ಮಾಧ್ಯಮ ನಿಯಂತ್ರಿಸುವ ಜೇಟ್ಲಿ.. ಮೂರ್ಖನನ್ನಾಗಿ ಮಾಡಿದ ಮೋದಿ...

Update: 2016-01-05 17:46 GMT

 ವಿಶೇಷ ಸಂದರ್ಶನದಲ್ಲಿ
ರಾಮ್ ಜೇಠ್ಮಲಾನಿ
ಮನದಾಳದ ಮಾತು

*ಅಂದರೆ ಆ ಮೂಲಕ ಅವರು ಜನರಿಗೆ ದ್ರೋಹ ಬಗೆದಿದ್ದಾರೆ ಎಂಬ ಅರ್ಥ?

ಉ: ನಾನು ಬಿಹಾರಕ್ಕೆ ಹೋಗಿದ್ದೆ. ನಿತೀಶ್ ತಮ್ಮ ಪ್ರಚಾರಕ್ಕೆ ನನ್ನನ್ನು ಆಹ್ವಾನಿಸಿದ್ದರು. ತಳಮಟ್ಟದ ಪ್ರಚಾರಕ್ಕೆ ಹೋಗುವಷ್ಟು ನನಗೆ ಸಮಯ ಇಲ್ಲ ಎಂದು ಹೇಳಿದೆ. ಆದರೆ ಎರಡು ಸಭೆಗಳನ್ನು ಆಯೋಜಿಸಲು ನಿತೀಶ್‌ಗೆ ಸೂಚಿಸಿದೆ. ನನ್ನನ್ನು ನಂಬಿ. 20 ನಿಮಿಷಕ್ಕಿಂತ ಹೆಚ್ಚು ನಾನು ಮಾತನಾಡುವುದಿಲ್ಲ ಎಂದೂ ಹೇಳಿದ್ದೆ.
ಆದ್ದರಿಂದ ನಾನು ಬಿಹಾರದಲ್ಲಿ ಎರಡು ಸಭೆಗಳಲ್ಲಿ ಮಾತನಾಡಿದೆ. ಬಿಹಾರದಲ್ಲಿ ನಿತೀಶ್ ಹಾಗೂ ಲಾಲೂ ಅವರನ್ನು ಬೆಂಬಲಿಸುವುದು ಅಗತ್ಯ ಎಂದು ಜನರಿಗೆ ಮನವರಿಕೆ ಮಾಡಿದೆ. ಎನ್‌ಡಿಎ ಸರಕಾರ ಜನರಿಗೆ ದ್ರೋಹ ಮಾಡಿರುವುದರಿಂದ ಅದನ್ನು ಬೆಂಬಲಿಸುವ ಅಗತ್ಯವಿಲ್ಲ ಎಂದೆ. ಆದರೆ ನಾನು ಇಲ್ಲಿಗೆ ಬಂದದ್ದು ವಿಭಿನ್ನ ಕಾರಣಕ್ಕಾಗಿ ಎನ್ನುವುದನ್ನೂ ಹೇಳಿದೆ. ಅವರ ಕ್ಷಮೆ ಯಾಚನೆಗೆ ಬಂದಿದ್ದಾಗಿ ಸ್ಪಷ್ಟಪಡಿಸಿದೆ. ನಾನೊಬ್ಬ ಸುಶಿಕ್ಷಿತನಾಗಿ, ಅಪರಾಧ ವಕೀಲನಾಗಿ 75 ವರ್ಷದ ಅನುಭವ ಇರುವ ನನ್ನನ್ನು ಹೇಗೆ ಮೋದಿ ಮೂರ್ಖನನ್ನಾಗಿ ಮಾಡಿದರು ಎನ್ನುವುದನ್ನು ವಿವರಿಸಿದೆ. ನಾನು ಬಿಜೆಪಿಯಿಂದ ಉಚ್ಚಾಟಿತನಾಗಿದ್ದರೂ, 2014ರ ಚುನಾವಣೆಯಲ್ಲಿ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದೆ. ಇದೆಲ್ಲಕ್ಕೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದೆ.

* ಅಂದರೆ ಮೋದಿ ಅಥವಾ ಬಿಜೆಪಿ ನಿಮ್ಮನ್ನು ಪ್ರಚಾರಕ್ಕಾಗಿ ಸಂಪರ್ಕಿಸಿದ್ದರು?
ಉ: ಮೊದಲು ನನ್ನ ಕಥೆ ಮುಗಿಸುತ್ತೇನೆ. ‘ಸಂಡೇ ಗಾರ್ಡಿಯನ್’ಗೆ ನಾನು ಸಾಪ್ತಾಹಿಕ ಅಂಕಣ ಬರೆಯುತ್ತಿದ್ದೆ. 2014ರ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ನಾನು ಬರೆದ ಅಂಕಣವನ್ನು ನೀವು ಓದಿರಬಹುದು. ಮೋದಿ, ನಿಮ್ಮ ಅಭೂತಪೂರ್ವ ವಿಜಯಕ್ಕೆ ಅಭಿನಂದನೆಗಳು. ನಿಮ್ಮ ಯಶಸ್ಸಿಗೆ ನನ್ನ ಸಣ್ಣ ಕೊಡುಗೆ ನೀಡಿರುವುದು ನನಗೆ ಹೆಮ್ಮೆಯ ಸಂಗತಿ. ಆದರೆ ನನಗೆ ಸಂಬಂಧಿಸಿದಂತೆ ನಾನು ದೇವರ ವಿಮಾನ ನಿಲ್ದಾಣದ ನಿರ್ಗಮನ ಕೊಠಡಿಯಲ್ಲಿ ಇರುವವನು. ಆದ್ದರಿಂದ ನಿಮ್ಮಿಂದ ಏನೂ ಬಯಸುವುದಿಲ್ಲ. ಏನೂ ಇಲ್ಲ ಎಂದರೆ ಏನೂ ಇಲ್ಲ. ಈಗ ಜನರಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸಿ ಎಂದಷ್ಟೇ ಹೇಳುತ್ತೇನೆ
ನನಗೆ ಒಂದು ಬಾರಿ ಫೋನ್‌ನಲ್ಲಿ ಥ್ಯಾಂಕ್ಸ್ ಹೇಳುವ ಸೌಜನ್ಯವೂ ಮೋದಿಗಿರಲಿಲ್ಲ ಗೊತ್ತೇ? ಇದು ಏನನ್ನು ಸೂಚಿಸುತ್ತದೆ? ನನಗಂತೂ ಆತನನ್ನು ಅಮಾನವೀಯ ಎನಿಸುತ್ತದೆ. ಆನಂತರ ಇಂದಿನವರೆಗೂ ಆ ಮನುಷ್ಯ ನನ್ನ ಬಳಿ ಮಾತನಾಡಿಲ್ಲ.

