ಫ್ರೀಬೇಸಿಕ್ಸ್- ಭಾರತದ ಮುಂದಿರುವ ಅಪಾಯ

Update: 2016-01-09 18:29 GMT
Editor : ಸಂಗೀತ


(ಭಾಗ-2)

ಕಳೆದ ವಾರ ಫೇಸ್‌ಬುಕ್ ಪ್ರೇರಿತ ಫ್ರೀಬೇಸಿಕ್ಸ್ ಬಗ್ಗೆ ಬರೆಯುತ್ತಾ ಜಾಲ ತಟಸ್ಥತೆಯ ಬಗ್ಗೆ ವಿವರಿಸಲಾಗಿತ್ತು. ಈ ವಾರ ಅದರ ಮುಂದುವರಿದ ಭಾಗವಾಗಿ ಫೇಸ್‌ಬುಕ್‌ನ ಫ್ರೀಬೇಸಿಕ್ಸ್ ಹೇಗೆ ಜಾಲ ತಾಟಸ್ಥತೆಯ ನಿಯಮಗಳನ್ನು ಉಲ್ಲಂಘಿಸುತ್ತದೆ ಹಾಗೂ ಅದರಿಂದ ಫೇಸ್‌ಬುಕ್‌ಗೆ ಏನು ಲಾಭ ಎಂಬ ವಿಷಯಗಳನ್ನು ಚರ್ಚಿಸೋಣ.
ನಮ್ಮಲ್ಲಿ ‘ಉಚಿತ’ ಎಂದರೆ ಸಾರಾಂಶದಲ್ಲಿ ಪರೋಪಕಾರ, ದಾನಧರ್ಮ ಎಂಬ ಅರ್ಥಗಳೇ ಬಂದುಬಿಡುತ್ತದೆ. ಉಚಿತ ಅನ್ನಸಂತರ್ಪಣೆ, ಉಚಿತ ಪ್ರವೇಶ, ಉಚಿತ ನೇತ್ರ ಶಿಬಿರ, ಉಚಿತ ಬಟ್ಟೆ, ಶೂ, ಪುಸ್ತಕ ವಿತರಣೆ, ಉಚಿತ ಆರೋಗ್ಯ ಶಿಬಿರ - ಹೀಗೆ ಉಚಿತ ಎಂದು ಹೇಳಿದಾಕ್ಷಣ ಯಾರೋ ಸಮಾಜಕ್ಕಾಗಿ, ಬಡಜನರ ಒಳಿತಿಗಾಗಿ ಪರೋಪಕಾರ, ದಾನಧರ್ಮ ಮಾಡುತ್ತಿದ್ದಾರೆ ಎಂದೇ ಅರ್ಥವಾಗುತ್ತದೆ. ಆದರೆ, ಕಾರ್ಪೊರೇಟ್ ಕಂಪೆನಿಗಳು ಈ ಉಚಿತ ಎಂಬ ಪದವನ್ನು ಬಳಸುತ್ತಿವೆ ಎಂದರೆ ಅವು ಬಡಜನರಿಗೆ ಅಥವಾ ಸಮಾಜಕ್ಕೆ ದಾನಧರ್ಮ ಮಾಡುತ್ತಿಲ್ಲ, ಬದಲಿಗೆ ತಮ್ಮ ವ್ಯವಹಾರವನ್ನು ವಿಸ್ತರಿಸಿಕೊಂಡು ಉಚಿತ ಹೆಸರಿನಲ್ಲಿ ಖರ್ಚು ಮಾಡಿದ ಹಣದ ಸಾವಿರ ಪಟ್ಟು ದೋಚುವುದಕ್ಕೇ ಪ್ಲಾನ್ ಮಾಡುತ್ತಿವೆ ಎಂಬುದು ನಮಗೆ ಒಂದೇ ಕ್ಷಣದಲ್ಲಿ ಅರ್ಥವಾಗಿಬಿಡಬೇಕು. ಉದಾಹರಣೆಗೆ, ಒಂದು ಮೊಬೈಲ್ ಫೋನ್ ಕೊಂಡರೆ ಒಂದು ಮೊಬೈಲ್ ಸ್ಕ್ರೀನ್ ಗಾರ್ಡ್ ಉಚಿತ, ಒಂದು ರೆಫ್ರಿಜಿರೇಟರ್ ಕೊಂಡರೆ ಒಂದು ಇಸ್ತ್ರಿಪೆಟ್ಟಿಗೆ ಉಚಿತ, ಒಂದು ಎಲ್‌ಇಡಿ ಟೀವಿ ಕೊಂಡರೆ ಒಂದು ವಾಚು ಉಚಿತ ಇತ್ಯಾದಿ ಮರುಳು ಮಾಡುವ ತಂತ್ರಗಳ ಹಿಂದೆ ಇದೇ ವ್ಯವಹಾರ ವೃದ್ಧಿಯ ಉದ್ದೇಶವೇ ಅಡಗಿರುತ್ತದೆ. ಇದು ನಮಗೆ ಇರಲೇಬೇಕಾದ ಸಾಮಾನ್ಯ ಜ್ಞಾನ.
