ರೋಹಿತ್ ವೇಮುಲಾರ ಆತ್ಮಹತ್ಯೆಯಿಂದಾಗಿ ರಾಷ್ಟ್ರದ ಗಮನ ಸೆಳೆದ ದಲಿತ ವಿದ್ಯಾರ್ಥಿ ಸಂಘಟನೆ
ಜನವರಿ 17ರಂದು ನಡೆದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾರ ಆತ್ಮಹತ್ಯೆಗೂ ಮೊದಲು ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯು ಹೈದರಾಬಾದ್‌ನಿಂದ ಆಚೆಗೆ ಅಷ್ಟೊಂದು ಪರಿಚಿತ ಹೆಸರಾಗಿರಲಿಲ್ಲ. ಈಗ, ಅದರ ರಾಜಕೀಯ ಮತ್ತು ಬಲಪಂಥೀಯ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಜೊತೆಗಿನ ವೈಮನಸ್ಸು ರಾಷ್ಟ್ರೀಯವಾಗಿ ಸುದ್ದಿಯಲ್ಲಿದೆ. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿನ ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದ ವೇಮುಲಾ, ಭಾರತೀಯ ಜನತಾ ಪಕ್ಷದ ವಿದ್ಯಾರ್ಥಿ ಶಾಖೆ ಎಬಿವಿಪಿಯ ಸದಸ್ಯರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಆತನನ್ನು ಮತ್ತು ಇತರ ನಾಲ್ವರು ದಲಿತ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಶ್ವವಿದ್ಯಾನಿಲಯವೇ ನೇಮಿಸಿದ ತನಿಖಾ ಮಂಡಳಿಯು ತನಿಖೆ ನಡೆಸಿ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದರೂ, ಬಿಜೆಪಿ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆದು ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿಗಳು ಆವರಣದ ಒಳಗೆ ‘ರಾಷ್ಟ್ರವಿರೋಧಿ, ಜಾತಿವಾದಿಗಳು’ ಎಂದು ಬಣ್ಣಿಸಿದ ಪರಿಣಾಮವಾಗಿ ಐದು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿತ್ತು. ವಿರೋಧಿಗಳು ‘ಅಸಾ’ (ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿ ಯೇಶನ್)ದ ಚಟುವಟಿಕೆಗಳನ್ನು ಸ್ವೀಕಾರಾರ್ಹರವಲ್ಲ ಎಂದು ಹೇಳಲು ಮುಝಪ್ಫರ್ ನಗರ ಗಲಭೆ ಮತ್ತು ಯಾಕೂಬ್ ಮೆಮನ್‌ನ ಗಲ್ಲುಶಿಕ್ಷೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ತುಣುಕುಗಳನ್ನು ಪ್ರದರ್ಶಿಸಿದ್ದವು. ಅದರ ಪ್ರಸ್ತುತ ಮತ್ತು ಹಿಂದಿನ ಸದಸ್ಯರ ಪ್ರಕಾರ ‘ಅಸಾ’ ಕಳೆದ 23 ವರ್ಷಗಳಲ್ಲಿ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ದಲಿತ ಹಕ್ಕುಗಳನ್ನು ಪ್ರತಿಪಾದಿಸುವ ಮೂಲಕ ಒಂದು ಪ್ರಬಲ ಶಕ್ತಿಯಾಗಿ ಬೆಳೆದಿದೆ. ಮತ್ತು ಇದನ್ನು ನಿಜವಾಗಿಯೂ ಸದಸ್ಯರು ಒಪ್ಪುತ್ತಾರೆ. ಜಾತೀಯ ಶೋಷಣೆಗೆ ಪ್ರತಿಯಾಗಿ ಹಿಂಸಾಚಾರವು ಸಂಘಟನೆಯ ಒಂದು ಭಾಗವಾಗಿ ರೂಪುಗೊಂಡಿರುವುದು ನಿಜ.
ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯನ್ನು 1993ರಲ್ಲಿ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ವಿದ್ಯಾರ್ಥಿ ರಾಜಶೇಖರ್ ನೇತೃತ್ವದಲ್ಲಿ ದಲಿತ ವಿದ್ಯಾರ್ಥಿಗಳ ಸಣ್ಣ ಗುಂಪೊಂದು ಸ್ಥಾಪಿಸಿತು. ಆ ಕಾಲದಲ್ಲಿ ವಿಶ್ವವಿದ್ಯಾನಿಲಯದಲ್ಲಿ ‘ರಾಜಕೀಯ ಇಲ್ಲ’ ನೀತಿ ಜಾರಿಯಲ್ಲಿತ್ತು ಮತ್ತು ಯಾವುದೇ ರೀತಿಯ ಭಿತ್ತಿಪತ್ರ ಅಥವಾ ವಿದ್ಯಾರ್ಥಿ ಸಂಘಟನೆಗಳಿಗೆ ಅವಕಾಶವಿರಲಿಲ್ಲ ಎಂದು ಹೈದರಾಬಾದ್‌ನ ಇಂಗ್ಲಿಷ್ ಮತ್ತು ವಿದೇಶಿ ಭಾಷಾ ವಿಶ್ವವಿದ್ಯಾನಿಲಯದಲ್ಲಿ ಸಾಂಸ್ಕೃತಿಕ ವಿದ್ಯಾಭ್ಯಾಸದ ಪ್ರೊಫೆಸರ್ ಆಗಿರುವ ಕೆ. ಸತ್ಯ ನಾರಾಯಣ ಹೇಳುತ್ತಾರೆ. ಸತ್ಯನಾರಾಯಣ ಅವರು ಹೈದ ರಾಬಾದ್ ವಿಶ್ವವಿದ್ಯಾನಿಲಯದಲ್ಲಿ 1988ರಿಂದ 1994ರವರೆಗೆ ವಿದ್ಯಾರ್ಥಿಯಾಗಿದ್ದವರು ಮತ್ತು ಅಸಾದ ಓರ್ವ ಹಳೆಯ ಸದಸ್ಯ ಕೂಡಾ.
ಆದರೆ ಅಸಾಗೂ ಮೊದಲು, ಮಂಡಲ ಸಮಿತಿಯ, ಸರಕಾರಿ ಉದ್ಯೋಗಳಲ್ಲಿ ಜಾತಿಯಾಧಾರಿತ ಮೀಸಲಾತಿಯ ಸಲಹೆಯನ್ನು ಅನುಷ್ಠಾನಕ್ಕೆ ತರಲು ನಡೆದ ಪ್ರಯತ್ನಗಳನ್ನು ವಿರೋಧಿಸಲು 1990ರಲ್ಲಿ ರೂಪುಗೊಂಡ ಪ್ರೋಗ್ರೆಸಿವ್ ಸ್ಟೂಡೆಂಟ್ಸ್ ಫೋರಂ ಇತ್ತು. ‘‘ಎಚ್‌ಸಿಯು (ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿ) ಮಂಡಲ ಸಮಿತಿಯ ವಿರುದ್ಧ ಮೇಲ್ಜಾತಿಯ ಪ್ರತಿಭಟನೆಗಳ ಮುಖ್ಯ ಕೇಂದ್ರವಾಗಿತ್ತು ಮತ್ತು ಪ್ರತೀಕಾರವಾಗಿ ನಾವು ನಡೆಸಿದ ಪ್ರತಿಭಟನೆಯು 20 ದಿನಗಳ ಕಾಲ ವಿಶ್ವವಿದ್ಯಾನಿಲಯವನ್ನು ಮುಚ್ಚುವಂತೆ ಮಾಡಿತ್ತು’’ ಎಂದು ಪ್ರೋಗ್ರೆಸಿವ್ ಸ್ಟೂಡೆಂಟ್ಸ್ ಫೋರಂನ ಸಂಚಾಲಕರಾಗಿದ್ದ ಸತ್ಯನಾರಾಯಣ ತಿಳಿಸುತ್ತಾರೆ.
