ಭಾರತದಲ್ಲಿ ಮುಸ್ಲಿಮನಾಗಿರುವ ಕಷ್ಟಗಳು

Update: 2016-01-09 17:19 GMT

ಭಾರತದ ಮುಸ್ಲಿಮರು ಸೌದಿ ಅರೇಬಿಯಾದಂತಹ ವಿದೇಶಗಳ ಮುಸ್ಲಿಮರಿಗಿಂತಲೂ ಉತ್ತಮ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ತುಲನೆ ಮಾಡಿ ಹೇಳುವುದು ನಮ್ಮ ವ್ಯವಸ್ಥೆಯನ್ನು ನಾವೇ ಗೇಲಿಮಾಡಿಕೊಂಡಂತೆ: ಈ ವ್ಯವಸ್ಥೆಯು ಸ್ವಾತಂತ್ರ ಸಂಗ್ರಾಮದ ಫಲವಾಗಿ ಮೂಡಿಬಂದದ್ದು: ಮತ್ತು ಇದು ಭಾರತದ ಸಂವಿಧಾನವನ್ನು ಮುಖ್ಯ ಕೇಂದ್ರವಾಗಿ ಇಟ್ಟುಕೊಂಡದ್ದು. ಪ್ರಜಾಪ್ರಭುತ್ವದ ವೈವಿಧ್ಯವನ್ನು ಕಾಪಾಡಿಕೊಳ್ಳಲು ನಾವು ನಮ್ಮ ದಾರಿಯನ್ನು ಆಗಾಗ ಸರಿಪಡಿಸಿಕೊಳ್ಳುತ್ತಾ ಮುನ್ನಡೆಯಬೇಕು. ಧರ್ಮದ ಹೆಸರಿನಲ್ಲಿ ನಡೆಯುವ ರಾಜಕೀಯವನ್ನು ತಡೆಗಟ್ಟಬೇಕು.

  ಡಿಸೆಂಬರ್ 2015ರಲ್ಲಿ ಬಿಡುಗಡೆಯಾದ ಶಾರುಕ್ ಖಾನ್‌ರ ‘ದಿಲ್‌ವಾಲೆ’ ಚಿತ್ರ ಶಿವಸೇನೆ ಮತ್ತಿತರ ಹಿಂದೂತ್ವವಾದಿ ಗುಂಪುಗಳಿಂದ ಪ್ರತಿಭಟನೆಯ ಮೂಲಕ ಸ್ವಾಗತಿಸಲ್ಪಟ್ಟಿತು. ಇವು ಬಂದಿದ್ದು ಶಾರುಕ್ ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಕುರಿತು ನೀಡಿದ ಪ್ರತಿಕ್ರಿಯೆಯೊಂದಕ್ಕೆ ವಿರೋಧವಾಗಿ. ತನ್ನ 50 ನೆ ವರ್ಷದ ಹುಟ್ಟುಹಬ್ಬದ ಸಮಯದಲ್ಲಿ ಆತ ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಈ ದೇಶದಲ್ಲಿ ಜಾತ್ಯತೀತನಾಗಿರದೇ ಇರುವುದು ದೇಶಪ್ರೇಮಿಗೆ ಇರುವ ಸಂಕಷ್ಟಗಳೆಂದು ಅಭಿಪ್ರಾಯಪಟ್ಟಿದ್ದರು. ಇದಕ್ಕೆ ರೊಚ್ಚಿನಲ್ಲಿ ಪ್ರತಿಕ್ರಿಯಿಸಿದ ಹಿಂದೂತ್ವ ಗುಂಪುಗಳು ಆತ ಒಬ್ಬ ರಾಷ್ಟ್ರದ್ರೋಹಿಯೆಂದೂ, ರಾಷ್ಟ್ರೀಯತೆಯ ವಿರೋಧಿಯೆಂದೂ ಮತ್ತು ಆತ ಈ ಕೂಡಲೇ ಪಾಕಿಸ್ತಾನಕ್ಕೆ ಹೋಗಬೇಕೆಂದೂ ಕೂಗಿದ್ದವು. ಬಿಜೆಪಿಯ ಮುಖ್ಯ ಕಾರ್ಯದರ್ಶಿ ಕೈಲಾಶ್ ವಿಜಯವಾಗರೆ ‘‘ಶಾರುಕ್‌ರ ದೇಹ ಭಾರತದಲ್ಲಿದೆಯಾದರೂ ಅವರ ಆತ್ಮ ಪಾಕಿಸ್ತಾನದಲ್ಲಿದೆ’’ ಎಂದು ವ್ಯಂಗ್ಯವಾಡಿದ್ದರು. ಆ ಬಳಿಕ ಶಾರುಕ್ ಕ್ಷಮೆಬೇಡುವಂತಹ ಮಾತುಗಳನ್ನಾಡುತ್ತ ಯಾರಿಗಾದರೂ ತನ್ನ ಮಾತುಗಳಿಂದ ನೋವಾಗಿದ್ದರೆ ತನ್ನದು ತಪ್ಪಾಯಿತೆಂದೂ, ತನ್ನ ಸಿನೆಮಾ ಬಿಡುಗಡೆಯಾಗುತ್ತಿರುವುದಕ್ಕಾಗಿ ಈ ಮಾತುಗಳನ್ನು ತಾನು ಆಡುತ್ತಿಲ್ಲ, ಬದಲು ನನಗೆ ನಿಜವಾಗಿ ಹಾಗೆ ಅನ್ನಿಸಿತ್ತೆಂದೂ ಹೇಳಿದ್ದರು. ಆ ಬಳಿಕ ಮತ್ತಿದಕ್ಕೆ ಪ್ರತಿಕ್ರಿಯೆಯಾಗಿ ಕೈಲಾಶ್ ವಿಜಯವಾಗರೆ ರಾಷ್ಟ್ರೀಯವಾದಿಗಳು ಈ ನಾಲಾಯಕ್‌ಗಳಿಗೆ ಸರಿಯಾದ ಪಾಠ ಕಲಿಸಿದ್ದಾರೆಂದು ಹೇಳಿದರು. ಶಾರುಕ್ ಒಬ್ಬ ರಾಷ್ಟ್ರವಿರೋಧಿ ಎಂಬಂತಹ ಟೀಕೆಗಳು ವ್ಯಕ್ತವಾಗಿದ್ದು ಇದೇ ಮೊದಲಲ್ಲ. 2010ರಲ್ಲಿ ಅವರು ಐಪಿಎಲ್‌ನಲ್ಲಿ ಪಾಕಿಸ್ತಾನಿ ಆಟಗಾರರಿಗೂ ಅವಕಾಶವಿರಬೇಕೆಂದು ಹೇಳಿಕೆ ನೀಡಿದಾಗ, ಮುಂಬೈನ ಶಿವಸೇನೆಯ ಕಾರ್ಯಕರ್ತರು ತೀಕ್ಷ್ಣವಾಗಿ ಪ್ರತಿಭಟಿಸಿದ್ದರಲ್ಲದೇ, ಅವರ ‘ಮೈ ನೇಮ್ ಈಸ್ ಖಾನ್’ ಚಿತ್ರದ ಪ್ರಚಾರಪಟಗಳನ್ನು ಹರಿದುಹಾಕಿದ್ದರು. ಜಗತ್ತು ಮುಸ್ಲಿಮರ ಕುರಿತು ಪಡುವ ಭಯ ಎಂದು ಕರೆಯಲಾಗುವ ಇಸ್ಲಾಮೋಫೋಬಿಯಾಕ್ಕೆ ಕೂಡಾ ಶಾರುಕ್ ಗುರಿಯಾಗಿದ್ದಾರೆ. ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ಅವರನ್ನು ಎರಡು ಬಾರಿ ವಿವಸ್ತ್ರಗೊಳಿಸಿ ಪರೀಕ್ಷಿಸಲಾಗಿತ್ತು. ದಿಲೀಪ್ ಕುಮಾರ್ ಎಂದು ಕರೆಯಲಾಗುವ ಯೂಸುಫ್ ಖಾನ್ ಮತ್ತು ಆಮಿರ್ ಖಾನ್‌ರಿಗೂ ಈ ಬಗೆಯ ಸಮಸ್ಯೆ ಎದುರಾಗಿತ್ತು. ಈಚೆಗೆ ಆಮಿರ್ ಖಾನ್ ಅವರು ರಾಮನಾಥ ಗೋಯೆಂಕಾ ಹೆಸರಿನಲ್ಲಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡುವವರಿಗೆ ಕೊಡಮಾಡಲ್ಪಡುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ- ತನ್ನ ಹೆಂಡತಿ ಕಿರಣ್ ರಾವ್ ಈ ದೇಶದಲ್ಲಿ ಇರುವುದು ಭಯಜನಕ ವಿಷಯವಾಗಿದೆಯೆಂದು ಹೇಳಿದ್ದನ್ನು ಸಮಾರಂಭದಲ್ಲಿ ನೆನಪಿಸಿಕೊಂಡಿದ್ದರು. ಅವರ ಮಗನ ಸುರಕ್ಷತೆಯ ಬಗ್ಗೆ ಕಿರಣ್ ಆತಂಕಿತರಾಗಿದ್ದರೆಂದು ಆಮಿರ್ ಹೇಳಿದ್ದರು. ಅದಕ್ಕೆ ಯೋಗಿ ಆದಿತ್ಯನಾಥ್, ಆಮಿರ್ ಖಾನ್ ಹಾಫೀಝ್ ಸಯೀದ್‌ರಂತೆ ಮಾತನಾಡುತ್ತಿದ್ದಾರೆಂದೂ ಮತ್ತು ಅವರು ಪಾಕಿಸ್ತಾನಕ್ಕೆ ಹೋಗುವುದೇ ಒಳಿತೆಂದೂ ಹೇಳಿ ಕುಟುಕಿದ್ದರು. ಅಮಿರ್ ಖಾನ್ ಆ ಬಳಿಕ ಇದಕ್ಕೆ ಪ್ರತಿಕ್ರಿಯಿಸುತ್ತ ‘‘ತನಗೆ ಭಾರತ ತೊರೆಯುವ ಅಪೇಕ್ಷೆ ಎಂದೂ ಇರಲಿಲ್ಲ’’ವೆಂದು ಹೇಳಿ ರವೀಂದ್ರನಾಥ ಟಾಗೋರರ ಪದ್ಯವನ್ನು ಉಲ್ಲೇಖಿಸಿದ್ದರು. ಅವರ ಮೇಲೆ ದೇಶದ್ರೋಹಿಯೆಂಬ, ರಾಷ್ಟ್ರವಿರೋಧಿಯೆಂಬ ಆರೋಪಗಳನ್ನು ಬೀಸಾಗಿ ಮಾಡಲ್ಪಡುತ್ತಲೇ ಇರುವಾಗಲೂ ಸಂಘಪರಿವಾರದ ಯಾರೂ, ಅಥವಾ ಬಿಜೆಪಿಯ ಯಾವ ನಾಯಕನೂ ಈ ಹೇಳಿಕೆಗಳನ್ನು ಖಂಡಿಸಲಿಲ್ಲ. ಇದು ಹೀಗೆ ಟೀಕಿಸುವವರಿಗೆ ಈ ಎರಡೂ ಕಡೆಯಿಂದ ಇದ್ದ ಪೂರ್ಣ ಬೆಂಬಲವನ್ನು ತೋರಿಸುತ್ತದೆ. ವಿಎಚ್‌ಪಿಯ ನಾಯಕರೊಬ್ಬರು ಶಾರುಕ್‌ರಂಥ ವ್ಯಕ್ತಿ ಈ ಬಗೆಯ ಹೇಳಿಕೆಯನ್ನು ನೀಡಿದಾಗ ಆತ ಸೇರಿದ ಇಡೀ ಪಂಗಡವು ಜನರ ಕಣ್ಣಿಗೆ ಬೀಳುತ್ತದೆ ಮತ್ತು ಅವರತ್ತ ನೋಡಲ್ಪಡುತ್ತದೆ ಎಂಬ ಹೇಳಿಕೆಯನ್ನು