ಈ ಕಾರಣದಿಂದ ಈ ದೇಶದ ಶ್ರೇಷ್ಠ ಅಪರಾಧ ವಕೀಲನಾಗಿ ಮೋಸಹೋಗಿದ್ದರೂ, ಬಿಹಾರದ ಜನತೆಗೆ ನಾನು ಕ್ಷಮೆ ಕೋರುವ ಸಲುವಾಗಿ ಬಂದಿದ್ದೇನೆ ಎಂದು ಹೇಳಿದೆ. ಇದು ವೈರಸ್‌ನಂತೆ ಹಬ್ಬಿತು. ನಿತೀಶ್ ಇದನ್ನು ತಮ್ಮ ಎಲ್ಲ ಭಾಷಣಗಳಲ್ಲೂ ಬಳಸಿಕೊಂಡರು. ಮೋದಿಯವರ ಪ್ರಚಾರಕ್ಕೆ ಬಿಹಾರದಲ್ಲಿ ಯಾವ ಗತಿ ಬಂತು ನೋಡಿ. ಅವರು ವಿಸ್ತೃತವಾಗಿ ಪ್ರಚಾರ ಮಾಡಿದರು. ಆದರೆ ಜೀವಮಾನದಲ್ಲೇ ಘನಘೋರ ಸೋಲು ಕಂಡರು. ಮೋದಿಗೆ ಇದು ಇನ್ನೂ ಅರ್ಥವಾಗಿಲ್ಲ.

* ಮೋದಿಗೆ ವಾಸ್ತವ ಅರ್ಥವಾಗಿಲ್ಲ ಎಂದು ನಿಮಗೆ ಹೇಗೆ ಗೊತ್ತು? ಅವರನ್ನು ಭೇಟಿಯಾಗಿದ್ದೀರಾ?
ಉ: ಅವರು ಇಲ್ಲಿಗೆ ಬರುತ್ತಿದ್ದರು.

* 2014ರ ಚುನಾವಣೆ ಪ್ರಚಾರದ ಸಂದರ್ಭದಲ್ಲಿ?


ಉ: ಹೌದು. ಅದಕ್ಕೆ ಮೊದಲು ಕೂಡಾ. 2013ರ ಸೆಪ್ಟೆಂಬರ್‌ನಲ್ಲಿ ನನ್ನ ಹುಟ್ಟುಹಬ್ಬಕ್ಕೆ ಮೋದಿ ಹಾಗೂ ಅಡ್ವಾಣಿ ಆಗಮಿಸಿದ್ದರು. ಅವರಿಬ್ಬರ ಮಧ್ಯೆ ಒಂದು ರೀತಿಯ ಹೊಂದಾಣಿಕೆ ತರಲು ನಾನು ಪ್ರಯತ್ನಿಸಿದೆ. ಒಂದಕ್ಕಿಂತ ಹೆಚ್ಚು ಬಾರಿ ಮೋದಿ ನನ್ನ ನಿವಾಸಕ್ಕೆ ಬಂದಿದ್ದರು. ಎಲ್ಲ ಪಕ್ಷಗಳ ವಕೀಲರು ಕೂಡಾ ಮೋದಿ ಪರವಾಗಿ ಪ್ರಚಾರ ಮಾಡುವಂತೆ ನಾನು ಮನಮೊಲಿಸಿದೆ. ದೇಶದ ಎಲ್ಲ ಭಾಗಗಳಿಂದ ಆಗಮಿಸಿದ್ದ ಸುಮಾರು 15ರಿಂದ 20 ಸಾವಿರ ವಕೀಲರು ತಲ್ಕಟೋರಾ ಕ್ರೀಡಾಂಗಣದಲ್ಲಿ ಸೇರಿದ್ದರು. * ಮೋದಿ ಹಾಗೂ ಅಡ್ವಾಣಿ ನಡುವೆ ಸಮನ್ವಯ ಸಾಧಿಸಲು ಆಗಲಿಲ್ಲ?
ಉ: ಇಲ್ಲ. ಇದಕ್ಕೆ ವಿರುದ್ಧವಾಗಿ ಮೋದಿ ಅವರೆಲ್ಲರನ್ನೂ ನಿಷ್ಕ್ರಿಯಗೊಳಿಸಿದರು (ನಗೆ)

