ಜಾತಿ ಅಪಮಾನ ಗ್ರಹಿಸುವುದು ಹೇಗೆ....?

Update: 2016-01-20 17:29 GMT

      2015 ನವೆಂಬರ್ 6ರಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಕೋಲಾರ ಜಿಲ್ಲೆಯ ಕಗ್ಗನಹಳ್ಳಿಯ ಸರಕಾರಿ ಪ್ರಾಥಮಿಕ ಶಾಲೆಯ ಕುರಿತು ‘‘ಕಾಸ್ಟ್ ಇನ್ ಕ್ಲಾಸ್ ರೂಂ’’ ಎಂಬ ಶೀರ್ಷಿಕೆಯಲ್ಲಿ ಒಂದು ವರದಿ ಪ್ರಕಟಿಸಿತು. ವರದಿಯ ಪ್ರಕಾರ ಜನವರಿ 2014ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ರಾಧಮ್ಮ ಎನ್ನುವವರು ಮುಖ್ಯ ಅಡುಗೆಯವರಾಗಿ ಆ ಶಾಲೆಯಲ್ಲಿ ಕೆಲಸಕ್ಕೆ ಸೇರಿದರು. ಅವರು ಸೇರಿದಂದಿನಿಂದ ಆ ಶಾಲೆಯಲ್ಲಿ ಕಲಿಯುತ್ತಿದ್ದ ಮೇಲ್ಜಾತಿಯ ಮಕ್ಕಳು ಆಕೆ ತಯಾರು ಮಾಡಿದ ಊಟವನ್ನು ನಿರಾಕರಿಸುತ್ತಾ ಬಂದರು. ಸರಕಾರದ ಮಧ್ಯ ಪ್ರವೇಶದಿಂದ ಜನರನ್ನು ಮನವೊಲಿಸಲು ಪ್ರಯತ್ನಿಸಲಾಯಿತು. ಪರಿಣಾಮ 118 ಜನ ಓದುತ್ತಿದ್ದ ಶಾಲೆಯಲ್ಲಿ 100 ಜನ ಮಕ್ಕಳನ್ನು ಆ ಶಾಲೆಯಿಂದಲೇ ಪೋಷಕರು ಬಿಡಿಸಿದರು. ಮಿಕ್ಕ 18 ಜನ ಆಕೆ ತಯಾರಿಸುತ್ತಿರುವ ಅಡುಗೆಯನ್ನು ಸೇವಿಸುತ್ತಿಲ್ಲ! ಆಕೆ ಇಂದಿಗೂ ಪ್ರತಿ ದಿನ ಸರಕಾರ ನೀಡಿರುವ ಡೈರಿಯಲ್ಲಿ ‘‘ಇಂದು ಯಾವ ಮಕ್ಕಳು ಊಟ ಮಾಡಿಲ್ಲ’’ ಎಂದು ಬರೆಯುತ್ತಿದ್ದಾಳೆ.

