ಮುಫ್ತಿ ಮುಹಮ್ಮದ್ ಸಯೀದ್ ಅವಕಾಶವಾದಿ - ರಾಜಕೀಯ ದಿಗ್ಗಜ

Update: 2016-01-07 18:31 GMT

ಎರಡು ಬಾರಿ ಜಮ್ಮು- ಕಾಶ್ಮೀರದ ಮುಖ್ಯಮಂತ್ರಿ ಯಾಗಿದ್ದ ಮುಫ್ತಿ ಮುಹಮ್ಮದ್ ಸಯೀದ್ ರಾಜ್ಯ ರಾಜಕಾರಣ ಚತುರ. ಗುರುವಾರ ಮೃತರಾದ ಸಯೀದ್ (79) ರಾಜಕೀಯ ವಲಯದಲ್ಲಿ ಅತ್ಯಂತ ಕುಶಾಗ್ರಮತಿ.
ಸಯೀದ್ ಮೊಟ್ಟಮೊದಲ ಬಾರಿಗೆ 2002ರಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿ ಯಾದಾಗ ವಿಧಾನಸಭೆಯಲ್ಲಿ ಕೇವಲ 16 ಸ್ಥಾನ ಹೊಂದಿದ್ದರು. 2015ರಲ್ಲಿ ನಯವಾಗಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಹಿಡಿದರು.
ವಿ.ಪಿ.ಸಿಂಗ್ ಸರಕಾರದಲ್ಲಿ ಗೃಹಸಚಿವರಾಗಿದ್ದ ಇವರು ದೇಶದ ಮೊಟ್ಟಮೊದಲ ಮುಸ್ಲಿಂ ಗೃಹಸಚಿವ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಆದರೆ ಅಪಹರಣಕಾರರ ಸೆರೆಯಲ್ಲಿದ್ದ ತಮ್ಮ ಪುತ್ರಿ ರುಬಿಯಾ ಬಿಡುಗಡೆಗಾಗಿ ಉಗ್ರರ ಷರತ್ತಿನಂತೆ ಐದು ಮಂದಿ ಉಗ್ರರನ್ನು ಬಿಡುಗಡೆ ಮಾಡಿದ ಘಟನೆ ಅವರ ವರ್ಚಸ್ಸಿಗೆ ಕಳಂಕ ತಂದಿತ್ತು. ನ್ಯಾಷನಲ್ ಫ್ರಂಟ್ ಸರಕಾರ 1989ರ ಡಿಸೆಂಬರ್ 2ರಂದು ಅಸ್ತಿತ್ವಕ್ಕೆ ಬಂದ ಐದೇ ದಿನದಲ್ಲಿ ರುಬಿಯಾ ಅಪಹರಣವಾಗಿತ್ತು.
ಅವಕಾಶವಾದಿ ರಾಜಕಾರಣಿ ಎನಿಸಿಕೊಂಡಿದ್ದ ಸಯೀದ್ ತಮ್ಮ ರಾಜಕೀಯ ಮೈತ್ರಿಯನ್ನು ಪದೇ ಪದೇ ಬದಲಿಸಿಕೊಂಡಿದ್ದರು. ಇವರು ಗೃಹಸಚಿವರಾಗಿದ್ದ ಅವಧಿಯಲ್ಲಿ ಆಂತರಿಕ ಭದ್ರತೆಯ ಕಾರಣದಿಂದ 1990ರಲ್ಲಿ ಕಾಶ್ಮೀರಿ ಪಂಡಿತರು ಸಾಮೂಹಿಕ ವಲಸೆಗೆ ಮುಂದಾಗಿದ್ದರು.