ಟಿವಿ ಶೋ ಒಂದರಲ್ಲಿ ನೀಡಿದ್ದರು. ವಿಎಚ್‌ಪಿ ಮತ್ತದರ ಸೋದರ ಸಂಸ್ಥೆಗಳಿಗೆ ಮುಸ್ಲಿಮ್ ಸಮುದಾಯ ಎಷ್ಟು ಅಪಥ್ಯವೆಂಬುದನ್ನು ಇದು ತೋರಿಸುತ್ತದೆ. ನ್ನೊಬ್ಬ ರಂಗನಟ, ಪೇಶಾವರದಲ್ಲಿ ಜನಿಸಿದ, ದಿಲೀಪ್ ಕುಮಾರ್ ದೀಪಾ ಮೆಹ್ತಾರ ಚಲನಚಿತ್ರವೊಂದನ್ನು ಮೆಚ್ಚಿ ಮಾತನಾಡಿದಾಗ ಇದೇ ಬಗೆಯ ಸಂಕಟಕ್ಕೆ ತಮ್ಮನ್ನು ಒಡ್ಡಿಕೊಳ್ಳಬೇಕಾಯಿತು. 1998ರಲ್ಲಿ ಅವರ ಮನೆಯ ಮುಂದೆ ಶಿವಸೇನೆಯ ಕಾರ್ಯಕರ್ತರು ಒಳ ಉಡುಪುಗಳಲ್ಲಿ ನಿಂತು ಪ್ರತಿಭಟಿಸಿದ್ದರು. ಅವರಿಗೆ ಪಾಕಿಸ್ತಾನದ ಅತ್ಯುಚ್ಛ ನಾಗರಿಕ ಸಮ್ಮಾನ ‘ನಿಶಾನ್-ಎ-ಇಮ್ತಿಯಾಝ್’ ಅನ್ನು ಕೊಡಮಾಡಿದಾಗ ಅದನ್ನು ಅವರು ಸ್ವೀಕರಿಸಬಾರದೆಂದು ಸಹ ಪ್ರತಿಭಟನೆ ವ್ಯಕ್ತವಾಗಿದ್ದನ್ನು ನಾವು ನೆನಪಿಸಿಕೊಳ್ಳಬಹುದು. ಅವರು ಅದನ್ನು ಸ್ವೀಕರಿಸಿದರು. ಆಗ ಸಹ ಹಿಂದೂತ್ವವಾದೀ ಗುಂಪುಗಳು ಅವರನ್ನು ರಾಷ್ಟ್ರವಿರೋಧಿ, ದೇಶದ್ರೋಹಿ ಇತ್ಯಾದಿ ಆಪಾದನೆಗಳಿಂದ ಮುಚ್ಚಿಹಾಕಿದ್ದರು. ಆಗ ತುಂಬ ವಿಚಲಿತರಾಗಿದ್ದ ದಿಲೀಪ್ ಕುಮಾರ್ ಆಗಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರನ್ನು ಸಂಪರ್ಕಿಸಬೇಕಾಯಿತು ಮತ್ತು ಅವರು ದಿಲೀಪ್ ಕುಮಾರರ ದೇಶಪರತೆಯನ್ನು ಸಮರ್ಥಿಸಿ ಸಾಬೀತುಪಡಿಸಬೇಕಾಯಿತು. ವಾಜಪೇಯಿಯವರು ಮಾತ್ರವೇ ತಮ್ಮ ಇತರೇ ಬಿಜೆಪಿ ಸಹೋದ್ಯೋಗಿಗಳ ಕೂಗಾಟ, ಟೀಕೆಗಳ ನಡುವೆಯೂ ಮೌನ ಕಾಪಾಡಿಕೊಂಡು ಬಂದ ಏಕೈಕ ಮನುಷ್ಯರಾಗಿದ್ದರು. ಈ ಅತ್ಯುಚ್ಛ ಗೌರವವನ್ನು ಸ್ವಿಕರಿಸಿದ ಇನ್ನೊಬ್ಬ ಭಾರತೀಯ ಭಾರತದ ಪ್ರಧಾನಮಂತ್ರಿಯಾಗಿದ್ದ ಮೊರಾರ್ಜಿ ದೇಸಾಯಿ. ಸಂದರ್ಭದ ವೈಚಿತ್ರ್ಯವೆಂದರೆ ಅಸಹಿಷ್ಣುತೆಯ ಕುರಿತ ಚರ್ಚೆಯು ನಡೆಯುತ್ತಿದ್ದಾಗ ಅದಕ್ಕೆ ಬಂದ ಒಂದೇ ಬಗೆಯ ಹೇಳಿಕೆಗಳ ಕುರಿತು ಬಂದ ಭಿನ್ನ ಬಗೆಯ ಪ್ರತಿಕ್ರಿಯೆಗಳು. ಆ ಸಂದರ್ಭದಲ್ಲಿ ಭಾರತದ ವಾತಾವರಣ ಅನೇಕ ಹೇಳಿಕೆಗಳಿಂದ ಬಿಸಿಯಾಗತೊಡಗಿತ್ತು. ಹಿಂದುತ್ವ ಪ್ರತಿಪಾದಕರಾದ ಸಾಕ್ಷಿ ಮಹಾರಾಜ್, ಸಾಧ್ವಿ ನಿರಂಜನ್ ಜ್ಯೋತಿ, ಯೋಗಿ ಆದಿತ್ಯನಾಥ್, ಮನೋಹರಲಾಲ್ ಖಟ್ಟರ್, ಕೈಲಾಶ್ ವಿಜಯವರಿಯ ಮತ್ತು ಸಂಗೀತ್ ಸೋಮ್‌ರ ಹೇಳಿಕೆಗಳು ಸಮಾಜವನ್ನು ಆಳದಲ್ಲಿ ಅಲ್ಲಾಡಿಸಿದ್ದವು. ಪ್ರಧಾನಿಯವರ ಮೌನ ಈ ಎಲ್ಲ ಹೇಳಿಕೆಗಳಿಗೆ ಬಿಜೆಪಿ-ಆರೆಸ್ಸೆಸ್‌ಗಳ ಸಹಮತವಿದೆ ಎಂದು ಸೂಚಿಸುವಂತಿತ್ತು. ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ ಮತ್ತು ಅಖ್ಲಾಕ್‌ರ ಕೊಲೆಗಳ ಮುಖಾಂತರ ಈ ಅಭಿಪ್ರಾಯಗಳು ಒಂದು ತುದಿಮುಟ್ಟುವ ಕ್ರಿಯಾತ್ಮಕ ರೂಪ ಪಡೆದುಕೊಂಡವು. ಈ ಘಟನೆಗಳಿಗೆ ಪ್ರತಿಕ್ರಿಯೆಯಾಗಿ ಪ್ರಶಸ್ತಿಗಳನ್ನು ಮರಳಿಸುವುದು ಮತ್ತು ಮಾಜಿ ಅಡ್ಮಿರಲ್ ರಾಮದಾಸ್, ಅನೇಕ ವಿದ್ವಾಂಸರು, ಇತಿಹಾಸಕಾರರು, ಆಕ್ಟಿವಿಸ್ಟರು ನೀಡಿದ ಹೇಳಿಕೆಗಳ ಮುಖಾಂತರ ವ್ಯಕ್ತವಾದವು. ಅಸಂಘಟಿತವಾಗಿ ಆರಂಭವಾದ ಪ್ರಶಸ್ತಿ ವಾಪಸಾತಿಯು ಆ ಬಳಿಕ ಒಂದು ಚಳವಳಿಯದ್ದೇ ಸ್ವರೂಪ ಪಡೆಯುತ್ತ ಬಿಹಾರ ಚುನಾವಣೆಯ ಫಲಿತಾಂಶ ಬರುವ ವರೆಗೂ ಮುಂದುವರಿಯಿತು. ಈ ಪ್ರಕ್ರಿಯೆಯು ಗಾಯಗೊಂಡಂತಿದ್ದ ಸಾಮಾಜಿಕ ಮನಸ್ಸಿಗೆ ಒಂದು ತಂಪಾದ ಮುಲಾಮಿನಂತೆ ಸಹಾಯ ಮಾಡಿತು. ಬಿಹಾರದ ಚುನಾವಣೆಯ ನಂತರ ಪ್ರಶಸ್ತಿ ಮರಳಿಸಿದ ಏಕೈಕ ಲೇಖಕ ಜಯಂತ ಮೊಹಾಪಾತ್ರ. ಈ ಪ್ರಶಸ್ತಿ ವಾಪಸಾತಿ ಚಳವಳಿಯ ಸಮಯದ ಇನ್ನೊಂದು ಮುಖ್ಯ ಬೆಳವಣಿಗೆಯೆಂದರೆ, ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಉದ್ಯಮಿ ನಾರಾಯಣಮೂರ್ತಿ ಮತ್ತು ಕಿರಣ್ ಮಜುಂದಾರ್ ಶಾ ಹಾಗೂ ಆರ್.ಬಿ.ಐ. ಅಧ್ಯಕ್ಷ ರಘುರಾಮ್ ರಾಜನ್ ಸಹ ಭಾರತದಲ್ಲಿ ಒಂದು ಅಸಹಿಷ್ಣುತೆಯ ವಾತಾವರಣವಿದೆ ಎಂದು ಒಪ್ಪಿಕೊಳ್ಳುವಂತಹ ಮಾತುಗಳನ್ನಾಡಿದ್ದು. ಮುಸ್ಲಿಮ್ ವ್ಯಕ್ತಿಗಳನ್ನೇ ಒಬ್ಬರಾದ ಮೇಲೊಬ್ಬರಂತೆ ಎತ್ತಿಕೊಳ್ಳುತ್ತ ಅವರ ದೇಶಪ್ರೇಮವನ್ನು ಪ್ರಶ್ನಿಸಿ ಟೀಕಿಸುತ್ತ ಹೋಗಿದ್ದು ವಿಚಿತ್ರವಾದ ಬೆಳವಣಿಗೆ. ಮುಸ್ಲಿಮೇತರರು ರಾಜಕೀಯ ಕಾರಣಗಳಿಂದ ಈ ಬಗೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಲ್ಪಟ್ಟರು. ರಾಷ್ಟ್ರಪತಿಯವರ ಹೇಳಿಕೆಗೆ ಎದುರಾಡುವ ಧೈರ್ಯವನ್ನು ಯಾರೂ ಮಾಡಲಿಲ್ಲ. ಇದರ ಅರ್ಥ ಏನು? ಆಮಿರ್ ಖಾನ್ ಆ ಬಳಿಕ ನೀಡಿದ ಹೇಳಿಕೆಯಲ್ಲಿ- ತಾನು ಏನು ಹೇಳಿದ್ದೆನೋ ಅದನ್ನೇ ಈ ಎಲ್ಲ ಪ್ರತಿಕ್ರಿಯೆಗಳು ಅನುಮಾನಕ್ಕೆಡೆಯಿಲ್ಲದಂತೆ ಶೃತಪಡಿಸುತ್ತಿವೆ ಎಂದು ಮತ್ತೊಮ್ಮೆ ಹೇಳಿಕೆ ನೀಡಿದರು. ಮುಸ್ಲಿಮರು ಮತ್ತು ಮುಸ್ಲಿಮರಲ್ಲದವರು ನೀಡಿದ ಒಂದೇ ಬಗೆಯ ಹೇಳಿಕೆಗಳಿಗೆ ಬಂದ ಭಿನ್ನ ಬಗೆಯ ಪ್ರತಿಕ್ರಿಯೆಗಳೇ ಆರೆಸ್ಸೆಸ್ ಮತ್ತು ಅದರ ಉಪಾಂಗಗಳ ಮನೋಧರ್ಮವನ್ನು ತೋರಿಸುತ್ತವೆ. ಮತ್ತು ಇವುಗಳ ಹಿಂಬಾಲಕರ ಮನಸ್ಥಿತಿಯನ್ನೂ ಇದು ತೋರಿಸುತ್ತದೆ. ಮಕ್ಕಾ ಮಸೀದಿ, ಮಾಲೆಗಾವ್, ಅಜ್ಮೇರ್ ಮತ್ತು ಸಮ್ಜೋತಾ ಎಕ್ಸ್ ಪ್ರೆಸ್ ಘಟನೆಗಳ ಸಮಯದಲ್ಲಿ ಅಸಂಖ್ಯಾತ ಮುಸ್ಲಿಮ್ ಯುವಕರನ್ನು ಕಾರಣವಿಲ್ಲದೇ ಬಂಧಿಸುತ್ತ ಹೋಗಿದ್ದು