* ಜೇಟ್ಲಿ ನಿಮ್ಮ ಸಂಪರ್ಕದಲ್ಲಿದ್ದರೇ? ಅವರ ಬಗ್ಗೆ ಏನೆನಿಸುತ್ತದೆ?
ಉ: ಜೇಟ್ಲಿ ಏನು ಮಾಡಿದ್ದಾರೆ? ಅವರು ಹಾಜರಾದ ಯಾವ ದೊಡ್ಡ ಪ್ರಕರಣವೂ ನನಗೆ ನೆನಪಿಲ್ಲ. ಆದರೆ ನನ್ನ ಹತ್ತು ಪಟ್ಟು ಹಣ ಅವರ ಬ್ಯಾಂಕ್ ಖಾತೆಯಲ್ಲಿದೆ. ಹಾಗಾದರೆ ಈ ಬಗ್ಗೆ ನೀವೇ ತೀರ್ಮಾನ ತೆಗೆದುಕೊಳ್ಳಬಹುದು.
* ಕೇಜ್ರಿವಾಲ್ ಅವರ ಪರವಾಗಿ ನೀವು ಪ್ರತಿನಿಧಿಸುವುದನ್ನು ಬಹಿರಂಗಪಡಿಸಿದ ಬಳಿಕ ಇವೆಲ್ಲವನ್ನೂ ನೀವೇ ಮಾಡಿಸಿದ್ದೀರಿ ಎಂಬ ಸಂಶಯ ಮಾಧ್ಯಮ ವಲಯದಲ್ಲಿ ವ್ಯಕ್ತವಾಗಿದೆ. ಏಕೆಂದರೆ ಅಟಲ್ ಸರಕಾರದಲ್ಲಿ ನೀವು ಸಚಿವ ಪದವಿ ಕಳೆದುಕೊಳ್ಳಲು ಜೇಟ್ಲಿ ಕಾರಣ. ಇದು ನಿಜವೇ?
ಉ: ಖಂಡಿತವಾಗಿಯೂ ಅವರು ವಾಜಪೇಯಿಯವರನ್ನು ದಿಕ್ಕುತಪ್ಪಿಸಿದ್ದಾರೆ. ಆಗ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿತ್ತು. ಏಳು ವರ್ಷ ಹಿಂದೆ ಬಾಳ್ ಠಾಕ್ರೆ ಏನೋ ಮಾಡಿದ್ದರು. ನಿಖರವಾಗಿ ಏನೆಂದು ನನಗೆ ನೆನಪಿಲ್ಲ. ಮಹಾರಾಷ್ಟ್ರ ಸರಕಾರ ಅವರನ್ನು ಬಂಧಿಸಲು ಮುಂದಾಗಿತ್ತು. ಅವರು ಬಿಜೆಪಿ ಮೈತ್ರಿಯಲ್ಲಿದ್ದರು. ಆದ್ದರಿಂದ ವಾಜಪೇಯಿ ನನ್ನನ್ನು ಕರೆದು, ‘‘ರಾಮ್, ಆತ ನಮ್ಮ ಮಿತ್ರಪಕ್ಷದವ. ನೀವು ಆತನನ್ನು ರಕ್ಷಿಸಬೇಕು’’ ಎಂದು ಹೇಳಿದರು.
ಆತ ನನಗೆ ಸ್ನೇಹಿತ. ನೀವೇನೂ ಭಯಪಡಬೇಡಿ. ಏನೂ ಆಗುವುದಿಲ್ಲ ಎಂದು ನಾನು ವಾಜಪೇಯಿಯವರಿಗೆ ಹೇಳಿದೆ. ಆಗ ನಾನು ಕಾನೂನು ಸಚಿವನಾಗಿದ್ದೆ. ಠಾಕ್ರೆಯನ್ನು ಸಮರ್ಥಿಸಿ ಪ್ರಬಲವಾಗಿ ಬಹಿರಂಗ ಹೇಳಿಕೆ ನೀಡಿದೆ.
ಕುತೂಹಲಕಾರಿ ಘಟನೆಯಲ್ಲಿ ಅಂದಿನ ಮುಖ್ಯ ನ್ಯಾಯಮೂರ್ತಿ (ಆದರ್ಶ್ ಸೇನ್) ಆನಂದ್ ನನ್ನ ಮೇಲೆ ವಾಗ್ದಾಳಿ ಮಾಡಿದರು. ಠಾಕ್ರೆಯನ್ನು ಸಮರ್ಥಿಸಿಕೊಳ್ಳುವ ಹೇಳಿಕೆ ಬಿಡುಗಡೆ ಮಾಡುತ್ತಾರೆ ಎಂದರೆ ಕಾನೂನು ಸಚಿವ ಏನೆಂದುಕೊಂಡಿದ್ದಾರೆ? ಎಂದು ಅವರು ಹೇಳಿದ್ದರು. ಮಾಜಿ ಅಟಾರ್ಜಿ ಜನರಲ್ ಸೋಲಿ ಸೊರಾಬ್ಜಿ ಹಾಗೂ ಅರುಣ್ ಜೇಟ್ಲಿಯವರ ಸಮ್ಮುಖದಲ್ಲಿ ಈ ಹೇಳಿಕೆ ನೀಡಿದ್ದರು. ಮುಖ್ಯನ್ಯಾಯಮೂರ್ತಿ ಆನಂದ್ ಈ ಹೇಳಿಕೆ ನೀಡಿದ ತಕ್ಷಣ, ನಾನು ಪತ್ರಿಕಾಗೋಷ್ಠಿ ಕರೆದು, ನನ್ನ ಕೆಲಸ ನನಗೆ ಗೊತ್ತಿದೆ. ಖಂಡಿತವಾಗಿಯೂ ನನಗೆ ಮುಖ್ಯನ್ಯಾಯಮೂರ್ತಿಗಳು ಮಾಡಿದ್ದಕ್ಕಿಂತ ಹೆಚ್ಚಿನ ಕಾನೂನುಗಳು ತಿಳಿದಿವೆ ಎಂದು ಮುಖ್ಯನ್ಯಾಯಮೂರ್ತಿಗಳಿಗೆ ತಿಳಿಸಬೇಕು ಎಂದು ಕೋರಿದೆ. ಮೊದಲನೆಯದಾಗಿ ನನ್ನ ಅನುಪಸ್ಥಿತಿಯಲ್ಲಿ ಅವರು ಆ ಹೇಳಿಕೆ ನೀಡಿದ್ದು ತಪ್ಪು. ಎರಡನೆಯದಾಗಿ ಆ ಹೇಳಿಕೆ ಖಂಡಿತವಾಗಿಯೂ ಅವಮಾನಕರ ಮತ್ತು ಮುಖ್ಯ ನ್ಯಾಯಮೂರ್ತಿಗಳ ಘನತೆಗೆ ತಕ್ಕುದಾಗಿರಲಿಲ್ಲ.
ನನ್ನ ಅನಿಸಿಕೆಯ ಪ್ರಕಾರ, ಸೊರಾಬ್ಜಿ ಹಾಗೂ ಜೇಟ್ಲಿ ವಾಜಪೇಯಿಯವರ ಬಳಿಗೆ ಹೋಗಿ, ಸುಪ್ರೀಂಕೋರ್ಟ್, ಸರಕಾರದ ವೈರಿಯಾಗಿದೆ ಎಂದು ಹೇಳಿರಬೇಕು. ನನ್ನನ್ನು ಕೈಬಿಡುವವರೆಗೂ ಎನ್‌ಡಿಎಗೆ ಸುಪ್ರೀಂಕೋರ್ಟ್‌ನಿಂದ ತೊಂದರೆ ತಪ್ಪಿದ್ದಲ್ಲ ಎಂದು ಅವರು ಹೇಳಿದ್ದರು. ವಾಜಪೇಯಿಯವರಿಗೆ ನನ್ನನ್ನು ಕರೆಸುವ ಧೈರ್ಯ ಇರಲಿಲ್ಲ. ಬಡ ಜಸ್ವಂತ್ ಸಿಂಗ್ ಅವರಲ್ಲಿ ಆ ಕೆಲಸ ಮಾಡಿಸಿದರು.
ನನಗೆ ಖಚಿತವಾಗಿ ನೆನಪಿದೆ. ನಾನು ಮುಂಬೈನಿಂದ ಪುಣೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಜಸ್ವಂತ್ ಕರೆ ಮಾಡಿದರು. ತಕ್ಷಣ ನಾನು, ತುರ್ತು ಕರೆ ಮಾಡುವ ಸಂದರ್ಭ ಏನಿತ್ತು ಎಂದು ಕೇಳಿದೆ. ನಾನು ರಾಜೀನಾಮೆ ನೀಡಬೇಕು ಎಂದು ಪ್ರಧಾನಿ ಬಯಸಿದ್ದಾರೆ ಎಂದು ಹೇಳಿದರು. ಕಣ್ಣು ಮುಚ್ಚಿ ತೆರೆಯುವುದರೊಳಗಾಗಿ ನಾನು ಹೇಳಿದೆ, ಜಸ್ವಂತ್, ಪ್ರಧಾನಿಗೆ ಹೇಳಿ. ಮುಂಬೈ- ಪುಣೆ ರಸ್ತೆಯ ಸನಿಹದಲ್ಲಿ ಎಲ್ಲಿ ಫ್ಯಾಕ್ಸ್ ಮೆಷಿನ್ ಕಾಣುತ್ತದೆಯೋ ಅಲ್ಲಿಂದಲೇ ನನ್ನ ರಾಜೀನಾಮೆ ಪತ್ರ ಕಳುಹಿಸುತ್ತೇನೆ ಎಂದು ಪ್ರತಿಕ್ರಿಯಿಸಿದೆ. ಹಾಗೆಯೇ ಮಾಡಿದೆ.