ರಾಜಶೇಖರ್ ಮತ್ತು ಫೋರಂನ ಇತರ ಸದಸ್ಯರು ಕಾಲೇಜ್ ಆವರಣದಲ್ಲಿ ಹೆಚ್ಚು ನಿರ್ದಿಷ್ಟ ಅಂಬೇಡ್ಕರ್ ತತ್ವದ, ದಲಿತ ವಿದ್ಯಾರ್ಥಿಗಳು ಎದುರಿಸುವ ಶೋಷಣೆ ಮತ್ತು ಭೇದಭಾವದ ಕುರಿತು ತಿಳಿಸುವಂತಹ ಸಂಘಟನೆಯ ಅಗತ್ಯವನ್ನು ಬಹುಬೇಗನೆ ಕಂಡುಕೊಂಡರು. ‘‘ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಲ್ಲಿ ಡ್ರಾಪ್ ಔಟ್‌ಗಳ ಪ್ರಮಾಣ ಅತೀ ಹೆಚ್ಚಾಗಿತ್ತು ಮತ್ತು ಪಿಎಚ್‌ಡಿ ಮಟ್ಟಕ್ಕೆ ಬಂದಾಗ ಅದರಲ್ಲೂ ಮುಖ್ಯವಾಗಿ ವಿಜ್ಞಾನ ವಿಭಾಗದಲ್ಲಿ ಬಹುತೇಕ ದಲಿತ ವಿದ್ಯಾರ್ಥಿಗಳೇ ಇರುತ್ತಿರಲಿಲ್ಲ’’ ಎನ್ನುತ್ತಾರೆ ಸತ್ಯನಾರಾಯಣ.
ಅದರ ಮೊದಲ ಕೆಲವು ವರ್ಷಗಳಲ್ಲಿ ಅಸಾದಲ್ಲಿ 50ಕ್ಕಿಂತಲೂ ಕಡಿಮೆ ಸದಸ್ಯರಿದ್ದರು, ಆದರೆ ಅಂಬೇಡ್ಕರ್ ವಾದಿಗಳಿಂದ ಮತ್ತು ಎಡಪಂಥೀಯ ಸಂಘಟನೆಗಳಿಂದ ವಿಶ್ವವಿದ್ಯಾನಿಲಯದ ಹೊರಗೆ ಬೆಂಬಲವನ್ನು ಪಡೆಯಿತು. ‘‘ಆದರೆ ವಿಶ್ವವಿದ್ಯಾನಿಲಯದ ಆಡಳಿತ ವರ್ಗ ಅಸಾದ ವಿರುದ್ಧವಾಗಿತ್ತು, ಯಾಕೆಂದರೆ ಸಂಘಟನೆಯು ಎಸ್ಸಿ-ಎಸ್ಟಿ ಕೋಟಾದಲ್ಲಿ ಖಾಲಿ ಬಿದ್ದಿರುವ ಸೀಟುಗಳು ಮತ್ತು ದಲಿತ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರನ್ನು ನೀಡದಿರುವುದು ಮುಂತಾದ ಸಮಸ್ಯೆಗಳನ್ನು ಬೆಳಕಿಗೆ ತರಲು ಆರಂಭಿಸಿತ್ತು’’ ಎಂದು ವಿಶ್ವವಿದ್ಯಾನಿಲಯದಲ್ಲಿ ರಾಜಕೀಯಶಾಸ್ತ್ರದ ಪಿಎಚ್‌ಡಿ ವಿದ್ಯಾರ್ಥಿಯಾಗಿರುವ ಮತ್ತು ಅಸಾದ ಕೋರ್ ಕಮಿಟಿಯ ಪ್ರಸ್ತುತ ಸದಸ್ಯನಾಗಿರುವ ಪ್ರಶಾಂತ್ ಬಗ್ಡೆ ಹೇಳುತ್ತಾರೆ. ಹಿಂಸಾಚಾರ