ನೆನಪಾಗು ತ್ತದೆ. ಹೇಮಂತ್ ಕರ್ಕರೆ ಸಂಬಂಧಿತ ವಿಚಾರಣೆಯ ನಂತರ ಈ ಸ್ಪೋಟಕ್ಕೆ ಕಾರಣವಾಗಿದ್ದು ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪುರೋಹಿತ್, ಮೇಜರ್ ಉಪಾಧ್ಯಾಯ್ ಮತ್ತು ಸ್ವಾಮೀ ಅಸೀಮಾನಂದರನ್ನೊಳಗೊಂಡ ಹಿಂದೂತ್ವದ ಗುಂಪು ಎಂದು ತಿಳಿದುಬಂದಿತ್ತು. ಆ ಬಳಿಕ ಮಾತ್ರವೇ ಮುಸ್ಲಿಮ್ ಯುವಕರ ಬಂಧನಕ್ಕೆ ಒಂದು ತಡೆ ಬಂದಿದ್ದು. 2009ರಲ್ಲಿ ನಾನು  ಸಂಘಟನೆಯ ಒಂದು ಸಭೆಯಲ್ಲಿ ಭಾಗವಹಿಸಿದ್ದೆ. ಅಲ್ಲಿನ ಚರ್ಚೆಯ ವಿಷಯ ಭಾರತದಲ್ಲಿ ಮುಸ್ಲಿಮ್ ಆಗಿರುವುದೆಂದರೆ ಏನು? ಎಂಬ ಪ್ರಶ್ನೆಯ ಕುರಿತಾಗಿತ್ತು. ಆ ಸಂದರ್ಭದಲ್ಲಿ ಅನೇಕ ಪ್ರಮುಖ ಮುಸ್ಲಿಮ್ ವ್ಯಕ್ತಿಗಳು, ಬರಹಗಾರರು ಮತ್ತು ಆ್ಯಕ್ಟಿವಿಸ್ಟರು ತಮ್ಮ ಹೃದಯ ತೆರೆದು ಮಾತನಾಡುತ್ತ ತಮಗೆ ಮುಸ್ಲಿಂ ಆಗಿರುವುದು ಸಂಕಟದ ವಿಷಯವೆನ್ನಿಸುವಂತೆ ನಮ್ಮನ್ನು ಹೊರಗಿನ ವ್ಯಕ್ತಿಗಳಾಗಿ ನೋಡಲಾಗುತ್ತಿದೆ ಎಂದಿದ್ದನ್ನು ನಾನು ಅಚ್ಚರಿಯಿಂದ, ಅಪನಂಬಿಕೆಯಿಂದ ಕೇಳಿಸಿಕೊಂಡಿದ್ದೆ. ಬಹುತೇಕ ಈ ಎಲ್ಲ ವ್ಯಕ್ತಿಗಳು ತಮ್ಮ ಕ್ರಿಯಾಶೀಲತೆ ಮತ್ತು ಬರವಣಿಗೆಯಿಂದ ಪ್ರಮುಖರಾಗಿದ್ದವರೇ ಹೊರತು ತಮ್ಮ ಧಾರ್ಮಿಕ ಅಸ್ತಿತ್ವದ ಕಾರಣದಿಂದ ಅಲ್ಲ. ಇತ್ತೀಚೆಗೆ ನಾಸಿರುದ್ದೀನ್ ಶಾ ಹೇಳಿದಂತೆ ‘‘ತನಗೆ ತನ್ನ ಮುಸ್ಲಿಮ್ ಅಸ್ತಿತ್ವವನ್ನು ನೆನಪು ಮಾಡಿಕೊಡಲಾಗುತ್ತಿದೆ’’ ಎನ್ನಿಸುತ್ತಿದೆ ಎಂದಿದ್ದೂ ಈ ಅರ್ಥದಲ್ಲಿಯೇ. ಹಾಗೆಯೇ ಜೂಲಿಯನ್ ರೊಬೆರಿಯೋ ಸಹ ಒಬ್ಬ ಕ್ರಿಶ್ಚಿಯನ್ ಆಗಿ ನಾನು ನನ್ನ ದೇಶದಲ್ಲಿಯೇ ಅಪರಿಚಿತ, ಹೊರಗಿನವನಾಗಿರುವ ಭಾವನೆಯನ್ನು ಅನುಭವಿಸುತ್ತಿದ್ದೇನೆ ಎಂದದ್ದೂ ಹೀಗೆಯೆ. ಭಾರತವು ಜಾತ್ಯತೀತತೆ ಮತ್ತು ಅಭಿಪ್ರಾಯ ವೈವಿಧ್ಯಗಳು ಸಾಧ್ಯವಿರುವ ಪ್ರಜಾಪ್ರಭುತ್ವವಾಗಿ ಎಂದಿಗೂ ಇರುತ್ತ್ತಾ ಬಂದಿದೆ. ದಕ್ಷಿಣ ಏಶ್ಯಾದ ಅನೇಕ ದೇಶಗಳಲ್ಲಿ ಪ್ರಜಾಪ್ರಭುತ್ವದ ಲಕ್ಷಣಗಳು ಅಷ್ಟು ಗಟ್ಟಿಯಾಗಿರದ ಸಂದರ್ಭದಲ್ಲಿ ಭಾರತವು ಈ ವಿಷಯದಲ್ಲಿ ಸಮರ್ಥವಾಗಿದೆ. ಸೌದಿ ಅರೇಬಿಯಾದಂತಹ ದೇಶಗಳು ನಾವು ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ಸಾಧಿಸಿರುವುದರ ಕನಿಷ್ಠ ಸಮೀಪಕ್ಕೂ ಬಂದಿಲ್ಲ. ಭಾರತವನ್ನು ಈ ದೇಶಗಳ ಜೊತೆಗೆ ಹೋಲಿಸಿ ನೋಡಿದಾಗ ತಪ್ಪಾಗುತ್ತದೆ. ಈ ದೇಶಗಳು ಅನುಸರಿಸುತ್ತಿರುವ ಅರೆ-ಊಳಿಗಮಾನ್ಯ ಪದ್ಧತಿಯೋ ಅಥವಾ ಪ್ರತಿಗಾಮಿ ನಿಲುವುಗಳಂತಲ್ಲದೇ ನಾವು ಉತ್ತಮ ಮಾನವ ಹಕ್ಕುಗಳನ್ನು ಸ್ಥಾಪಿಸುವತ್ತ ದಾಪುಗಾಲಿಟ್ಟು ನಡೆದಿದ್ದೇವೆ. ಭಾರತದ ಮುಸ್ಲಿಮರು ಈ ವಿದೇಶಗಳ ಮುಸ್ಲಿಮರಿಗಿಂತಲೂ ಉತ್ತಮ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ತುಲನೆ ಮಾಡಿ ಹೇಳುವುದು ನಮ್ಮ ವ್ಯವಸ್ಥೆಯನ್ನು ನಾವೇ ಗೇಲಿಮಾಡಿಕೊಂಡಂತೆ: ಈ ವ್ಯವಸ್ಥೆಯು ಸ್ವಾತಂತ್ರ ಸಂಗ್ರಾಮದ ಫಲವಾಗಿ ಮೂಡಿಬಂದದ್ದು: ಮತ್ತು ಇದು ಭಾರತದ ಸಂವಿಧಾನವನ್ನು ಮುಖ್ಯ ಕೇಂದ್ರವಾಗಿ ಇಟ್ಟುಕೊಂಡದ್ದು. ಪ್ರಜಾಪ್ರಭುತ್ವದ ವೈವಿಧ್ಯವನ್ನು ಕಾಪಾಡಿಕೊಳ್ಳಲು ನಾವು ನಮ್ಮ ದಾರಿಯನ್ನು ಆಗಾಗ ಸರಿಪಡಿಸಿಕೊಳ್ಳುತ್ತ ಮುನ್ನಡೆಯಬೇಕು. ಧರ್ಮದ ಹೆಸರಿನಲ್ಲಿ ನಡೆಯುವ ರಾಜಕೀಯವನ್ನು ತಡೆಗಟ್ಟಬೇಕು.

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News