ಉನ್ನತ ಶಿಕ್ಷಣ ಶುದ್ಧೀಕರಣಕ್ಕೆ ತತ್ವಜ್ಞಾನಿ ಬಲಿದಾನ

Update: 2016-01-21 17:15 GMT

ದೇಶಾದ್ಯಂತ ರಾಜಕೀಯ ಸಂಚಲನ ಮೂಡಿಸಿದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದಲ್ಲಿ ಸಾವಿಗೆ ಶರಣಾದ ರೋಹಿತ್ ವೇಮುಲಾ ತೀರಾ ಬುದ್ಧಿವಂತ. ದಲಿತ ವಿರೋಧಿ ಎಂಬ ಭಾವನೆಯಿಂದ ಸರಕಾರ ಈ ವಿಶ್ವವಿದ್ಯಾನಿಲಯಕ್ಕೆ ಹೊಸದಾಗಿ ನೇಮಿಸಿದ ಕುಲಪತಿ ಪ್ರೊ.ಅಪ್ಪಾರಾವ್ ಅವರಿಗೆ ವೇಮುಲಾ ಬರೆದ ಪತ್ರದಲ್ಲಿ ಈ ಸಂಶೋಧನಾ ವಿದ್ಯಾರ್ಥಿ ತನ್ನ ಆತ್ಮಹತ್ಯೆ ಕ್ಷಣದ ಸಿಟ್ಟು, ಹತಾಶೆ ಹಾಗೂ ಖಿನ್ನತೆಯನ್ನು ವಿವರಿಸಿದ್ದಾನೆ.
ಕಳೆದ ವರ್ಷದ ಡಿಸೆಂಬರ್ 18ರಂದು ಕುಲಪತಿಗೆ ಬರೆದ ಮೊದಲ ಪತ್ರದಲ್ಲಿ ರೋಹಿತ್, ‘‘ನಮಗೆ ವಿಷ ನೀಡಿ ಇಲ್ಲವೇ ನೇಣು ಹಾಕಿಕೊಳ್ಳಲು ಉದ್ದ ಹಗ್ಗವನ್ನು ನೀಡಿ’’ ಎಂದು ಬರೆದಿದ್ದರು. ಆದರೆ ಆತ್ಮಹತ್ಯೆ ಟಿಪ್ಪಣಿಯಲ್ಲಿ ಏಸುವಿನಂತೆ ಉದಾರತೆಯನ್ನು ಪ್ರದರ್ಶಿಸಿ, ಹತ್ಯೆಕೋರರನ್ನೂ ಕ್ಷಮಿಸಿದ್ದಾರೆ. ಬೇರೆಯವರನ್ನು ದೂಷಿಸುವ ಬದಲು ಇಂಥ ಸಮಾಜದಲ್ಲಿ ಹುಟ್ಟಿದ್ದಕ್ಕೆ ತನ್ನನ್ನು ತಾನೇ ದೂಷಿಸಿಕೊಂಡಿದ್ದಾರೆ.