 ಈ ಹಿನ್ನೆಲೆಯಲ್ಲಿಯೇ ನಾವು ಫೇಸ್‌ಬುಕ್‌ಕೈಗೊಂಡಿರುವ ಇಂಟರ್‌ನೆಟ್ ಡಾಟ್ ಆರ್ಗ್ ಅಥವಾ ಫ್ರೀಬೇಸಿಕ್ಸ್ ಅಭಿಯಾನವನ್ನೂ ನೋಡಬೇಕು. ಮೊಟ್ಟ ಮೊದಲನೆಯದಾಗಿ ಫೇಸ್‌ಬುಕ್ ದಾನಧರ್ಮ ಮಾಡುತ್ತಿರುವ, ಲಾಭದಾಸೆೆಯಿಲ್ಲದೆ ಪರೋಪಕಾರದಲ್ಲಿ ತೊಡಗಿರುವ ಚಾರಿಟಿ ಸಂಸ್ಥೆಯಲ್ಲ. ಲಾಭವನ್ನೇ ಗುರಿಯಾಗಿಸಿಕೊಂಡಿರುವ ಒಂದು ಮಲ್ಟಿನ್ಯಾಶನಲ್ ಕಾರ್ಪೊರೇಷನ್. ಅದರ ಮುಖ್ಯಸ್ಥ ಮಾರ್ಕ್ ಝುಕರ್‌ಬರ್ಗ್ ಕೊಡುಗೈದಾನಿಯೇನಲ್ಲ. ಆದರೂ ಸಾವಿರ ಕೋಟಿ ರೂಪಾಯಿಗಳನ್ನು ಭಾರತದಲ್ಲಿ ಫ್ರೀಬೇಸಿಕ್ಸ್ ಪ್ರಚಾರಕ್ಕಾಗಿ ಸುರಿಯುತ್ತಿದ್ದಾರೆಂದರೆ ಏನರ್ಥ?
ಫ್ರೀಬೇಸಿಕ್ಸ್‌ನ ವಕ್ತಾರರು ಹೇಳುತ್ತಿರುವ ಪ್ರಮುಖ ಅಂಶಗಳೇನೆಂದರೆ: ಭಾರತವು ನೂರಿಪ್ಪತ್ತೈದು ಕೋಟಿ ಜನಸಂಖ್ಯೆಯನ್ನು ಹೊಂದಿರುವ ವಿಶ್ವದ ಅತಿಮುಖ್ಯ ದೇಶಗಳಲ್ಲಿ ಒಂದು. ಇಲ್ಲಿ ಸುಮಾರು 40 ಕೋಟಿ ಜನ ಮಾತ್ರ ಇಂಟರ್‌ನೆಟ್ ಬಳಸುತ್ತಿದ್ದಾರೆ. ಉಳಿದ 85 ಕೋಟಿ ಜನ ಇಂಟರ್‌ನೆಟ್ ಸೇವೆಗಳಿಂದ ದೂರವಿದ್ದಾರೆ. ಅವರಲ್ಲಿ ಬಹುತೇಕರು ಆರ್ಥಿಕವಾಗಿ ದುರ್ಬಲವಾಗಿರುವುದರಿಂದ ಇಂಟರ್‌ನೆಟ್ ಸೇವೆಗಳನ್ನು ಕೊಂಡುಕೊಳ್ಳುವುದಕ್ಕೆ ಶಕ್ತರಾಗಿಲ್ಲ. ಹಾಗಾಗಿ, ಅವರಿಗೆ ಕೆಲವು ಇಂಟರ್‌ನೆಟ್ ಸೇವೆಗಳನ್ನು ಉಚಿತವಾಗಿ ಕೊಟ್ಟು ಇಡೀ ಭಾರತವನ್ನು ಡಿಜಿಟಲ್ ಸಾಕ್ಷರರನ್ನಾಗಿ ಮಾಡುವ ಮೂಲಕ ಪ್ರಧಾನಿಯವರ ಡಿಜಿಟಲ್ ಇಂಡಿಯಾ ಕನಸನ್ನು ನನಸು ಮಾಡುವುದು. ಜನ ಡಿಜಿಟಲ್ ಸಾಕ್ಷರರಾಗುವುದಕ್ಕೆ ಹಾಗೂ ಆ ಮೂಲಕ ಆನ್‌ಲೈನ್/ಇಂಟರ್‌ನೆಟ್ ಸೇವೆಗಳನ್ನು ಪಡೆಯುವುದಕ್ಕೆ ಬಡತನ ಅಡ್ಡಿಯಾಗಬಾರದು... ಹೀಗೆ ಸಾಗುತ್ತದೆ ಅವರ ವಾದ ಸರಣಿ. ಕೇಳುವುದಕ್ಕೆ ಬಹಳ ಸೊಗಸಾಗಿದೆ. ಆದರೆ ಅದರ ಹಿಂದಿನ ವಾಸ್ತವ ಬೇರೆಯದೇ ಇದೆ.
