ಹಿಂದುತ್ವದ ಆಟದಲ್ಲಿ ಕಾಶ್ಮೀರಿ ಪಂಡಿತರು ಕೇವಲ ದಾಳಗಳು

Update: 2016-01-26 17:36 GMT

ಇತ್ತೀಚೆಗೆ ನಾನು ಅಲ್ ಝಝೀರಾ ಟಿವಿಯ ‘ಹೆಡ್ ಟೂ ಹೆಡ್’ ಕಾರ್ಯಕ್ರಮಯದಲ್ಲಿ ಒಬ್ಬ ಚರ್ಚಾಳುವಾಗಿ ಪಾಲ್ಗೊಂಡಿದ್ದೆ. ಇಲ್ಲಿ ಮೆಹದಿ ಹಸನ್ ಬಿಜೆಪಿ/ಆರೆಸ್ಸೆಸ್ ಹಿರಿಯರಾದ ರಾಮ್ ಮಾಧವ್‌ರನ್ನು ಸಂದರ್ಶನ ಮಾಡುತ್ತಿದ್ದರು. ಇಲ್ಲಿ ಚರ್ಚೆಗೆ ಬಂದ ಇತರ ವಿಷಯಗಳ ಪೈಕಿ (ಹಿಂದುತ್ವ ಐಡಿಯಾಲಜಿ ಸಂಬಂಧಿಸಿದಂತೆ) ಕಾಶ್ಮೀರ ವಿಷಯ ಸಹ ಚರ್ಚೆಗೆ ಬಂದಿತ್ತು. ನಾನೊಬ್ಬ ಕಾಶ್ಮೀರಿ ಮಹಿಳೆ. ಜೊತೆಗೆ ಒಬ್ಬ ಮಹಿಳಾವಾದಿ, ‘ರೆಸಿಡ್ಯೂ’ ಎಂಬ(ಕಾಶ್ಮೀರಿಯೊಬ್ಬ ನಾಯಕನಾಗುಳ್ಳ) ಕಾದಂಬರಿಯ ಬರಹಗಾರ್ತಿ, ಒಂದೂವರೆ ದಶಕದಿಂದ ಶೈಕ್ಷಣಿಕ ವಲಯದಲ್ಲಿರುವವಳು ಹಾಗೂ ಕಾಶ್ಮೀರ ಮತ್ತು ಭೂತಾನ್‌ಗಳ ಐಡಿಂಟಿಟಿ ಮತ್ತು ರಾಜಕೀಯ ಆರ್ಥಿಕತೆಗಳ ಮೇಲೆ ಕೆಲಸ ಮಾಡುತ್ತಿರುವವಳು.

ಇಲ್ಲಿ ನನ್ನ ಪ್ರಶ್ನೆ ಏನೆಂದರೆ (ಸದ್ಯ ಭಾರತದಲ್ಲಿ ಚರ್ಚೆಯಲ್ಲಿರುವಂತೆ) ಕಾಶ್ಮೀರಿ ಪಂಡಿತ ಮಹಿಳೆಯೊಬ್ಬಳು ಕಾಶ್ಮೀರದ ಇತಿಹಾಸ, ರಾಜಕೀಯಗಳ ಬಗ್ಗೆ ಜಾತ್ಯತೀತ ಭಾಷೆಯಲ್ಲಿ ಮಾತನಾಡಬಾರದೇ? ಹೇಗೆಂದರೆ, ಮಲೆಯಾಳಂನ ಪ್ರಸಿದ್ಧ ವಿಮರ್ಶಕರೊಬ್ಬರು ಅವರನ್ನು ಕೇವಲ ‘ಒಬ್ಬ ಮುಸ್ಲಿಮ್’ ಎಂಬ ಚೌಕಟ್ಟಿನಲ್ಲಿ ಕೂರಿಸಿದ ಕಾರಣದಿಂದ ರಾಮಾಯಣದ ಬಗ್ಗೆ ಬರೆಯುವುದನ್ನು ನಿಲ್ಲಿಸಿದಂತೆ. ಈ ಮತೀಯತೆಯ ವಾತಾವರಣದಲ್ಲಿ-ನಾನು ಕೇವಲ ‘ಕಾಶ್ಮೀರಿ ಪಂಡಿತ’ದ ಸಂಕ್ಷಿಪ್ತರೂಪವಾದ ‘ಕೆಪಿ’ ಮಾತ್ರ! ನಾನು ಕಾಶ್ಮೀರ ಮತ್ತು ಹೆಮ್ಮೆ ಅಲ್ಲ! ನಾನು ಕಾಶ್ಮೀರ ಮತ್ತು ಪ್ರಗತಿಪರಳಲ್ಲ!
