ಯಾವುದು ಸಂವಿಧಾನ ದಿನಾಚರಣೆ?
ಕೇಂದ್ರದ ನರೇಂದ್ರ ಮೋದಿಯವರ ಬಿಜೆಪಿ ಸರಕಾರ ನವೆಂಬರ್ 26 ಅನ್ನು ಸಂವಿಧಾನ ದಿನವೆಂದು ಘೋಷಿಸಿದೆ. ಎಲ್ಲಾ ಸರಕಾರಿ ಕಚೆೇರಿಗಳಲ್ಲಿ ನವೆಂಬರ್ 26 ಅನ್ನು ಸಂವಿಧಾನ ದಿನವೆಂದು ಆಚರಿಸಬೇಕೆಂದು ಸೂಚನೆ ಕೊಟ್ಟಿದೆ. ಆ ಮೂಲಕ ಅಂಬೇಡ್ಕರರ ಕಟ್ಟಾ ಅನುಯಾಯಿಗಳಾದ ದಲಿತರನ್ನು ತೃಪ್ತಿಪಡಿಸಲು ಮುಂದಾಗಿದೆ. ಆದರೆ ಪರಮಾಶ್ಚರ್ಯ! ದೇಶದಾದ್ಯಂತ ದಲಿತರು ನರೇಂದ್ರ ಮೋದಿಯವರ ಈ ನಡೆಗೆ ಅಷ್ಟೇನೂ ಉತ್ಸಾಹದಿಂದ ಸ್ವಾಗತವನ್ನು ನೀಡಿಲ್ಲ! ಹೇಳಿಕೊಳ್ಳುವಂತಹ ಸಂತೋಷವನ್ನೂ ಪಟ್ಟಿಲ್ಲ! ಯಾಕೆ...? ಯೋಚಿಸಬಲ್ಲಿರಾ...?
ಸಾಮಾನ್ಯವಾಗಿ ದಲಿತರು ಜನವರಿ 26ನೆ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸುತ್ತಿದ್ದರು. ಅದರಲ್ಲೂ ಬಹುಜನ ಚಳವಳಿ ರಾಷ್ಟ್ರವ್ಯಾಪಿ ಆವರಿಸಿದ ಮೇಲೆ, ಕರ್ನಾಟಕದಲ್ಲಿ ಬಹುಜನ ವಿದ್ಯಾರ್ಥಿ ಸಂಘ ಹುಟ್ಟಿಕೊಂಡ ಮೇಲೆ(2001 ರಿಂದೀಚೆಗೆ) ಜನವರಿ-26 ಸಂವಿಧಾನ ದಿನ ಎಂಬಂತೆ ಸಾವಿರ ಸಾವಿರ ಕಾರ್ಯಕ್ರಮಗಳು ಆಯೋಜನೆಗೊಂಡವು. ಅಲ್ಲೆಲ್ಲಾ ‘‘ಆಗಸ್ಟ್ 15 ಭಾರತಕ್ಕೆ ಸ್ವಾತಂತ್ರ್ಯ ಬಂತು ಎಂಬ ಕಾರಣಕ್ಕೆ ಅದನ್ನು ‘ಸ್ವಾತಂತ್ರ್ಯ ದಿನ’ ಎಂದು ಕರೆಯುವುದಾದರೆ, ಜನವರಿ 26ರಂದು ಭಾರತದಲ್ಲಿ ಸಂವಿಧಾನ ಜಾರಿಗೆ ಬಂದಿತು. ಹಾಗಾದರೆ ಅದನ್ನು ಸಂವಿಧಾನ ದಿನವೆಂದು ಏಕೆ ಕರೆಯುವುದಿಲ್ಲ?’’ ಎಂಬ ಮೂಲಭೂತ ಪ್ರಶ್ನೆಯನ್ನು ಎತ್ತಲಾಯಿತು. ಸಂವಿಧಾನ ಶಿಲ್ಪಿಯಾದ ಡಾ. ಅಂಬೇಡ್ಕರರ ಹೆಸರು ಹೇಳಬೇಕಾಗುತ್ತದೆ. ಅವರಿಗೆ ಪ್ರಚಾರಕೊಡಬೇಕಾಗುತ್ತದೆ ಎಂಬ ಒಂದೇ ಕಾರಣಕ್ಕೆ ಜನವರಿ 26ಅನ್ನು ಸಂವಿಧಾನ ದಿನವೆಂದು ಕರೆಯದೆ ‘ಗಣರಾಜ್ಯ ದಿನ’ವೆಂಬ ವಿಲಕ್ಷಣ ಹೆಸರನ್ನು ಇಡಲಾಗಿದೆ ಎಂದು ಎಲ್ಲ ಕಡೆ ಚರ್ಚಿಸಲಾಯಿತು. ಬಹುಜನ ವಿದ್ಯಾರ್ಥಿ ಸಂಘದ ಈ ರೀತಿಯ ಕಾರ್ಯಕ್ರಮಗಳು ಎಷ್ಟು ಪರಿಣಾಮಕಾರಿಯಾದವೆಂದರೆ ಈ ಹಿಂದೆ ಜನವರಿ 26ರಂದು ಅಂಬೇಡ್ಕರರ ಹೆಸರನ್ನೂ ಹೇಳದಿದ್ದ ಸರಕಾರಗಳು ಹೆಚ್ಚೂ ಕಡಿಮೆ 2006-07ರಿಂದ ಸರಕಾರಿ ಜಾಹೀರಾತುಗಳಲ್ಲಿ ಜನವರಿ 26ರಂದು ಅಂಬೇಡ್ಕರರ ಭಾವಚಿತ್ರವನ್ನೇ ಮುದ್ರಿಸಬೇಕಾಯಿತು! ಅಷ್ಟರಮಟ್ಟಿಗೆ ಜನವರಿ 26 ಎಂದರೆ ಸಂವಿಧಾನ ದಿನ ಎಂದು ಎಲ್ಲೆಡೆ ಜನಜನಿತವಾಯಿತು. ಈ ಎಲ್ಲ ಶ್ರಮದ ಹಿಂದೆ ಕರ್ನಾಟಕದ ಕೆಲವು ಅಂಬೇಡ್ಕರ್‌ವಾದಿಗಳು ಮತ್ತು ಬಹುಜನ ಚಳವಳಿಯ ನೇತಾರರ ಅವಿರತ ಶ್ರಮವಿದೆ. ಅಷ್ಟೇ ಅಲ್ಲದೆ; ಮಹಾತ್ಮ ಪುಲೆ, ಮಾತೆ ಸಾವಿತ್ರಿ ಭಾಯಿ ಪುಲೆ, ಛತ್ರಪತಿ ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂತಾದ ಶೋಷಿತ ವರ್ಗಗಳ ನಾಯಕರನ್ನು ಕರ್ನಾಟಕದ ಲಕ್ಷ-ಲಕ್ಷ ಯುವ ಜನರೆದೆಯಲ್ಲಿ ಬಿತ್ತಿ ಬೆಳೆದ ಮೊದಲಿಗರೂ ಅವರೆ.
ಹೀಗೆ ದಲಿತರೆಲ್ಲ ಬೇರೆಯವರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಜನವರಿ 26 ಅನ್ನು ಸಂವಿಧಾನ ದಿನವಾಗಿ ಆಚರಿಸುತ್ತಿರುವಾಗ ದಿಢೀರನೆ ಕೇಂದ್ರದ ಬಿಜೆಪಿ ಸರಕಾರ ನವೆಂಬರ್ 26 ಸಂವಿಧಾನ ದಿನವೆಂದು ಘೋಷಿಸಿದೆ. ಇದರಿಂದ ದಲಿತರು ಸ್ವಲ್ಪ ವಿಚಲಿತರಾದಂತೆ ಕಂಡರೂ ಸರಕಾರದ ನಡೆಯನ್ನು ಅನುಮಾನದಿಂದಲೇ ಈಗಲೂ ನೋಡುತ್ತಿದ್ದಾರೆ. ಇದರ ಹಿಂದೆ ಏನೋ ಹುನ್ನಾರವಿದೆ ಎಂದು ಎಂದಿನಂತೆ ಅನುಮಾನಿಸುತ್ತಿದ್ದಾರೆ.
