ಅರಸು ನುಡಿದಂತೆಯೇ ನಡೆದುಕೊಂಡರು -ಎಸ್.ಆರ್.ಪುಟ್ಟಸ್ವಾಮಿ

Update: 2016-01-19 18:21 GMT

‘ನಾವು ಮೆಟ್ಟಿಲು ಇಳಿದು ಅವರ ಹತ್ತಿರ ಹೋಗದ ಹೊರತು

ಅವರು ಮೆಟ್ಟಿಲು ಹತ್ತಿ ನಮ್ಮತ್ತ ಬರುವುದಿಲ್ಲ’ ಎಂದಿದ್ದ
 
ಸುಕ್ಕುಗಟ್ಟಿದ ಚರ್ಮ, ಕೆದರಿದ ಕೂದಲು, ಮಾಸಿದ ಸೀರೆ, ಹರಿದ ಕುಪ್ಪಸ, ಗುಳಿಬಿದ್ದ ಕಣ್ಣುಗಳು, ನರಗಳು ಕಾಣುವ ದಬ್ಬೆ ಕೋಲಿನಂತಹ ಕೈಗಳು, ಆ ಕೈಗಳಿಗೆರಡು ಕಡಗ, ನಿಶ್ಯಕ್ತ ದೇಹ, ನಿಸ್ತೇಜ ಮುಖ... ಯಾವುದೇ ವಿದೇಶಿ ಛಾಯಾಗ್ರಾಹಕನಿಗೆ ಕಣ್ಣಿಗೆ ಕಾಣುವ, ಕಂಡಾಕ್ಷಣ ಕ್ಲಿಕ್ಕಿಸುವ, ಭಾರತವನ್ನು ಪ್ರತಿನಿಧಿಸುವಂತಹ ಚಿತ್ರವದು. ಕಂಡರೂ ಕಾಣದಂತೆ ಹೋಗುವ ಜನ, ಹಾಗೆ ಹೋಗುವುದು ಕೂಡ ಸಹಜವೆಂದು ಸಹಿಸಿಕೊಂಡಿರುವ ಹಳ್ಳಿಯ ಹಣ್ಣಾದ ಮುದುಕಿ, ಮೊಮ್ಮಗನೊಡನೆ ಜಗಲಿಯ ಮೇಲೆ ತನ್ನ ಪಾಡಿಗೆ ತಾನು ಕೂತಿದೆ. ಆ ಮುದುಕಿಯನ್ನು ಕಂಡ ಮುಖ್ಯಮಂತ್ರಿ ದೇವರಾಜ ಅರಸು ಅವರು, ಕಾರಿನಿಂದ ಇಳಿದು, ಮುದುಕಿಯ ಬಳಿ ಹೋಗಿ, ಆಕೆಯ ಪಕ್ಕದಲ್ಲಿ ಕೂರುತ್ತಾರೆ. ದೇವರೇ ಪ್ರತ್ಯಕ್ಷನಾಗಿ ಪಕ್ಕಕ್ಕೆ ಬಂದು ಕೂತನೆಂದು ಭಾವಿಸುವ ಬಡ ಮುದುಕಿ, ‘ಬುದ್ಧೀ’ ಎನ್ನುತ್ತಾಳೆ. ತನ್ನ ಕಷ್ಟ ಕೋಟಲೆಗಳನ್ನು ಹೇಳಿಕೊಳ್ಳುತ್ತಾಳೆ. ಸಾವಕಾಶವಾಗಿ ಕೇಳಿಸಿಕೊಂಡ ಅರಸು, ಆ ಮುದುಕಿಯ ಕೈ ಹಿಡಿದು, ‘ನಾನಿದ್ದೇನೆ’ ಎಂಬ ಭರವಸೆಯನ್ನು ಕೊಡುತ್ತಾರೆ. ಆ ತಕ್ಷಣವೇ ತಮ್ಮ ಪಿಎ ಕರೆದು, ‘‘ಇವರ ಹೆಸರು, ವಿಳಾಸ ಬರೆದುಕೊಂಡು, ಸರಕಾರದ ಯೋಜನೆಗಳು ತಲುಪಿಸುವ ವ್ಯವಸ್ಥೆ ಮಾಡಿ’’ ಎನ್ನುತ್ತಾರೆ.

