ಪಟ್ಟಭದ್ರರ ಅಟ್ಟಹಾಸಕ್ಕೆ ಛಿದ್ರವಾಯಿತು ಯುವಚೇತನ

Update: 2016-01-18 18:42 GMT

ನಕ್ಷತ್ರಲೋಕಕ್ಕೆ ಲಗ್ಗೆ ಇಡಬೇಕಿದ್ದ ಯುವಕ ಅಡ್ಡಿ ನಿವಾರಿಸುವಲ್ಲೇ ಕಾಲವಾದ
ವಿಧಿವಿಧಾನಗಳನ್ನು ಬರೆದುಕೊಳ್ಳುವುದನ್ನು ಮರೆತೆ. ನನ್ನನ್ನು ನಾನೇ ಕೊಂದುಕೊಳ್ಳುವ ಈ ಕೃತ್ಯಕ್ಕೆ ಯಾರೂ ಕಾರಣರಲ್ಲ. ಯಾರೂ ತಮ್ಮ ಕಾರ್ಯಗಳ ಮೂಲಕವಾಗಲಿ, ಮಾತಿನ ಮೂಲಕವಾಗಲಿ ನನಗೆ ಪ್ರಚೋದನೆ ನೀಡಿಲ್ಲ. ಇದು ನನ್ನ ನಿರ್ಧಾರ ಹಾಗೂ ಇದಕ್ಕೆ ನಾನು ಮಾತ್ರ ಜವಾಬ್ದಾರ. ನನ್ನ ಈ ಕೃತ್ಯದ ಬಳಿಕ ಸ್ನೇಹಿತರಿಗಾಗಲೀ ಅಥವಾ ಶತ್ರುಗಳಿಗಾಗಲಿ ತೊಂದರೆ ಕೊಡಬೇಡಿ.
ರವಿವಾರ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ರೋಹಿತ್ ವೇಮುಲಾ ಬರೆದ ಪತ್ರದಲ್ಲಿ ವ್ಯಕ್ತವಾದ ಸ್ಪಷ್ಟ ನಿರ್ಧಾರ ಇದು. ಈ ಪ್ರಕರಣವನ್ನು ಯಾರಾದರೂ ಹಿಂದಿನಿಂದಲೂ ಗಮನಿಸಿಕೊಂಡು ಬಂದಿದ್ದರೆ, ವೇಮುಲಾ, ಹೈದ್ರಾಬಾದ್ ವಿಶ್ವವಿದ್ಯಾನಿಲಯದಿಂದ ಕಳೆದ ಆಗಸ್ಟ್‌ನಲ್ಲಿ ಅಮಾನತುಗೊಂಡಿದ್ದ ಐವರು ದಲಿತ ವಿದ್ಯಾರ್ಥಿಗಳಲ್ಲಿ ಒಬ್ಬ ಎನ್ನುವುದು ಖಚಿತವಾಗಿ ತಿಳಿದಿರುತ್ತದೆ. ಬಿಜೆಪಿಯ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸದಸ್ಯರ ಜೊತೆ ಜಗಳ ಮಾಡಿದ್ದಾರೆ ಎಂಬ ಕಾರಣಕ್ಕೆ ಇವರನ್ನು ಅಮಾನತು ಮಾಡಲಾಗಿತ್ತು. ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಬಂಡಾರು ದತ್ತಾತ್ರೇಯ ಅವರು ವಿಶ್ವವಿದ್ಯಾನಿಲಯ ಅಧಿಕಾರಿಗಳಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ, ಅವರು ಈ ಪ್ರಕರಣದಲ್ಲಿ ವೈಯಕ್ತಿಕ ಆಸಕ್ತಿ ವಹಿಸಿದ್ದು ಗಮನಕ್ಕೆ ಬಂದಿತ್ತು. ಇದರಿಂದ ವಿವಾದ ಉಲ್ಬಣಿಸಿತ್ತು.