*ಜಸ್ವಂತ್ ಅವರ ಬಳಿ ನೀವು ಕಾರಣ ಕೇಳಿಲ್ಲವೇ?
ಉ: ಇಲ್ಲ. ನನ್ನನ್ನು ನಂಬಿ. ಅಂದಿನಿಂದ ಇಂದಿನವರೆಗೂ ವಾಜಪೇಯಿಯವರ ಮುಖ ನೋಡಿಲ್ಲ. ಎಷ್ಟು ವರ್ಷ ಕಳೆಯಿತು? ಅವರ ಪರಿಸ್ಥಿತಿ ನೆಟ್ಟಗಿಲ್ಲ ಎಂದು ನಾನು ಕೇಳಲ್ಪಟ್ಟಿದ್ದೇನೆ. ಆದ್ದರಿಂದ ಅವರನ್ನು ಭೇಟಿ ಮಾಡಬೇಕೇ ಎಂದು ಕೆಲವೊಮ್ಮೆ ಯೋಚಿಸಿದ್ದಿದೆ. ಆದರೆ ಅವರನ್ನು ನೋಡುವ ಮನಸ್ಸಾಗುತ್ತಿಲ್ಲ.

* ನಿಮಗೆ ಮುಖಾಮುಖಿಯಾಗಿ ಜೇಟ್ಲಿ ಸಂಕೀರ್ಣ ಎಂದು ಹೇಳುತ್ತಿದ್ದೀರಾ?
ಉ: ಸಹಜವಾಗಿಯೇ. ಈ ಎಲ್ಲ ಜೀವಿಗಳು ತಮಗಿಂತ ಬುದ್ಧಿವಂತರನ್ನು ಬಯಸುವುದಿಲ್ಲ. 2013ರಲ್ಲಿ ಅವರು ನನ್ನನ್ನು ಬಿಜೆಪಿಯಿಂದ ಉಚ್ಛಾಟಿಸುವಂತೆ ನೋಡಿಕೊಂಡರು.