 ಈಗಾಗಲೇ ಅಂತಾರಾಷ್ಟ್ರೀಯವಾಗಿ ದಾಖಲಾಗಿರುವ ಕಾಶ್ಮೀರದಲ್ಲಿ ನಡೆಯುತ್ತಿರುವ ನ್ಯಾಯದ ವಿಡಂಬನೆಯನ್ನು (ಸೈನ್ಯೀಕರಣ, ನ್ಯಾಯಾಂಗೇತರ ಹತ್ಯೆಗಳು, ಅತ್ಯಾಚಾರಗಳು, ಒತ್ತಾಯದ ನಾಪತ್ತೆಗಳು, ಆರ್ಮಡ್ ಫೋರ್ಸಸ್ ಸ್ಪೆಷಲ್ ಪವರ್ ಅಥವಾ ಎಎಫ್‌ಎಸ್‌ಪಿಎಯಂತಹ ಕ್ರೂರ ಶಾಸನಗಳು) ನಾನು ಪ್ರಸ್ತಾಪಿಸಿದ್ದೇ ತಡ ನನ್ನ ಸಹ ಚರ್ಚಾಳುವೊಬ್ಬ (ಇವರು ಬಿಜೆಪಿಯ ಹೊರದೇಶದ ಹಿತೈಷಿ ಮತ್ತು ಅದರ ಮಾಜಿ ವಕ್ತಾರರಾದ ಗೌತಮ್ ಸೇನ್) ನನ್ನನ್ನು ನೇರವಾಗಿ ‘ಪಾಕಿಸ್ತಾನ ರಾಯಭಾರಿ’ ಎಂದು ದೂಷಿಸಿದರು, ಹಾಗೂ ಇನ್ನೂ ಆಘಾತಕಾರಿಯಾದ ಸಂಗತಿ ಎಂದರೆ ಈ ಮಾನಹಾನಿಕರವಾದ ಹೇಳಿಕೆಯ ಬಗ್ಗೆ ಕ್ಷಮೆ ಕೇಳಲು ನಿರಾಕರಿಸಿದರು. ನಾನು ಇವರ ಮಾತನ್ನು ವಿರೋಧಿಸುತ್ತಾ ‘ಇದು ಮಾನವ ಹಕ್ಕುಗಳಿಗೆ ಸಂಬಂಧಿಸಿದ್ದು, ಈಗ ನಾವು ಪಾಕಿಸ್ತಾನದ ಬಗ್ಗೆ ಚರ್ಚಿಸುತ್ತಿದ್ದರೂ ಸಹ ಬಲೂಚಿಸ್ತಾನದ ನನ್ನ ನಿಲುವಿನ ಬಗ್ಗೆ ನಿಮಗೂ ಗೊತ್ತಿದೆ’ ಎಂದು ಹೇಳುತ್ತಾ... ಇನ್ನೂ ಮಾತು ಮುಗಿಸುವ ಮುನ್ನವೇ ರಾಮ್ ಮಾಧವ್ ಅವರು ನನ್ನಿಂದ ಕಾಶ್ಮೀರಿ ಹಿಂದೂಗಳನ್ನು ಕೇಂದ್ರೀಕರಿಸಿ ಮಾತನಾಡುವುದನ್ನು ನಿರೀಕ್ಷಿಸಿದ್ದಾಗಿ ಹೇಳಿದರು. ಅದಕ್ಕೆ ಪ್ರತಿಯಾಗಿ ನಾನು ‘ಧರ್ಮಾತೀತರಾಗಿ ಎಲ್ಲಾ ಕಾಶ್ಮೀರಿಗಳೂ ಬವಣೆ ಪಡುತ್ತಿದ್ದಾರೆ’ ಎಂದು ಹೇಳಿದೆ.