ವೇಮುಲಾ ಚಿರಾಯು
ಒಂದು ಮುಖ್ಯ ಅಂಶವನ್ನು ಅವರು ವಿವರಿಸಿದ್ದಾರೆ. ‘‘ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳು ದಲಿತರನ್ನು ಅಂದರೆ ಐತಿಹಾಸಿಕ ಅಸ್ಪಶ್ಯರನ್ನು ಅಧ್ಯಯನ ಮಾಡಲು ಅಥವಾ ಗೌರವದಿಂದ ಇರಲು ಅವಕಾಶ ನೀಡುವುದಿಲ್ಲ ಅಂಥ ಆಘಾತಕ್ಕೆ ಕಾರಣವಾದದ್ದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರ ಪತ್ರ. ಸಚಿವರು ತಮ್ಮ ಪತ್ರದಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಸಂಘವನ್ನು ರಾಷ್ಟ್ರವಿರೋಧಿ, ಜಾತೀಯವಾದಿ ಹಾಗೂ ಉಗ್ರಗಾಮಿ ಸಂಘಟನೆ ಎಂದು ಬಣ್ಣಿಸಿದ್ದರು.
ಈ ಪತ್ರದ ಆಧಾರದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವಾಲಯ ಐದು ಮಂದಿ ದಲಿತ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಲಪತಿಗೆ ಸೂಚಿಸಿತ್ತು. ಮುಝಪ್ಫರ್‌ನಗರ ಕೋಮುಗಲಭೆ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದು ಮತ್ತು ಯಾಕುಬ್ ಮೆಮೊನ್ ಗಲ್ಲುಶಿಕ್ಷೆ ಕುರಿತ ಚರ್ಚೆ ಆಯೋಜಿಸಿದ್ದು ಇದಕ್ಕೆ ಕಾರಣ. ಇದು ಕೇವಲ ಶೈಕ್ಷಣಿಕ ಸಂವಾದ ಎನ್ನುವುದನ್ನು ಮರೆಯಬಾರದು. ಇಷ್ಟಾಗಿಯೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರು ಮೊದಲು ಆ ಸಭೆಗೆ ತೊಂದರೆ ಕೊಟ್ಟರು ಹಾಗೂ ನಂತರ ದಲಿತ ವಿದ್ಯಾರ್ಥಿಗಳು ತಮ್ಮ ಸಂಘಟನೆಯ ಕಾರ್ಯಕರ್ತರ ವಿರುದ್ಧ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿ, ರಾಜಕೀಯ ಲೇಪ ನೀಡಿದರು.