*ಆಗ ಬಿಜೆಪಿ ವಿರುದ್ಧ ನೀವು ಮಾನಹಾನಿ ದಾವೆ ಹೂಡಿರಲಿಲ್ಲವೇ?
ಉ: ಇಲ್ಲ. ನನ್ನನ್ನು ಉಚ್ಛಾಟಿಸಿದ ಆದೇಶ ಅನೂರ್ಜಿತಗೊಳಿಸುವಂತೆ ದಾವೆ ಹೂಡಿದ್ದೆ.

* ಆ ಪ್ರಕರಣ ಏನಾಯಿತು?
ಪ್ರತಿ ಬಾರಿಯೂ ಅವರು ಮುಂದೂಡಿಕೆ ಕೇಳುತ್ತಿದ್ದಾರೆ.

* ಜೇಟ್ಲಿ ಬಳಿ ಬಹುಶಃ ಬಹಳಷ್ಟು ಪ್ರಭಾವಳಿ ಇದೆ. ಅದು ಎಲ್ಲಿಂದ ಬಂದದ್ದು?

ಉ: ವಾಸ್ತವವಾಗಿ ಅವರು ಮಾಧ್ಯಮವನ್ನು ನಿಯಂತ್ರಿಸುತ್ತಾರೆ. ಅದು ಮಾಧ್ಯಮಗಳಲ್ಲೇ ಅಷ್ಟಾಗಿ ಪ್ರತಿಫಲಿತವಾಗುವುದಿಲ್ಲ. ಮಾಧ್ಯಮದ ಮಾಲಕರ ಮೇಲೆ ಅವರು ಪ್ರಭಾವ ಬೀರುತ್ತಾರೆ. ನಾನು ಟಿವಿ ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ನಿಮ್ಮ ಮಾಲಕರು ನಾನು ಹೇಳಿದ್ದನ್ನು ಪ್ರಕಟಿಸಲು ಅವಕಾಶ ನೀಡುವುದಿಲ್ಲ ಎಂದು ಬಹಳಷ್ಟು ಮಾಧ್ಯಮ ಪ್ರತಿನಿಧಿಗಳಿಗೆ ನಾನು ಹೇಳಿದ್ದೇನೆ. ಕಳೆದ ಎಪ್ರಿಲ್‌ನಲ್ಲಿ, ಜೇಟ್ಲಿಯವರ ವಿರುದ್ಧ ನಾನು ಪ್ರಬಲ ಲೇಖನ ಬರೆದೆ. ಅದರಲ್ಲಿ ನಾನು ಕೆಲ ಪ್ರಶ್ನೆಗಳನ್ನು ಎತ್ತಿ ಅವರಿಂದ ಪ್ರತಿಕ್ರಿಯೆ ಬಯಸಿದ್ದೆ. ಅದುವರೆಗೆ ಐದು ವರ್ಷಗಳಿಂದ ನಾನು ‘ಸಂಡೆ ಗಾರ್ಡಿಯನ್’ಗೆ ಅಂಕಣ ಬರೆಯುತ್ತಿದ್ದೆ. ಶುಕ್ರವಾರ ನನ್ನ ಲೇಖನ ಕಳುಹಿಸುತ್ತಿದ್ದೆ. ಅವರು ಅದನ್ನು ಶನಿವಾರ ನೋಡಿ, ರವಿವಾರ ಮುಂಜಾನೆ ಅದು ಪ್ರಕಟವಾಗುತ್ತಿತ್ತು.
ರವಿವಾರ ಬೆಳಗ್ಗೆ ನಾನು ಪತ್ರಿಕೆಯನ್ನು ತೆರೆದು ನೋಡಿದೆ. ನನ್ನ ಲೇಖನ ಪ್ರಕಟವಾಗಿರಲಿಲ್ಲ. ನನ್ನ ಲೇಖನ ಪ್ರಕಟವಾಗುತ್ತಿದ್ದ ಸ್ಥಳದಲ್ಲಿ ಒಂದು ಜಾಹೀರಾತು ಇತ್ತು. ಆ ಅವಧಿಯಲ್ಲಿ ನಾನು ಸಂಡೆ ಗಾರ್ಡಿಯನ್ ಪತ್ರಿಕೆ ಆಡಳಿತ ಮಂಡಳಿಯ ಅಧ್ಯಕ್ಷನಾಗಿದ್ದೆ. ಆ ದಿನವೇ ನಾನು ರಾಜೀನಾಮೆ ನೀಡಿದೆ. ನನ್ನ ಲೇಖನವನ್ನು ನಾನು ನನ್ನ ಟ್ವಿಟರ್ ಹಾಗೂ ಫೇಸ್‌ಬುಕ್ ಅಕೌಂಟ್‌ನಲ್ಲಿ ಪ್ರಕಟಿಸಿದೆ. ಅದರ ಜೊತೆಗೆ ನಾನು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೂ ಕರೆ ಮಾಡಿದೆ. ನನ್ನ ಲೇಖನವನ್ನು ಪ್ರಕಟಿಸಬೇಕು ಎಂದು ಆ ಪತ್ರಿಕೆಗೆ ಕೇಳಿಕೊಂಡೆ. ಅದನ್ನು ಜಾಹೀರಾತಿನ ರೂಪದಲ್ಲಿ ಪ್ರಕಟಿಸಲು ಕೋರಿ, ಅದಕ್ಕೆ ಪಾವತಿ ಮಾಡುತ್ತೇನೆ ಎಂದು ಹೇಳಿದೆ. ಅದಕ್ಕೆ 13 ಲಕ್ಷ ರೂ. ದರ ವಿಧಿಸಲಾಗಿತ್ತು ಗೊತ್ತೇ?