ಇಲ್ಲಿನ ಚರ್ಚೆಯ ಕೆಲವು ಮಾತುಗಳು ಕೊನೆಯ ಕಾರ್ಯಕ್ರಮದಲ್ಲಿ ಇರಲಿಲ್ಲ. ಆದರೆ ನನ್ನ ಮಾತುಗಳನ್ನು ಕೇಳಿದ, ಅಥವಾ ಕಾಶ್ಮೀರದ ಮೇಲಿನ ನನ್ನ ಬರಹಗಳನ್ನು ಓದಿದ ಯಾರಿಗಾದರೂ ನನ್ನ ಕಾಶ್ಮೀರಿತನದ ನಿಲುವಿನ ಬಗ್ಗೆ ಅರ್ಥವಾಗುವುದಲ್ಲದೆ ಮತೀಯತೆಯ ಮೂಲಕ ಕಾಶ್ಮೀರಿ ಐಡಿಂಟಿಟಿಯನ್ನು ಗುರುತುಮಾಡುವುದನ್ನು ನಾನು ವಿರೋಧಿಸುತ್ತೇನೆ ಎಂದು ಸಹ ತಿಳಿಯುತ್ತದೆ. ಮುಂದುವರಿದು ಈ ಕಾರ್ಯಕ್ರಮದ ಕೊನೆಯಲ್ಲಿ ನಾನು ಹೇಳಿದ್ದೇನೆಂದರೆ ಕಾಶ್ಮೀರ ಭಾರತದ ಸ್ವತ್ತಾಗಲೀ ಅಥವಾ ಪಾಕಿಸ್ತಾನದ ಸ್ವತ್ತಾಗಲೀ ಅಲ್ಲ ಎಂದು. ಈಗಲೂ ಈ ಎರಡೂ ದೇಶಗಳು ತಮ್ಮ ವಸಾಹತೋತ್ತರ ಸಂದರ್ಭದಲ್ಲಿ ಸಹ ಕಾಶ್ಮೀರಿಗಳ ಒಪ್ಪಿಗೆ ಇಲ್ಲದಿದ್ದರೂ, ಕಾಶ್ಮೀರದ ಗಡಿಗಾಗಿ ಶಕ್ತಿ ಪ್ರದರ್ಶನ ಮಾಡುತ್ತಿವೆ. ಕಾರ್ಯಕ್ರಮ ಪ್ರಸಾರವಾದ ಕ್ಷಣದಿಂದಲೂ ಇಮೇಲ್, ಟ್ವಿಟರ್, ಫೇಸ್‌ಬುಕ್ ಅಷ್ಟೇಕೆ ಫೋನಿನ ಮೂಲಕ ಸಹ ವಿಧವಿಧವಾಗಿ ನನ್ನನ್ನು (ಜೆಹಾದಿ ಪಕ್ಷಪಾತಿ, ಐಸಿಸ್ ಬೆಂಬಲಿಗಳು, ಹಿಂದುತ್ವಕ್ಕೆ ಕಳಂಕ ಇತ್ಯಾದಿಯಾಗಿ) ನಿಂದಿಸಲಾಗುತ್ತಿದೆ. ರಾತ್ರಿ ಎರಡು ಗಂಟೆಯ ಹೊತ್ತಿನಲ್ಲಿ ಕರೆ ಮಾಡುವುದು, ಮೆಸೇಜ್ ಮಾಡುವುದು ಸೇರಿದಂತೆ ಕೊಲೆಬೆದರಿಕೆ ಹಾಕಲಾಗಿದೆ ಮತ್ತು ನನ್ನ ವಿರುದ್ಧ ಕಾನೂನು ಕ್ರಮದ ಬೆದರಿಕೆ ಸಹ ಒಡ್ಡಲಾಗಿದೆ. ನನಗೆ ಪಶ್ಚಿಮ/ಐಸಿಸ್/ಸೋನಿಯಾ ಗಾಂಧಿ/ಪಾಕಿಸ್ತಾನ/ಅರಬ್ ದೇಶಗಳಿಂದ ಹಣ ಕೊಡಲಾಗಿದೆ ಎಂದು ದೂಷಿಸಲಾಗುತ್ತಿದೆ. ಹಾಗೆಯೇ ನನ್ನ ವಿರುದ್ಧ ಇಂಥದ್ದೇ ಪ್ರಚಾರವನ್ನು ಮುಂದುವರಿಸುವುದಾಗಿಯೂ ಬೆದರಿಕೆ ಒಡ್ಡಲಾಗಿದೆ. ಈ ದೇಶದಲ್ಲಿ ಹೆಂಗಸರ ವಿಷಯದಲ್ಲಿ ರಕ್ತಗತವಾಗಿರುವ ವಿವಾಹದ್ವೇಷ ಮತ್ತು ಲಿಂಗಾಧಾರಿತ ಬೈಗುಳಗಳನ್ನು ವಿವಿಧ ಆವೃತ್ತಿಗಳಲ್ಲಿ ಸಾರ್ವಜನಿಕವಾಗಿ ನನ್ನ ಮೇಲೆ ಪ್ರಯೋಗಿಸಲಾಗುತ್ತಿದೆ, ಉದಾಹರಣೆಗೆ: ಹಾದರಗಿತ್ತಿ, ಸೂಳೆಯ ಮಗಳು, ಲವ್ ಜಿಹಾದ್‌ಗೊಳಗಾದ ಜಾತಿಗೆಟ್ಟವಳು ಇತ್ಯಾದಿ.