1999ರಲ್ಲಿ ಪುತ್ರಿ ಮೆಹಬೂಬ ಮುಫ್ತಿ ಸಯೀದ್ ಜತೆ ಸೇರಿ ಜಮ್ಮು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಹೆಸರಿನ ಸ್ವಂತ ಪಕ್ಷವನ್ನು ಸ್ಥಾಪನೆ ಮಾಡುವ ಮುನ್ನ ರಾಜಕೀಯ ವೃತ್ತಿಯ ಬಹುಭಾಗವನ್ನು ಕಾಂಗ್ರೆಸ್‌ನಲ್ಲಿ ಕಳೆದಿದ್ದರು. ವಿ.ಪಿ.ಸಿಂಗ್ ನೇತೃತ್ವದ ಜನಮೋರ್ಚಾ ಹಾಗೂ ಜಿ.ಎಂ.ಸಿದ್ದಿಕಿ ನೇತೃತ್ವದ ಡೆಮಾಕ್ರೆಟಿಕ್ ನ್ಯಾಷನಲ್ ಕಾನ್ಫರೆನ್ಸ್‌ನಲ್ಲಿ 1950ರ ದಶಕದಲ್ಲಿ ಸ್ವಲ್ಪಕಾಲ ಗುರುತಿಸಿಕೊಂಡಿದ್ದರು. ಕಟ್ಟಾ ರಾಜಕೀಯ ವಿರೋಧಿ ನ್ಯಾಷನಲ್ ಕಾನ್ಫರೆನ್ಸ್ ನ ಫಾರೂಕ್ ಅಬ್ದುಲ್ಲಾ ಅವರಂತೆ ಮಹತ್ವಾಕಾಂಕ್ಷಿ ಗಾಲ್ಫರ್ ಆಗಿದ್ದ ಸಯೀದ್, ಪಕ್ಷ ಕಟ್ಟಿ ಕೇವಲ ಮೂರೇ ವರ್ಷದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಸರಕಾರ ರಚಿಸುವಲ್ಲಿ ಯಶ ಕಂಡಿದ್ದರು. ಆದರೆ 2008ರ ಚುನಾವಣೆಯಲ್ಲಿ ಯುವಧುರೀಣ ಒಮರ್ ಅಬ್ದುಲ್ಲಾ ನೇತೃತ್ವದ ಪಕ್ಷ ಜಯ ಸಾಧಿಸಿದ್ದರಿಂದ ಸಯೀದ್ ಅಧಿಕಾರದಿಂದ ಹೊರಗುಳಿಯಬೇಕಾಯಿತು.
ಇವರ ಚುನಾವಣಾ ಯಶಸ್ಸಿನ ಸೂತ್ರಧಾರಿಯಾ ಗಿದ್ದವರು ಪುತ್ರಿ ಮೆಹಬೂಬಾ ಮುಫ್ತಿ. ಕಠಿಣ ಚೌಕಾಸಿಗೆ ಹೆಸರುವಾಸಿಯಾಗಿದ್ದ ಮೆಹಬೂಬಾ ಪಕ್ಷವನ್ನು ತಳಹಂತದಲ್ಲಿ ಸಂಘಟಿಸಿದರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆೆ ನಿರ್ಮಾಣವಾದ ಬಳಿಕ ಮೆಹಬೂಬಾ ಅವರ ಚೌಕಾಸಿ ಶಕ್ತಿಗೆ ಇಡೀ ದೇಶವೇ ಅಚ್ಚರಿಪಟ್ಟಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಮುಖ್ಯಮಂತ್ರಿಯಾಗಿ ತಮ್ಮ ತಂದೆ ಸಂಪೂರ್ಣ ಅವಧಿಗೆ ಇರುವಂತೆ ಬಿಜೆಪಿಯನ್ನು ಒಪ್ಪಿಸುವಲ್ಲಿ ಮೆಹಬೂಬಾ ಮಹತ್ವದ ಪಾತ್ರ ವಹಿಸಿದ್ದರು.
1963ರ ಜನವರಿ 12ರಂದು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಿಜ್‌ಬೆಹರಾದಲ್ಲಿ ಜನಿಸಿದ ಸಯೀದ್ ಅವರು ಶ್ರೀನಗರ ಎಸ್.ಪಿ.ಕಾಲೇಜು ಹಾಗೂ ಅಲಿಘಡ ಮುಸ್ಲಿಂ ಯುನಿವರ್ಸಿಟಿಯಲ್ಲಿ ಕ್ರಮವಾಗಿ ಕಾನೂನು ಪದವಿ ಹಾಗೂ ಅರಬ್ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಹುಟ್ಟೂರಿನಿಂದಲೇ ರಾಜಕೀಯ ಪಯಣ ಆರಂಭಿಸಿದ ಸಯೀದ್, 1962ರಲ್ಲಿ ಡಿಎನ್‌ಸಿ ಅಭ್ಯರ್ಥಿಯಾಗಿ ಜಯ ಸಾಧಿಸಿದರು. 1967ರಲ್ಲಿ ಸ್ಥಾನ ಉಳಿಸಿಕೊಂಡ ಸಯೀದ್ ಆ ವೇಳೆ ರಾಜ್ಯದ ಉಪ ಸಚಿವರೂ ಆದರು.
