ಮಕ್ಕಳ ಪೋಷಣೆ ಮಕ್ಕಳಾಟವಲ್ಲ...

Update: 2016-01-06 17:53 GMT

ಂಕಣಕಾರರಾಗಿ, ರಂಗಭೂಮಿ ಕಲಾವಿದರಾಗಿ ಈಗಾಗಲೇ ಸಾಕಷ್ಟು ಸುದ್ದಿ ಮಾಡಿರುವ, ವಿವಿಧ ಕ್ಷೇತ್ರಗಳಲ್ಲಿ ಕೈಯಾಡಿಸಿರುವ ಯೋಗೇಶ್ ಮಾಸ್ಟರ್ ಅವರ ಇನ್ನೊಂದು ಪ್ರೀತಿಯ ಕ್ಷೇತ್ರ ಮಕ್ಕಳು. ಮಕ್ಕಳ ಮೂಲಕ ದೊಡ್ಡವರು ಕಲಿಯಬೇಕು ಎನ್ನುವುದನ್ನು ಸ್ಪಷ್ಟವಾಗಿ ಪ್ರತಿಪಾದಿಸುವ ಮಾಸ್ಟರ್ ಅವರು ಮಕ್ಕಳ ಬಾಲ್ಯದಲ್ಲಿ ದೊಡ್ಡವರು ಮಾಡುವ ಹಸ್ತಕ್ಷೇಪವನ್ನು ಖಂಡತುಂಡವಾಗಿ ವಿರೋಧಿಸುತ್ತಾ ಬಂದವರು. ಮಕ್ಕಳನ್ನು ಮನಶ್ಶಾಸ್ತ್ರೀಯವಾಗಿ, ಮಾನವೀಯವಾಗಿ ಅರ್ಥೈಸಲು ತಮ್ಮ ಬರಹಗಳಲ್ಲಿ ಅವರು ಪ್ರಯತ್ನಿಸುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ, ‘ಬಿತ್ತಿದಂತೆ ಬೆಳೆ’ ಕೃತಿ ಪೋಷಕರಿಗೆ ಅವರು ನೀಡಿರುವ ಇನ್ನೊಂದು ವಿಶಿಷ್ಟ ಕೊಡುಗೆ. ದೊಡ್ಡವರು ತಮ್ಮ ಅಧಿಕಾರವನ್ನೇ ಹೇರುವುದೇ ಮಕ್ಕಳ ಪೋಷಣೆ ಎಂದು ತಿಳಿದುಕೊಂಡವರಿಗೆ ‘ಮಕ್ಕಳ ಪೋಷಣೆ ಮಕ್ಕಳಾಟವಲ್ಲ’ ಎಂದು ಅವರು ಈ ಕೃತಿಯಲ್ಲಿ ಎಚ್ಚರಿಸುತ್ತಾರೆ. ಈ ಕೃತಿಯು ‘ವಾರ್ತಾಭಾರತಿ’ ದಿನಪತ್ರಿಕೆಯ ಸಾಪ್ತಾಹಿಕದಲ್ಲಿ ಪ್ರಕಟವಾದ ಅಂಕಣಗಳ ಸಂಗ್ರಹ.