   ಭಾರತದ ರಾಜಕೀಯದಲ್ಲಿ ಮತ್ತು ಸಮಾಜದಲ್ಲಿ ಬೆದರಿಕೆ ಹಾಕುವುದು ಹೊಸದೇನಲ್ಲ! ಬಹಳ ಹಿಂದೆ ದಿಲ್ಲಿ ವಿಶ್ವವಿದ್ಯಾನಿಲಯದ ಶ್ರೀರಾಮ್ ವಾಣಿಜ್ಯ ಕಾಲೇಜಿನಲ್ಲಿ ಎಕನಾಮಿಕ್ಸ್ ಸೊಸೈಟಿಯ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧಿಸಿದ್ದಾಗ ನನಗೆ ಇಂತಹುದೇ ಅನೇಕ ಫೋನ್ ಕರೆಗಳು ಬಂದಿದ್ದವು. ಅವು ನನಗೆ ಸಲಹೆ ಕೊಟ್ಟಿದ್ದೇನೆಂದರೆ; ‘‘ನಿನ್ನ ಮೇಲೆ ಅತ್ಯಾಚಾರ ಇಲ್ಲವೇ ದೈಹಿಕ ಆಕ್ರಮಣ ನಡೆಯಬಾರದು ಎಂದಿದ್ದರೆ ನಿನ್ನ ಉಮೇದುವಾರಿಕೆಯನ್ನು ಹಿಂದೆಗೆದುಕೋ’’ ಎಂದು!! ಆದರೆ ಈಗ ನಾನು ಕಾಶ್ಮೀರದ ಬಗ್ಗೆ ಮಾತನಾಡಿದಾಗ, ಬರೆಯುವಾಗ ನನಗೆ ನನ್ನ ಕುಟುಂಬಕ್ಕೆ ಇಂತಹ ಸಂದೇಶಗಳು, ಬೈಗುಳಗಳು, ಬೆದರಿಕೆಗಳು ಬರುತ್ತಿರುವುದು ಹಿಂದೂ(ಕಾಶ್ಮೀರಿ) ಮತಾಂಧ ಗುಂಪುಗಳಿಂದ. ಇವರು ಇಲ್ಲೆಲ್ಲಾ ಕೆಲವು ನಿರ್ದಿಷ್ಟವಾದ ಕ್ರಮದಲ್ಲಿ ನನ್ನ ಮೇಲೆ ಈ ಆಕ್ರಮಣ ನಡೆಸಿದ್ದಾರೆ. ಆ ವಿಷಕಾರುವ ಮಾತುಗಳನ್ನೆಲ್ಲಾ ಸರಿಯಾಗಿ ಶೋಧಿಸಿದರೆ ಉಳಿಯುವ ಸಾರವೆಂದರೆ ‘ಈ ಕಾಶ್ಮೀರಿ ಮುಸ್ಲಿಮರಿಗೆ ಅವರ ಸ್ಥಾನ ತೋರಿಸಬೇಕು’ ಎಂಬುದಾಗಿದೆ.