ವಕೀಲರ ಕೈ ಸೇರಿರುವ ವೇಮುಲಾ ಆತ್ಮಹತ್ಯೆ ಟಿಪ್ಪಣಿ, ಹೈದರಾಬಾದ್ ವಿಶ್ವವಿದ್ಯಾನಿಲಯದ ಅಧಿಕಾರಿಗಳನ್ನು, ಎಬಿವಿಪಿ ಪದಾಧಿಕಾರಿಗಳನ್ನು ಹಾಗೂ ಬಂಡಾರು ದತ್ತಾತ್ರೇಯ ಅವರನ್ನು ಕಾಪಾಡಲು ಸಾಕಾಗುತ್ತದೆ. ಈ ವಿದ್ಯಾರ್ಥಿಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಿಂದ ರಕ್ಷಣೆ ಪಡೆಯಲು ಇಷ್ಟು ಸಾಕು. ಇದನ್ನು ಭಾರತದ ರಾಷ್ಟ್ರೀಯವಾದಿ ಮುಖಂಡರು ಭಾರತೀಯ ದಲಿತರ ಸಹಿಷ್ಣುತೆಯನ್ನು ಬಿಂಬಿಸಲು ಸಾಕ್ಷ್ಯವಾಗಿ ಬಳಸಿಕೊಳ್ಳಬಹುದು. ಅವರು ತಮ್ಮ ಸಾವನ್ನು ತಾವೇ ತಂದುಕೊಂಡರೂ, ಅವರ ಸಂಕಷ್ಟ ಅಥವಾ ನರಳಿಕೆಗೆ ಬೇರೆಯವರ ಮೇಲೆ ಗೂಬೆ ಕೂರಿಸುವ ಕಾರ್ಯ ಮಾಡುವುದಿಲ್ಲ ಎಂದು ವಿವರಿಸಬಹುದು.
ಆದರೆ ಸಾವಿನ ಅಂಚಿನಲ್ಲಿದ್ದ ಆ ಯುವ ಹೃದಯದ ಉದಾತ್ತತೆ, ನಮ್ಮಿಂದ ಒಂದು ಕಹಿ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ; ರೋಹಿತ್ ವೇಮುಲಾ ಸತ್ತಿರುವುದು ನಮ್ಮ ಹೇಡಿತನದಿಂದ. ನಮ್ಮ ಸಹ ಶಿಕ್ಷಣತಜ್ಞರ ಹೇಡಿತನದಿಂದ; ಅಧಿಕಾರಸ್ಥರ ಒತ್ತಡಕ್ಕೆ ಮಣಿದು ಅವರ ಆದೇಶದ ಅನುಸಾರ, ವೇಮುಲಾ ಹಾಗೂ ಅವರ ಸಹಪಾಠಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕಿ, ಗ್ರಂಥಾಲಯ ಹಾಗೂ ಕ್ಯಾಂಪಸ್‌ನ ಸಾಮಾನ್ಯ ಪ್ರದೇಶ ಪ್ರವೇಶಿಸುವುದಕ್ಕೆ ತಡೆ ಒಡ್ಡಿದ ವಿಶ್ವವಿದ್ಯಾನಿಲಯದ ಆಡಳಿತದಿಂದ. ವೇಮುಲಾ ಹಾಗೂ ಆತನ ಸಹಚರರು ಎಬಿವಿಪಿ ಸದಸ್ಯರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದಾರೆ ಎಂಬ ಆರೋಪಕ್ಕೆ ಯಾವ ಪುರಾವೆಯೂ ಇಲ್ಲ ಎಂದು ವಿಶ್ವವಿದ್ಯಾನಿಲಯ ನೇಮಿಸಿದ ಸಮಿತಿ ಖಚಿತಪಡಿಸಿದ್ದರೂ, ಈ ಸಮಿತಿಯ ವರದಿಯನ್ನು ಕಡೆಗಣಿಸಿ, ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್‌ನ ಐವರು ವಿದ್ಯಾರ್ಥಿಗಳನ್ನು ಉಚ್ಚಾಟಿಸಲಾಯಿತು.
ಆತ ಹೇಳದೇ ಇದ್ದುದೇನು?