 ‘‘ಇದು ನಡೆದದ್ದು ಹುಣಸೂರಿನ ಹತ್ತಿರದ ಹಳ್ಳಿಯಲ್ಲಿ. ಅರಸು ಅವರು ಊರಿಗೆ ಹೋಗುತ್ತಿದ್ದರು. ಅವರ ಹಿಂದಿನ ಕಾರಿನಲ್ಲಿ ನಾನು ಪ್ರಯಾಣಿಸುತ್ತಿದ್ದೆ. ಇದ್ದಕ್ಕಿದ್ದಂತೆ ಕಾರು ನಿಲ್ಲಿಸಿದರು. ರಸ್ತೆ ಪಕ್ಕದಲ್ಲಿ ಅವರಿಗಾಗಿ ಕಾದು ನಿಂತ ಜನಗಳಿಲ್ಲ, ಹಾರ ತುರಾಯಿಗಳಿಲ್ಲ, ಅಲ್ಲಿ ಯಾವುದೇ ಕಾರ್ಯಕ್ರಮದ ಸುಳಿವೂ ಇಲ್ಲ. ಆದರೂ ಕಾರು ನಿಂತಿತು. ಕಾರಿನಿಂದ ಇಳಿದ ಅರಸು ನಡೆದುಕೊಂಡೇ ಹತ್ತಿರದಲ್ಲಿದ್ದ ಮನೆಯ ಜಗಲಿಯ ಮೇಲೆ ಕೂತಿದ್ದ ಮುದುಕಿಯ ಬಳಿ ಹೋದರು. ಇದು ಗೊತ್ತಿದ್ದ ನನಗೆ ಆಶ್ಚರ್ಯವೇನೂ ಆಗಲಿಲ್ಲ. ತಕ್ಷಣ ಕ್ಯಾಮೆರಾ ಸಿದ್ಧ ಮಾಡಿಕೊಂಡೆ, ಕ್ಲಿಕ್ಕಿಸಿದೆ. ಫೋಟೋ ಯಾಕಪ್ಪ ಎನ್ನುವ ಭಾವ ಅರಸರದು’’ ಎನ್ನುತ್ತಾರೆ ಮುಖ್ಯಮಂತ್ರಿ ದೇವರಾಜ ಅರಸು ಅವರ ಪರ್ಸನಲ್ ಫೋಟೋಗ್ರಾಫರ್ ಎಸ್.ಆರ್. ಪುಟ್ಟಸ್ವಾಮಿ(72)ಯವರು. ಇದು ಒಂದು ಚಿತ್ರದ ಕತೆ.

ಅದೊಂದು ಸಾರ್ವಜನಿಕ ಸಭೆ. ವೇದಿಕೆಯ ಮೇಲೆ ಮುಖ್ಯಮಂತ್ರಿ ದೇವರಾಜ ಅರಸು, ಅವರ ಪಕ್ಕದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕುಳಿತಿದ್ದಾರೆ. ಮಾಸ್ತಿಯವರು ಕೊಂಚ ಬಾಗಿ, ದೇವರಾಜ ಅರಸು ಅವರಿಗೆ ಏನನ್ನೋ ಹೇಳಲು, ಅವರ ಕಿವಿಯ ಬಳಿ ಬಗ್ಗಿದ್ದಾರೆ. ಅರಸೂ ಕೂಡ ಮಾಸ್ತಿಯವರ ಕಡೆಗೆ ವಾಲಿದ್ದಾರೆ.
ಇದೇ ಸುಸಮಯವೆಂದು ಭಾವಿಸುವ ಕ್ಯಾಮರಾಮೆನ್ ಪುಟ್ಟಸ್ವಾಮಿ, ಆ ಗಳಿಗೆಯನ್ನು ಸೆರೆ ಹಿಡಿಯುತ್ತಾರೆ. ಈ ಚಿತ್ರ ನೋಡಿದರೆ ಏನಾದರೂ ನೆನಪಾಗಬಹುದೆ ಎಂದು ಪುಟ್ಟಸ್ವಾಮಿ ಯವರನ್ನು ಕೇಳಿದರೆ, ‘‘ಸಾರ್ವಜನಿಕ ಸಮಾರಂಭವಲ್ಲವೇ ಗದ್ದಲ, ಮಾಸ್ತಿಯವರು ಯಾವುದೋ ವಿಷಯವನ್ನು ಅರಸು ಅವರಿಗೆ ಹೇಳಲು, ಕೊಂಚ ಬಾಗಿ, ಕಿವಿಯ ಹತ್ತಿರ ಹೋಗಿ ಹೇಳಲು ಪ್ರಯತ್ನಿಸುತ್ತಾರೆ. ಅರಸು ಅವರೂ ಕೂಡ ಬಾಗಿ ಕೇಳಿಸಿಕೊಳ್ಳುತ್ತಾರೆ. ಆದರೆ ವಿಷಯ ಅದಲ್ಲ. ಮಾಸ್ತಿಯವರ ಮಾತು ಕೇಳಿಸಿಕೊಂಡ ಅರಸು, ‘ನೀವು ಹಿರಿಯರು, ವಿದ್ವಾಂಸರು, ವಿಚಾರವಂತರು. ನಿಮ್ಮ ಆಸೆ ಆಶಯವೆಲ್ಲ ಜನಪರ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಜೋರಾಗಿಯೇ ಹೇಳಿ, ಎಲ್ಲರಿಗೂ ಕೇಳಲಿ’ ಎಂದರು. ಮಾಸ್ತಿಯವರು ಒಂದು ಕ್ಷಣ ಕಣ್ಮುಚ್ಚಿ ತಲೆದೂಗಿದರು’’ ಎಂದರು.