1972ರಲ್ಲಿ ಸಂಪುಟ ದರ್ಜೆ ಸಚಿವರಾದ ಸಯೀದ್ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಸಭಾನಾಯಕರೂ ಆದರು. 1975ರಲ್ಲಿ ಜಮ್ಮು- ಕಾಶ್ಮೀರ ವಿಧಾನಸಭೆೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದರು. ಅದೇ ವರ್ಷ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಆಯ್ಕೆಯಾದರು. ಆದರೆ ಬಳಿಕ ಎರಡೂ ಚುನಾವಣೆಗಳಲ್ಲಿ ಪಕ್ಷ ಸೋಲು ಅನುಭವಿಸಿತು. 1986ರಲ್ಲಿ ರಾಜೀವ್‌ಗಾಂಧಿ ಸರಕಾರದಲ್ಲಿ ಪ್ರವಾಸೋದ್ಯಮ ಖಾತೆ ಸಚಿವರಾಗಿ ಸೇರ್ಪಡೆಗೊಂಡರು. ಮೀರತ್ ಗಲಭೆಯನ್ನು ನಿರ್ವಹಿಸುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ ಎಂದು ಆಪಾದಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಜಮ್ಮು ಕಾಶ್ಮೀರ ಹಲವು ರಂಗಗಳಲ್ಲಿ ಸಮಸ್ಯೆ ಎದುರಿಸುತ್ತಿದ್ದ ಸಂದಿಗ್ಧ ಸ್ಥಿತಿಯಲ್ಲಿ ಅಂದರೆ 2002ರಲ್ಲಿ ಸಯೀದ್ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದರು. ವೈಯಕ್ತಿಕ ಸ್ವಾತಂತ್ರ್ಯ ನಿರ್ಬಂಧಿಸಲಾಗಿತ್ತು; ಸಂಸತ್ ಭವನದ ಮೇಲೆ ಉಗ್ರರ ದಾಳಿ ನಡೆದ ಬಳಿಕ ಸೇನೆ ಪಾಕಿಸ್ತಾನದ ಜೊತೆಗಿನ ಸಂಘರ್ಷದ ಉದ್ವಿಗ್ನತೆಯಲ್ಲಿತ್ತು.

ದೂರದೃಷ್ಟಿಯ ನಾಯಕರಾಗಿ, ಚತುರ ರಾಜಕೀಯ ತಂತ್ರಜ್ಞರಾಗಿ, ಪ್ರಬುದ್ಧ ರಾಜಕಾರಣಿಯಾಗಿ, ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದರಿಂದ ರಾಜ್ಯ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಶ್ರೀನಗರದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಆಹ್ವಾನಿಸಿದರು. ಎರಡು ದಶಕದಲ್ಲೇ ಮೊದಲ ಬಾರಿಗೆ ಕಾಶ್ಮೀರಕ್ಕೆ ಪ್ರಧಾನಿ ಭೇಟಿ ನೀಡಿ, ಪಿಡಿಪಿ ವೇದಿಕೆಯಿಂದ ಭಾಷಣ ಮಾಡಿದರು. ಇದು ರಾಜ್ಯದಲ್ಲಿ ಶಾಂತಿಸ್ಥಾಪನೆಯ ಮಹತ್ವದ ಹೆಜ್ಜೆ ಎನಿಸಿತು. ಈ ಮೂಲಕ ಮುಂಚೂಣಿಯಲ್ಲಿದ್ದ ಸೇನೆಯನ್ನು ವಾಪಾಸು ಕರೆಸಿಕೊಳ್ಳಲಾಯಿತು. ಗಡಿಗಳಲ್ಲಿ ಕದನ ವಿರಾಮ ಪರಿಸ್ಥಿತಿ ನಿರ್ಮಾಣವಾಯಿತು. ವಿಶೇಷ ಕಾರ್ಯಪಡೆ, ವಿಶೇಷ ಕಾರ್ಯಾಚರಣೆ ಪಡೆಯನ್ನು ಹಿಂದಕ್ಕೆ ಕರೆಸಲಾಯಿತು. ಪೋಟಾ ಕಾಯ್ದೆ ರದ್ದು ಮಾಡಲಾಯಿತು. ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಲಾಯಿತು. ಇದು ಭಾರತ ಹಾಗೂ ಪಾಕಿಸ್ತಾನದ ನಡುವಿನ ನೇರ ಮಾತುಕತೆಗೆ ಹಾಗೂ ಕೇಂದ್ರ ಹಾಗೂ ಪ್ರತ್ಯೇಕತಾವಾದಿಗಳ ನಡುವಿನ ಸಂವಾದಕ್ಕೆ ವೇದಿಕೆ ಮಾಡಿಕೊಟ್ಟಿತು.
