ಮುಂದಿನ ದಶಕದ ರಾಜಕಾರಣವೂ ಈ ಮೂವರು ಮಹಿಳೆಯರೂ!

Update: 2016-01-14 18:10 GMT

ಮುಂದಿನ ಒಂದೂವರೆ ವರ್ಷಗಳ ಕಾಲ(ಜೂನ್-2017ರವರಗೆ) ಇಂಡಿಯಾದ ಬಹುಮುಖ್ಯ ರಾಜಕೀಯ ಚದುರಂಗದಾಟದಲ್ಲಿ ಮೂವರು ಮಹಿಳೆಯರು ಪ್ರಮುಖಪಾತ್ರ ವಹಿಸಲಿದ್ದಾರೆ. ಅವರಿಗರಿವು ಇದ್ದೊ ಇಲ್ಲದೆಯೊ ಮುಂದಿನ ಹತ್ತು ವರ್ಷಗಳ ಕಾಲದ ಇಂಡಿಯಾದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.ವಿಶೇಷವೆಂದರೆ ಪುರುಷಪ್ರಧಾನವಾದ ನಮ್ಮ ರಾಜಕಾರಣ ವ್ಯವಸ್ಥೆಯಲ್ಲಿ ಅವರನ್ನು ಪ್ರಭಾವಿಸಲು ಯಾವ ಪುರುಷರೂ ಇಲ್ಲ. ತಮ್ಮ ತೀರ್ಮಾನಗಳನ್ನು ತೆಗೆದುಕೊಳ್ಳಲು ಅವರು ಸಂಪೂರ್ಣ ಸ್ವತಂತ್ರರು. ಬಹುಶ: ಇಂಡಿಯಾದ ಸರಿಸುಮಾರು ಏಳು ದಶಕಗಳ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಪ್ರಧಾನವಾದ ರಾಜಕಾರಣದ ಅಧ್ಯಾಯವೊಂದು ತೆರದುಕೊಳ್ಳಲಿದೆ.

ಇನ್ನೂ ವಿಶೇಷವೆಂದರೆ ಈ ಮೂರೂ ಜನ ಮಹಿಳೆಯರ ಹಿನ್ನೆಲೆಗಳು ಸಂಪೂರ್ಣವಾಗಿ ಭಿನ್ನವಾಗಿದ್ದು ಅವರು ನಡೆದು ಬಂದ ಹಾದಿಗಳೂ ಸಹ ವಿಭಿನ್ನವಾಗಿರುವುದು. ಈ ಮೂವರೂ ವಿವಾಹವನ್ನೇ ಆಗದೆ ರಾಜಕಾರಣಕ್ಕೆ, ತನ್ಮೂಲಕ ಸಾರ್ವಜನಿಕ ಬದುಕಿಗಾಗಿ ತಮ್ಮನ್ನು ಪೂರ್ಣ ರೀತಿಯಲ್ಲಿ ಸಮರ್ಪಿಸಿಕೊಂಡವರು. ಈ ಮೂವರು ಮಹಿಳೆಯರು ತಮ್ಮತಮ್ಮ ರಾಜ್ಯಗಳ ರಾಜಕೀಯ ದಿಕ್ಕುಗಳನ್ನು ಬದಲಿಸಬಲ್ಲ ಶಕ್ತಿಯುಳ್ಳರು. ವಿಪರ್ಯಾಸವೆಂದರೆ ಇವರ್ಯಾರೂ ಒಂದು ಪಕ್ಷ ಅಥವಾ ಒಂದು ಮೈತ್ರಿಕೂಟದಲ್ಲಿ ಸೇರಿದವರಲ್ಲ. ಮೂವರೆಂದರೆ, ಉತ್ತರಪ್ರದೇಶ ರಾಜ್ಯದ ಬಹುಜನಪಕ್ಷದ ಕುಮಾರಿ ಮಾಯಾವತಿ, ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ನ ಕುಮಾರಿ ಮಮತಾ ಬ್ಯಾನರ್ಜಿ, ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಕುಮಾರಿ ಜಯಲಲಿತಾ ಅವರು.
ಹಾಗೆ ನೋಡಿದರೆ ತಮ್ಮ ತಮ್ಮ ಪಕ್ಷಗಳಲ್ಲಿ ಇವರ ಮಾತುಗಳೇ ಅಂತಿಮ. ಪಕ್ಷದೊಳಗೆ ಇವರು ತೆಗೆದುಕೊಳ್ಳುವ ಯಾವುದೇ ತೀಮಾನಗಳನ್ನೂ ಅಪ್ಪಿತಪ್ಪಿಯೂ ಪ್ರಶ್ನಿಸುವ ಇನ್ನೊಬ್ಬ ವ್ಯಕ್ತಿಯಂತೂ ಇಲ್ಲವೇ ಇಲ್ಲವೆನ್ನಬಹುದು. ಹೀಗಾಗಿಯೇ ಇವರು ತೆಗೆದುಕೊಳ್ಳುವ ಒಳ್ಳೆಯ ಅಥವಾ ಕೆಟ್ಟ ನಿರ್ಧಾರಗಳನ್ನು ವಿಮರ್ಶೆಗೊಳಿಸುವುದಕ್ಕೆ ಮುಂಚೆಯೇ ಜಾರಿಗೆ ಬಂದು ಬಿಡುವ ಅಪಾಯವಿದೆ..