ಮೊದಲು ಉಚಿತವಾಗಿ ಇವರು ಏನು ಕೊಡುತ್ತಾರೆ ಎಂಬುದನ್ನು ನೋಡೋಣ. ಫ್ರೀಬೇಸಿಕ್ಸ್‌ನ ಬೇಸಿಕ್ ವಿಷಯ ಏನೆಂದರೆ ಜನರಿಗೆ ಕೆಲವು ಮೂಲಭೂತ ಸೇವೆಗಳನ್ನು ಉಚಿತವಾಗಿ ಕೊಡುವುದಕ್ಕೆ ಫೇಸ್‌ಬುಕ್ ಭಾರತದ ದೈತ್ಯ ಟೆಲಿಕಮ್ಯೂನಿಕೇಶನ್ ಕಂಪೆನಿಯಾದ ರಿಲಯನ್ಸ್ ಕಮ್ಯೂನಿಕೇಶನ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ನಮಗೆಲ್ಲಾ ಗೊತ್ತಿರುವಂತೆ ಆ ಕಂಪೆನಿ ಈ ದೇಶವನ್ನು ಲೂಟಿ ಹೊಡೆದೇ ಅಷ್ಟೊಂದು ಕೊಬ್ಬಿರುವುದು. ಅಂತಹ ಕಂಪೆನಿಯೊಂದು ಫೇಸ್‌ಬುಕ್ ಜೊತೆ ಸೇರಿಕೊಂಡು ಜನರಿಗೆ ಉಚಿತ ಸೇವೆ ಕೊಡಲು ಮುಂದಾಗಿದೆ ಎಂದರೆ ಉಚಿತ ಸೇವೆಯ ಹೆಸರಿನಲ್ಲಿ ಇನ್ನೂ ದೊಡ್ಡ ಮಟ್ಟದ ಲೂಟಿಗೆ ಸಿದ್ಧವಾಗಿದೆ ಎಂದೇ ಅರ್ಥ.
ಉಚಿತ ಉಚಿತ ಉಚಿತ ಅಂತ ಬೊಂಬಡಾ ಹೊಡೆಯುತ್ತಿರುವ ಈ ಜನ ಅಸಲಿಗೆ ಜನರಿಗೆ ಏನು ಆವಶ್ಯಕತೆಯಿದೆಯೋ ಅದನ್ನು ಉಚಿತವಾಗಿ ಕೊಡುವುದಿಲ್ಲ. ಬದಲಿಗೆ ತಮಗೆ ಜನ ಏನನ್ನು ನೋಡಿದರೆ, ಏನನ್ನು ಬಳಸಿದರೆ ಲಾಭ ಆಗುತ್ತದೆಯೋ ಅದನ್ನು ಮಾತ್ರ ಉಚಿತ ಕೊಡುತ್ತಾರೆ. ಅಲ್ಲಿ ಉಚಿತ ಸೇವೆಯನ್ನು ಆಯ್ದುಕೊಳ್ಳುವ ಆಯ್ಕೆ ಬಳಕೆದಾರನಿಗಿರುವುದಿಲ್ಲ. ಒಂದೇ ಉದಾಹರಣೆ ಕೊಡುತ್ತೇನೆ. ಇವತ್ತು ವೆಬ್‌ಮೇಲ್ ಬಳಕೆದಾರರಲ್ಲಿ ಬಹುತೇಕರು ಗೂಗಲ್ ಸಂಸ್ಥೆಯ ಸೇವೆಯಾದ ಜೀಮೇಲ್ ಬಳಸುತ್ತಿದ್ದಾರೆ; ಅಂತರ್ಜಾಲವನ್ನು ಜಾಲಾಡಿ ಹುಡುಕುವುದಕ್ಕೆ ಗೂಗಲ್ ಸರ್ಚ್ ಇಂಜಿನ್ ಬಳಸುತ್ತಿದ್ದಾರೆ. ಅದರ ಜೊತೆಗೆ ಗೂಗಲ್ ಪ್ಲಸ್ ಎಂಬ ಸಾಮಾಜಿಕ ಜಾಲತಾಣ, ಗೂಗಲ್ ಮ್ಯಾಪ್ ಎಂಬ ನಕಾಶೆ ಸೇವೆ, ಗೂಗಲ್ ಕ್ಯಾಲೆಂಡರ್, ಯೂಟ್ಯೂಬ್ ಮುಂತಾದ ಸೇವೆಗಳನ್ನು ಜನ ಬಹಳಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿದ್ದಾರೆ. ಇವೆಲ್ಲ ಫೇಸ್‌ಬುಕ್‌ನ ಈ ಉಚಿತ ಸೇವೆಯ ವ್ಯಾಪ್ತಿಯೊಳಗಡೆ ಬರುವುದಿಲ್ಲ. ಫ್ರೀಬೇಸಿಕ್ಸ್ ಬಳಕೆದಾರರು ಈ ಸೇವೆಗಳನ್ನು ಬಳಸುವುದಕ್ಕೆ ಆಗುವುದಿಲ್ಲ. ಮೂಲತಃ ಗೂಗಲ್ ಮತ್ತು ಫೇಸ್‌ಬುಕ್ ಸಂಸ್ಥೆಗಳು ಇಂಟರ್‌ನೆಟ್ ಲೋಕದಲ್ಲಿ ಪರಸ್ಪರ ಕಾದಾಡುತ್ತಿರುವ ಪ್ರತಿಸ್ಪರ್ಧಿ ಸಂಸ್ಥೆಗಳು ಹಾಗಾಗಿ ಗೂಗಲ್‌ನ ಈ ಸೇವೆಗಳನ್ನು ಫೇಸ್‌ಬುಕ್ ತನ್ನ ಉಚಿತ ಸೇವೆಗಳ ವ್ಯಾಪ್ತಿಯೊಳಗೆ ತರುವ ಸಾಧ್ಯತೆಯೂ ಇಲ್ಲ. ಬದಲಿಗೆ ಗೂಗಲ್ ಈ ಸೇವೆಗಳಿಗೆ ಪರ್ಯಾಯವಾದ ಸೇವೆಗಳನ್ನು ಫೇಸ್‌ಬುಕ್ ತಾನೇ ಪ್ರಾರಂಭಿಸಿ ಉಚಿತ ಸೇವೆಯ ವ್ಯಾಪ್ತಿಯೊಳಗೆ ತರಬಹುದು ಅಥವಾ ತನಗೆ ಬೇಕಾದ ಇತರ ಸಂಸ್ಥೆಗಳ ಈ ಸೇವೆಗಳನ್ನು ಉಚಿತ ವ್ಯಾಪ್ತಿಗೆ ಸೇರಿಸಬಹುದು. ಅದರರ್ಥ, ಈಗಿರುವ ಗೂಗಲ್ ಬಳಕೆದಾರರನ್ನು ಅದರ ತೆಕ್ಕೆಯಿಂದ ಹಿಡಿದೆಳೆದು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವುದು ಹಾಗೂ ಭಾರತದಲ್ಲಿ ಹೊಸದಾಗಿ ಸೇರ್ಪಡೆಗೊಳ್ಳಲಿರುವ ಇನ್ನೂ 85 ಕೋಟಿ ಇಂಟರ್‌ನೆಟ್ ಬಳಕೆೆದಾರರ (ಮಕ್ಕಳನ್ನು ಮತ್ತು ವೃದ್ಧರನ್ನು ಹೊರತುಪಡಿಸಿದರೆ ಕನಿಷ್ಠ 40 ಕೋಟಿ) ಗೂಗಲ್‌ನಂತಹ ತನ್ನ ಪ್ರತಿಸ್ಪರ್ಧಿಗಳ ತೆಕ್ಕೆಗೆ ಹೋಗದಂತೆ ತಡೆದು ತನ್ನತ್ತ ಸೆಳೆಯುವುದು ಫೇಸ್‌ಬುಕ್‌ನ ಉದ್ದೇಶ. ಮುಕ್ತ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳೊಂದಿಗೆ ಮುಕ್ತವಾಗಿ ಸ್ಪರ್ಧಿಸಿ ಬಳಕೆದಾರರನ್ನು ತನ್ನತ್ತ ಸೆಳೆಯುವುದು ಬೇರೆ, ಈ ರೀತಿ ಕುತಂತ್ರದಿಂದ ಗ್ರಾಹಕರು ಬೇರೆಡೆ ಹೋಗದಂತೆ ತಡೆದು ತನ್ನತ್ತ ಸೆಳೆಯುವುದು ಬೇರೆ.