ಜಮ್ಮು ಮತ್ತು ಕಾಶ್ಮೀರದ ಸಾಂಪ್ರದಾಯಿಕ ನಿಯಂತ್ರಣ ರೇಖೆಯ ಮೂಲಕ ಸರಕು ಹಾಗೂ ಜನರ ಮುಕ್ತ ಸಂಚಾರಕ್ಕೆ ಅವಕಾಶ ನೀಡುವುದರಿಂದ ಎರಡೂ ಕಡೆಯಲ್ಲಿ ರಾಜಕೀಯ ಬದಲಾವಣೆಯನ್ನು ಅನುಭವಿಸಲು ಅವಕಾಶವಾಗುವಂತೆ ಮಾಡಬೇಕು ಎನ್ನುವುದು ಅವರ ಆಶಯವಾಗಿತ್ತು. ಎರಡೂ ದೇಶಗಳ ನಡುವೆ ವಿಭಜನೆಯಾಗಿರುವ ಕಾಶ್ಮೀರದ ಭಾಗಗಳಾದ ಶ್ರೀನಗರ ಹಾಗೂ ಮುಝಪ್ಫರ್‌ಬಾದ್ ನಡುವಿನ ಬಸ್ ಸೇವೆ ಆರಂಭಿಸುವಾಗ ಸಯೀದ್ ಮುಖ್ಯಮಂತ್ರಿಯಾಗಿದ್ದರು.
ಶ್ರೀನಗರ- ಮುಝಾಪ್ಫರ್‌ಬಾದ್ ಹಾಗೂ ಪೂಂಚ್- ರಾವಲಕೋಟೆ ನಡುವೆ ರಸ್ತೆ ಉದ್ಘಾಟನೆಗೆ ಸಾಕ್ಷಿಯಾದ ಸಯೀದ್, ವಾಸ್ತವ ನಿಯಂತ್ರಣ ರೇಖೆ ಮೂಲಕ ರಸ್ತೆ ನಿರ್ಮಿಸುವುದರಿಂದ ಈ ಭಾಗದಲ್ಲಿ ಹೊಸ ಆರ್ಥಿಕ ಮೈತ್ರಿ ಬೆಳೆಯಲು ಸಹಕಾರವಾಗುತ್ತದೆ ಎಂದು ಅವರು ನಂಬಿದ್ದರು.
ರಾಜ್ಯದ ಒಳಗೆ ಕೂಡಾ ಮುಫ್ತಿಯವರ ರಾಜಕೀಯ ದೃಷ್ಟಿ ಸಮುದಾಯಗಳನ್ನು ಹಾಗೂ ಧರ್ಮಗಳನ್ನು ಒಗ್ಗೂಡಿಸುವುದಾಗಿತ್ತು. ಜಮ್ಮು ಹಾಗೂ ಕಾಶ್ಮೀರ ಪ್ರದೇಶಗಳ ಜನರ ನಡುವೆ ನಂಬಿಕೆಯನ್ನು ವೃದ್ಧಿಸಲು ಅವರು ಒತ್ತು ನೀಡಿದರು. ಇದು ಅವರ ರಾಜಕೀಯ ಪಕ್ಷದ ಚಾಲನಾ ಶಕ್ತಿಯೂ ಆಗಿತ್ತು.
ಜನತೆಯ ಶಾಂತಿ ಹಾಗೂ ಘನತೆಯ ಮೊರೆಗೆ ಸ್ಪಂದಿಸಿದ ಮುಫ್ತಿ, 2002ರಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಗುಣಪಡಿಸುವ ಸ್ಪರ್ಶ ನೀತಿಯ ಮೂಲಕ ಜನರ ಹೃದಯಕ್ಕೆ ಹತ್ತಿರವಾದರು. ಜರ್ಜರಿತವಾಗಿದ್ದ ಅವರ ಗೌರವವನ್ನು ಪುನರುಜ್ಜೀವನಗೊಳಿಸುವ ಮೂಲಕ, ಅವರ ಹೃದಯಲ್ಲಿ ಹೊಸ ಭರವಸೆ ಮೂಡಿಸಿದರು. ಪಾಲ್ಗೊಳ್ಳುವಿಕೆ ರಾಜಕೀ ಯದ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಉತ್ತೇಜಿಸುವಲ್ಲಿ ಯಶಸ್ವಿ ಯಾದರು.