  ಈ ಮೂವರಲ್ಲಿ ಜಯಲಲಿತಾ ಮತ್ತು ಮಮತಾಬ್ಯಾನರ್ಜಿಯವರ ರಾಜ್ಯಗಳಲ್ಲಿ ಈ ವರ್ಷದ ಜೂನ್ ತಿಂಗಳ ಒಳಗೆ ಅವರ ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಮುಂದಿನ ವರ್ಷದ ಜೂನ್ ತಿಂಗಳಲ್ಲಿ ಮಾಯಾವತಿಯವರ ರಾಜ್ಯ ಉತ್ತರಪ್ರದೇಶದಲ್ಲಿ ವಿಧಾನಸಭಾ ಚನಾವಣೆ ನಡೆಯಲಿವೆ. ಈ ಚುನಾವಣೆಗಳಲ್ಲಿ ಈ ಮೂರೂ ಪಕ್ಷಗಳ ಎದುರಾಳಿಗಳು ಸಹ ಬೇರೆಬೇರೆಯಾಗಿದ್ದು ಮೈತ್ರಿರಾಜಕಾರಣದ ಪರವಾಗಿ ಸಾರ್ವಜನಿಕ ಜನಾಭಿಪ್ರಾಯವೊಂದು ರೂಪುಗೊಳ್ಳುತ್ತಿರುವ ಮತ್ತು ನರೇಂದ್ರಮೋದಿಯವರ ನೇತೃತ್ವದ ಭಾಜಪ ತನ್ನ ಬೇರುಗಳನ್ನು ರಾಷ್ಟ್ರದಾದ್ಯಂತ ಗಟ್ಟಿಗೊಳಿಸುತ್ತ ಹೋಗುತ್ತಿರುವ ಇಂತಹ ಸಂಕೀರ್ಣ ಸಮಯದಲ್ಲಿ ಈ ಮೂವರು ನಾಯಕಿಯರು ತೆಗೆದುಕೊಳ್ಳಬಹುದಾದ ನಿರ್ಧಾರಗಳು ಮುಂದಿನ ಲೋಕಸಭಾ ಚುನಾವಣೆಯ ರೂಪುರೇಷೆಗಳನ್ನು ತೀರ್ಮಾನಿಸುವ ಶಕ್ತಿಯನ್ನು ಹೊಂದಿರುತ್ತವೆಯೆನ್ನುವುದೇ ಈ ಮೂವರ ಮಹತ್ವವನ್ನು ತಿಳಿಸುತ್ತದೆ.

ಕುಮಾರಿ ಜಯಲಲಿತಾ (ತಮಿಳುನಾಡು-ಏ.ಐ.ಎ.ಡಿ.ಎಂ.ಕೆ.)
   ಮೊದಲಿಗೆ ತಮಿಳುನಾಡಿನ ಜಯಲಲಿತಾರವರ ಬಗ್ಗೆ ನೋಡೋಣ: ತಮಿಳುನಾಡಿನ ಹಾಲಿ ಮುಖ್ಯಮಂತ್ರಿಯಾಗಿರುವ ಕುಮಾರಿ ಜಯಲಲಿತಾರವರು ಕಳೆದ ಚುನಾವಣೆಯಲ್ಲಿ ಕರುಣಾನಿಧಿಯವರ ಡಿ.ಎಂ.ಕೆ.ಪಕ್ಷವನ್ನು ಹೀನಾಯವಾಗಿ ಸೋಲಿಸಿ ಅಧಿಕಾರಕ್ಕೆ ಬಂದಿದ್ದರು. ಅವರ ಗೆಲುವು ಯಾವ ಮಟ್ಟಕ್ಕಿತ್ತೆಂದರೆ ಎಐಎಡಿಎಂಕೆ ಮೈತ್ರಿಕೂಟ 203 ಸ್ಥಾನಗಳನ್ನು ಗೆದ್ದರೆ ಅದರಲ್ಲಿ ಜಯಲಲಿತಾರವರ ಪಕ್ಷವೇ 150ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದಿತ್ತು. ಇನ್ನು ಕರುಣಾನಿಧಿಯವರ ಡಿಎಂಕೆ ಮೈತ್ರಿಕೂಟ ಕೇವಲ 30 ಸ್ಥಾನಗಳನ್ನು ಗೆದ್ದಿದ್ದು ಅದರಲ್ಲಿ ಡಿಎಂಕೆಯ ಪಾಲು 23 ಸ್ಥಾನಗಳು ಮಾತ್ರ. ಎಐಎಡಿಎಂಕೆ ಶೇಕಾಡಾ 53ರಷ್ಟು ಮತಗಳಿಸಿದ್ದರೆ, ಡಿಎಂಕೆ ಕೇವಲ 39ರಷ್ಟು ಮತ ಮಾತ್ರ ಗಳಿಸಲು ಶಕ್ತವಾಗಿತ್ತು. ಅಲ್ಲಿಗೆ ಕಳೆದ ಬಾರಿಯ ಚುನಾವಣೆಯಲ್ಲಿ ತಮಿಳು ಸಮುದಾಯ ಎಷ್ಟು ತೀವ್ರವಾಗಿ ಡಿಎಂಕೆಯನ್ನು ವಿರೋಧಿಸಿತ್ತೆಂಬುದನ್ನು ಅರಿಯಬಹುದು. ಡಿಎಂಕೆಗಿದ್ದ ಆಡಳಿತ ವಿರೋಧಿ ಅಲೆಯ ಜೊತೆಗೆ ಕೇಂದ್ರದಲ್ಲಿ ಅಧಿಕಾರ ಹಂಚಿಕೊಂಡಿದ್ದ ಅದರ ಸಚಿವರು ನಡೆಸಿದರೆನ್ನಲಾದ 2ಜಿ ಹಗರಣಗಳು ಮತ್ತು ಅಂದಿನ ಮುಖ್ಯಮಂತ್ರಿ ಕರುಣಾನಿಧಿಯವರ ಸ್ವಜನಪಕ್ಷಪಾತದಂತಹ ವಿಚಾರಗಳು ಜಯಲಲಿತಾರನ್ನು ಜಯಶಾಲಿಯನ್ನಾಗಿ ಮಾಡಲು ಶಕ್ತಿಯುತವಾಗಿದ್ದವು. ಅಧಿಕಾರಕ್ಕೇರಿದ ನಂತರ ಅಕ್ರಮ ಆಸ್ತಿಗಳಿಕೆಯ ಕೇಸೊಂದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜಯಲಲಿತಾ ಜೈಲಿಗೆ ಹೋಗಬೇಕಾದ ಸನ್ನಿವೇಶ ಬಂದು ತಾತ್ಕಾಲಿಕವಾಗಿ ಅವರು ರಾಜೀನಾಮೆ ನೀಡಿ, ನಿರಪರಾಧಿಯೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ. ಕಡಿಮೆಯಾಗುತ್ತಿರುವ ತಮ್ಮ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ‘ಅಮ್ಮ’ ಹೆಸರಿನಲ್ಲಿ ದಿನಕ್ಕೊಂದು ಯೋಜನೆಗಳನ್ನು ಜಾರಿಗೊಳಿಸುತ್ತ ತಮ್ಮ ಮತ ಬ್ಯಾಂಕನ್ನು ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಜಯಲಲಿತಾರವರ ಮೇಲೆೆ ಇತ್ತೀಚೆಗೆ ಭೀಕರ ಮಳೆಯಿಂದಾದ ಪ್ರವಾಹ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಲಿಲ್ಲವೆಂಬ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಬರುತ್ತಿರುವ ಚುನಾವಣೆಗಳು ತೀವ್ರ ಕುತೂಹಲ ಹುಟ್ಟಿಸಿವೆ.