ಒಮ್ಮೆ ಯೋಚಿಸಿ ‘‘10ರಿಂದ 15 ವರ್ಷದ ಮಕ್ಕಳು ನಾನು ಮಾಡುತ್ತಿರುವ ಆಹಾರವನ್ನು ನಿರಾಕರಿಸುತ್ತಿದ್ದಾರೆ’’ ಎಂಬ ಅಂಶ ಆಕೆಯನ್ನು ಎಷ್ಟು ಬಾಧಿಸುತ್ತಿರಬಹುದು? ಆಕೆ ಎಷ್ಟು ಹಿಂಸೆ ಪಡುತ್ತಿರಬಹದು? ಒಂದು ಕಡೆ ಕೆಲಸ ಕಳೆದುಕೊಂಡರೆ ತನ್ನ ಊಟಕ್ಕೆ ದಿಕ್ಕಿಲ್ಲ! ಇನ್ನೊಂದು ಕಡೆ ತಾನು ಮಾಡಿದ ಅಡುಗೆಯನ್ನು ಸಣ್ಣ ಮಕ್ಕಳು ಸಹ ಮುಟ್ಟುತ್ತಿಲ್ಲ! ಈ ಹಿಂಸೆಯನ್ನು ನಾವು ಹೇಗೆ ವಿವರಿಸಲು ಸಾಧ್ಯ?
ಇನ್ನೊಂದು ಕಡೆ ಆಧುನಿಕ ಶಿಕ್ಷಣ ವ್ಯವಸ್ಥೆಯ ಕಿರೀಟ ಸ್ಥಾನ ಎಂಬ ಹೆಸರನ್ನು ಹೊತ್ತಿರುವ ವಿಶ್ವವಿದ್ಯಾನಿಲಯವೊಂದರಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆಯ ನಾಯಕರೊಂದಿಗೆ ಕೆಲವು ಸೈದ್ಧಾಂತಿಕ ಕಾರಣಗಳಿಗೆ ದಲಿತ ಸಂಘಟನೆಯ ಹುಡುಗರು ಜಗಳವಾಡಿದ ಕಾರಣಕ್ಕೆ 5 ಜನ ದಲಿತ ಹುಡುಗರನ್ನು ವಿಶ್ವವಿದ್ಯಾನಿಲಯದ ಆಚೆಗೆ ಅಟ್ಟಲಾಗುತ್ತದೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕೇಂದ್ರದ ಮಂತ್ರಿಯೊಬ್ಬರು ಮಾನವ ಸಂಪನ್ಮೂಲ ಸಚಿವೆಗೆ ನೇರವಾಗಿ ಪತ್ರ ಬರೆಯುತ್ತಾರೆ. ಆ ಪತ್ರದಲ್ಲಿ ವಿದ್ಯಾರ್ಥಿಗಳನ್ನು ದೇಶದ್ರೋಹಿಗಳು, ಜಾತಿವಾದಿಗಳು ಎಂದು ಜರೆಯಲಾಗುತ್ತದೆ. ಇದರ ಆಧಾರದಲ್ಲಿ ರಚಿತವಾದ ವಿಶ್ವವಿದ್ಯಾನಿಲಯದ ತನಿಖಾ ಸಮಿತಿ ಯಾವುದೇ ಗುರುತರ ಆರೋಪಗಳನ್ನು ಅವರ ಮೇಲೆ ಹೊರಿಸದಿದ್ದರೂ ಆ ಮಕ್ಕಳನ್ನು ವಿಶ್ವವಿದ್ಯಾನಿಲಯದ ಆಡಳಿತ ಭವನ, ವಸತಿ ನಿಲಯ, ಊಟದ ಕೋಣೆಗಳ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ.