* ಒಂದು ಲೇಖನಕ್ಕೆ 13 ಲಕ್ಷ ರೂ.!
ಉ: ಹೌದು. ಆದರೆ ಆ ಲೇಖನ ಪೂರ್ಣವಾಗಿ (ಜಾಹೀರಾತು ರೂಪದಲ್ಲಿ) ಪ್ರಕಟವಾಯಿತು. ಆ ಲೇಖನ, ಸರಕಾರ ಕಪ್ಪುಹಣವನ್ನು ವಿದೇಶದಿಂದ ತರಲು ಏಕೆ ಏನೂ ಮಾಡುತ್ತಿಲ್ಲ ಎನ್ನುವುದಾಗಿತ್ತು.

* ಇದು ದಿಗ್ಭ್ರಮೆ ಹುಟ್ಟಿಸುವಂಥದ್ದು.
ಉ: ಆದರೆ ಇದು ಇಂಡಿಯನ್ ಎಕ್ಸ್‌ಪ್ರೆಸ್ ಜೇಬು ಸೇರಿದೆಯೋ ಅಥವಾ ಅವರ ಏಜೆಂಟರಿಗೆ ಸೇರಿದೆಯೋ ಗೊತ್ತಿಲ್ಲ.

* ಬಹುಶಃ ಒಬ್ಬ ಲೇಖಕ ತನ್ನ ಲೇಖನ ಪ್ರಕಟವಾಗಲು ನೀಡಿದ ಅತಿದೊಡ್ಡ ಶುಲ್ಕ ಇದು?
ಉ: ಹೌದು. ಹೌದು; ನಾನು ಅದಕ್ಕೆ ಪಾವತಿಸಿದ್ದೇನೆ.

* ಹಣಕಾಸು ಸಚಿವರು ಅದನ್ನು ಇಷ್ಟಪಟ್ಟಿರಲಿಕ್ಕಿಲ್ಲ. ಹೌದೇ?
ಉ: ಅದಕ್ಕೆ ತಮ್ಮ ಬಳಿ ಉತ್ತರ ಇಲ್ಲ ಎನ್ನುವುದು ಜೇಟ್ಲಿಗೆ ಗೊತ್ತಿತ್ತು. ಇದಕ್ಕೆ ನೀಡಲು ಪ್ರಾಮಾಣಿಕ ಉತ್ತರ ಅವರ ಬಳಿ ಇದ್ದರೆ ಅವರು ನೀಡಬೇಕಿತ್ತು. ಅವರು ಸಾರ್ವಜನಿಕ ಜೀವನದಲ್ಲಿ ಯಾಕಿದ್ದಾರೆ? ಉತ್ತರಗಳನ್ನು ನೀಡಲು.

* ನಿಮ್ಮ ಬಳಿಗೆ ಸಂದರ್ಶನಕ್ಕಾಗಿ ಬರುತ್ತಿದ್ದಾಗ, ಕಾನೂನು ವಲಯದಲ್ಲಿ ಚಾಲ್ತಿಯಲ್ಲಿರುವ ಒಂದು ಮಾತಿನ ಬಗ್ಗೆ ನಿಮ್ಮಿಂದ ಸ್ಪಷ್ಟನೆ ಕೇಳಲು ನನ್ನ ಸ್ನೇಹಿತ ಕೋರಿದ್ದಾರೆ. ಯುವಕರಾಗಿದ್ದಾಗ ಜೇಟ್ಲೆ ನಿಮ್ಮ ಕೋಟ್ ಒಯ್ಯುತ್ತಿದ್ದರು ಎನ್ನುವುದು ನಿಜವೇ?
ಉ: (ಕೆಲ ಹೊತ್ತು ವೌನ). ಅದರಲ್ಲಿ ಯಾವ ಸಂಶಯವೂ ಇಲ್ಲ.

* ಡಿಡಿಸಿಎ ಹಗರಣದ ವಿಚಾರದ ಬಗ್ಗೆ ಪ್ರತಿಕ್ರಿಯಿಸುವಾಗ ಮೋದಿ ಏಕೆ ಅಡ್ವಾಣಿಯವರನ್ನು ಎಳೆದಿದ್ದಾರೆ? ಆಡ್ವಾಣಿ ಹವಾಲಾ ಹಗರಣದಿಂದ ಮುಕ್ತರಾದಂತೆ ಜೇಟ್ಲಿ ನಿರ್ದೋಷಿ ಎನ್ನುವುದು ಸಾಬೀತಾಗುತ್ತದೆ ಎಂದು ಏಕೆ ಹೇಳಿದ್ದಾರೆ?
 ಉ: ಮೋದಿ ಹೇಳಿಕೆ ತೀರಾ ಗೊಂದಲಕಾರಿ. ಪ್ರಕರಣ ಬೆಳಕಿಗೆ ಬಂದ ತಕ್ಷಣ ಅಡ್ವಾಣಿ ರಾಜೀನಾಮೆ ನೀಡಿದರು. ಅವರು ನನ್ನನ್ನು ಸಂಪರ್ಕಿಸಿದ್ದರು ಎಂದು ನಾನು ಹೇಳಲೇಬೇಕಾಗುತ್ತದೆ.

* ಯಾರು? ಅಡ್ವಾಣಿ?
ಉ: ಹೌದು. ಅವರು ಹಾಗೂ ಜೇಟ್ಲಿ ನನ್ನನ್ನು ಹವಾಲಾ ಪ್ರಕರಣ ಸಂಬಂಧ ಬೇಟಿ ಮಾಡಿದ್ದರು. ಜೇಟ್ಲಿ ಆಗ ಅಡ್ವಾಣಿಯವರ ವಕೀಲರಾಗಿದ್ದರು. ಸೆಷನ್ಸ್ ಕೋರ್ಟ್ ಬರೆದ 200ಪುಟಕ್ಕೂ ಹೆಚ್ಚಿದ್ದ ತೀರ್ಪಿನಲ್ಲಿ ಅಡ್ವಾಣಿ ವಿರುದ್ಧ ಆರೋಪಗಳನ್ನು ಪಟ್ಟಿ ಮಾಡಲಾಗಿತ್ತು. (ಅದರ ಅರ್ಥ ಅಡ್ವಾಣಿಯವರ ವಿರುದ್ಧ ಮಾಡಿದ ಆರೋಪಗಳನ್ನು ಪಟ್ಟಿ ಮಾಡದಂತೆ ಸೆಷನ್ಸ್ ನ್ಯಾಯಾಲಯವನ್ನು ಮನವೊಲಿಸುವುದು ಜೇಟ್ಲಿಗೆ ಸಾಧ್ಯವಾಗಿರಲಿಲ್ಲ). ಕ್ಷಮಿಸಿ. ಅಡ್ವಾಣಿ ಪರವಾಗಿ ನಾನು ಹಾಜರಾಗುವುದಿಲ್ಲ ಎಂದು ನಿರಾಕರಿಸಿದೆ.
ವಾರದ ಬಳಿಕ ಜೇಟ್ಲಿಯೂ ಸೇರಿ ಅವರು ಮತ್ತೆ ಬಂದರು. ಈ ಪ್ರಕರಣವನ್ನು ನೀವು ತೆಗೆದುಕೊಳ್ಳದಿದ್ದರೆ, ನಾನು ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಹೇಳಿದರು. ಅದಕ್ಕೆ ನೀವು ಹೊಣೆಯಾಗುತ್ತೀರಿ ಎಂದು ಅಡ್ವಾಣಿ ಹೇಳಿದರು. ನನ್ನ ಮನೆಯಲ್ಲಿ ಒಂದು ರೀತಿಯ ಸತ್ಯಾಗ್ರಹವನ್ನೇ ನಡೆಸಿದರು. ಅಡ್ವಾಣಿಯವರ ಪತ್ನಿ ನನ್ನ ರಕ್ಷಾಬಂಧನ ಸಹೋದರಿ. ಅಂತಿಮವಾಗಿ ನಾನು ಪ್ರಕರಣ ತೆಗೆದುಕೊಂಡೆ. ಉಚಿತವಾಗಿ ನಾನು ವಾದಿಸಿದೆ. ಅಡ್ವಾಣಿ ಮೇಲಿನ ಆರೋಪಗಳನ್ನು ಹೈಕೋರ್ಟ್ ತಳ್ಳಿಹಾಕುವಂತೆ ಮಾಡುವಲ್ಲಿ ನಾನು ಯಶಸ್ವಿಯಾದೆ. ಸರಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಹೈಕೋರ್ಟ್ ತೀರ್ಪು ಉಳಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ನಲ್ಲಿ ನಾನು ವಾದ ಮಂಡಿಸಿದೆ.
ಅಡ್ವಾಣಿ ನನಗೆ ತಿಳಿದಿರುವಂತೆ 600 ಪುಟಗಳ ಪುಸ್ತಕ ಬರೆದಿದ್ದಾರೆ. (ಮೈ ಲೈಫ್, ಮೈ ಕಂಟ್ರಿ, ವಾಸ್ತವವಾಗಿ 1,000 ಪುಟಗಳಿವೆ). ಅದರಲ್ಲಿ ನನ್ನ ಬಗ್ಗೆ ಒಂದು ಕಡೆ ಉಲ್ಲೇಖವಿದೆ. ರಾಮ್ ಜೇಠ್ಮಲಾನಿ ಶಿಖಾರ್‌ಪುರ (ಸಿಂಧ್, ಪಾಕಿಸ್ತಾನ)ದಲ್ಲಿ ಹುಟ್ಟಿದರು. ನನ್ನ ಉಚ್ಛಾಟನೆಯಲ್ಲಿ ಅವರ ಕೈವಾಡವೂ ಇದೆ.

* ಅವರಿದ್ದಾರೆಯೇ?
ಉ: ಹೌದು. ಜೇಟ್ಲಿ, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ ಜತೆ ಅವರೂ ಇದ್ದಾರೆ. ಆದರೆ ಗಡ್ಕರಿ ಕನಿಷ್ಠ ನನ್ನ ವಿರುದ್ಧ ಮಾಡಿದ್ದು ತಪ್ಪುಎಂಬುದನ್ನು ಒಪ್ಪಿಕೊಂಡಿದ್ದಾರೆ.

*ಗಡ್ಕರಿ ನಿಮ್ಮ ವಿರುದ್ಧ ಏಕೆ ಹೋದರು?