 ಕಳೆದ ಚುನಾವಣೆಯಲ್ಲಿ ಅವರ ಜೊತೆಯಿದ್ದ ಕೆಲವು ಪಕ್ಷಗಳು ಮೈತ್ರಿಯಿಂದ ಹೊರಬರುವ ಮಾತಾಡುತ್ತಿವೆ. ಜೊತೆಗೆ ಡಿಎಂಕೆ, ಕಾಂಗ್ರೆಸ್, ಎಡಪಕ್ಷಗಳ ಮೈತ್ರಿಕೂಟಕ್ಕೆ ವಿಜಯ್‌ಕಾಂತರವರ ಎಂಡಿಎಂಕೆ ಪಕ್ಷವೂ ಸೇರಲಿಚ್ಛಿಸಿರುವುದು ಜಯಲಲಿತಾರ ಕಷ್ಟವನ್ನು ಹೆಚ್ಚು ಮಾಡಲಿದೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪ್ರಪ್ರಥಮವಾಗಿ ತನ್ನ ಖಾತೆಯನ್ನು ಆರಂಭಿಸಿದ ಭಾಜಪ ಸಹ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಲು ನಿರ್ಧರಿಸಿದೆ. ಜಯಲಲಿತಾರವರ ಜೊತೆ ಮೈತ್ರಿ ಮಾಡಿಕೊಂಡು ತಮಿಳು ನೆಲದಲ್ಲಿ ತನ್ನನ್ನು ಸ್ಥಾಪಿಸಿಕೊಳ್ಳುವ ರಹಸ್ಯಕಾರ್ಯಸೂಚಿಯನ್ನು ಹೊಂದಿರುವ ಭಾಜಪ ಆ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿದೆ. ಹೀಗಾಗಿಯೇ ರಾಜ್ಯದಲ್ಲಾದ ಮಳೆಹಾನಿಗೆ ಪರಿಹಾರ ಕೇಳುವ ಮುಂಚೆಯ 1,940 ಸಾವಿರ ಕೋಟಿ ರೂಪಾಯಿಗಳನ್ನು ತುರ್ತಾಗಿ ಬಿಡುಗಡೆ ಮಾಡಿ ಜಯಲಲಿತಾರ ಒಲವು ಗಳಿಸಲು ಕೇಂದ್ರ ಸರಕಾರ ಪ್ರಯತ್ನ ನಡೆಸಿದ್ದು. ಅಕಸ್ಮಾತ್ ತನಗೇನಾದರು ಎದುರಾಗಬಲ್ಲ ಆಡಳಿತ ವಿರೋಧಿ ಅಲೆಯಿಂದ ವಿಚಲಿತರಾಗಿ ಭಾಜಪದೊಂದಿಗೆ ಜಯಲಲಿತಾ ಮೈತ್ರಿಗೆ ಮುಂದಾದರೆ ತಮ್ಮ ಪಕ್ಷದ ಗೋರಿಯನ್ನು ತಾವೇ ತೋಡಿಕೊಂಡಂತಾಗುತ್ತದೆ. ಯಾಕೆಂದರೆ ಕಾಲೂರಲು ಅವಕಾಶ ಸಿಕ್ಕರೆ ಆಶ್ರಯ ಕೊಟ್ಟ ಪಕ್ಷವನ್ನೇ ಅದು ಮುಗಿಸುವುದು ಖಚಿತ. ಇದಕ್ಕೆ ಸ್ಪಷ್ಟ ಉದಾಹರಣೆ ಮಹಾರಾಷ್ಟ್ರದಲ್ಲಿನ ಶಿವಸೇನೆ!. ಭಾಜಪದೊಂದಿಗಿನ ಜಯಲಲಿತಾರ ಮೈತ್ರಿ ಮುಂದೊಂದು ದಿನ ಇಡೀ ದಕ್ಷಿಣ ಭಾರತವನ್ನು ಕೇಸರಿಮಯಗೊಳಿಸುವ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿಬಿಡುತ್ತದೆ. ಕರ್ನಾಟಕದಲ್ಲಿ ಜನತಾದಳದ ಕುಮಾರಸ್ವಾಮಿಯವರು ಮಾಡಿದ ತಪ್ಪನ್ನೇ ಜಯಲಲಿತಾರವರೂ ಮಾಡಿದಂತಾಗುವುದು ಸತ್ಯ. ಪ್ರಾದೇಶಿಕ ಪಕ್ಷಗಳನ್ನು ಬಳಸಿಕೊಂಡು ಬೇರು ಬಿಡುವ ಭಾಜಪ ತದನಂತರ ಅವುಗಳನ್ನೇ ದುರ್ಬಲಗೊಳಿಸುವ ತಂತ್ರಗಾರಿಕೆಯನ್ನು ಜಯಲಲಿತಾ ಅರಿತು ನಡೆದರೆ ಅದಕ್ಕೆ ಡಿಎಂಕೆ ಮಾತ್ರ ಎದುರಾಳಿಯಾಗಿರುತ್ತದೆ. ಇಲ್ಲವೆಂದಲ್ಲಿ ಅದರ ವಿರೋಧಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ತಮ್ಮನ್ನು ಜೈಲಿಗೆ ಕಳಿಸಿದ ಸುಬ್ರಮಣ್ಯಸ್ವಾಮಿಯವರು ಭಾಜಪದಲ್ಲಿರುವುದು ಜಯಲಲಿತಾರ ಅಸಮಾಧಾನಕ್ಕೆ ಕಾರಣವಾದರೂ ಚುನಾವಣೆಯ ಸಂದರ್ಭದಲ್ಲಿ ಅವರಿಗಾಗಿ ಸುಬ್ರಮಣ್ಯಸ್ವಾಮಿಯವರನ್ನು ಭಾಜಪ ಪಕ್ಕಕ್ಕೆ ತಳ್ಳುವುದು ನಿಶ್ಚಿತ. ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯುವ ತಮ್ಮ ಹಟಕ್ಕಾಗಿ ಯಾರ ಜೊತೆ ಬೇಕಾದರು ಸಖ್ಯ ಸಾಧಿಸಬಲ್ಲ ಮತ್ತು ಅದನ್ನು ನಿಭಾಯಿಸಬಲ್ಲ ಹೆಣ್ಣು ಮಗಳಾದ ಜಯಲಲಿತಾರವರ ಮೇಲೆ ದಕ್ಷಿಣ ಭಾರತದ ಮುಂದಿನ ರಾಜಕೀಯ ಬಣ್ಣ , ಅದು ಕೇಸರಿಯೊ-ಬೇರೆಯೊ, ಎಂಬುದು ನಿರ್ಧಾರವಾಗಲಿದೆ.