ಈ ಹಿನ್ನ್ನೆಲೆಯಲ್ಲಿ ಕೆಲವು ಮೂಲಭೂತ ಪ್ರಶ್ನೆಗಳನ್ನು ತಮ್ಮ ಮುಂದಿಡುತ್ತೇನೆ. ಇಂದು ಎಲ್ಲರಿಗೂ ತಿಳಿದಿರುವಂತೆ ಭಾರತದ ಸಂವಿಧಾನ ಅಂಗೀಕಾರವಾದುದು 1949ರ ನವೆಂಬರ್ 26ರಂದು. ಆದರೆ ಅದು ಜಾರಿಗೆ ಬಂದದ್ದು 1950 ಜನವರಿ 26ರಿಂದ. ಈ ನಡುವೆ 2 ತಿಂಗಳು (ಅಂದರೆ 1949, ನವೆಂಬರ್ 26ರಿಂದ 1950 ಜನವರಿ 25ರ ವರೆಗೆ) ಭಾರತದ ಆಡಳಿತ ಬ್ರಿಟಿಷರ 1947ರ ಭಾರತ ಸ್ವತಂತ್ರ ಕಾಯ್ದೆ (Indian Independence Act 1947)ಯ ಪ್ರಕಾರವೇ ನಡೆಯಿತು. ಇಲ್ಲಿ ಎರಡೂ ಐತಿಹಾಸಿಕ ದಿನಗಳೇ. ನವೆಂಬರ್ 26 ಸಂವಿಧಾನ ಅಂಗೀಕಾರವಾದ ದಿನ. ಅಂದರೆ ದೇಶದ ಸಂಸತ್ತು ಸರ್ವಾನುಮತದಿಂದ ಸಂವಿಧಾನವನ್ನು ಒಪ್ಪಿಕೊಂಡ ದಿನ. ಆದರೆ ಜನವರಿ 26 ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದ ದಿನ. ಇದನ್ನು ಜನವರಿ 26ರಂದೇ ಏಕೆ ಜಾರಿಗೆ ತರಲಾಯಿತು ಎಂದರೆ 1930ರ ಜನವರಿ 26ರಂದು ಲಾಹೋರ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯವನ್ನು ಮೊದಲ ಬಾರಿಗೆ ಘೋಷಣೆ ಮಾಡಲಾಗಿತ್ತು. ಆದ್ದರಿಂದ ಇಂತಹ ಐತಿಹಾಸಿಕ ನೆನಪಿಗಾಗಿ 1950 ಜನವರಿ 26ರಂದೇ ಭಾರತ ಸಂವಿಧಾನವನ್ನು ಜಾರಿಗೆ ತರಲಾಯಿತು.
ಹೀಗಾಗಿ ಎರಡೂ ಐತಿಹಾಸಿಕ ದಿನಗಳೇ! ಹೀಗಿದ್ದೂ ಭಾರತ ಸರಕಾರ ಕಳೆದ 65 ವರ್ಷಗಳಿಂದಲೂ ಜನವರಿ 26ನ್ನೇ ಬಹಳ ವಿಜೃಂಭಣೆಯಿಂದ ದೇಶದೆಲ್ಲೆಡೆ ಆಚರಿಸುತ್ತಿದೆ. ಮುಂದೆ ನರೇಂದ್ರ ಮೋದಿಯವರ ಸರಕಾರವೂ ಜನವರಿ 26ನೆ ದಿನವನ್ನೇ ವಿಜೃಂಭಣೆಯಿಂದ ಆಚರಿಸಲಿದೆ. ಅದಕ್ಕೆ ಫ್ರಾನ್ಸಿನ ಅಧ್ಯಕ್ಷರಾದ ಹೋಲ್ಯಾಂಡ್‌ರವರನ್ನು ಅತಿಥಿಗಳಾಗಿ ಈಗಾಗಲೇ ಕರೆಯಲಾಗಿದೆ. ಇಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ, ವಿದೇಶದ ಅತಿಥಿಯೊಬ್ಬರನ್ನು ಕರೆದುಕೊಂಡು ದಿಲ್ಲಿಯ ರಾಷ್ಟ್ರಪತಿ ಭವನದ ಮುಂದೆ ಬಹಳ ಅಮೋಘವೆಂಬಂತೆ ಆಚರಿಸುವ ಜನವರಿ 26ನ್ನು ‘ಸಂವಿಧಾನ ದಿನ’ವೆಂದು ಘೋಷಿಸಬಹು ದಿತ್ತಲ್ಲವೇ...? ಇಂತಹ ದೊಡ್ಡ ಆಚರಣೆ ಇದ್ದರೂ ಮತ್ತೊಂದು ದಿನದ ಆಚರಣೆ ಏಕೆ...? ಈ ಪ್ರತ್ಯೇಕತೆ ಏಕೆ...? ಇಂದು ಎಪ್ರಿಲ್ 14ನೆ ತಾರೀಕಿನ ದಿನ ದಲಿತರು ತಮಗೆ ತೋಚಿದಂತೆ ಅಂಬೇಡ್ಕರ್ ದಿನಾಚರಣೆಯನ್ನು ಮಾಡಿಕೊಳ್ಳುತ್ತಾರಲ್ಲ...ಹಾಗೆಯೇ ಈ ನವೆಂಬರ್ 26ರ ಕಥೆಯೂ ಆಗಲಿ ಎಂಬುದು ಬಿಜೆಪಿ ಉದ್ದೇಶವಾಗಿದೆಯೇ...? ಅಂಬೇಡ್ಕರರನ್ನು ಮುಖ್ಯ ವಾಹಿನಿಯಿಂದ ದೂರದಲ್ಲಿಡುವ ಅದೇ ಹಳೆಯ ಸಂಚೇ...?