ಮನುಷ್ಯ ಸ್ವಾರ್ಥರಹಿತವಾಗಿದ್ದರೆ, ನಡೆ ನುಡಿಯಲ್ಲಿ ನೇರವಾ ಗಿದ್ದರೆ, ಸರಳವಾಗಿ ಬದುಕುತ್ತಿದ್ದರೆ ಯಾವುದನ್ನೂ ಮುಚ್ಚಿಡುವ ಅಗತ್ಯವಿಲ್ಲ. ಅರಸು ಅವರ ಬದುಕು ಕೂಡ ತೆರೆದ ಪುಸ್ತಕವೇ ಆಗಿತ್ತು. ಹಾಗೆಯೇ ಮಾಸ್ತಿಯವರು ಕೂಡ ಸಮಾಜದ ಒಳಿತಿಗಾಗಿಯೇ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿಕೊಂಡಿದ್ದರು. ಇದನ್ನು ಬಹಿರಂಗಗೊಳಿಸುವ ಮೂಲಕ ಇಬ್ಬರೂ ದೊಡ್ಡವರಾಗಿದ್ದರು. ಇದು ಇನ್ನೊಂದು ಚಿತ್ರದ ಕತೆ.

ದೇವರಾಜ ಅರಸು ನೆಲದ ಮೇಲೆ ಕೂತು ಊಟ ಮಾಡುತ್ತಿ ದ್ದಾರೆ. ಅದು ಅವರ ಕಲ್ಲಳ್ಳಿಯ ಮನೆ. ಅದನ್ನು ನೋಡುತ್ತಿದ್ದಂತೆ ಪುಟ್ಟಸ್ವಾಮಿಯವರು, ‘‘ನೋಡಿ, ಒಂದು ರಾಜ್ಯದ ಮುಖ್ಯಮಂತ್ರಿ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಅವರ ಮನೆ ನೋಡಬೇಕು ನೀವು, ಅವರು ರಾಜಕಾರಣಕ್ಕೆ ಬರುವುದಕ್ಕೆ ಮುಂಚೆ ಹೇಗಿತ್ತೋ ಇವತ್ತೂ ಹಾಗೇ ಇದೆ. ಅರಸು ಅವರು ಊರಿಗೆ ಹೋದಾಗ, ನೆಲದಲ್ಲಿ ಕೂತು ಊಟ ಮಾಡುವುದು ಅವರಿಗೆ ತುಂಬಾ ಇಷ್ಟದ ಕೆಲಸಗಳಲ್ಲಿ ಒಂದು. ಊಟ ಅಂದರೆ ಹೇಗೆ, ಸಂತೃಪ್ತಿಯಿಂದ ಮಾಡೋರು. ಅದು ಹೀಗೆ ಇರಬೇಕು, ಇಂಥದ್ದೇ ಬೇಕು ಎಂಬುದಿಲ್ಲ. ಊರಿಗೆ ಹೋದರೆ, ಸೊಪ್ಪು ಸಾರು ಬಿಸಿ ರಾಗಿ ಮುದ್ದೆ ಉಣ್ಣೋರು. ಮುಜು ಗರ, ಹಿಂಜರಿಕೆ, ಪ್ರತಿಷ್ಠೆಗೆ ಅಲ್ಲಿ ಜಾಗವೇ ಇಲ್ಲ. ಮುಖ್ಯಮಂತ್ರಿಗಳ ಹಿಂದೆ ಮುಂದೆ ಅಧಿಕಾರಿಗಳು, ಗನ್‌ಮನ್‌ಗಳು, ಪೊಲೀಸರು.. ಒಂದು ದಂಡೇ ಇರುತ್ತದೆ. ಆದರೆ ಅರಸರ ಹಿಂದೆ ಒಂದು ಅಂಬಾಸಿಡರ್ ಕಾರ್, ಇಬ್ಬರು ಮೂವರನ್ನು ಬಿಟ್ಟರೆ ಯಾರೂ ಇರುತ್ತಿರಲಿಲ್ಲ’’ ಎಂದರು.
ಇದು ಮತ್ತೊಂದು ಚಿತ್ರದ ಕತೆ.