ಬಂಡಾರು ವಜಾಕ್ಕೆ ಒತ್ತಡ
ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ದಲಿತರ ಹಕ್ಕು ಹಾಗೂ ಗೌರವಕ್ಕೆ ದೇಶದಲ್ಲಿ ನೀಡಿದ ಮೂರನೆ ಅತಿದೊಡ್ಡ ಆಘಾತ ಇದು. ಮೊದಲನೆಯದು ಮದ್ರಾಸ್ ಐಐಟಿನಲ್ಲಿ ಅಂಬೇಡ್ಕರ್- ಪೆರಿಯಾರ್ ಅಧ್ಯಯನ ವರ್ತುಲವನ್ನು ನಿಷೇಧಿಸಿದ್ದು; ಎರಡನೆಯದ್ದು, ಹರ್ಯಾಣದಲ್ಲಿ ದಲಿತ ಮಕ್ಕಳನ್ನು ಜೀವಂತವಾಗಿ ದಹಿಸಿದ್ದು ಮತ್ತು ಇದನ್ನು ಜನರಲ್ ವಿ.ಕೆ.ಸಿಂಗ್ ‘‘ನಾಯಿಗಳ ಸಾವು’’ ಎಂದು ಬಣ್ಣಿಸಿದ್ದು. ಇದೀಗ ರೋಹಿತ್ ಸಾವು ಮತ್ತು ಇದರಲ್ಲಿ ದತ್ತಾತ್ರೇಯ ಹಾಗೂ ಮಾನವ ಸಂಪನ್ಮೂಲ ಸಚಿವಾಲಯ ಶಾಮೀಲಾಗಿರುವುದು ಮೂರನೆ ಘಟನೆ.
ವೇಮುಲಾ ತನ್ನ ತೀರಾ ಲೆಕ್ಕಾಚಾರದ ಕಾವ್ಯಮಯ, ತತ್ವಶಾಸ್ತ್ರೀಯ ಪತ್ರವನ್ನು ಬರೆಯಲು ಉದ್ದೇಶಿಸಿದ್ದರು. ಇದರಲ್ಲಿ ಪ್ರೀತಿಯ ತಾಯಿ, ಸಹೋದರ, ಸಹೋದರಿ ಹಾಗೂ ಸ್ನೇಹಿತರಿಗೆ ಅವರು ಒಂದಂಶವನ್ನು ಸ್ಪಷ್ಟಪಡಿಸಲು ಬಯಸಿದ್ದರು. ಅದೆಂದರೆ ಬಡವರು ಹಾಗೂ ಐತಿಹಾಸಿಕವಾಗಿ ಅಸ್ಪಶ್ಯರು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಲ್ಲಿಗೆ ಅವರ ಬಗೆಗಿನ ವ್ಯವಸ್ಥಿತ ದ್ವೇಷ ಕೊನೆಯಾಗುವುದಿಲ್ಲ ಎನ್ನುವುದು. ವಿಜ್ಞಾನ ಲೇಖಕನಾಗುವುದು ಆತನ ಆಕಾಂಕ್ಷೆಯಾಗಿತ್ತು. ಪ್ರತಿಕೂಲ ಪರಿಸರದಲ್ಲಿ ಉತ್ತಮ ಇಂಗ್ಲಿಷ್ ಕಲಿತರೂ, ತಮ್ಮ ಸೈದ್ಧಾಂತಿಕ ಗುರು ಅಂಬೇಡ್ಕರ್ ಅವರೇ ರಚಿಸಿದ ಸಂವಿಧಾನದಡಿ ರಚಿತವಾದ ಸರಕಾರಿ ಸಂಸ್ಥೆಗಳ ಸಾಮಾಜಿಕ ಬಹಿಷ್ಕಾರದ ವಾತಾವರಣ ಬದಲಾಗುವುದಿಲ್ಲ. ಈ ಎಲ್ಲ ಸಂಸ್ಥೆಗಳನ್ನೂ ನಿರ್ವಹಿಸುವವರು ಹಾಗೂ ಇಲ್ಲಿ ಇರುವವರೆಲ್ಲರೂ ಜಾತೀಯವಾದಿ ಸಂಸ್ಕೃತಿ ಮತ್ತು ಶೋಷಣೆಯಲ್ಲಿ ನಂಬಿಕೆ ಇರುವವರು ಎನ್ನುವುದನ್ನು ಸ್ಪಷ್ಟಪಡಿಸಲು ಬಯಸಿದ್ದರು.