ಕುಮಾರಿ ಮಮತಾ ಬ್ಯಾನರ್ಜಿ
(ಪಶ್ಚಿಮ ಬಂಗಾಳ-ತೃಣಮೂಲ ಕಾಂಗ್ರೆಸ್) 
     

ಇನ್ನು ಪಶ್ಚಿಮ ಬಂಗಾಳಕ್ಕೂ ಈ ವರ್ಷದ ಮಧ್ಯ ಭಾಗದಲ್ಲಿ ಚುನಾವಣೆ ನಡೆಯಲಿದ್ದು ಅಲ್ಲಿಯ ಮುಖ್ಯಮಂತ್ರಿಯಾದ ಕುಮಾರಿ ಮಮತಾ ಬ್ಯಾನರ್ಜಿಯವರ ಮೇಲೆ ಎಲ್ಲರ ಕಣ್ಣೂ ನೆಟ್ಟಿದೆ. ಸತತವಾಗಿ ಮೂರು ದಶಕಗಳಿಗೂ ಹೆಚ್ಚುಕಾಲ ಪಶ್ಚಿಮಬಂಗಾಳವನ್ನು ಆಳಿದ ಎಡಪಕ್ಷಗಳನ್ನು ಕಳೆದ ಬಾರಿ ಸೋಲಿಸಿ ಅಧಿಕಾರಕ್ಕೇರಿದ ಮಮತಾ ಬ್ಯಾನರ್ಜಿಯವರು ಅಂದು ಏಕಾಂಗಿಯೇನಾಗಿರಲಿಲ್ಲ. ಕಾಂಗ್ರೆಸ್ ಮತ್ತು ಎನ್‌ಸಿಪಿಗಳನ್ನೊಳಗೊಂಡ ಮೈತ್ರಿಕೂಟದ ಆಸರೆಯಿತ್ತು. ಆ ಚುನಾವಣೆಯಲ್ಲಿ ಒಟ್ಟು 294 ಸ್ಥಾನಗಳ ಪೈಕಿ ತೃಣಮೂಲ ಕಾಂಗ್ರೆಸ್ ಒಂದೇ 184 ಸ್ಥಾನ ಪಡೆದು ಸ್ವಂತಬಲದಿಂದ ಅಧಿಕಾರವನ್ನು ಪಡೆದುಕೊಂಡಿತು. ಎಡರಂಗ ಕೇವಲ 62 ಸ್ಥಾನಗಳಿಗೆ ತೃಪ್ತಿ ಪಡಬೇಕಾಯಿತು. ಕಾಂಗ್ರೆಸ್ಸನ್ನು ಹೊರತು ಪಡಿಸಿಯೂ ಅಧಿಕಾರ ಪಡೆದ ತೃಣಮೂಲ ಕಾಂಗ್ರೆಸ್‌ನ ನಾಯಕಿ ಮಮತಾ ಬ್ಯಾನರ್ಜಿಯ ತದನಂತರದ ರಾಜಕೀಯ ನಡೆಗಳು ದ್ವಂದ್ವಗಳಿಂದ ಕೂಡಿದ್ದವು. ಪ್ರಾರಂಭದಲ್ಲಿ ತಾನು ಕೋಮುವಾದಿ ಶಕ್ತಿಗಳ ವಿರುದ್ಧವೆಂದು ಘೋಷಿಸಿಕೊಂಡ ಅವರು ತದನಂತರದಲ್ಲಿ ಅಂದರೆ ಶಾರದಾ ಚಿಟ್‌ಫಂಡ್ ಹಗರಣ ಬಹಿರಂಗಗೊಂಡ ನಂತರ ಭಾಜಪದ ಕೇಂದ್ರ ಸರಕಾರದತ್ತ ಮೃಧು ಧೋರಣೆ ತಳೆಯುತ್ತಾ ಬಂದರು. ತಾನು ವಿಷಯಾಧಾರಿತವಾಗಿ ಹೋರಾಟ ಮಾಡುವುದಾಗಿ ಹೇಳಿಕೊಂಡು ಬಂದ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಮತ್ತು ಭಾಜಪ ಎರಡರ ನಡುವೆ ಕಣ್ಣಾ ಮುಚ್ಚಾಲೆಯಾಟ ಆಡುತ್ತಾ ಬರುತ್ತಿದ್ದಾರೆ. ಹೀಗಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪ್ರತ್ಯೇಕವಾಗಿ ಚುನಾವಣೆ ಎದುರಿಸಬೇಕಾಯಿತು. ಇಂತಹ ಸಂದರ್ಭವನ್ನು ಬಳಸಿಕೊಂಡ ಭಾಜಪ ಎರಡು ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ತಾನು ಕಮ್ಯುನಿಸ್ಟರ ನಾಡಿನಲ್ಲೂ ಬೆಳೆಯುವ ಮುನ್ಸೂಚನೆ ನೀಡಿತು. ಅದರ ನಂತರದ ಸ್ಥಳೀಯ ಚುನಾವಣೆಗಳಲ್ಲಿಯೂ ಭಾಜಪದ ಮತಗಳಿಕೆಯ ಪ್ರಮಾಣ ಹೆಚ್ಚುತ್ತಾ ಹೋಯಿತು. ಇವೆಲ್ಲದರ ಹಿನ್ನೆಲೆಯಲ್ಲಿ ನೋಡುವುದಾದರೆ ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ರಚನೆಯಾಗಬಹುದಾದ ಮೈತ್ರಿಕೂಟಗಳ ಬಗ್ಗೆ ಒಂದು ಕುತೂಹಲ ಮೂಡಿದೆ. ಈಗಾಗಲೇ ಕೋಮುವಾದಿ ಭಾಜಪವನ್ನು ದೂರವಿಡಲು, ಸರ್ವಾಧಿಕಾರಿ ಮಮತಾ ಬ್ಯಾನರ್ಜಿಯವರನ್ನು ಸೋಲಿಸಲು ಎಡಪಕ್ಷಗಳು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾತನಾಡುತ್ತಿವೆ. ಇದು ಸಾಧ್ಯವಾಗಿ ತ್ರಿಕೋನ ಸ್ಪರ್ಧೆೆ ಉಂಟಾದರೆ ತೃಣಮೂಲ ಕಾಂಗ್ರೆಸ್‌ಗೆ ಹೊಡೆತ ಬೀಳುವುದು ನಿಶ್ಚಿತ. ಇಂತಹ ಸನ್ನಿವೇಶವನ್ನು ಎದುರಿಸಲು ಮಮತಾ ಏನು ಮಾಡುತ್ತಾರೆಂಬುದೆ ಆಸಕ್ತಿಯ ವಿಷಯವಾಗಿದೆ. ಇಂತಹ ಸಂದರ್ಭದಲ್ಲಿ ಭಾಜಪಕ್ಕೆ ತೃಣಮೂಲ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಲಾಭದಾಯಕವೆಂಬ ಅರಿವಿದೆ. ಹಾಗಾಗಿಯೇ ಪಶ್ಚಿಮ ಬಂಗಾಳದ ಮಟ್ಟ್ಟಿಗದು ಎಡರಂಗವನ್ನು ಗುರಿಯಾಗಿರಿಸಿಕೊಂಡೇ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿಯನ್ನು ಎದುರಿಸಲು ಮಮತಾ ಬ್ಯಾನರ್ಜಿಯವರೇನಾದರೂ ಭಾಜಪದೊಂದಿಗೆ ಕೈಜೋಡಿಸಿದರೆ ಯಥಾಪ್ರಕಾರ ಅದು ಭಾಜಪಕ್ಕೆ ಲಾಭವಾಗುತ್ತದೆಯೇ ಹೊರತು ತೃಣಮೂಲ ಕಾಂಗ್ರೆಸ್‌ಗಲ್ಲ. ಇದನ್ನು ಮಮತಾರವರು ಅರಿತರೆ ತೃಣಮೂಲ ಕಾಂಗ್ರೆಸ್‌ಗೆ ಭವಿಷ್ಯವಿದೆ. ಇಲ್ಲದಿದ್ದಲ್ಲಿ ಕೆಂಪು ಕೇಸರಿಯ ನಡುವೆ ಕಳೆದುಹೋಗುವ ಸಾದ್ಯತೆಯಿದೆ. ಕಾಂಗ್ರೆಸ್‌ನ ಹೈಕಮಾಂಡಿಗೆ ಇವತ್ತಿಗೂ ಮಮತಾರ ಜೊತೆ ಹೋಗುವ ಒಲವಿದೆ. ಆದರೆ ಸ್ಥಳೀಯ ನಾಯಕರಿಗೆ ಮಮತಾರ ಕ್ಷಣಕ್ಕೊಮ್ಮೆ ಬದಲಾಗುವ ನಡವಳಿಕೆಯ ಬಗ್ಗೆ ನಂಬಿಕೆಯಿಲ್ಲದಿರುವುದರಿಂದ ಅವರ ಜೊತೆ ಮೈತ್ರಿಗೆ ಒಪ್ಪಿಗೆ ನೀಡುವುದು ಕಷ್ಟಸಾಧ್ಯದ ಕಾರ್ಯ. ಹೀಗಾಗಿ ಮಮತಾ ಬ್ಯಾನರ್ಜಿಯವರ ಮುಂದಿನ ರಾಜಕೀಯ ನಡೆಯ ಬಗ್ಗೆ ಸ್ವತಃ ಆಕೆಯ ಪಕ್ಷದವರಿಗೂ ಕುತೂಹಲವಿದೆ. ಕುಮಾರಿ ಮಾಯಾವತಿ (ಉತ್ತರಪ್ರದೇಶ-ಬಹುಜನ ಸಮಾಜ ಪಕ್ಷ)