ರಾಕ್ಷಸರು ಮತ್ತು ಮಹಾ ದೇಶಭಕ್ತರು
 ದೇಶಭಕ್ತರೆಂದು ಹೇಳಿಕೊಳ್ಳುವ ಈ ಮಹಾದೇಶಭಕ್ತ ರಾಕ್ಷಸರು, ಕಾಶ್ಮೀರದ ಹಿಂದೂಗಳಿಗೆ ಪ್ರತ್ಯೇಕ ಕ್ಷೇತ್ರದ ವಿಷಬೀಜವನ್ನು ಬಿತ್ತುತ್ತಾ ಕಾಶ್ಮೀರದ ಒಳಗಿನ ಬದುಕಿನಲ್ಲಿ ಎರಡು ದಶಕಗಳಿಂದ ಭೀತಿಹುಟ್ಟಿಸಿ, ವಿಪರೀತ ಅಸಹನೀಯಗೊಳಸಿದ್ದಾರೆ. ಈ ವಿಷಬಿತ್ತನೆಗೆ ಅವರು ಅಲ್ಲಿ ನಡೆಯುತ್ತಿರುವ ಕಾಶ್ಮೀರಿ ಭಯೋತ್ಪಾದಕರಿಂದ ಸಂಭವಿಸುತ್ತಿರುವ ಹಿಂಸೆ-ಹತ್ಯೆಗಳನ್ನು ಆಧಾರ ಮಾಡಿಕೊಂಡಿದ್ದಾರೆ. ಇದರಿಂದಾಗಿ ಕಾಶ್ಮೀರಿಗಳು ಆತಂಕ, ಬಡತನ, ಒತ್ತಾಯದ ವಲಸೆಗೀಡಾಗುತ್ತಿರುವುದಲ್ಲದೆ ಕ್ಯಾಂಪುಗಳಲ್ಲಿ ಜೀವತೆರುತ್ತಿದ್ದಾರೆ. ಆದರೆ ಇದನ್ನೆಲ್ಲಾ ನೋಡಿದ ಮೇಲೂ ಭಾರತ ಸರಕಾರ ಕಾಶ್ಮೀರಿ ಮುಸ್ಲಿಮರೊಂದಿಗೆ ಏನು ಮಾಡಿದೆ ಎಂದು ಅರ್ಥಮಾಡಿಕೊಳ್ಳಲಾಗುತ್ತಿಲ್ಲವೇ?
   ತುಂಬಾ ವೇಗವಾಗಿ ಪ್ರತ್ಯೇಕವಾಗಿ ಧ್ರುವೀಕರಣಗೊಳ್ಳುತ್ತಿರುವ ಕಾಶ್ಮೀರಿ ಪಂಡಿತರು ಮತ್ತು ಕಾಶ್ಮೀರಿ ಮುಸ್ಲಿಮರು ತಮ್ಮ ಐತಿಹಾಸಿಕ ಸಾಮಾನ್ಯ ಕಾಶ್ಮೀರಿತನದ ಐಡಿಂಟಿಟಿಯನ್ನು ಗುರುತಿಸಿಕೊಳ್ಳಬೇಕಿದೆ. ವಸಾಹತೋತ್ತರವಾದ ಎರಡೂ ರಾಷ್ಟ್ರಗಳನ್ನು ಬದಿಗೆ ತಳ್ಳಿ, ಯಾವ ಪಿತೃಪ್ರಾಯ ಅಧಿಕಾರದಿಂದ, (ಈ ಹಿಂದೆ ಸ್ವಾಂತಂತ್ರ ಪೂರ್ವದಲ್ಲಿ ಅನೇಕ ಬಾರಿ ವರ್ತಿಸಿದಂತೆ) ಕಮ್ಯುನಿಸ್ಟ್ ವಿರೋಧಿ, ಕಮ್ಯುನಲಿಸಂ ವಿರೋಧಿ, ಸೈನ್ಯವಿರೋಧಿಯಾದ ಹಾಗೂ ಧನಾಧಾರಿತ ದಾಸ್ಯದಿಂದ ಹೊರತಾದ ನೀತಿಗಳನ್ನು ಅನುಸರಿಸಿ ಮುಂದೆ ಸಾಗುವ ಬಗ್ಗೆ ಯೋಚಿಸಬೇಕಿದೆ. ಕಾಶ್ಮೀರಿ ಪಂಡಿತರ ವಿಷಯವನ್ನು ಹಿಂದೂ ಮೂಲಭೂತವಾದ ಕಾಶ್ಮೀರಿ ಮುಸ್ಲಿಮರ ವಿರುದ್ಧ ರಾಕ್ಷಸೀಯವಾಗಿ ಬಳಸುತ್ತಿದೆ. ಕಾಶ್ಮೀರಿ ಮುಸ್ಲಿಮರನ್ನು