ಮೈಸೂರಿನ ಕುವೆಂಪು ಅವರ ಉದಯರವಿ ಮನೆ. ಮೂರು ಬೆತ್ತದ ಚೇರುಗಳಲ್ಲಿ ಕುವೆಂಪು, ದೇವರಾಜ ಅರಸು ಮತ್ತು ಹಾ.ಮಾ.ನಾಯಕರು ಕುಳಿತು ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾರೆ. ಆ ಚಿತ್ರ ನೋಡುತ್ತಿದ್ದಂತೆ ಪುಟ್ಟಸ್ವಾಮಿಯ ವರು, ‘‘ಇದು ಮಾಮೂಲಿ ಚಿತ್ರದಂತೆ ಕಂಡರೂ ಅಪರೂಪದ ಚಿತ್ರ. ರಾಷ್ಟ್ರಕವಿ ಕುವೆಂಪು ಅವರನ್ನು ಅರಸು ಕಾಣಲು ಅವರ ಮನೆಗೆ ಹೋದಾಗ ತೆಗೆದದ್ದು. ಸುಮ್ಮನೆ ಕುಶಲೋಪರಿ ವಿಚಾರಿ ಸಲು ಹೋಗಿದ್ದು. ಅವತ್ತು ಅಲ್ಲಿ ಹಾ.ಮಾ. ನಾಯಕರೂ ಇದ್ದರು. ಅರಸು ಪುಸ್ತಕ ಪ್ರೇಮಿ. ಕುವೆಂಪು ಅವರ ಪುಸ್ತಕಗಳನ್ನು ಅರಸು ಓದಿಕೊಂಡಿದ್ದರು. ಆದರೆ ಅವತ್ತು ಅಲ್ಲೊಂದು ಘಟನೆ ಸಂಭವಿಸಿತು. ಅದೇನೆಂದರೆ, ಅಚಾನಕ್ಕಾಗಿ ಬಂದ ಮುಖ್ಯಮಂತ್ರಿ ಅರಸರನ್ನು ಕಂಡ ಕುವೆಂಪು, ತಮಗೆ ಎದುರಾಗಿದ್ದ ಕಷ್ಟವೊಂದನ್ನು ಹೇಳಿಕೊಂಡಿದ್ದರು. ಆ ಕಷ್ಟ ಕೇಳಿ ಅರಸು ಬಂದಿದ್ದರೋ ಅಥವಾ ಅರಸು ನೋಡಿ ಕಷ್ಟ ಹೇಳಿಕೊಳ್ಳಬೇಕೆನಿಸಿತೋ. ಅಂತೂ ಅರಸು ಮಾಡೋಣ ಬಿಡಿ ಎಂದಿದ್ದರು. ಆಶ್ಚರ್ಯವೆಂದರೆ, ಅವರ ಮನೆಯಿಂದ ಹೊರಗೆ ಬಂದ ಅರಸು ಅವರು, ನನ್ನತ್ತ ತಿರುಗಿ, ‘ನೋಡಿ, ರಾಷ್ಟ್ರಕವಿಗಳು, ಅವರಿಗೂ ಕಷ್ಟಗಳಂತೆ, ಕಷ್ಟ ಯಾರಿಗೂ ಬಿಟ್ಟಿದ್ದಲ್ಲ’ ಎಂದು ಹೇಳಿ ಕಾರು ಹತ್ತಿದರು’’ ಎಂದರು.
ಇದು ಇನ್ನೊಂದು ಚಿತ್ರದ ಕತೆ.