ಉ: ನಾನು ಗಡ್ಕರಿಯವರನ್ನು ಕರೆಸಿದೆ. ಅವರನ್ನು ಎರಡನೇ ಅವಧಿಗೆ ಅಧ್ಯಕ್ಷರನ್ನಾಗಿ ಮಾಡುವ ಸಂಬಂಧ ಪಕ್ಷದ ಸಂವಿಧಾನವನ್ನು ಬಿಜೆಪಿ ತಿದ್ದುಪಡಿ ಮಾಡುತ್ತಿದ್ದ ಕಾಲ ಅದು. ನಾನು ಅದಕ್ಕೆ ವಿರೋಧವಿದ್ದೆ. ನಾನು ನಿಮ್ಮ ವೈರಿ ಅಲ್ಲ ಎನ್ನುವುದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ. ನಿಮ್ಮ ಕುರ್ಚಿಯನ್ನು ನಾನು ಬಯಸಿಯೂ ಇಲ್ಲ. ಆದರೆ ಪಕ್ಷ ನಿಮ್ಮನ್ನು ಎರಡನೆ ಅವಧಿಗೆ ಅಧ್ಯಕ್ಷರನ್ನಾಗಿ ಮಾಡುವುದನ್ನು ಏಕೆ ವಿರೋಧಿಸುತ್ತೇನೆ ಎನ್ನುವುದನ್ನು ನಿಮಗೆ ಹೇಳುತ್ತೇನೆ ಎಂದು ಗಡ್ಕರಿಗೆ ವಿವರಿಸಿದೆ. ಅವರು ವೈಯಕ್ತಿಕವಾಗಿ ಜವಾಬ್ದಾರರಲ್ಲದ ಅವರ ಜೀವನದ ಕೆಟ್ಟ ಘಟನೆಗಳನ್ನು ನಾನು ನೆನಪಿಸಿದೆ. ಆದರೆ ಸರಕಾರಕ್ಕೆ ಅದು ಗೊತ್ತಿತ್ತು. ಆದ್ದರಿಂದ ಸರಕಾರ ನಿಮ್ಮನ್ನು ಯಾವಾಗಲೂ ಬ್ಲ್ಯಾಕ್‌ಮೇಲ್ ಮಾಡಬಹುದು ಎಂದು ಹೇಳಿದೆ. ಇತರ ಮೂರ್ಖರಂತಲ್ಲ; ಇಂದಿಗೂ ನಾನು ನೀಡಿದ ಸಲಹೆಯನ್ನು ಅವರು ನೆನಪಿಸಿಕೊಳ್ಳುತ್ತಾರೆ. ನನ್ನ ಉಚ್ಚಾಟನೆ ಆದೇಶಕ್ಕೆ ಅವರೇ ಸಹಿ ಮಾಡಿದ್ದರೂ, ನನ್ನ ಜೊತೆ ಇತರರಿಗಿಂತ ಹೆಚ್ಚು ಸ್ನೇಹಮಯವಾಗಿದ್ದಾರೆ. *ನೀವು ಉಲ್ಲೇಖಿಸಿದ ಕೆಟ್ಟ ಘಟನೆ ಯಾವುದು?
ಆ ಘಟನೆ ಎಂದರೆ ಅವರ ಗ್ಯಾರೇಜ್‌ನಲ್ಲಿ ಅವರು ಕಾರು ಇಟ್ಟುಕೊಂಡಿದ್ದರು. ಆ ಕಾರಿನಲ್ಲಿ ಒಬ್ಬಾಕೆ ಹುಡುಗಿ ಮೃತಪಟ್ಟಿದ್ದು ಕಂಡುಬಂತು. ರಕ್ಷಣೆ ಏನು? ಗ್ಯಾರೇಜ್ ಬಾಗಿಲು ಮುಚ್ಚಿರಲಿಲ್ಲ. ಕಾರಿನ ಬಾಗಿಲು ಕೂಡಾ ಮುಚ್ಚಿರಲಿಲ್ಲ. ಆ ಹುಡುಗಿ ಗ್ಯಾರೇಜ್‌ನ ಒಳಗೆ ಬಂದಳು ಮತ್ತು ಕಾರಿನ ಒಳಕ್ಕೆ ಬಂದಳು. ಆಕೆಯ ಹಿಂದೆಯೇ ಕಾರಿನ ಬಾಗಿಲು ಮುಚ್ಚಿಕೊಂಡಿತು. ಅದನ್ನು ತೆರೆಯಲು ಆಕೆಗೆ ಸಾಧ್ಯವಾಗಲಿಲ್ಲ. ಆಕೆ ಉಸಿರುಕಟ್ಟಿ ಸತ್ತಿರಬಹುದು ಎಂಬ ಕಥೆಯನ್ನು ನೀವು ನಂಬುತ್ತೀರಾ?

* ಇಲ್ಲ
ಉ: ಈ ನಿಟ್ಟಿನಲ್ಲಿ ನಿಮ್ಮನ್ನು ಬ್ಲ್ಯಾಕ್‌ಮೇಲ್ ಮಾಡುವ ಎಲ್ಲ ಸಾಧ್ಯತೆಯೂ ಸದಾ ಇದೆ ಎಂದು ಗಡ್ಕರಿಗೆ ನಾನು ಹೇಳಿದೆ. ಈ ಕಾರಣದಿಂದ ಅವರು ಎರಡನೆ ಅವಧಿಗೆ ಅಧ್ಯಕ್ಷರಾಗಲಿಲ್ಲ. ಆ ಮೂಲಕ ಅವರು ಕೂಡಾ ಸಂಚು ಕೂಟ ಸೇರಿಕೊಂಡರು.

*ದಿಲ್ಲಿ ಸರಕಾರಕ್ಕೆ ಡಿಡಿಸಿಎ ಹಗರಣದ ಬಗ್ಗೆ ತನಿಖಾ ಸಮಿತಿ ರಚಿಸುವ ಅಧಿಕಾರ ಇಲ್ಲ ಎಂಬ ಬಿಜೆಪಿ ವಾದವನ್ನು ನೀವು ಒಪ್ಪುತ್ತೀರಾ?
ಉ: ನನಗೆ ತಿಳಿದಿರುವ ಪ್ರಕಾರ ಬಿಜೆಪಿ ವಾದ ಸರಿಯಲ್ಲ. ಅವರು ನ್ಯಾಯಾಲಯದಲ್ಲಿ ಹೋರಾಡಲಿ. ಭೂಮಿ, ಪೊಲೀಸ್ ಹಾಗೂ ಸಾರ್ವಜನಿಕ ವ್ಯವಸ್ಥೆ ಈ ಮೂರು ಅಂಶಗಳನ್ನು ಹೊರತುಪಡಿಸಿ ಉಳಿದೆಲ್ಲಕ್ಕೂ ಅದು ಹೊಣೆಯಾಗಿರುತ್ತದೆ.
(ಕೃಪೆ: ಸ್ಕ್ರಾಲ್.ಇನ್)

Writer - ಎಜಾಝ್ ಅಶ್ರಫ್

contributor

Editor - ಎಜಾಝ್ ಅಶ್ರಫ್

contributor

Similar News