸರಕಾರ ತನ್ನ ಪ್ರಧಾನ ಕಾರ್ಯಸೂಚಿಯನ್ನು ಜನರ ಮುಂದೆ ಚರ್ಚೆಗಿಡುವಲ್ಲಿ ವಿಫಲವಾಯಿತು. ‘ಮುದ್ರ’ ದಂತಹ ‘ಆರ್ಥಿಕ ಒಳಗೊಳ್ಳುವಿಕೆ’ ಕಾರ್ಯಕ್ರಮ ಮತ್ತು ‘ಸ್ವಂತ ಕೊಡುಗೆ ಹಾಗೂ ಸರಕಾರದ ಸಬ್ಸಿಡಿ’ಯಂತಹ ವ್ಯವಹಾರ ಮಾಡುವುದನ್ನು ಸುಲಭಗೊಳಿಸುವಂಥ ಜನಪರ ಕಾರ್ಯಕ್ರಮಗಳು ಪ್ರಚಾರದ ಕೊರತೆಯಿಂದ ಸೊರಗಿದವು. ಅಂದರೆ, ಸರಕಾರದ ಗಮನ ತನ್ನ ವಿರೋಧಿಗಳು ಮತ್ತು ‘ಹೆಡ್‌ಲೈನ್ ವ್ಯಾಮೋಹಿ’ ಮಾಧ್ಯಮಗಳ ಕಾರ್ಯಸೂಚಿಯ ಮೇಲೆ ಕೇಂದ್ರೀಕರಿಸಿ ಹೋರಾಡಬೇಕಾಗಿ ಬಂದಿತು. ಹಾಗಾಗಿ ಜನರು ನಿರೀಕ್ಷಿಸಿದ್ದ ಅಭಿವೃದ್ಧಿಯ ಕಡೆಗೆ ಗಮನ ನೀಡಲಾಗದೆ ಗಮನಾರ್ಹ ಕ್ಷೇತ್ರಗಳು ಹಿನ್ನಡೆ ಪಡೆದವು. ದಿಲ್ಲಿ ಮತ್ತು ಬಿಹಾರದ ಬಡ ಮತದಾರ ಬಿಜೆಪಿಯಿಂದ ವಿಮುಖನಾಗಲು ಇದು ಮುಖ್ಯಕಾರಣ.
 ಮೋದಿಯವರ ದೃಷ್ಟಿಯಲ್ಲಿ, ಈ ಎಚ್ಚರಿಕೆ ಗಂಟೆಯು ನಡುದಾರಿಯಲ್ಲಿದ್ದಾಗಲೇ ಮೊಳಗಿರುವುದು ಅವರ ಅದೃಷ್ಟವೆಂದೇ ಹೇಳಬೇಕು! ಏಕೆಂದರೆ ನಡೆಯಲು ಇನ್ನೂ ಅರ್ಧದಾರಿಯಿದೆ, 2016ರಿಂದಲೇ ನಡೆ-ನುಡಿಯನ್ನು ತಿದ್ದಿಕೊಳ್ಳಲು ಆರಂಭಿಸಬಹುದು!!

Writer - ಸ್ವಪನ್‌ದಾಸ್ ಗುಪ್ತ

contributor

Editor - ಸ್ವಪನ್‌ದಾಸ್ ಗುಪ್ತ

contributor

Similar News