ಒಮ್ಮೆ ತನ್ನ ಸೇವೆಗಳನ್ನು ಬಳಸುವ ಬಳಕೆದಾರರು ಹೀಗೆ ಕೋಟಿ ಕೋಟಿ ಸಂಖ್ಯೆಯಲ್ಲಿ ಸೃಷ್ಟಿಯಾಗಿಬಿಟ್ಟರೆ ಅವರೆಲ್ಲ್ಲ ಈ ನಿರ್ದಿಷ್ಟ ಸೇವೆಗಳನ್ನು ಉಚಿತವಾಗಿ ಬಳಸಿದರೂ, ಜಾಹೀರಾತುಗಳ ಮೂಲಕ, ಬ್ರೇನ್‌ವಾಶ್ ಮಾಡುವ ಲೇಖನಗಳ ಮೂಲಕ, ಪ್ರಾತ್ಯಕ್ಷಿಕೆಗಳ ಮೂಲಕ ಅವರನ್ನು ಇತರೆ ಸರಕುಗಳನ್ನು, ಸೇವೆಗಳನ್ನು ಖರೀದಿಸುವ ಗ್ರಾಹಕರನ್ನಾಗಿ ಪರಿವರ್ತಿಸಲಾಗುತ್ತದೆ. ಅಲ್ಲಿಗೆ ಅವರು ಈಗ ಉಚಿತ, ಉಚಿತ, ಉಚಿತ ಎಂದು ಕೂಗಿ ಕೂಗಿ ಕರೆದು ನಿಜಕ್ಕೂ ಉಚಿತ ಇಂಟರ್‌ನೆಟ್ ಸೇವೆಗಳನ್ನು ಕೊಡುವುದಕ್ಕೆ ಎಷ್ಟು ಖರ್ಚು ಮಾಡುತ್ತಿದ್ದಾರೋ ಅದರ ಸಾವಿರ ಪಟ್ಟು, ಲಕ್ಷಪಟ್ಟು ದುಡ್ಡನ್ನು ಹೀಗೆ ನಮ್ಮಿಂದಲೇ ಪರೋಕ್ಷವಾಗಿ ಸುಲಿಯುತ್ತಾರೆ. ನೋಡು ನೋಡುತ್ತಲೇ ನಾವು ನಮಗೆ ಬೇಕಾದ ಇಂಟರ್‌ನೆಟ್ ಸೇವೆಯನ್ನು ಪಡೆಯುವ ಜಾಲ ತಟಸ್ಥವನ್ನೂ ಕಳೆದುಕೊಂಡು ಇನ್ನೊಂದೆಡೆಗೆ ಒಂದು ನಿರ್ದಿಷ್ಟ ಕಂಪೆನಿಯ ಅಥವಾ ಕಂಪೆನಿಗಳ ಗುಂಪಿನ ಗ್ರಾಹಕರಾಗಿ ಮಾರ್ಪಟ್ಟಿರುತ್ತೇವೆ.
ಹಾಗಾಗಿ, ಫೇಸ್‌ಬುಕ್ ಪ್ರೇರಿತ ಫ್ರೀಬೇಸಿಕ್ಸ್ ಪರಿಕಲ್ಪನೆಯು ಜಾಲ ತಾಟಸ್ಥತೆಯ ಮೂಲಭೂತ ನಿಯಮಗಳನ್ನು ಉಲ್ಲಂಘಿಸುವುದರ ಜೊತೆಗೆ ವ್ಯಾವಹಾರಿಕ ದುರುದ್ದೇಶಗಳನ್ನೂ ಹೊಂದಿರುವುದರಿಂದ ಅದು ಭಾರತದ ಮುಂದಿರುವ ಅಪಾಯವೂ ಆಗಿದೆ. ಆದ್ದರಿಂದ ಅದನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಧಿಸುವ ಅವಶ್ಯಕತೆಯಿದೆ.
xsangeetax@gmail.com

Writer - ಸಂಗೀತ

contributor

Editor - ಸಂಗೀತ

contributor

Similar News