ಹೋಗಲಿ ಇವರು ಗಣರಾಜ್ಯ (ಗಣರಾಜ್ಯವೆಂದರೆ ಪ್ರಜಾಪ್ರಭುತ್ವ ಎಂದರ್ಥ) ಎಂದು ಕರೆಯುತ್ತಾರಲ್ಲ...ಅದು ಯಾರ ಕೊಡುಗೆ? ಇದರ ಕೀರ್ತಿ ಅಂದು ಆಳ್ವಿಕೆ ನಡೆಸುತ್ತಿದ್ದ ಬ್ರಿಟಿಷರಿಗೆ ಮತ್ತು ಅವರ ಮೇಲೆ ಪ್ರಜಾಪ್ರಭುತ್ವಕ್ಕಾಗಿ ತೀವ್ರ ಒತ್ತಡ ತಂದ ಡಾ. ಅಂಬೇಡ್ಕರರಿಗೆ ಸಲ್ಲಬೇಕು. ಭಾರತದಲ್ಲಿ ಪೂರ್ಣ ಪ್ರಮಾಣದ ವಯಸ್ಕ ಮತದಾನಕ್ಕಾಗಿ ಒತ್ತಾಯಿಸಿದ ಮೊದಲ ವ್ಯಕ್ತಿ ಡಾ. ಅಂಬೇಡ್ಕರರು. 1930ರಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಇದಕ್ಕಾಗಿ ಅವರು ಒತ್ತಾಯಿಸಿದರು. ಇದಕ್ಕೂ ಮೊದಲು ಬ್ರಿಟಿಷರು ಭಾರತದಲ್ಲಿ ಕೇವಲ ಪದವೀಧರರಿಗೆ, ಸರಕಾರಕ್ಕೆ ತೆರಿಗೆ ಕಟ್ಟುವ ಶ್ರೀಮಂತರಿಗೆ, ಜಮೀನ್ದಾರರಿಗೆ ಮಾತ್ರ ಮತದಾನ ಮಾಡುವ ಹಕ್ಕು ನೀಡಿದ್ದರು. ಇದಕ್ಕೆ ಕಾರಣ ಸ್ವತಃ ಅವರ ಬ್ರಿಟನ್‌ನಲ್ಲೂ ಆ ಸಮಯದಲ್ಲಿ ಇಂತಹ ಸೀಮಿತ ಜನರ ಮತದಾನ ಪದ್ಧತಿ ಜಾರಿಯಲ್ಲಿತ್ತು. ಇದನ್ನು ವಿರೋಧಿಸಿದ ಬಾಬಾ ಸಾಹೇಬರು ಎಲ್ಲರಿಗೂ ವಯಸ್ಕ ಮತದಾನವನ್ನು ನೀಡಿದರೆ ಮಾತ್ರ ಅದು ಪೂರ್ಣ ಪ್ರಮಾಣದ ಪ್ರಜಾಪ್ರಭುತ್ವವಾಗುತ್ತದೆ ಎಂದು ವಾದಿಸಿ 1935ರ ಕಾಯ್ದೆಯಿಂದಲೇ ಭಾರತದಲ್ಲಿ ವಯಸ್ಕ ಮತದಾನ ಪದ್ಧತಿ ಜಾರಿಗೆ ಬರಲು ಕಾರಣಕರ್ತರಾದರು.