ಪೂರ್ಣ ಇಸ್ಲಾಮ್ ದೇಶವಾದ ಪಾಕಿಸ್ತಾನದ ಮುಸ್ಲಿಮರಿಗಿಂತ ಹೆಚ್ಚು ಅಪಾಯಕಾರಿಗಳಾದ ಹುಟ್ಟಾ ದೇಶದ್ರೋಹಿಗಳಂತೆ ಚಿತ್ರಿಸಲಾಗುತ್ತಿದೆ. ಮತ್ತು ಇದನ್ನು ತನಗೆ ಅಗತ್ಯಬಿದ್ದಾಗಲೆಲ್ಲಾ ರಾಜಕೀಯವಾಗಿ ನಗದುಮಾಡಿಕೊಳ್ಳಲು ಈ ಮತೀಯ ಕಂದರವನ್ನು ಬಳಸಿಕೊಳ್ಳುತ್ತಿದೆ. ಹಾಗಾಗಿಯೇ ಮೋದಿಯವರು ಪಠಾಣ್‌ಕೋಟ್‌ನಲ್ಲಿ ಜೈಶ್ ಎ ಮುಹಮ್ಮದ್ ನಿಂದ ದಾಳಿನಡೆದಾಗ ಅದನ್ನು ‘ಮಾನವೀಯತೆಯ ಶತ್ರುಗಳು’ ಎಂದು ಹೇಳುತ್ತಾರೆ (ಮತ್ತು ಕೇಂದ್ರ ಮಂತ್ರಿಗಳು ಇದು ಪಾಕಿಸ್ತಾನದಲ್ಲಿಯೇ ಪ್ಲಾನ್ ಮಾಡಲಾಗಿದ್ದೆಂದು ದೃಢೀಕರಿಸುತ್ತಾರೆ). ಆದರೆ ಇಂಥದ್ದೇ ಧಾಳಿ ಪಾಕಿಸ್ತಾನಿ ಉಗ್ರವಾದಿಗಳಿಂದ ಕಾಶ್ಮೀರದಲ್ಲಿ ನಡೆದರೆ ಅದನ್ನು ಕಾನೂನಿನ ಕ್ರೌರ್ಯ ಮತ್ತು ಶಾಂತಿ ಮಾತುಕತೆಗೆ ಅಡ್ಡಿ ಎಂದು ಬಣ್ಣಿಸಲಾಗುತ್ತದೆ.
  ಕೆಲವು ಆಯ್ದ ಇತಿಹಾಸದ ಭಾಗಗಳನ್ನು ಮಾತ್ರ ಓದಿಕೊಂಡು (ಇದರಲ್ಲಿ 1947ರಲ್ಲಿ ಜಮ್ಮುವಿನಲ್ಲಿ ನಡೆದ ನರಮೇಧ ಮತ್ತು 1987ರ ಚುನಾವಣಾ ಹಿಂಸಾಚಾರಗಳನ್ನು ನಿರ್ಲಕ್ಷಿಸಲಾಗುತ್ತದೆ), ಅಸ್ಥಿರ ನೀತಿಗಳನ್ನು ಮುಂದೊಡ್ಡುತ್ತಾ, ಪಟ್ಟಭದ್ರ ಹಿತಾಸಕ್ತಿಗಳ ವೈವಿಧ್ಯ ಸೈನ್ಯವ್ಯೆಹಗಳನ್ನು ಎದುರಿಸುವಲ್ಲಿ ವಿಫಲವಾಗಿರುವ ಈ ಹಿಂದುತ್ವದ ಶಕ್ತಿಗಳು ಸಮಸ್ಯಾತ್ಮಕ ನೀತಿಗಳನ್ನು (ಹಿಂದಿರುಗಿದ ಕಾಶ್ಮೀರಿ ಬ್ರಾಹ್ಮಣರಿಗೆ ಪ್ರತ್ಯೇಕ ನಗರಗಳನ್ನು ನಿರ್ಮಿಸುವಂತಹ) ಮುಂದೊಡ್ಡುತ್ತಿವೆ ಮತ್ತು ಸಂವಿಧಾನ ದತ್ತವಾಗಿ ಸಂರಕ್ಷಿಸಲ್ಪಟ್ಟಿರುವ (ಈಗಾಗಲೇ ವ್ಯವಸ್ಥಿತವಾಗಿಯೇ ನಿರ್ಜೀವಗೊಳಿಸಲಾಗಿರುವ) 370ನೆ ಆರ್ಟಿಕಲ್ ಅನ್ನು ಮುಂದೊಡ್ಡಿ ಸಮಾಧಾನ ಪಡಿಸುವ ಪ್ರಕ್ರಿಯೆಗಳಲ್ಲಿ ನಿರತವಾಗಿವೆ.