ಸಾಮಾಜಿಕವಾಗಿ ಬಹಿಷ್ಕಾರಕ್ಕೆ ಒಳಗಾದ ದಲಿತ ವಿದ್ಯಾರ್ಥಿಗಳು ಹಾಗೂ ಇತರ ಸಂಘಟನೆಗಳು, ಅಮಾಯಕರಿಗೆ ಆದ ಶಿಕ್ಷೆ ವಿರುದ್ಧ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದವು. ವಿಶ್ವವಿದ್ಯಾನಿಲಯದ ಆಡಳಿತ ಇದರ ತೀವ್ರತೆಯನ್ನು ಆರ್ಥ ಮಾಡಿಕೊಳ್ಳಬಹುದಿತ್ತು. ಯುವಚಿಂತಕರ ಸಮಸ್ಯೆ ಬಗೆಹರಿಸಬಹುದಿತ್ತು. ಆದರೆ ಈ ಹಂತದಲ್ಲಿ ಯಾವುದೂ ಅವರ ಕೈಯಲ್ಲಿಲ್ಲ ಎನಿಸುತ್ತದೆ.
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ, ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯದ ಪತ್ರದ ಆಧಾರದಲ್ಲೇ ಕ್ರಮ ಕೈಗೊಂಡಿರುವುದರಿಂದ ಈ ವಿವಾದ ಮತ್ತಷ್ಟು ಜಟಿಲವಾಗಿದೆ. ಇದು ವಿಶ್ವವಿದ್ಯಾನಿಲಯಗಳ ಅದರಲ್ಲೂ ಮುಖ್ಯವಾಗಿ ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆ ಬಗ್ಗೆ ಸಹಜವಾಗಿಯೇ ಪ್ರಶ್ನೆಗಳು ಉದ್ಭವಿಸಲು ಕಾರಣವಾಗಿದೆ. ವಿದ್ಯಾರ್ಥಿ ರಾಜಕೀಯ ಹಾಗೂ ಸಾಂಸ್ಥಿಕ ಸಂಘರ್ಷ ಎಲ್ಲ ಕ್ಯಾಂಪಸ್‌ಗಳಲ್ಲಿ ಸಾಮಾನ್ಯ ವಿಚಾರ. ಇಂಥ ವಿಚಾರಗಳ ಬಗ್ಗೆ ಕುಲಪತಿಗಳು ಯಾವ ಒತ್ತಡವೂ ಇಲ್ಲದೇ ಸ್ವತಂತ್ರವಾಗಿ, ನಿಷ್ಪಕ್ಷಪಾತವಾಗಿ ನಿರ್ಧಾರಗಳನ್ನು ಕೈಗೊಂಡರೆ, ಬಹುಸಂಸ್ಕೃತಿಯ ಕ್ಯಾಂಪಸ್‌ಗಳಾಗಿ ಉತ್ತಮ ಕಾರ್ಯನಿರ್ವಹಿಸಲು ಸಾಧ್ಯ. ಆಗ ಕ್ಯಾಂಪಸ್ ಆತ್ಮಹತ್ಯೆ ಅಥವಾ ದೌರ್ಜನ್ಯದ ಗುಹೆಯಾಗುವುದನ್ನು ತಪ್ಪಿಸಬಹುದು. ಇಲ್ಲದಿದ್ದರೆ ಹಲವಾರು ಮಂದಿ ರೋಹಿತ್‌ಗಳು, ಇಂಥ ಆತ್ಮಹತ್ಯೆ ಟಿಪ್ಪಣಿ ಬರೆದು ಪ್ರತಿಭಟನಾರ್ಥವಾಗಿ ಜೀವ ಕಳೆದುಕೊಳ್ಳಬೇಕಾಗುತ್ತದೆ.