ಹೀಗಾಗಿ ಭಾರತ ಪ್ರಜಾಪ್ರಭುತ್ವ ದೇಶವಾಗಲು ಡಾ. ಅಂಬೇಡ್ಕರರೇ ಮುಖ್ಯ ಪಾತ್ರ ವಹಿಸಿದವರು. ಆದ್ದರಿಂದಲೇ ಅವರನ್ನು ‘ಆಧುನಿಕ ಭಾರತದ ಪಿತಾಮಹ’, ‘ಪ್ರಜಾಪ್ರಭುತ್ವದ ಪಿತಾಮಹ’ ಎಂದೆಲ್ಲಾ ಚರಿತ್ರೆಕಾರರು ಕರೆಯುತ್ತಾರೆ. ಸತ್ಯ ಹೀಗಿದ್ದರೂ ಜನವರಿ 26ರಿಂದ ಅವರನ್ನು ಹೊರಗಿಡುವುದು ಏಕೆ? ಹೋಗಲಿ, ಪ್ರಜಾಪ್ರಭುತ್ವ ಭಾರತಕ್ಕೆ ಬಂದದ್ದು ಸಂವಿಧಾನದ ಮೂಲಕವೇ ಅಲ್ಲವೇ...? ಆದರೂ ಸಂವಿಧಾನ ದಿನ ಬೇರೆ, ಗಣರಾಜ್ಯ ದಿನ ಬೇರೆ ಎಂದು ಇವರೇಕೆ ವಿಭಾಗಿಸುತ್ತಿದ್ದಾರೆ...?
ನರೇಂದ್ರ ಮೋದಿ ಸರಕಾರವು ಜನವರಿ 26ರ ಆಚರಣೆಯನ್ನು ರದ್ದುಪಡಿಸಿ, ಆವತ್ತು ಕೇಂದ್ರ ಸರಕಾರ ಏನೇನು ಆಚರಿಸುತ್ತಿತ್ತೋ ಅದನ್ನೆಲ್ಲ ನವೆಂಬರ್ 26 ಕ್ಕೆ ವರ್ಗಾಯಿಸುವುದಾಗಿದ್ದರೆ ಆಗ ಅವರ ಪ್ರಯತ್ನ ಪ್ರಾಮಾಣಿಕವೆನ್ನಬಹುದಿತ್ತು. ಆದರೆ, ಜನವರಿ 26 ಅನ್ನು ಅದ್ಭುತವೆಂಬಂತೆ,ಜಗತ್ಪ್ರಸಿದ್ಧವೆಂಬಂತೆ ಆಚರಿಸಿ ನವೆಂಬರ್ 26 ನ್ನು ಮತ್ತೊಂದು ಅಸ್ಪಶ್ಯರ ಆಚರಣಾ ದಿನವನ್ನಾಗಿಸಲು ಹೊರಟಿರುವ ಬಿಜೆಪಿ ತಂತ್ರ ನಿಜಕ್ಕೂ ಮಹಾಮೋಸ. ದಲಿತರನ್ನು ಇವರು ಇನ್ನೆಷ್ಟು ದಿನ ಮೂರ್ಖರನ್ನಾಗಿಸುತ್ತಾರೆ?
ದೇಶದ ಪ್ರಜ್ಞಾವಂತರು ಖಂಡಿತವಾಗಿಯೂ ಇದಕ್ಕೆ ಆಸ್ಪದ ಕೊಡಕೂಡದು. ಡಾ. ಅಂಬೇಡ್ಕರರನ್ನು, ಅವರ ದೊಡ್ಡ ಕೊಡುಗೆ ಗಳನ್ನು ಮೂಲೆಗುಂಪು ಮಾಡಲು ಹೊರಟಿರುವ ಕೇಂದ್ರ ಸರಕಾರದ ಈ ಕ್ರಮವನ್ನು ನಾವು ಧಿಕ್ಕರಿಸೋಣ. ಅವರು ಅಧಿಕಾರ ಬಲದಿಂದ ನವೆಂಬರ್ 26ರನ್ನು ಸಂವಿಧಾನ ದಿನವೆಂದು ಕರೆದುಕೊಳ್ಳಲಿ. ನಾವು ಜನಬಲದಿಂದಲೇ ಜನವರಿ 26ರನ್ನು ಸಂವಿಧಾನವೆಂದು ಆಚರಿಸೋಣ. ಅಂಬೇಡ್ಕರರನ್ನು, ಅಖಂಡ ಭಾರತಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಎಲ್ಲ ಕಡೆ ಪ್ರಚುರಪಡಿಸೋಣ. ಮುಂದೆ ಅಧಿಕಾರ ಬಲದಿಂದಲೇ ಇದನ್ನು ಸರಿಪಡಿಸುವ ಅವಕಾಶ ನಮಗೂ ಸಿಕ್ಕಿಯೇ ಸಿಗುತ್ತದೆ.