Carl Saganಉಟ್ಟ ಬಟ್ಟೆಯಲ್ಲಿಯೇ ತಮ್ಮ ರೂಮಿನಲ್ಲಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸಾವಿತ್ರಿ ಭಾಯಿ ಫುಲೆ ಅವರ ಫೋಟೊಗಳೊಂದಿಗೆ ಹಾಸ್ಟೆಲ್‌ನಿಂದ ತಳ್ಳಲ್ಪಟ್ಟ ಹುಡುಗರು ಅದೇ ವಿಶ್ವವಿದ್ಯಾನಿಲಯದ ಎದುರಿನ ಬೀದಿಯಲ್ಲಿ ಜೀವನ ಸಾಗಿಸುತ್ತಾರೆ ಮತ್ತು ಅದನ್ನು ಒಂದು ಪ್ರತಿಭಟನೆಯಂತೆ ನಿರ್ವಹಿಸುತ್ತಾರೆ. ಅವರಲ್ಲಿ ಒಬ್ಬ ವಿದ್ಯಾರ್ಥಿ ರೋಹಿತ್ ವೇಮುಲಾ ಕೆಲವು ದಿನಗಳ ನಂತರ ಅಲ್ಲಿನ ಉಪ ಕುಲಪತಿಯವರಿಗೆ ‘‘ದಯಮಾಡಿ ದಲಿತ ವಿದ್ಯಾರ್ಥಿಗಳಿಗೆ ಪ್ರವೇಶಾತಿಯ ಸಂದರ್ಭದಲ್ಲಿಯೇ ಸ್ವಲ್ಪವಿಷ ಕೊಟ್ಟು ಬಿಡಿ, ಅವರ ಕೋಣೆಗಳಿಗೆ ನೇಣು ಬಿಗಿದುಕೊಳ್ಳಲು ಗಟ್ಟಿಯಾದ ಹಗ್ಗಗಳನ್ನು ಸರಬರಾಜು ಮಾಡಿಬಿಡಿ ಆ ಮೂಲಕವಾದರು ನೀವು ದಲಿತರ ಸಮಸ್ಯೆಯನ್ನು ಇಲ್ಲವಾಗಿಸಬಹುದು’’ ಎಂದು ತನ್ನ ಮತ್ತು ತನ್ನ ಗೆಳೆಯರಿಗೆ ವಿಶ್ವವಿದ್ಯಾನಿಲಯದಲ್ಲಿ ಆದ ಸಾಮಾಜಿಕ ಬಹಿಷ್ಕಾರಕ್ಕೆ ಬೇಸತ್ತು ನೊಂದು ಪತ್ರ ಬರೆಯುತ್ತಾನೆ. ಆದರೆ ಯಾವುದೇ ಪ್ರಯೋಜನವಾಗುವುದಿಲ್ಲ, ಏಸಿ ಕೋಣೆಯಲ್ಲಿ ಕುಳಿತ ಮನುಷ್ಯನ ಹೃದಯ ಕರಗುವುದಿಲ್ಲ ಆ ಹುಡುಗ ದಿನಾಂಕ 18-01-2016 ರಂದು ಜಗತ್ತಿಗೆ ಒಂದು ಪತ್ರ ಬರೆದಿಟ್ಟು ನೇಣಿಗೆ ಏರುತ್ತಾನೆ. ಆ ಪತ್ರದಲ್ಲಿ ಆತ ‘‘ನಾನು ವಿಜ್ಞಾನ ಮತ್ತು ನಕ್ಷತ್ರಗಳನ್ನು ಪ್ರೀತಿಸುತ್ತಿದ್ದೆ’’ ಎಂದು ಬರೆಯುತ್ತಾನೆ. ರಂತೆ ಒಬ್ಬ ವಿಜ್ಞಾನದ ಬರಹಗಾರನಾಗಬೇಕು ಎಂಬುದು ನನ್ನ ಆಸೆಯಾಗಿತ್ತು ಎನ್ನುತ್ತಾನೆ. ಇಂದು ಮನುಷ್ಯರ ನಡುವಿನ ಭಾವನೆಗಳು ಸೆಕೆಂಡ್ ಹ್ಯಾಂಡೆಡ್ ಆಗಿ ಬದಲಾಗಿವೆ, ಇಲ್ಲಿ ಪ್ರೀತಿಯೂ ಕೃತಕವಾಗಿ ನಿರ್ಮಿಸಲ್ಪಟ್ಟಿದೆ, ನಮ್ಮ ಭಾವನೆಗಳಿಗೆ ಬಣ್ಣ ಕೋಡಲಾಗಿದೆ. ನಮ್ಮ ನೈಜತೆಯು ಕೃತಕ ಕಲೆಯ ಮೂಲಕವೇ ಮೌಲ್ಯೀಕರಣಗೊಳ್ಳುವ ಹಂತಕ್ಕೆ ನಾವು ತಲುಪಿದ್ದೇವೆ ನಿಜ ಹೇಳಬೇಕು ಎಂದರೆ ಇಂದು ಜಗತ್ತಿನಲ್ಲಿ ನೋವು ಇಲ್ಲದ ಪ್ರೀತಿಯನ್ನು ಪಡೆಯುವುದು ಅತ್ಯಂತ ಕಷ್ಟಕರವಾಗಿದೆ ಎಂಬ ತನ್ನ ನೋವನ್ನು, ಬಾಲ್ಯದಿಂದ ತಾವು ಅನುಭವಿಸಿದ ಒಂಟಿತನವನ್ನು, ನನ್ನ ಹುಟ್ಟೇ ಒಂದು ಆಘಾತ ಎಂದು ಬರೆಯುತ್ತಾನೆ. ಪತ್ರದ ಕೊನೆಗೆ ನನ್ನ ಆತ್ಮಹತ್ಯಗೆ ನಾನೇ ಕಾರಣ ನನ್ನ ಮಿತ್ರ ಮತ್ತು ಶತ್ರುಗಳಿಗೆ ತೊಂದರೆ ನೀಡಬೇಡಿ ಎಂದು ಬರೆದು ಬದುಕು ಮುಗಿಸಿಕೊಳ್ಳುತ್ತಾನೆ....
ಮೇಲಿನ ಎರಡು ಘಟನೆಗಳನ್ನು ಅವಲೋಕಿಸಿದರೆ ನಮಗೆ ಇದರಲ್ಲಿ ಜಾತಿಯ ಪಾತ್ರವನ್ನು ಕಾನೂನಾತ್ಮಕವಾಗಿ ಗುರುತಿಸಲು ಸಾಧ್ಯವಿಲ್ಲ. ಮೇಲ್ನೋಟಕ್ಕೆ ಈ ಘಟನೆಗಳಿಗೂ ಜಾತಿ ಶೋಷಣೆಗೂ ಸಂಬಂಧವಿಲ್ಲ ಎಂಬಂತೆ ಕಾಣುತ್ತದೆ. ಕಾರಣಕ್ಕೆ ನಮ್ಮ ನಡುವಿನ ಕೆಲವು ವಿದ್ವಾಂಸರು ಮೊದಲಿನ ಘಟನೆಯಲ್ಲಿ ‘‘ಪೋಷಕರಿಗೆ ಶಾಲೆ ಇಷ್ಟವಾಗಲಿಲ್ಲ ಅದಕ್ಕೆ ಶಾಲೆ ಬಿಡಿಸಿದರು! ಮಕ್ಕಳಿಗೆ ಊಟ ಇಷ್ಟವಾಗುತ್ತಿಲ್ಲ ಅದಕ್ಕೆ ತಿನ್ನುತ್ತಿಲ್ಲ! ಅಷ್ಟೆ. ಇದರಲ್ಲಿ ಎಂತಹ ಜಾತಿ ಹುಡುಕುತ್ತೀರಿ’’ ಎನ್ನುವ ತರ್ಕ ತಂದರೆ! ಎರಡನೆಯ ಪ್ರಕರಣದಲ್ಲಿ ‘‘ಒಬ್ಬ ಸಂಶೋಧಕ ‘ನನ್ನ ಆತ್ಮಹತ್ಯೆಗೆ ನಾನೇ ಕಾರಣ’ ಎಂದು ಬರೆದಿಟ್ಟ ಮೇಲೂ ನೀವೇಕೆ ಅದನ್ನು ಜಾತಿ ಕಾರಣದಿಂದ ಆದ ಹತ್ಯೆ ಎನ್ನುತ್ತಿದ್ದೀರಾ? ನಿಮಗೆ ಎಲ್ಲದ್ದಕ್ಕೂ ಜಾತಿಯ ಬಣ್ಣ ಬಳಿಯುವುದು ಅಭ್ಯಾಸವಾಗಿದೆ’’ ಎಂಬ ತರ್ಕ ತರಲಾಗುತ್ತಿದೆ. ನಮ್ಮ ನಡುವಿನ ಕಾನೂನಿನ ಮಿತಿ ಹೇಗಿದೆ ನೋಡಿ! ಇಲ್ಲಿ ಜಾತಿಯ ಕಾರಣಕ್ಕೆ ಆಗುತ್ತಿರುವ ಅಪಮಾನ ಮತ್ತು ಮಾನಸಿಕ ನೋವುಗಳನ್ನು ಒಂದು ಹಿಂಸೆಯಾಗಿ ಗುರುತಿಸಲು ವಿಫಲವಾಗುತ್ತಿದೆ!
 ಈ ಎರಡು ಘಟನೆಗಳನ್ನು ಇಟ್ಟಕೊಂಡು ನೋಡಿದರೆ ಇವು ಜಾತಿಯ ಕಾರಣಕ್ಕೆ ಪ್ರಜ್ಞಾಪೂರ್ವಕವಾಗಿ ನಡೆಯುತ್ತಿರುವ ಹಿಂಸೆ ಎಂದು ಸಾಧಿಸಲು ಸಾಧ್ಯವಿಲ್ಲ. ನಮ್ಮ ನಡುವಿನ ನ್ಯಾಯ ಪ್ರತಿಪಾದಿಸುವ ಹಿಂಸೆ ಪದಗಳ(ಬೈಗುಳಗಳ), ಗಾಯದ ರೂಪದಲ್ಲಿ ಗೋಚರವಾಗಿರಬೇಕು ಇಲ್ಲವಾದರೆ ಅದು ಹಿಂಸೆಯೇ ಅಲ್ಲ. . .