ಈ ಆತ್ಮಹತ್ಯೆ ಟಿಪ್ಪಣಿಯಲ್ಲಿ ವೇಮುಲಾ ತನ್ನ ಸಾವಿಗೆ ಕಾರಣವಾದ ಘಟನಾವಳಿಗಳನ್ನು ಪಟ್ಟಿ ಮಾಡದಿರಲು ನಿರ್ಧರಿಸಿದ್ದ. ‘ಮುಝಫ್ಫನಗರ ಬಾಕಿ ಹೇ’ ಎಂಬ ಕೋಮುಹಿಂಸೆ ಸಾಕ್ಷ್ಯ ಚಿತ್ರ ಪ್ರದರ್ಶನವನ್ನು ಆಯೋಜಿಸಿದ್ದನ್ನು ಹೇಳಿಕೊಳ್ಳಲಾರ. ಈ ಘಟನೆಗಳು ಎಬಿವಿಪಿಯ ಆಕ್ರೋಶಕ್ಕೆ ಕಾರಣವಾಗಿದ್ದವು ಎನ್ನುವುದನ್ನು ಅಥವಾ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಅವರು, ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮತಿ ಇರಾನಿಗೆ ಪತ್ರ ಬರೆದು, ದೇಶದ್ರೋಹಿ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲು ಇದು ಕಾರಣವಾಯಿತು ಎನ್ನುವುದನ್ನು ಉಲ್ಲೇಖಿಸಿಲ್ಲ. ಅಂತೆಯೇ ಕಳೆದ ಎರಡು ವಾರಗಳಿಂದ ಬಯಲಲ್ಲೇ ನಿದ್ರಿಸುತ್ತಿದ್ದೆ ಎನ್ನುವುದನ್ನೂ ಹೇಳಲಾರ.
ಇವೆಲ್ಲದರ ಬದಲಾಗಿ, ಈ ಕ್ಷಣದಲ್ಲಿ ನನಗೆ ಯಾವುದೇ ನೋವಾಗಿಲ್ಲ. ನನಗೆ ಬೇಸರವೂ ಆಗಿಲ್ಲ. ನಾನು ಖಾಲಿ ಮನಸ್ಸಿನವನಾಗಿದ್ದೇನೆ. ನನ್ನ ಬಗ್ಗೆಯೇ ನನಗೆ ಚಿಂತೆ ಇಲ್ಲ. ಇದು ನಿಜಕ್ಕೂ ಶೋಚನೀಯ. ಈ ಕಾರಣದಿಂದ ನಾನು ಈ ಕೃತ್ಯಕ್ಕೆ ಮುಂದಾಗಿದ್ದೇನೆ ಎಂದು ಹೇಳಿದ್ದಾನೆ.
ತಾನು ಅರ್ಥ ಮಾಡಿಕೊಳ್ಳಲು ಬಯಸಿದ ವಿಶ್ವ ತನಗೆ ಶೋಚನೀಯ ಎನಿಸಿದೆ. ಇದರ ಬದಲಾಗಿ ಪ್ರೀತಿ, ನೋವು, ಜೀವನ ಹಾಗೂ ಸಾವಿನ ಬಗ್ಗೆ ಹತಾಶವಾಗುವ ತುರ್ತನ್ನು ಕಂಡಿದ್ದಾನೆ ಎಂಬ ಅಂಶವನ್ನು ಉಲ್ಲೇಖಿಸಲು ಸಾಧ್ಯವಾಗಿಲ್ಲ. ಮನುಷ್ಯನೊಬ್ಬನ ವೌಲ್ಯ ಆತನ ತಕ್ಷಣದ ಗುರುತಿಸುವಿಕೆಗೆ ಸೀಮಿತವಾಗಿದೆ ಹಾಗೂ ತೀರಾ ಸನಿಹದ ಸಾಧ್ಯತೆಗಳಿಗಷ್ಟೇ ಸೀಮಿತವಾಗಿದೆ. ಮತಕ್ಕಾಗಿ; ಸಂಖ್ಯೆಗಾಗಿ. ಒಂದು ಅಂಶಕ್ಕಾಗಿ. ಒಂದು ಮನಸ್ಸಾಗಿ ಮನುಷ್ಯನನ್ನು ಪರಿಗಣಿಸುತ್ತಿಲ್ಲ ಎನ್ನುವಲ್ಲಿ ಆತನ ಹತಾಶೆ ಸ್ಪಷ್ಟವಾಗಿ ಬಿಂಬಿತವಾಗಿದೆ.