ಎಸ್ಸಿ ಆಯೋಗ ತೀವ್ರ ನಿಗಾ
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚುತ್ತಿದ್ದು, ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಂದರೆ ವಿಶ್ವವಿದ್ಯಾನಿಲಯಗಳು ಹಾಗೂ ಇತರ ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಗೆ ದೊಡ್ಡ ಅಪಾಯ ಎದುರಾಗಿದೆ. ಹಿಂದೆ ಅಂಥ ಪರಿಸ್ಥಿತಿ ರಾಜ್ಯ ವಿಶ್ವವಿದ್ಯಾನಿಲಯಗಳಲ್ಲಿ ಹೆಚ್ಚಾಗಿತ್ತು. ಇದೀಗ ಇದು ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೂ ವಿಸ್ತರಿಸಿದೆ.
ಈ ಸಂವಹನ ಜಗತ್ತಿನಲ್ಲಿ ದಲಿತರು, ಬುಡಕಟ್ಟು ಜನಾಂಗದವರು ಹಾಗೂ ಮಹಿಳೆಯರಿಗೆ ತಮ್ಮ ಹಕ್ಕಿನ ಬಗ್ಗೆ ಜಾಗೃತಿ ಮೂಡಿರುವ ಹಿನ್ನೆಲೆಯಲ್ಲಿ ಕ್ಯಾಂಪಸ್‌ಗಳಲ್ಲಿ ಇಂಥ ಸಂಘಟನೆಗಳು ಹೆಚ್ಚು ಕ್ರಿಯಾಶೀಲವಾಗುತ್ತಿವೆ ಎನ್ನುವುದನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು.
ಹಿಂದೆ ವಿಶ್ವವಿದ್ಯಾನಿಲಯಗಳು ಮೇಲ್ವರ್ಗದ ಹಾಗೂ ಗಣ್ಯ ಬೋಧಕರು ಹಾಗೂ ಆಡಳಿತಗಾರರ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಮೀಸಲಾತಿಯ ಸಿದ್ಧಾಂತ ಬದಲಾವಣೆ ತಂದಿತು. ಕೆಲ ಪಕ್ಷರಹಿತಮ ಸೈದ್ಧಾಂತಿಕ ಹಿನ್ನೆಲೆಯ, ಮುಕ್ತ ಚಿಂತನೆಯ ಸಂಘಟನೆಗಳು ರೂಪುಗೊಂಡವು. ಇಂಥ ಸಂಘಟನೆಗಳ ಜತೆ ರಾಜಕೀಯವಾಗಿ ಸಂಪ್ರದಾಯವಾದಿ ಸಿದ್ಧಾಂತದ ಎಬಿವಿಪಿಯಂಥ ಸಂಘಟನೆಗಳು ಈ ಪ್ರತಿಭೆ ಸೃಷ್ಟಿಯಲ್ಲಿ ಪೈಪೋಟಿ ನೀಡದಾದವು. ಇದಕ್ಕೆ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿದ್ದ ಅಂಬೇಡ್ಕರ್ ವಿದ್ಯಾರ್ಥಿ ಸಂಘ ಉತ್ತಮ ನಿದರ್ಶನ. ಇಂಥ ಪುಟ್ಟ ಹಾಗೂ ಪರಿಣಾಮಕಾರಿ ಸಂಘಟನೆಗಳು ಯಾವುದೇ ವಿಷಯಗಳನ್ನು ಚಳವಳಿಗೆ ಎತ್ತಿಕೊಳ್ಳಲು ರಾಜಕೀಯ ಪಕ್ಷಗಳ ಮಾರ್ಗದರ್ಶನಕ್ಕೆ ಕಾಯಬೇಕಾಗಿಲ್ಲ. ಅದು ಗೋಮಾಂಸ ಅಥವಾ ಆಹಾರದ ಹಕ್ಕಿನ ವಿಚಾರ ಇರಬಹುದು; ವಿದ್ಯಾರ್ಥಿ- ವಿದ್ಯಾರ್ಥಿನಿಯರ ಸಮಾನತೆ ವಿಚಾರ ಇರಬಹುದು; ಅಥವಾ ಹೊಸ ಸಾಂಸ್ಕೃತಿಕ ಭಾಷ್ಯ ಬರೆಯುವುದು ಇಲ್ಲವೇ ಸೃಷ್ಟಿಸುವುದು ಆಗಿರಬಹುದು. ದಲಿತರು ಅಥವಾ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳ ವಿರುದ್ಧದ ಯಾವುದೇ ಬಗೆಯ ತಾರತಮ್ಯ ಅಥವಾ ಸಾಮಾಜಿಕ ಬಹಿಷ್ಕಾರವನ್ನು ತಡೆದುಕೊಳ್ಳಲು ಇನ್ನು ಸಾಧ್ಯವೇ ಇಲ್ಲ ಎಂಬ ಸಂದೇಶವನ್ನು ಇಡೀ ಸಮಾಜಕ್ಕೆ ಸಾರಲು ರೋಹಿತ್ ಬಯಸಿದ್ದರು. ಉಳಿದವರಾದರೂ ಗೌರವದಿಂದ ಉತ್ತಮ ಬಾಳ್ವೆ ನಡೆಸುವಂತಾಗಲಿ ಎಂಬ ಇಚ್ಛೆಯಿಂದ ಆತ ಸಾವಿಗೆ ಶರಣಾಗಲು ಬಯಸಿದರು.
(ಕಾಂಚ ಐಲಯ್ಯ, ‘ನಾನು ಏಕೆ ಹಿಂದೂ ಅಲ್ಲ’ ಕೃತಿಯ ಕರ್ತೃ ಹಾಗೂ ವೌಲಾನ ಆಝಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾನಿಲಯದ ಅಲ್ಬೆರುನಿ ಸೆಂಟರ್ ಫಾರ್ ದ ಸ್ಟಡಿ ಆಫ್ ಸೋಶಿಯಲ್ ಎಕ್ಸ್‌ಕ್ಲೂಷನ್ ಆ್ಯಂಡ್ ಇನ್‌ಕ್ಲೂಸಿವ್ ಪಾಲಿಸಿ ಸಂಸ್ಥೆಯ ನಿರ್ದೇಶಕ)
(ಈ ಲೇಖನದಲ್ಲಿ ವ್ಯಕ್ತಪಡಿಸಿದ ನಿಲುವುಗಳು ವೈಯಕ್ತಿಕ)
ಕೃಪೆ: ಹಿಂದೂಸ್ತಾನ್ ಟೈಮ್ಸ್

Writer - ಕಾಂಚ ಐಲಯ್ಯ

contributor

Editor - ಕಾಂಚ ಐಲಯ್ಯ

contributor

Similar News