ಧರ್ಮಸ್ಥಳದ ಮಂಜುನಾಥೇಶ್ವರ ಸ್ವಾಮಿಯ ದರ್ಶನ ಪಡೆದ ಇಂದಿರಾ ಗಾಂಧಿ, ದೇವರಾಜ ಅರಸು, ಅರಸು ಅವರ ಪತ್ನಿ ಚಿಕ್ಕಮ್ಮಣ್ಣಿಯ ವರೊಂದಿಗೆ ವೀರೇಂದ್ರ ಹೆಗ್ಗಡೆಯವರ ಚಿತ್ರವನ್ನು ಪುಟ್ಟಸ್ವಾಮಿಯವರು ನೋಡಿ ಪ್ರತಿಕ್ರಿಯಿಸಿದ್ದು ಹೀಗೆ: ‘‘ತುರ್ತು ಪರಿಸ್ಥಿತಿಯಿಂದಾಗಿ ಕಾಂಗ್ರೆಸ್ ಹೀನಾಯವಾಗಿ ಸೋತಿತ್ತು. ಪ್ರಧಾನಿ ಇಂದಿರಾ ಗಾಂಧಿಯವರು ರಾಜಕಾರಣವೇ ಬೇಡ ಎಂದುಕೊಂಡಿದ್ದರು. ಆ ಸಂದರ್ಭದಲ್ಲಿ, ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತವಿತ್ತು, ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ಅರಸು ದಿಲ್ಲಿಗೆ ಹೋಗಿಬರುವುದು ಹೆಚ್ಚಾಗಿತ್ತು. ಅದರ ಫಲವಾಗಿ ಇಂದಿರಾ ಗಾಂಧಿಯವರು ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸುವುದಕ್ಕೆ ಒಪ್ಪಿದ್ದರು. ಒಪ್ಪಿದ ನಂತರ ಅರಸು ಅವರು ಕರ್ನಾಟಕದ ಪ್ರಸಿದ್ಧ ದೇವಸ್ಥಾನಗಳಿಗೆ ಇಂದಿರಾ ರನ್ನು ಕರೆದುಕೊಂಡು ಹೋಗಿ, ವಿಶೇಷ ಪೂಜೆ ಮಾಡಿಸಿದರು. ಅಂಥದ್ದೇ ಒಂದು ಈ ಧರ್ಮಸ್ಥಳದ ಭೇಟಿ. ಇಂದಿರಾ ಗಾಂಧಿಯವರು ಎಷ್ಟು ಕುಗ್ಗಿಹೋಗಿದ್ದರೆಂದರೆ, ಯಾವುದೂ ಬೇಡ ಎನ್ನುವ ಮನಸ್ಥಿತಿಯಲ್ಲಿದ್ದರು. ಈ ಪೂಜೆ ಪುರಸ್ಕಾರಗಳನ್ನೆಲ್ಲ ಮಾಡಿಸುತ್ತಿದ್ದ ದೇವರಾಜ ಅರಸರ ಬಗ್ಗೆ ವಿಶೇಷ ಗೌರವವಿತ್ತು. ಈ ಚಿತ್ರದಲ್ಲೂ ಅದು ಕಾಣುತ್ತದೆ ನೋಡಿ... ಇಂದಿರಾ ಅರಸು ಅವರನ್ನು ನೋಡುತ್ತಿದ್ದಾರೆ, ಅರಸು ಎಲ್ಲ ನಿಮ್ಮ ಒಳ್ಳೆಯದಕ್ಕೇ ಎನ್ನುವ ಭಾವದಿಂದ ಅವರನ್ನು ನೋಡುತ್ತಿದ್ದಾರೆ.’’
ಇದು ಮತ್ತೊಂದು ಚಿತ್ರದ ಕತೆ.

ಹೀಗೆ ಪುಟ್ಟಸ್ವಾಮಿಯವರ ಮುಂದೆ ಅವರೇ ತೆಗೆದ, ಕೈಯಾರೆ ಡಾರ್ಕ್ ರೂಮಿನಲ್ಲಿ ಡೆವಲಪ್ ಮಾಡಿದ, ಇಷ್ಟು ದಿನ ಜತನದಿಂದ ಕಾಪಾಡಿಕೊಂಡು ಬಂದಿರುವ ಅರಸು ಅವರ ನೂರಾರು ಚಿತ್ರಗಳಿವೆ. ಸಾವಿರ ಪದಗಳ ಒಂದು ಲೇಖನ ದಾಟಿಸುವ ಮಾಹಿತಿ ಯನ್ನು, ಸಂದೇಶವನ್ನು ಒಂದು ಚಿತ್ರ ಮಾಡಬಲ್ಲದು ಎಂಬ ಮಾತಿದೆ. ಆ ಮಾತಿಗೆ ತಕ್ಕಂತೆಯೇ, ಪುಟ್ಟಸ್ವಾಮಿಯವರು ತೆಗೆದ ಚಿತ್ರಗಳು ಅರಸು ಅವರ ವ್ಯಕ್ತಿತ್ವವನ್ನು ಬಿಡಿಸಿಡುತ್ತವೆ. ಆ ಚಿತ್ರಗಳು ಅರಸರ ಹಲವು ಮಗ್ಗಲುಗಳನ್ನು, ಚಹರೆಗಳನ್ನು, ಮೂಡ್‌ಗಳನ್ನು, ವ್ಯಕ್ತಿತ್ವವನ್ನು ಬಿಂಬಿಸುತ್ತವೆ; ನೆನಪುಗಳನ್ನು ಹೊತ್ತು ತರುತ್ತವೆ. ಅಂತಹ ಚಿತ್ರಗಳನ್ನು ಪುಟ್ಟಸ್ವಾಮಿಯವರ ಮುಂದೆ ಹರಡಿದರೆ, ಮಾತು ಮರೆತ ವೌನಿಯಾಗುತ್ತಾರೆ. ಏನಾದ್ರು ಹೇಳಿ ಎಂದು ಒತ್ತಾಯಿಸಿದರೆ, ನೆನಪು ಮಾಡಿಕೊಂಡು, ‘‘ದೇವರಂತಹ ಮನುಷ್ಯರು, ನಮ್ಮಂಥವರನ್ನೂ ಕರೆದು ಮಾತನಾಡಿಸುತ್ತಿದ್ದರಲ್ಲ ಅದು ಅವರ ದೊಡ್ಡ ಗುಣ’’ ಎನ್ನುತ್ತಾರೆ.

 ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಂದ ಪುಟ್ಟಸ್ವಾಮಿಯವರು ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನಲ್ಲಿ ಛಾಯಾಗ್ರಹಣ ಕಲಿತು, ವಾರ್ತಾ ಇಲಾಖೆಯ ಛಾಯಾಗ್ರಾಹಕರಾಗಿ ಕೆಲಸಕ್ಕೆ ಸೇರುತ್ತಾರೆ. 1977ರಲ್ಲಿ ಚೀಫ್ ಕ್ಯಾಮರಾಮನ್ ಆಗಿ ಭಡ್ತಿ ಪಡೆದ ನಂತರ, 1978ರಿಂದ 1980ರ ವರೆಗೆ, 2 ವರ್ಷಗಳ ಕಾಲ, ಮುಖ್ಯಮಂತ್ರಿ ದೇವರಾಜ ಅರಸು ಅವರ ಪರ್ಸನಲ್ ಕ್ಯಾಮರಾಮನ್ ಆಗಿ ನಿಯೋಜನೆಗೊಳ್ಳುವ ಪುಟ್ಟಸ್ವಾಮಿಯವರು, ಅರಸು ಹೋದ ಕಡೆಯಲ್ಲೆಲ್ಲಾ ಹೋಗಿ, ಫೋಟೋ ಕ್ಲಿಕ್ಕಿಸಿ, ಕರ್ನಾಟಕದ ಅವತ್ತಿನ ಸಂದರ್ಭವನ್ನು ಹಿಡಿದು ಕೊಟ್ಟಿದ್ದಾರೆ; ಅರಸರನ್ನು ಮುಂದಿನ ಪೀಳಿಗೆಗೂ ದಾಟಿಸಿದ್ದಾರೆ. ಜಂಟಿ ನಿರ್ದೇಶಕರಾಗಿ ನಿವೃತ್ತರಾಗಿರುವ ಪುಟ್ಟಸ್ವಾಮಿಯವರನ್ನು ಅರಸು ಬಗ್ಗೆ ಕೇಳಿದರೆ, ‘‘ಅವರ ಜೊತೆ ಹೋಗದೆ ಇರುವ ಜಾಗವೇ ಇಲ್ಲ. ಬೆಳಗ್ಗೆ ಎದ್ದು ಕ್ಯಾಮೆರಾ ಹೆಗಲಿಗೇರಿಸಿಕೊಂಡು ಹೊರಟರೆ, ಒಂದೊಂದು ಸಲ ರಾತ್ರಿ ಒಂದು ಗಂಟೆ, ಎರಡು ಗಂಟೆಯಾದರೂ ಕೆಲಸ ಮುಗಿಯುತ್ತಿರಲಿಲ್ಲ. ನನಗೆ ಆಶ್ಚರ್ಯವೆಂದರೆ, ಅರಸು ರಾತ್ರಿ ಎಷ್ಟೊತ್ತಾದ್ರು ಅವರಿವರನ್ನು ಭೇಟಿ ಮಾಡುತ್ತ, ಮಾತನಾಡಿಸುತ್ತ, ಕೊನೆಗೆ ಎಲ್ಲರೂ ಹೋದ ನಂತರ, ‘ಓ ನೀನಿನ್ನೂ ಇಲ್ಲೇ ಇದ್ದೀಯ ಲ್ಲಪ್ಪ, ಮಕ್ಕಳೆಷ್ಟು, ಮನೆಯವರು ಚೆನ್ನಾಗಿದ್ದಾರ, ಕಷ್ಟ ಇದ್ರೆ ಹೇಳ ಬೇಕು’ ಎಂದು ಹೇಳಿ ನನ್ನನ್ನು ಮನೆಗೆ ಕಳುಹಿಸುತ್ತಿದ್ದರು. ಬೆಳಗ್ಗೆ ನಾನು ಡ್ಯೂಟಿಗೆ ಹಾಜರಾಗುವ ಹೊತ್ತಿಗೆ ವಾಕಿಂಗ್ ಮುಗಿಸಿ, ಸ್ನಾನ ಮಾಡಿ, ಬಿಳಿ ಬಟ್ಟೆ ತೊಟ್ಟು ನಮ್ಮ ಆಗಮನಕ್ಕೆ ಕಾಯುತ್ತಿದ್ದುದು ಸಾಮಾನ್ಯವಾಗಿತ್ತು’’ ಎನ್ನುತ್ತಾರೆ. ‘‘ಕಷ್ಟ ಕೇಳುವ ಗುಣ ಅವರಲ್ಲಿ ರಕ್ತಗತವಾಗಿ ಬಂದಿತ್ತು. ದಾರಿ ಯಲ್ಲಿ ಹೋಗುವವರು, ಹೊಲ ಗದ್ದೆಗಳಲ್ಲಿ ದುಡಿಯುವವರು, ಕಟ್ಟಡ ಕೆಲಸದ ಕಾರ್ಮಿಕರು... ತಾವೊಬ್ಬ ಮುಖ್ಯಮಂತ್ರಿ ಎಂಬ ಅಹಂ ಅದುಮಿಟ್ಟು, ಶಿಷ್ಟಾಚಾರವನ್ನು ಬದಿಗಿಟ್ಟು ಮಾತನಾಡಿಸು ತ್ತಿದ್ದರು. ಅವರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿದ್ದರು. ಅರ್ಜಿ ಕೊಡುವ ವರ ಸಂಖ್ಯೆ ಹೆಚ್ಚಾಗಿದ್ದೇ ಅರಸು ಅವರ ಅವಧಿಯಲ್ಲಿ. ಏಕೆಂದರೆ ಅರ್ಜಿ ಕೊಟ್ಟರೆ ಅರಸು ಅವರು ತೆಗೆದುಕೊಂಡು ಕಾರಿನ ಹಿಂದಕ್ಕೆ ಬಿಸಾಕುತ್ತಿರಲಿಲ್ಲ. ಅಥವಾ ಕಸದ ಬುಟ್ಟಿಗೆ ಎಸೆಯುತ್ತಿರಲಿಲ್ಲ. ತಮ್ಮ ಹಿಂದೆ ಇದ್ದ ಅಧಿಕಾರಿಗಳಿಗೆ ಅಲ್ಲಿಯೇ ಸೂಚಿಸುತ್ತಿದ್ದರು. ‘ನಮಗೆ ಇನ್ನೊಬ್ಬರ ಪ್ರೀತಿ ಬೇಕಾದರೆ ನಾವು ಅವರನ್ನು ಪ್ರೀತಿಯಿಂದ ಕಾಣಬೇಕು’ ಎನ್ನುವುದು ಅರಸರ ಬಲವಾದ ನಂಬಿಕೆಯಾಗಿತ್ತು. ‘‘ನಾನು ಅವರಲ್ಲಿ ವಿಶೇಷವಾಗಿ ಗಮನಿಸಿದ ಗುಣ ಎಂದರೆ, ಸಿಟ್ಟು ಮಾಡಿಕೊಳ್ಳದಿರುವುದು. ಕೆಲವೊಂದು ಸಲ ಯಾರಾದರೂ ಬಂದು, ಅರಸು ಅವರನ್ನು ಬಾಯಿಗೆ ಬಂದಂತೆ ಬಯ್ಯುತ್ತಿ ದ್ದರು. ಇದು ಸಾಮಾನ್ಯವಾಗಿ ಹುಣಸೂರು ಸುತ್ತಮುತ್ತ ಜಾಸ್ತಿ ಇತ್ತು. ಆಗ ನಾನು, ಅವರ ಮುಖ ನೋಡಿ ದರೆ, ‘ಬಯ್ಯಲಿ ಬಿಡಪ್ಪ, ಅವರಲ್ಲದೆ ಇನ್ಯಾರು ಬಯ್ಯಬೇಕು’ ಅನ್ನುತ್ತಿದ್ದರು. ಸಿಟ್ಟು, ಕೋಪ, ದ್ವೇಷ, ಅಸೂಯೆಗಳಿಲ್ಲದ ತಿಳಿಗೊಳವೇ ಅರಸು. ಮೈಸೂರು ಮಹಾರಾಜರ ವಂಶಸ್ಥರಾದರೂ, ಸಾಮಾನ್ಯರಂತೆಯೇ ಕಷ್ಟದಿಂದ ಬದುಕಿದವರು. ಆ ಕಾರಣಕ್ಕಾಗಿಯೇ ಬಡವರನ್ನು ಕರುಣೆಯಿಂದ ಕಾಣುತ್ತಿದ್ದರು. ಶ್ರೀಮಂತರು, ಮೇಲ್ಜಾತಿಯವರು, ಬಲಾಢ್ಯರಿಗಿಂತ ಅವರಿಗೆ ದೀನ ದಲಿತರ ಬಗ್ಗೆಯೇ ಹೆಚ್ಚು ಕಾಳಜಿ. ‘‘ಎತ್ತರದ ನಿಲುವು, ಆ ನಿಲುವಿಗೆ ತಕ್ಕಂತಹ ನಿಲುವಂಗಿ, ಕೈಯ ಲ್ಲೊಂದು ಪೈಪು, ರಾಜಗಾಂಭೀರ್ಯ... ಫೋಟೋ ತೆಗೆಯಲಿಕ್ಕೇ ಖುಷಿಯಾಗುತ್ತಿತ್ತು. ಪೈಪ್ ಎಂದಾಕ್ಷಣ ನೆನಪಾಯಿತು ನೋಡಿ... ಒಂದು ಪುಟ್ಟ ಲೆದರ್ ಬ್ಯಾಗ್ ಇಟ್ಟುಕೊಳ್ಳುತ್ತಿದ್ದರು. ಅದರೊಳಗೆ ಪೈಪ್, ತಂಬಾಕು, ಲೈಟರ್, ಬೆಂಕಿಪೊಟ್ಟಣ ಇರುತ್ತಿತ್ತು. ಅದಕ್ಕೊಬ್ಬ ಆಳಿಲ್ಲ. ಸ್ವತಃ ಅವರೇ ಆ ಬ್ಯಾಗನ್ನು ಇಟ್ಟುಕೊಳ್ಳುತ್ತಿದ್ದರು. ಕಾರಿನಲ್ಲಿ ಇದ್ದೇ ಇರುತ್ತಿತ್ತು. ಇನ್ನು ಹೊರದೇಶದ, ಹೊರ ರಾಜ್ಯದ ಗಣ್ಯರು ಕರ್ನಾಟಕಕ್ಕೆ, ಬೆಂಗಳೂರಿಗೆ ಭೇಟಿ ಕೊಟ್ಟಾಗ ಅವರೊಡನೆ ತುಂಬಾ ಆತ್ಮೀಯವಾಗಿ ಮಾತನಾಡಿ, ಘನತೆ-ಗೌರವಗಳಿಂದ ನಡೆಸಿಕೊಂಡು ಬೀಳ್ಕೊಡುತ್ತಿದ್ದರು. ನಮ್ಮ ಜೊತೆ ಕೂಡ, ವ್ಯಕ್ತಿಯಾಗಿ ವರ್ತಿಸುತ್ತಿದ್ದರೆ ಹೊರತು ಅಧಿಕಾರಸ್ಥರಾಗಿ ಅಲ್ಲ.