ಅಧ್ಯಯನ, ಬೀದಿ, ಜೀವನ ಹಾಗೂ ಸಾವು ಎಲ್ಲದರಲ್ಲೂ ಮನುಷ್ಯರ ಮನಸ್ಸನ್ನು ತೇಜಃಪುಂಜವಾಗಿ ಪರಿಗಣಿಸಬೇಕು ಎಂದು ವೇಮುಲಾ ಬಯಸಿದ್ದ.
ಹೊಸ ಸಖ್ಯ
ವೇಮುಲಾ ವಿಜ್ಞಾನ ಲೇಖಕನಾಗುವ ಆಕಾಂಕ್ಷೆ ಹೊಂದಿದ್ದ. ಇಡೀ ಜಗತ್ತಿನ ಶಬ್ದಗಳ ವ್ಯಕ್ತಿಯಾಗುವ ಕನಸು ಕಾಣುತ್ತಿದ್ದ. ಆತ ಈ ಕ್ಷಣದ ಗುರುತಿಸುವಿಕೆಗೆ ಅದನ್ನು ಸೀಮಿತಗೊಳಿಸಿಕೊಳ್ಳಲು ನಿರಾಕರಿಸಿದ್ದ. ಆತ ದಲಿತನಾಗಿ ಸಾಯಲು ಬಯಸಲಿಲ್ಲ. ಅದನ್ನು ಕಳಚಿಕೊಳ್ಳಲು ಬಯಸಿದ್ದ. ಅದನ್ನು ಅನಂತಕ್ಕೆ ವಿಸ್ತರಿಸಿ, ನಕ್ಷತ್ರ ಪ್ರವಾಸದ ಕನಸು ಕಂಡಿದ್ದ. ಅದಾಗ್ಯೂ ಆ ಅಡೆತಡೆಗಳನ್ನು ಮುರಿದು ಮುನ್ನುಗ್ಗುವ ಭರದಲ್ಲಿ ಜೀವ ಕಳೆದುಕೊಂಡ. ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಸದಸ್ಯನಾಗಿ, ರಾಷ್ಟ್ರೀಯವಾದಿ ಒಮ್ಮತಕ್ಕೆ ಸವಾಲು ಹಾಕಿದ್ದ. ಭಾರತದ ದುರ್ಬಲ ಮುಸ್ಲಿಮರ ಪರ ನಿಂತಿದ್ದ. ಇದು ಆತನ ಅಲ್ಪಾವಧಿ ಜೀವನದ ಅಂತಿಮ ಕಾರ್ಯವೆಂದರೆ ಹೊಸ ಬಗೆಯ ಐಕ್ಯಮತ್ಯವನ್ನು ರೂಪಿಸಿದ್ದು. ಆದರೆ ವಿಶ್ವ ಆತನ ವೇಗಕ್ಕೆ ಒಗ್ಗಿಕೊಳ್ಳಲು ಸಾಧ್ಯವಾಗದೇ, ಅದಕ್ಕೆ ಆತ ತನ್ನ ಜೀವವನ್ನೇ ಬೆಲೆ ತೆರಬೇಕಾಗಿ ಬಂತು.
ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಕಳೆದ ಕೆಲ ವಾರಗಳಿಂದ ನಡೆದ ನಾಟಕ ಎಲ್ಲರಿಗೂ ಪರಿಚಿತ. ಇದರ ಮೂಲಭೂತ ಅಂಶಗಳು ದೇಶದ ಇತರ ಕ್ಯಾಂಪಸ್‌ಗಳಲ್ಲೂ ಪ್ರದರ್ಶನಗೊಳ್ಳುತ್ತಿವೆ. ಭಾರತದ ವಿಶ್ವವಿದ್ಯಾನಿಲಯಗಳು ವೇಮುಲಾನಂಥ ಯುವ ಕನಸುಗಾರರಿಗೆ ಗೂಡಾಗಿ ಉಳಿದಿಲ್ಲ. ವಾಸ್ತವವಾಗಿ ಸಮಾಜ ಅಪಾಯಕಾರಿ ಎಂದುಕೊಳ್ಳುವ ಎಲ್ಲ ಇತಿಮಿತಿಗಳನ್ನು ಮುರಿಯುವ, ಆ ನಿಟ್ಟಿನಲ್ಲಿ ದಿಟ್ಟವಾಗಿ ಕಾರ್ಯನಿರ್ವಹಿಸುವ ಧೈರ್ಯವನ್ನು ಯುವಜನತೆಯಲ್ಲಿ ತುಂಬಿ, ಅವರ ಬೆಂಬಲಕ್ಕೆ ನೀಡುವ ಕಾರ್ಯವನ್ನು ಮಾಡಬೇಕಾದ ಮಂದಿ ತಮ್ಮ ಕರ್ತವ್ಯವನ್ನು ಮರೆತು ಈಗ ಸ್ವಸಹಾಯದ, ತಮ್ಮ ಲಾಭವನ್ನಷ್ಟೇ ಶಾಶ್ವತಗೊಳಿಸುವ ನಿಟ್ಟಿನಲ್ಲಿ ಮಾತ್ರ ಯೋಚಿಸುತ್ತಿದ್ದಾರೆ.
ಇಂದಿನ ರಾಜಕೀಯದ ಬಗೆಗೆ ಅಸಹನೆ ಹೊಂದಿರುವ ಹೊಸ ಆಕಾಂಕ್ಷೆಯ ವರ್ಗದಿಂದ ದೊಡ್ಡ ಧ್ವನಿ ಇದೀಗ ಕೇಳಿಬರುತ್ತಿದೆ. ವೇಮುಲಾ ಅಂಥ ಮಹತ್ವಾಕಾಂಕ್ಷೆಯ ಯುವಮನಸ್ಸು ಅಲ್ಲವೇ? ಹಾಗಿದ್ದೂ, ಆತ ಒಬ್ಬಂಟಿ ಹಾಗೂ ಖಾಲಿ ಎಂಬ ಭಾವನೆ ಆತನಲ್ಲಿ ಏಕೆ ಬಂತು?
ಕೃಪೆ: ಸ್ಕ್ರಾಲ್ ಡಾಟ್. ಇನ್

ವಿಜ್ಞಾನ ಬರೆಯಬೇಕಾದವನು ಆತ್ಮಹತ್ಯಾ ಪತ್ರ ಬರೆಯಬೇಕಾಯಿತು... ಕ್ಷಮಿಸಿ

ರೋಹಿತ್‌ರ ಆತ್ಮಹತ್ಯಾ
ಪತ್ರ

ಮಸ್ಕಾರ,
ಈ ಪತ್ರವನ್ನು ನೀವು ಓದುವ ವೇಳೆ ನಾನಿಲ್ಲಿ ಇರಲಿಕ್ಕಿಲ್ಲ. ನನ್ನ ಮೇಲೆ ಸಿಟ್ಟಾಗದಿರಿ. ನಿಮ್ಮಲ್ಲಿ ಕೆಲವರು ನನ್ನ ಬಗ್ಗೆ ತುಂಬಾ ಕಾಳಜಿ ಹೊಂದಿದ್ದಿರಿ, ಪ್ರೀತಿಸುತ್ತಿದ್ದಿರಿ, ಹಾಗೂ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಿರೆಂಬುದು ನನಗೆ ತಿಳಿದಿದೆ. ಯಾರ ಮೇಲೂ ನನ್ನ ದೂರುಗಳಿಲ್ಲ. ನಾನು ಸದಾ ನನ್ನಲ್ಲೇ ಸಮಸ್ಯೆಯನ್ನು ಹೊಂದಿದ್ದೆ. ನನ್ನ ಆತ್ಮ ಮತ್ತು ಶರೀರಗಳ ನಡುವೆ ಅಂತರ ಬೆಳೆದಿದೆಯೆಂದು ನಾನು ಭಾವಿಸುತ್ತಿದ್ದೇನೆ ಹಾಗೂ ನಾನೊಬ್ಬ ರಾಕ್ಷಸನಾಗಿದ್ದೇನೆ. ನಾನೊಬ್ಬ ಬರಹಗಾರನಾಗಬೇಕೆಂದು ಸದಾ ಬಯಸಿದ್ದೆ. ಕಾಲ್ ಸಗನ್‌ನಂತೆ ವಿಜ್ಞಾನದ ಬರಹಗಾರನಾಗಬೇಕೆಂದಿದ್ದೆ. ಆದರೆ, ಕೊನೆಗೂ ನನಗೆ ಇದೊಂದೇ ಪತ್ರ ಬರೆಯಲು ಸಾಧ್ಯವಾಯಿತು.