 ಇಲ್ಲಿನ ಪ್ರಶ್ನೆ ಪುಟ್ಟ ಪುಟ್ಟ ಮಕ್ಕಳು ತಾನು ತಯಾರಿಸುವ ಅನ್ನವನ್ನು ಉಣ್ಣುತ್ತಿಲ್ಲ ಎಂಬ ಭಾವ ತರುವ ಮಾನಸಿಕ ಹಿಂಸೆಯನ್ನು ನಾವು ಹೇಗೆ ಗುರುತಿಸಬೇಕು? ವಿಶ್ವವಿದ್ಯಾನಿಲಯದ ಸಂಶೋಧಕ ಅದೇ ವಿಶ್ವವಿದ್ಯಾನಿಲಯದಿಂದ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿ ತಾನು ಇದುವರೆಗೂ ಓಡಾಡಿದ, ಮಾತನಾಡಿದ, ಸ್ನೇಹಿತರೊಟ್ಟಿಗೆ ಹರಟಿದ ಬೀದಿಯಲ್ಲಿ 12 ದಿನ ಬದುಕಬೇಕಾದ ಸಂದರ್ಭದಲ್ಲಿನ ಆತ ಕಳೆದ ಪ್ರತಿ ನಿಮಿಷ, ಪ್ರತಿ ದಿನ, ಎದುರಿಸಿದ ಪ್ರತಿ ನೋಟ ಅವನಿಗೆ ಒಡ್ಡಿರುವ ಹಿಂಸೆಯನ್ನು ಹೇಗೆ ಗುರುತಿಸಬೇಕು? ಎಂಬುದು. . . .
21ನೆ ಶತಮಾನದ ಈ ದಿನಗಳಲ್ಲಿ ನಾವು ನಾಗರಿಕತೆ, ಪ್ರಜಾಪ್ರಭುತ್ವ, ದೇಶ, ಜಾಗತೀಕರಣ, ಯುದ್ಧ, ಅಭಿವೃದ್ಧಿ ಇತ್ಯಾದಿ ಇತ್ಯಾದಿ ನೂರಾರು ನುಡಿಗಟ್ಟುಗಳನ್ನು ಕಟ್ಟಿಕೊಂಡಿದ್ದೇವೆ ಒಂದು ಅರ್ಥದಲ್ಲಿ ಈ ಶತಮಾನದ ಬಹುಪಾಲು ಬೌದ್ಧಿಕ ವಲಯ ಈ ಪ್ರಯತ್ನದಲ್ಲಿಯೇ ಮುಳುಗಿ ಹೋಗಿದೆ. ಜಗತ್ತಿನ ಎಲ್ಲ ವಿದ್ಯಮಾನಗಳನ್ನು ವಿವರಿಸುವ ಭಾಷೆ ಕಂಡುಕೊಂಡ ಬುದ್ಧ್ದಿಜೀವಿಗಳು ನಮ್ಮ ನಡುವಿನ ಬಡವನ, ದಲಿತನ ನೋವುಗಳನ್ನು, ಅವಮಾನಗಳನ್ನು ವಿವರಿಸುವ ಭಾಷೆಯೊಂದನ್ನು, ಅವರ ನೋವಿಗೆ ಧ್ವನಿಯಾಗುವ ನುಡಿಗಟ್ಟೊಂದನ್ನು ಕಟ್ಟುವಲ್ಲಿ ಸೋತಿದ್ದಾರೆ ಅಥವಾ ಅದು ನಮ್ಮ ಆದ್ಯತೆಯ ಪ್ರಶ್ನೆಯಾಗಿ ರೂಪುಗೊಂಡಿಲ್ಲ. ಬಡವನ, ಶೋಷಿತನ ನೋವನ್ನು ವಿವರಿಸುವ ಭಾಷೆ ಎಲ್ಲಿದೆ? ಎಂಬುದು ಇಂದು ಮುಖ್ಯ ಪ್ರಶ್ನೆಯಾಗಬೇಕಿದೆ. ಜಾತಿ ಕಾರಣದಿಂದ ಆಗುವ ಈ ಮಾದರಿಯ ಹ್ಯುಮಿಲಿಯೇಷನ್(ಅಪಮಾನ) ಅನ್ನು ಗುರುತಿಸುವ ಬಗೆ ಯಾವುದು? ಎಂಬ ಪ್ರಶ್ನೆಯನ್ನು ಮುಂದಕ್ಕೆ ತರಬೇಕಿದೆ...
ಆದರೆ ನನ್ನ ಕಾಲದ ದುರಂತ ಎಂದರೆ ನಮ್ಮ ನಡುವಿನ ಬಹುಪಾಲು ವಿದ್ವಾಂಸರು ‘‘21ನೆ ಶತಮಾನದಲ್ಲಿ ಜಾತಿ ಎಲ್ಲಿದೆ? ಹಿಂದೂ ನಾವೆಲ್ಲ ಒಂದು!’’ ಎಂಬ ರಾಗವನ್ನು ಗಟ್ಟಿಯಾಗಿ ಕಲಿಸುವುದರಲ್ಲಿ ತಲ್ಲೀನರಾಗಿದ್ದಾರೆ...

Writer - ಕಿರಣ್ ಎಂ., ಗಾಜನೂರು

contributor

Editor - ಕಿರಣ್ ಎಂ., ಗಾಜನೂರು

contributor

Similar News