1950ರ ದಶಕದಲ್ಲಿ ಗಣ್ಯ ವಕೀಲ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಪಿ.ಎನ್.ಹಂದೂ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಮುಫ್ತಿ, ತಮ್ಮ ನಾಯಕನ ಜತೆ ಸೇರಿ ಜಿ.ಎಂ.ಸಿದ್ದಿಕಿ ನೇತೃತ್ವದ ಡೆಮಾಕ್ರಟಿಕ್ ನ್ಯಾಷನಲ್ ಕಾನ್ಫರೆನ್ಸ್ ಒಡೆಯುವಲ್ಲಿ ಕಾರಣೀಕರ್ತರಾದರು. ಡಿ.ಪಿ.ಧರ್, ಸೈಯದ್ ಮಿರ್ ಕಾಸಿಂ ಹಾಗೂ ಜಿ.ಎನ್.ಡೋಂಗ್ರಾ ಇದಕ್ಕೆ ಕೈಜೋಡಿಸಿದರು. ಹೊಸ ಸಂಘಟನೆಯ ಜಿಲ್ಲಾ ಸಂಚಾಲಕರಾಗಿ ನೇಮಕಗೊಂಡರು.
ಎನ್‌ಡಿಸಿ ಮತ್ತೆ ಎನ್‌ಜಿ ಜತೆ ಮರುಸೇರ್ಪಡೆ ಯಾದಾಗ, ಮುಫ್ತಿ ಕೂಡಾ ಅದೇ ಮಾರ್ಗ ಹಿಡಿದರು. ಇದು ಅವರಿಗೆ ದೊಡ್ಡ ರಾಜಕೀಯ ಪ್ರತಿಫಲ ತಂದುಕೊಟ್ಟಿತು. 1062ರಲ್ಲಿ ಬಿಜ್‌ಬೆಹ್ರಾದಿಂದ ಆಯ್ಕೆಯಾದ ಅವರು, 1967ರಲ್ಲೂ ಆ ಸ್ಥಾನ ಉಳಿಸಿಕೊಂಡರು. ಬಳಿಕ ಜಿ.ಎಂ.ಸಿದ್ದಿಕಿ ಇವರನ್ನು ಉಪ ಸಚಿವರಾಗಿ ನೇಮಕ ಮಾಡಿದರು.
1972ರಲ್ಲಿ ಸೈಯದ್ ಮೀರ್ ಕಾಸಿಂ ಮಂತ್ರಿಮಂಟಲದಲ್ಲಿ ಸಚಿವರಾದ ಅವರು, 1975ರಲ್ಲಿ ವಿಧಾನ ಪರಿಷತ್ ಸಭಾನಾಯಕರಾಗಿ ಆಯ್ಕೆಯಾದರು. ಬಳಿಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಅವರು, ಪಿಸಿಸಿ ಅಧ್ಯಕ್ಷರಾಗಿ ದಶಕದ ಕಾಲ ಸೇವೆ ಸಲ್ಲಿಸಿದರು. 1986ರಲ್ಲಿ ರಾಜೀವ್‌ಗಾಂಧಿ ಸರಕಾರದಲ್ಲಿ ಪ್ರವಾಸೋದ್ಯಮ ಸಚಿವರಾದ ಸಯೀದ್, 1987ರಲ್ಲಿ ರಾಜೀವ್- ಫಾರೂಕ್ ಒಪ್ಪಂದವನ್ನು ಪ್ರತಿಭಟಿಸಿ, ಕೇಂದ್ರ ಸಚಿವ ಹುದ್ದೆಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದರು.
ನಂತರ ಸಮಾನ ಮನಸ್ಕರ ಜತೆ ಚರ್ಚಿಸಿ, ಪುತ್ರಿಯ ಜತೆ ಸೇರಿ 1999ರಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಆರಂಭಿಸಿದರು. ಬಳಿಕ 2002-2005ರ ಅವಧಿಯಲ್ಲಿ ಮೊಟ್ಟಮೊದಲ ಪಿಡಿಪಿ- ಕಾಂಗ್ರೆಸ್ ಸಮ್ಮಿಶ್ರ ಸರಕಾರ ರಚಿಸಿದರು.

Writer - ಎನ್. ಕೆ. ಆರ್

contributor

Editor - ಎನ್. ಕೆ. ಆರ್

contributor

Similar News