ನಾನು ವಿಜ್ಞಾನ, ನಕ್ಷತ್ರಗಳು, ಪ್ರಕೃತಿಯನ್ನು ಪ್ರೀತಿಸಿದ್ದೆ. ಆದರೆ ಬಳಿಕ ಜನರು ಬಹಳ ಹಿಂದೆಯೇ ಪ್ರಕೃತಿಯಿಂದ ಸಂಬಂಧ ಕಡಿದುಕೊಂಡಿದ್ದಾರೆನ್ನುವುದನ್ನ್ನು ತಿಳಿಯದೆಯೇ ಜನರನ್ನೂ ಪ್ರೀತಿಸಿದೆ. ನಮ್ಮ ಅನುಭವಗಳು, ಭಾವನೆಗಳು ಕೃತಕವಾಗಿವೆೆ. ನಂಬಿಕೆಗಳು ಕೃತಕ ಬಣ್ಣಗಳನ್ನು ತುಂಬಿಕೊಂಡಿವೆೆ. ನಮ್ಮ ನೈಜತೆಯು ಕೃತಕ ಕಲೆಯ ಮೂಲಕ ವೌಲ್ಯ ಹೊಂದಿದುದಾಗಿದೆ. ನೋವನುಭವಿಸದೆ ಪ್ರೀತಿಸುವುದು, ಪ್ರೀತಿಯನ್ನು ಪಡೆಯುವುದು ನಿಜವಾಗಿಯೂ ಕಷ್ಟವಾಗಿದೆ.
ಮನುಷ್ಯನೊಬ್ಬನ ವೌಲ್ಯವು ಆತನ ತಕ್ಷಣದ ಗುರುತು ಹಾಗೂ ಆ ಕ್ಷಣದ ಅವಕಾಶಗಳಿಗಷ್ಟೇ ಸೀಮಿತವಾಗುಳಿದಿದೆ. ಈ ಜಗತ್ತಿನಲ್ಲಿ ಮನುಷ್ಯ ನೈಸರ್ಗಿಕವಾಗಿ ಪ್ರಜ್ಞೆಯುಳ್ಳ ಜೀವಿಯಾಗಿ ಗುರುತಿಸಲ್ಪಡದೆ ಮತವಾಗಿ, ಸಂಖ್ಯೆಯಾಗಿ, ವಸ್ತುವಾಗಿ ಪರಿಗಣಿಸಲ್ಪಡುತ್ತಿದ್ದಾನೆ. ಜಗತ್ತಿನ ನೈಜ ಸೌಂದರ್ಯವನ್ನು ಇಂದು ಧೂಳು ಆವರಿಸುತ್ತಿದೆ. ಇದು ಎಲ್ಲ ಕ್ಷೇತ್ರಗಳಿಗೂ ಅನ್ವಯವಾಗುತ್ತಿದೆ. ಯಾವುದೇ ಕ್ಷೇತ್ರದಲ್ಲಿ, ಅಧ್ಯಯನದಲ್ಲಿ, ಬೀದಿಗಳಲ್ಲಿ, ರಾಜಕೀಯದಲ್ಲಿ ಹಾಗೂ ಸಾವಿನಲ್ಲಿ ಮತ್ತು ಬದುಕಿನಲ್ಲಿ ಸಹ.
ನಾನು ಈ ರೀತಿಯ ಪತ್ರವನ್ನು ಮೊದಲ ಬಾರಿ ಬರೆಯುತ್ತಿದ್ದೇನೆ. ಇದು ನನ್ನ ಅಂತಿಮ ಪತ್ರವೂ ಆಗಿದೆ.. ಅರ್ಥ ಮಾಡಿಸಲು ವಿಫಲನಾಗಿದ್ದರೆ ನನ್ನನ್ನು ಕ್ಷಮಿಸಿ.