1990ರಲ್ಲಿ ಕ್ಯಾಂಪಸ್‌ನಲ್ಲಿದ್ದ ಮತ್ತೊಂದು ಸಮಸ್ಯೆಯೆಂದರೆ ದಲಿತ ವಿದ್ಯಾರ್ಥಿಗಳ ರ್ಯಾಗಿಂಗ್ ಮತ್ತು ಶೋಷಣೆ. ಆ ಸಮಯಗಳಲ್ಲಿ, ಬಗ್ಡೆ ಹೇಳುವಂತೆ, ಅಸಾ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿತು. ‘‘ಇವರು ಮೂಲಭೂತ ನಿರ್ಧಾರವನ್ನು ತೆಗೆದುಕೊಂಡಿದ್ದರು ಮತ್ತು ದಲಿತ ವಿದ್ಯಾರ್ಥಿಗಳನ್ನು ರ್ಯಾಗಿಂಗ್ ಮಾಡುವವರನ್ನು ಥಳಿಸುತ್ತಿದ್ದರು’’ ಎಂದು ಬಗ್ಡೆ ಹೇಳುತ್ತಾರೆ. ಎಬಿವಿಪಿ ಕ್ಯಾಂಪಸ್‌ನಲ್ಲಿ ತಲೆಯೆತ್ತಲು ಆರಂಭಿಸಿದಾಗ ಎರಡು ತಂಡಗಳ ಸದಸ್ಯರ ಮಧ್ಯೆ ಕೆಲವು ದೈಹಿಕ ಜಟಾಪಟಿ ನಡೆದಿತ್ತು. ‘‘ಆದರೆ ಈಗ ಅಸಾ ತನ್ನ ವಿಧಾನಗಳಲ್ಲಿ ಅತ್ಯಂತ ಪ್ರಜಾಪ್ರಭುತ್ವವಾಗಿದೆ. ಸಂಘಟನೆಯು ಹತ್ತಕ್ಕೂ ಅಧಿಕ ವರ್ಷಗಳಿಂದಲೂ ವಿದ್ಯಾರ್ಥಿ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದೆ ಮತ್ತು ನಾವು ಯಾವುದೇ ರೀತಿಯಲ್ಲಿ ಆಕ್ರಮಣಕಾರಿ ಮತ್ತು ಹಿಂಸೆಯಲ್ಲಿ ತೊಡಗದಂತೆ ಎಚ್ಚರವಹಿಸುತ್ತೇವೆ.’’
ಆದರೆ 2002ರಲ್ಲಿ ಅಸಾದ ಕೆಲವು ಸದಸ್ಯರು ಮತ್ತು ಹಾಸ್ಟೆಲ್‌ನ ಮೂರು ವಾರ್ಡನ್‌ಗಳ ಮಧ್ಯೆ ಜಗಳವಾಯಿತು.ಅದರಲ್ಲಿ ಒಬ್ಬರು ಇಂದು ಉಪಕುಲಪತಿಯಾಗಿರುವ ಅಪ್ಪಾರಾವ್. ಪರಿಣಾಮವಾಗಿ 10 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಯಿತು. ಘಟನೆಗೆ ಕಾರಣವೇನೆಂದರೆ, ‘‘ವಾರ್ಡನ್ ಓರ್ವ ದಲಿತ ವಿದ್ಯಾರ್ಥಿಯನ್ನು ಹಾಸ್ಟೆಲ್ ಮೆಸ್‌ನ ಕೆಲಸದಿಂದ ತೆಗೆದು ನೈರ್ಮಲ್ಯದ ಕೆಲಸವನ್ನು ನೋಡಿಕೊಳ್ಳುವಂತೆ ಮಾಡಿದ್ದರು’’ ಎನ್ನುತ್ತಾರೆ ಸತ್ಯನಾರಾಯಣ. ಅಲ್ಲಿ ಬಿಸಿಬಿಸಿ ಚರ್ಚೆ ನಡೆದು ವಿದ್ಯಾರ್ಥಿಗಳು ಕೆಲವು ವಸ್ತುಗಳನ್ನು ಮುರಿದು ಹಾಕಿದರು ಮತ್ತು ದೈಹಿಕ ಸಂಘರ್ಷ ನಡೆಯಿತು.