‘‘ಒಂದು ಸಲ, ಮುಖ್ಯಮಂತ್ರಿಗಳ ನಿವಾಸ ಬಾಲಬ್ರೂಯಿಯಿಂದ ವಿಧಾನಸೌಧದವರೆಗೆ ಕಾಲ್ನಡಿಗೆಯಲ್ಲಿ ಬಂದರು. ಬಾಲಬ್ರೂಯಿ ಯಿಂದ ಹೈಗ್ರೌಂಡ್ಸ್ ಪೊಲೀಸ್ ಸ್ಟೇಷನ್, ಗಾಲ್ಫ್ ಕ್ಲಬ್, ಚಾಲುಕ್ಯ ಹೊಟೇಲ್ ಸರ್ಕಲ್ ಮುಖಾಂತರ ವಿಧಾನಸೌಧಕ್ಕೆ ವಾಕ್ ಮಾಡಿಕೊಂಡು ಬಂದಿದ್ದರು. ಕಾರ್ ತೆಗೆಯಲು ಹೋದ ಡೈವರ್‌ಗೆ, ‘ನಡಕೊಂಡು ಹೋಗೋಣ, ಜನರನ್ನು ನೋಡಬೇಕು, ಅವರ ಕಷ್ಟಗಳನ್ನು ಕಣ್ಣಾರೆ ಕಾಣಬೇಕು’ ಎಂದಿದ್ದರು. ನಾನು ಇಲ್ಲಿಯವರೆಗೂ ಈ ಥರದ ಮುಖ್ಯಮಂತ್ರಿಯನ್ನು ನೋಡಲಿಲ್ಲ’’ ಎನ್ನುತ್ತಾರೆ ಪುಟ್ಟಸ್ವಾಮಿಯವರು. ದೇವರಾಜ ಅರಸು ಅವರಿಗೆ ಶ್ರೀಮಂತರು, ಮೇಲ್ಜಾತಿಯವರು, ಬಲಾಢ್ಯರಿಗಿಂತ ದೀನ ದಲಿತರ ಬಗ್ಗೆಯೇ ಹೆಚ್ಚು ಕಾಳಜಿ. ಶೋಷಿತರು, ಅಸಹಾಯಕರ ಬಗ್ಗೆಯೇ ಹೆಚ್ಚು ಕಳಕಳಿ. ಸಮ ಸಮಾಜ ನಿರ್ಮಾಣದತ್ತಲೇ ಹೆಚ್ಚು ಒಲವು. ಅರಸರ ಒಲವು ನಿಲುವಿನಂತೆಯೇ, ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಈ ನಮ್ಮ ಛಾಯಾಗ್ರಾಹಕ ಪುಟ್ಟಸ್ವಾಮಿಯವರೂ ಮುಖ್ಯ. 
     

Writer - ಬಸು ಮೇಗಲ್ಕೇರಿ

contributor

Editor - ಬಸು ಮೇಗಲ್ಕೇರಿ

contributor

Similar News