ನಾನು ಪ್ರಪಂಚವನ್ನು ಅರ್ಥಮಾಡಿಕೊಳ್ಳುವಲ್ಲಿ ತಪ್ಪಿರಬಹುದು. ಪ್ರೀತಿ, ನೋವು, ಜೀವನ, ಮರಣಗಳನ್ನು ಅರ್ಥಮಾಡಿಕೊಳ್ಳುವಲ್ಲೂ ತಪ್ಪಿರಬಹುದು. ಅದಕ್ಕೆ ಅವಸರವಿರಲಿಲ್ಲ. ಆದರೆ ನಾನು ಸದಾ ಓಡುತ್ತಿದ್ದೆ. ಜೀವನವೊಂದನ್ನು ಆರಂಭಿಸಲು ಹತಾಶನಾಗಿದ್ದೆ. ಕೆಲವರಿಗೆ ಸದಾ ಕಾಲ ಜೀವನವೆಂಬುದೇ ಶಾಪವಾಗಿರುತ್ತದೆ. ನನ್ನ ಹುಟ್ಟು ನನ್ನ ಅದೃಷ್ಟದ ಅಪಘಾತ. ನಾನು ನನ್ನ ಬಾಲ್ಯಕಾಲದ ಏಕಾಂಗಿತನದಿಂದ ಎಂದೂ ಮೇಲೇಳಲಾರೆ. ನನ್ನ ಭೂತಕಾಲದಿಂದಲೂ ಮೆಚ್ಚುಗೆ ದೊರೆಯದ ಮಗುವಾಗಿದ್ದೆ.
ಈ ಕ್ಷಣದಲ್ಲಿ ನಾನು ನೊಂದಿಲ್ಲ. ನನಗೆ ದುಃಖವಿಲ್ಲ. ನಾನು ಕೇವಲ ಖಾಲಿಯಾಗಿದ್ದೇನೆ. ನನ್ನ ಬಗ್ಗೆಯೇ ಕಾಳಜಿಯಿಲ್ಲದವನಾಗಿದ್ದೇನೆ. ಅದು ಕರುಣಾಜನಕವಾದುದು ಮತ್ತು ಅದರಿಂದಾಗಿ ನಾನಿದನ್ನು ಮಾಡುತ್ತಿದ್ದೇನೆ.
ಜನರು ನನ್ನನ್ನು ಹೇಡಿಯೆನ್ನಬಹುದು. ನಾನು ಹೋದ ಮೇಲೆ ಸ್ವಾರ್ಥಿ ಅಥವಾ ಮೂರ್ಖ ಎನ್ನಬಹುದು. ನನ್ನನ್ನು ಏನೆಂದು ಕರೆಯುತ್ತಾರೆಂಬ ಬಗ್ಗೆ ನಾನು ತಲೆಕೆಡಿಸಿ ಕೊಳ್ಳುವುದಿಲ್ಲ. ಸಾವಿನ ಬಳಿಕದ ಕತೆಗಳು, ದೆವ್ವಗಳು ಅಥವಾ ಪ್ರೇತಾತ್ಮಗಳ ಬಗ್ಗೆ ನನಗೆ ನಂಬಿಕೆಯಿಲ್ಲ. ನಾನು ನಂಬುವಂತಹದೇನಾದರೂ ಇದ್ದರೆ, ನಾನು ನಕ್ಷತ್ರ ಲೋಕಕ್ಕೆ ಪ್ರಯಾಣಿಸಬಲ್ಲೆನೆಂಬುದನ್ನು ನಂಬುತ್ತೇನೆ ಹಾಗೂ ಇತರ ವಿಶ್ವಗಳ ಬಗ್ಗೆ ತಿಳಿಯಬಲ್ಲೆನೆಂಬುದನ್ನು ನಂಬುತ್ತೇನೆ.
ನೀವು, ಈ ಪತ್ರವನ್ನು ಓದುತ್ತಿರುವವರು, ನನಗಾಗಿ ಏನನ್ನೂ ಮಾಡಬಲ್ಲಿರಾದರೆ, ನನಗೆ 7 ತಿಂಗಳ ಫೆಲೊಶಿಪ್, ರೂ.1.75 ಲಕ್ಷ ಸಿಗಲು ಬಾಕಿಯಿದೆ. ದಯಮಾಡಿ, ಅದನ್ನು ನನ್ನ ಕುಟುಂಬಕ್ಕೆ ಪಾವತಿಸುವಂತೆ ನೋಡಿಕೊಳ್ಳಿ. ನಾನು ಸುಮಾರು ರೂ.40 ಸಾವಿರದಷ್ಟು ರಾಮ್‌ಜಿಯವರಿಗೆ ಕೊಡಲಿಕ್ಕಿದೆ. ಅದನ್ನವರು ಎಂದೂ ಕೇಳಿಯೇ ಇಲ್ಲ. ಆದರೆ, ಅದರಿಂದ ಅವರಿಗೂ ದಯಮಾಡಿ ಪಾವತಿಸಿರಿ.