ಜಗಳದ ಫಲಿತಾಂಶ ಅಸಾವನ್ನು ಮತ್ತಷ್ಟು ಕುಪಿತಗೊಳಿಸಿತು. ವಿಶ್ವವಿದ್ಯಾನಿಲಯದ ಕಾನೂನಿನ ಪ್ರಕಾರ ಕೇವಲ ಎರಡು ವರ್ಷಗಳಿಗಷ್ಟೇ ಅಮಾನತು ಮಾಡಲು ಸಾಧ್ಯವಿದ್ದರೂ 10 ವಿದ್ಯಾರ್ಥಿಗಳನ್ನು ಖಾಯಂ ಆಗಿ ಅಮಾನತುಗೊಳಿಸಲಾಗಿತ್ತು. ಇದು ವಿಶ್ವವಿದ್ಯಾನಿಲಯದ ಹೊರಗೆಯೂ ಬೆಂಬಲವನ್ನು ಪಡೆದಿದ್ದ ಬೃಹತ್ ಪ್ರತಿಭಟನೆಗೆ ಕಾರಣವಾಯಿತು, ಪರಿಣಾಮ ವಾಗಿ ವಿದ್ಯಾರ್ಥಿಗಳು ಎರಡು ವರ್ಷಗಳ ನಂತರ ತರಗತಿಗಳಿಗೆ ಹಾಜರಾಗಲು ಸಾಧ್ಯವಾಯಿತು.
‘‘ಆಡಳಿತ ವರ್ಗವು ಅಮಾನತಿನಿಂದ ಅಸಾ ವಿಸರ್ಜನೆಯಾಗುತ್ತದೆ ಎಂದು ಭಾವಿಸಿದ್ದರು, ಆದರೆ ಅದು ಈ ಘಟನೆಯ ನಂತರ ಮತ್ತಷ್ಟು ಪ್ರಬಲವಾಯಿತು ಮತ್ತು ವಿದ್ಯಾರ್ಥಿ ಚುನಾವಣೆ ಗಳಲ್ಲಿ ಸ್ಪರ್ಧಿಸಿತು ಮತ್ತು ಗೆದ್ದಿತು’’ ಎಂದವರು ಹೇಳುತ್ತಾರೆ. ಮಹಿಳೆಯರು ಎಲ್ಲಿದ್ದಾರೆ?
2011-12ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ವಿದ್ಯಾರ್ಥಿ ಸಂಘಟನೆ ಜೊತೆ ಮೈತ್ರಿ ಮಾಡಿಕೊಂಡ ಅಸಾ ಕ್ಯಾಂಪಸ್ ಚುನಾವಣೆಯನ್ನು ಗೆದ್ದಿತು ಮತ್ತು ಅದರ ಸದಸ್ಯ ದೋಂತ ಪ್ರಶಾಂತ್ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು. ಇಂದು ಸಂಘಟನೆಯು 500ಕ್ಕಿಂತಲೂ ಅಧಿಕ ಸದಸ್ಯರನ್ನು ಹೊಂದಿದೆ ಮತ್ತು ವಿದ್ಯಾರ್ಥಿ ಸಮೂಹದಿಂದ ಕನಿಷ್ಠ 800 ಮತಗಳನ್ನು ಪಡೆಯುವಲ್ಲಿ ಸಫಲವಾಗಿದೆ. ‘‘ನಾವು ಇಂದು ಬಹಳ ವೈವಿಧ್ಯಮಯ ಕೂಡಾ ಆಗಿದ್ದೇವೆ-ನಮ್ಮಲ್ಲಿ ಎಲ್ಲಾ ಸೀಮಿತಗೊಳಿಸಲ್ಪಟ್ಟ ಗುಂಪುಗಳ ಪ್ರತಿನಿಧಿಗಳು ಇದ್ದಾರೆ, ಮುಸ್ಲಿಮರು, ಆದಿವಾಸಿಗಳಿಂದ ಹಿಡಿದು ಕಾಶ್ಮೀರ ಮತ್ತು ಪೂರ್ವೋತ್ತರದ ವಿದ್ಯಾರ್ಥಿಗಳೂ ಇದ್ದಾರೆ’’ ಎಂದು ಬಗ್ಡೆ ಹೇಳುತ್ತಾರೆ. ಈಗ ಅಸಾ ಹೈದರಾಬಾದ್‌ಉಸ್ಮಾನಿಯಾ ವಿಶ್ವವಿದ್ಯಾನಿಲಯ, ಪಾಂಡಿಚೇರಿ ವಿಶ್ವವಿದ್ಯಾನಿಲಯ ಮತ್ತು ಮುಂಬೈಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್‌ನಲ್ಲೂ ಶಾಖೆಗಳನ್ನು ಹೊಂದಿದೆ. ಜಾತಿಯಾಧಾರಿತ ತುಳಿತದ ವಿರುದ್ಧ ಪ್ರತಿಭಟನೆ ನಡೆಸುವ ಹೊರತಾಗಿ ಅಸಾ ಕ್ಯಾಂಪಸ್‌ಗಳಲ್ಲಿ ಪ್ರಮುಖ ದಲಿತ ವಿದ್ವಾಂಸರು ಭಾಷಣಕಾರರಾಗಿರುವ ಕಾರ್ಯಾಗಾರಗಳನ್ನು ಸಭೆಗಳನ್ನು ನಡೆಸುತ್ತದೆ. ಅದು ಹಲವು ಸೀಮಿತಗೊಳಿಸಲ್ಪಟ್ಟ ಗುಂಪುಗಳ ಸಾಂಸ್ಕೃತಿಕ ಉತ್ಸವವನ್ನು ಆಚರಿಸುತ್ತದೆ ಮತ್ತು ಗ್ರಾಮೀಣ ಹಿನ್ನೆಲೆಯಿಂದ ಬರುವ ಹೊಸ ದಲಿತ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದಲ್ಲಿ ಆರಾಮ ಮತ್ತು ಸುಖಾಗಮನದ ಭಾವ ಹೊಂದಲು ಸಮಯ ಕಳೆಯುತ್ತಾರೆ.
‘‘ಅಸಾದಲ್ಲಿ ಒಂದು ಸಮಾನವಾದ ಟೀಕೆಯೊಂದಿದ್ದರೆ ಅದು ಅದರ ಲಿಂಗ ಅನುಪಾತವು ವಿಪರೀತವಾಗಿ ಅಸಮತೋಲನ ಹೊಂದಿದೆ. ಸಂಘಟನೆಯ ಕೋರ್ ಕಮಿಟಿ ಪ್ರಸ್ತುತ 30 ಸದಸ್ಯರನ್ನು ಹೊಂದಿದೆ, ಅದರಲ್ಲಿ ಕಷ್ಟದಲ್ಲಿ ಎರಡು ಅಥವಾ ಮೂರು ಮಂದಿ ಮಹಿಳೆಯರು. ದಲಿತ ಮಹಿಳೆಯರು ಯಾಕೆ ಹೊರಗೆ ಬರುವುದಿಲ್ಲ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಯಾಕೆ ಹೆಚ್ಚಾಗಿ ಭಾಗವಹಿಸುವುದಿಲ್ಲ ಎಂಬುದು ನನಗೆ ತಿಳಿದಿಲ್ಲ, ಆದರೆ ನಮ್ಮ ಕ್ಯಾಂಪಸ್‌ನಲ್ಲಿ ಒಂದು ದಲಿತ ಮಹಿಳಾ ಚಳವಳಿಯನ್ನು ನಾನು ನೋಡ ಬಯಸುತ್ತೇನೆ’’ ಎನ್ನುತ್ತಾರೆ ಬಗ್ಡೆ.