ಮಗುವೆಂಬ ಜ್ಞಾನಿ ಎಂಬ ಆರಂಭವೇ, ಪೋಷಕರ ದುರಹಂಕಾರವನ್ನು ಚುಚ್ಚುತ್ತದೆ. ಮಕ್ಕಳನ್ನು ಬೆಳೆಸುವುದೆಂದರೆ ಅವರನ್ನು ನಮ್ಮ ಚೌಕಟ್ಟಿಗೆ ಎಳೆದುಕೊಳ್ಳುವುದಲ್ಲ, ನಾವು ನಮ್ಮ ಚೌಕಟ್ಟನ್ನು ಮೀರಿ ಅವರನ್ನು ತಲುಪುವುದು ಎನ್ನುವುದನ್ನು ಇಲ್ಲಿನ ಪ್ರತಿ ಬರಹಗಳು ಸ್ಪಷ್ಟ ಪಡಿಸುತ್ತವೆ. ಗರ್ಭದಿಂದಲೇ ಮಗುವನ್ನು ಆಲಿಸುತ್ತಾರೆ ಲೇಖಕರು. ಮಗುವಿನ ಪೋಷಣೆಯ ಹೊಣೆ ಆರಂಭವಾಗುವುದು ಅಲ್ಲಿಂದಲೇ ಎನ್ನುವ ಅವರು, ಆ ಸಂದರ್ಭದಲ್ಲಿ ಪೋಷಕರು ವಹಿಸಿಕೊಳ್ಳಬೇಕಾದ ಎಚ್ಚರಿಕೆಗಳನ್ನು ಮನವರಿಕೆ ಮಾಡಿಸುತ್ತಾರೆ. ಮಗುವಿನ ಆರೈಕೆಯನ್ನು ಬೇರೆ ಬೇರೆ ದೇಶಗಳು, ಬೇರೆ ಬೇರೆ ಸಮುದಾಯ ಹೇಗೆ ನಿರ್ವಹಿಸುತ್ತವೆ ಮತ್ತು ಅದರ ಪರಿಣಾಮಗಳನ್ನು ಕಥನ ರೂಪದಲ್ಲಿ ಅವರು ವಿವರಿಸುತ್ತಾರೆ. ನಿಜಕ್ಕೂ ಪ್ರತಿ ಅಧ್ಯಾಯಗಳೂ ಅತ್ಯಂತ ಕುತೂಹಲಕಾರಿಯಾಗಿ ನಮ್ಮನ್ನು ಸೆಳೆಯುತ್ತವೆ. ನಮ್ಮ ಒಳಗಿನ ಧ್ವನಿಯಾಗಿ ಅದು ಹೊರಹೊಮ್ಮುತ್ತದೆ.

ಮಗುವಿನ ಅಳು, ನಗು, ಮಾತು, ತೊದಲು ಹೆಜ್ಜೆ ಎಲ್ಲವನ್ನೂ ಹೃದಯದ ಕಿವಿಯಿಂದ ಆಲಿಸುತ್ತಾ, ಮಗು ಮಗುವಾಗಿ ಬೆಳೆಯುವ ಪ್ರಕ್ರಿಯೆಯಲ್ಲಿ ಎದುರಾಗುವ ಘಾತುಕ ಶಕ್ತಿಗಳನ್ನು ಹೇಗೆ ಎದುರಿಸಬಹುದು ಎನ್ನುವುದನ್ನು ಪೋಷಕರಿಗೆ ಹೇಳಿಕೊಡುತ್ತಾರೆ. ಮನಶ್ಶಾಸ್ತ್ರೀಯವಾಗಿ ಪೋಷಕರನ್ನೂ, ಮಗುವಿನ ಬೆಳವಣಿಗೆಯನ್ನು ಅವರಿಲ್ಲಿ ವಿಶ್ಲೇಷಿಸುತ್ತಾರೆ. ಪ್ರತಿ ಪೋಷಕರು ತಾವು ಜೊತೆಗಿಟ್ಟುಕೊಳ್ಳಬೇಕಾದ ಮಹತ್ವದ ಕೃತಿ ಇದು. ರಾಜಮಾರ್ಗ ಸಾಹಿತ್ಯ ಸಂಸ್ಕೃತಿ ಬೆಂಗಳೂರು ಪ್ರಕಟಿಸಿರುವ ಈ ಕೃತಿಯ ಮುಖಬೆಲೆ 200 ರೂ. ಆಸಕ್ತರು 888 0660347ನ್ನು ಸಂಪರ್ಕಿಸಬಹುದು. 

Writer - ಕಾರುಣ್ಯ

contributor

Editor - ಕಾರುಣ್ಯ

contributor

Similar News