ನನ್ನ ಅಂತ್ಯಕ್ರಿಯೆ ಗಲಾಟೆಯಿಲ್ಲದೆ ಸುಗಮವಾಗಿ ನಡೆಯಲಿ. ನಾನೊಮ್ಮೆ ಕಾಣಿಸಿಕೊಂಡೆ ಹಾಗೂ ಇದ್ದಕ್ಕಿದ್ದಂತೆ ಹೋದೆನೆಂಬಂತೆ ನಡೆದುಕೊಳ್ಳಿ. ನನಗಾಗಿ ಕಣ್ಣೀರು ಹರಿಸಬೇಡಿ. ನಾನು ಜೀವಂತ ಇರುವುದಕ್ಕಿಂತ ಸತ್ತ ಮೇಲೆಯೇ ಸಂತೋಷವಾಗಿರುತ್ತೇನೆಂಬುದು ನನಗೆ ಗೊತ್ತು. ‘ನೆರಳುಗಳಿಂದ ನಕ್ಷತ್ರಗಳೆಡೆಗೆ’

ಉಮಾ ಅಣ್ಣಾ, ಇದಕ್ಕೆ ನಿಮ್ಮ ಕೊಠಡಿಯನ್ನು ಉಪಯೋಗಿಸಿದುದಕ್ಕಾಗಿ ವಿಷಾದಿಸುತ್ತೇನೆ. ಎಎಸ್‌ಎ (ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆ) ಕುಟುಂಬಕ್ಕೆ, ನಿಮ್ಮೆಲ್ಲರನ್ನೂ ನಿರಾಶೆ ಗೊಳಿಸುತ್ತಿರುವುದಕ್ಕೆ ಕ್ಷಮೆಯಿರಲಿ. ನೀವು ನನ್ನನ್ನು ತುಂಬಾ ಪ್ರೀತಿಸುತ್ತಿದ್ದಿರಿ. ಭವಿಷ್ಯದಲ್ಲಿ ಎಲ್ಲರಿಗೂ ಒಳ್ಳೆಯದಾಗಲೆಂದು ಹಾರೈಸುತ್ತೇನೆ. ಕೊನೆಯ ಬಾರಿಗೆ,
ಜೈ ಭೀಮ್.
ಇಷ್ಟೆಲ್ಲ ಬರೆದು, ಆತ್ಮಹತ್ಯಾ ಪತ್ರದ ವಿಧಿ ವಿಧಾನಗಳನ್ನು ಬರೆಯಲು ಮರೆತೆ. ನನ್ನ ಈ ಆತ್ಮಹತ್ಯೆಗೆ ಯಾರೂ ಕಾರಣರಲ್ಲ. ತಮ್ಮ ಕೃತ್ಯಗಳಿಂದಾಗಲಿ, ಮಾತುಗಳಿಂದಾಗಲಿ ಯಾರೂ ನನಗೆ ಈ ಕೃತ್ಯಕ್ಕೆ ಪ್ರಚೋದನೆ ನೀಡಿಲ್ಲ. ಇದು ನನ್ನದೇ ನಿರ್ಧಾರ ಮತ್ತು ಇದಕ್ಕೆ ಕೇವಲ ನಾನೊಬ್ಬನೇ ಹೊಣೆಗಾರ. ನಾನು ಹೋದ ಮೇಲೆ ಈ ವಿಷಯದಲ್ಲಿ ನನ್ನ ಸ್ನೇಹಿತರಿಗಾಗಲಿ, ವೈರಿಗಳಿಗಾಗಲಿ ತೊಂದರೆ ಕೊಡಬೇಡಿ.

Writer - ಅಪೂರ್ವಾನಂದ

contributor

Editor - ಅಪೂರ್ವಾನಂದ

contributor

Similar News