 ಇನ್ನು ಮುಂದಿನ ವರ್ಷದ ಮೇ-ಜೂನ್ ತಿಂಗಳ ಹೊತ್ತಿಗೆ ನಡೆಯಲಿರುವ ಉತ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಹುಜನಪಕ್ಷದ ಕುಮಾರಿ ಮಾಯಾವತಿಯವರು ತೆಗೆದುಕೊಳ್ಳಬಹುದಾದ ನಿಲುವು 2019ರ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿರುವುದರಿಂದ ಉಳಿದೆಲ್ಲ ಪಕ್ಷಗಳು ಅವರತ್ತ ಬಿಟ್ಟಗಣ್ಣಿನಿಂದ ನೋಡುತ್ತಿವೆ. ಕಳೆದ ವಿಧಾನಸಭೆಯಲ್ಲಿ ಒಟ್ಟು 403 ಸ್ಥಾನಗಳಪೈಕಿ 80 ಸ್ಥಾನಗಳನ್ನು ಗಳಿಸಿದ ಬಹುಜನಪಕ್ಷ ಎರಡನೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದ ಸಮಾಜವಾದಿ ಪಕ್ಷ ಮುಲಾಯಂ ಸಿಂಗ್ ಯಾದವ್ ಬದಲಿಗೆ ಅವರ ಮಗ ಅಖಿಲೇಶ್ ಯಾದವರನ್ನು ಮುಖ್ಯಮಂತ್ರಿಯನ್ನಾಗಿಸಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಗೆ ಕೊಚ್ಚಿಹೋದ ಇತರೇ ಪಕ್ಷಗಳ ಸಾಲಿಗೆ ಬಹುಜನಪಕ್ಷವೂ ಸೇರಿ, ಒಂದು ಸ್ಥಾನವನ್ನೂ ಅದು ಗೆಲ್ಲಲಾಗಲಿಲ್ಲ. ಅದುವರೆಗೂ ಮೈತ್ರಿಯ ವಿಷಯಗಳಲ್ಲಿ ಸ್ವಲ್ಪಹೆಚ್ಚೇ ಎನ್ನಬಹುದಾದ ಜಿಗುಟು ನಿಲುವು ತಳೆದಿದ್ದ ಮಾಯಾವತಿಯವರೀಗ ಬದಲಾದಂತೆ ಕಂಡು ಬರುತ್ತಿದ್ದಾರೆ. ಕೋಮುವಾದಿ ಶಕ್ತಿಗಳನ್ನು ಬಗ್ಗು ಬಡಿಯಲು ತಾವು ಯಾವ ತ್ಯಾಗಕ್ಕೂ ಸಿದ್ಧವೆನ್ನುವ ಮಾತನ್ನಾಡಿರುವ ಅವರ ಜೊತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ನ ಹಿರಿಯರು ಒಲವು ತೋರಿಸುತ್ತಿದ್ದಾರೆ. ಹಾಗೇನಾದರೂ ಇದಕ್ಕೆ ಮಾಯಾವತಿಯವರು ಹಸಿರು ನಿಶಾನೆ ತೋರಿಸಿದರೆ ಉತ್ತರಪ್ರದೇಶದಲ್ಲಿಯೂ ಒಂದು ಮಹಾಮೈತ್ರಿಕೂಟ ರಚನೆಯಾಗುವ ಸಾಧ್ಯತೆಯಿದೆ. ಆದರಿಂತಹ ಮಹಾಮೈತ್ರಿಗೆ ತೊಡಕಾಗಿರುವುದು ಸಮಾಜವಾದಿ ಪಕ್ಷದ ಮುಲಾಯಂಸಿಂಗ್ ಯಾದವರ ಅಹಮ್ಮು. ಕೋಮುವಾದದ ವಿರುದ್ಧ ಎನ್ನುತ್ತಲೇ ಸ್ಥಾನ ಹೊಂದಾಣಿಕೆಯ ನೆಪ ಹೇಳಿ ಬಿಹಾರದ ಮೈತ್ರಿಕೂಟದಿಂದ ಹೊರಬಂದ ಅವರನ್ನು ನಂಬಲು ಕಾಂಗ್ರೆಸ್ ತಯಾರಾಗಿಲ್ಲ. ಹಾಗಾಗಿ ಮುಂದಿನ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್, ಬಹುಜನಪಕ್ಷ ಮತ್ತಿತರ ಸಣ್ಣಪಕ್ಷಗಳ ಒಂದು ಮೈತ್ರಿಕೂಟ ರಚನೆಯಾಗುವುದು ಖಚಿತ. ಕೋಮುವಾದದ ವಿರುದ್ಧ ಎಂತಹ ತ್ಯಾಗಕ್ಕೂ ಸಿದ್ಧವೆಂದಿರುವ ಮಾಯಾವತಿ ಮುಂದಿನ ಚುನಾವಣೆಯ ಹೊತ್ತಿಗೆ ಈ ಮಾತಿಗೆ ಬದ್ಧರಾಗಿದ್ದರೆ ಮಾತ್ರ ಅವರ ಪಕ್ಷಕ್ಕೆ ಲಾಭವಾಗಲಿದೆ. ರಾಮಮಂದಿರ ನಿರ್ಮಾಣ ವಿವಾದದ ಬಗ್ಗೆ ಮಾಯಾವತಿಯವರು ತೆಗೆದುಕೊಳ್ಳಬಹುದಾದ ನಿಲುವು ಮತ್ತು ನಡೆಸಬಹುದಾದ ಹೋರಾಟ ಖಂಡಿತಾ ಮುಂದಿನ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಭಾಜಪದ ಕೋಮುವಾದದ ವಿರುದ್ಧ ಸಶಕ್ತ ಜನಾಭಿಪ್ರಾಯವನ್ನು ರೂಪಿಸುವ ಶಕ್ತಿ ಹೊಂದಿರುವ ಮಾಯಾವತಿಯವರು ಈಗ ತೆಗೆದುಕೊಳ್ಳುವ ಪ್ರತಿ ನಿರ್ಣಯವೂ ಮುಂದಿನ ವಿಧಾನಸಭೆ ಮಾತ್ರವಲ್ಲ 2019ರ ಲೋಸಭಾ ಚುನಾವಣೆಯ ಮೇಲೂ ತನ್ನ ಪ್ರಭಾವ ಬೀರಲಿದೆ. ಯಾಕೆಂದರೆ ಲೋಕಸಭೆಗೆ ಅತಿ ಹೆಚ್ಚು ಸದಸ್ಯರನ್ನು ಕಳಿಸುವ ರಾಜ್ಯ ಉತ್ತರಪ್ರದೇಶವಾಗಿದೆ. ಆದ್ದರಿಂದಲೇ ಮಾಯಾವತಿಯವರು ಮೈತ್ರಿಯ ವಿಚಾರದಲ್ಲಿ ಮತ್ತು ಬಲಶಾಲಿಯಾದ ಭಾಜಪವನ್ನು ಎದುರಿಸಲು ತೆಗೆದುಕೊಳ್ಳಬಹುದಾದ ನಿಲುವುಗಳನ್ನು ಎಲ್ಲರೂ ಕಾದು ನೋಡುತ್ತಿದ್ದಾರೆ.
ಹೀಗೆ ಈ ಮೂವರು ಮಹಿಳೆಯರು, ಮುಂದಿನ ದಿನಗಳಲ್ಲಿ ತಮ್ಮ ರಾಜ್ಯಗಳಲ್ಲಿ ನಡೆಯಲಿರುವ ವಿದಾನಸಭಾ ಚುನಾವಣೆಗಳನ್ನು ಎದುರಿಸಲು ತೆಗೆದುಕೊಳ್ಳಬಹುದಾದ ರಾಜಕೀಯ ನಿರ್ಧಾರಗಳು, ಇಡಬಹುದಾದ ನಡೆಗಳು, ಮಾಡಿಕೊಳ್ಳಬಹುದಾದ ಮೈತ್ರಿಗಳು ಅವರ ರಾಜ್ಯಗಳ ದೃಷ್ಟಿಯಿಂದ ಮಾತ್ರವಲ್ಲದೆ ಇಡೀ ರಾಷ್ಟ್ರದ ರಾಜಕೀಯ ಚಿತ್ರಣದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಹೀಗಾಗಿಯೇ ಇವತ್ತು ಈ ಮೂರು ಮಹಿಳೆಯರ ಮುಂದಿನ ರಾಜಕೀಯ ಹೆಜ್ಜೆಗಳ ಬಗ್ಗೆ ಜನಸಾಮಾನ್ಯರಿಗೂ ಕುತೂಹಲ ಹುಟ್ಟಿದ್ದರೆ ಅಚ್ಚರಿಯೇನಲ್ಲ!

Writer - ಕು.ಸ.ಮಧುಸೂದನ, ರಂಗೇನಹಳ್ಳಿ

contributor

Editor - ಕು.ಸ.ಮಧುಸೂದನ, ರಂಗೇನಹಳ್ಳಿ

contributor

Similar News