ಅನುಕೂಲಸಿಂಧು ರಾಜಕೀಯ
ಈಗ ಇಲ್ಲಿ ಆಡಳಿತ ಮಾಡುತ್ತಿರುವ ಪಿಡಿಪಿ-ಬಿಜೆಪಿ ಸಹಯೋಗದ ಸರಕಾರ ‘ಮಂಡಾರಿನ್-ಮ್ಯಾಕಿಯವೆಲ್ಲಿ ಸಂವಾದ’ ಸರಣಿಯ ಮುಂದುವರಿದ ರೂಪವಷ್ಟೇ. ಇದು ಜಮ್ಮು-ಕಾಶ್ಮೀರದ ಒಳಬೇರುಗಳಿಗೆ ಲಗ್ಗೆ ಹಾಕಲು ಹಿಂದುತ್ವ ರೂಪಿಸಿರುವ ಪಿತೂರಿ. ಈ ವರ್ಷ ಶ್ರೀನಗರದಲ್ಲಿ ಮುಹರ್ರಂ ಮೆರವಣಿಗೆಯನ್ನು ನಿಷೇಧಿಸಲಾಗಿದೆ ಮತ್ತು ಅದೇ ಹೊತ್ತಿನಲ್ಲಿ ಜಮ್ಮುವಿನಲ್ಲಿ ಆರೆಸ್ಸೆಸ್ ಆಯುಧ ಸಹಿತರಾಗಿ ಮೆರವಣಿಗೆ ಮಾಡಲು ಅನುಮತಿ ನೀಡಲಾಗಿದೆ. ಪಿಡಿಪಿ-ಬಿಜೆಪಿ ಜಂಟಿ ಸರಕಾರ ರಚನೆಯಲ್ಲಿ ರಾಮ್ ಮಾಧವ್‌ರೊಂದಿಗೆ ಪಾತ್ರವಹಿಸಿದ್ದ ಹಸೀಬ್ ದ್ರಾಬು ‘‘ಜಮ್ಮು-ಕಾಶ್ಮೀರದೊಳಕ್ಕೆ ನುಗ್ಗುತ್ತಿರುವ ಆರೆಸ್ಸೆಸ್ ಅನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ’’ ಎಂದು ಹೇಳಿದ್ದಾರೆ. ಇವರಿಗೆ ಮುಸ್ಲಿಮ್ ರಾಷ್ಟ್ರೀಯ ಮಂಚ್‌ನ ಬೆಂಬಲವಿದೆ, ಇವರೊಂದಿಗೆ ಕೂಡಿ 2016ರ ಮೇ ತಿಂಗಳಿನಲ್ಲಿ ಬೃಹತ್ ರ್ಯಾಲಿಯೊಂದನ್ನು ಶ್ರೀನಗರದಲ್ಲಿ ಯೋಜಿಸಲಾಗಿದೆ. ಆ ನಂತರದಲ್ಲಿ ಕಾಶ್ಮೀರಿಗಳಿಗೆ ಇನ್ನೂ ಹೆಚ್ಚಿನ ದುರ್ದಿನಗಳು ಕಾದಿರುತ್ತವೆ ಮತ್ತು ಇನ್ನೂ ದಾರುಣ ರಾಜತಂತ್ರಗಳು ಸಹ.
ರಾಮ್ ಮಾಧವ್ ಹೇಳುವ ‘ಪಾಕ್ ಆಕ್ರಮಿತ ಕಾಶ್ಮೀರವೊಂದೇ ನಮ್ಮ ಮುಂದಿರುವ ಅಂತಿಮ ಸವಾಲು’ ಎಂಬ ಹೇಳಿಕೆಯನ್ನು ಒಪ್ಪಿದಂತಿರುವ ಭಾರತ ಸರಕಾರ ಕಾಶ್ಮೀರದ ವಸ್ತುಸ್ಥಿತಿಯನ್ನು ಹೇಗೆ ಗ್ರಹಿಸಿದೆ ಮತ್ತು ಇದನ್ನು ಎದುರಿಸುವಲ್ಲಿ ಹೇಗೆ ಸೋತಿದೆ ಹಾಗೂ ಅದಕ್ಕೆ ಇದನ್ನು ಪರಿಹರಿಸುವ ಬಗ್ಗೆ ಆಸಕ್ತಿಯಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಇದು ಭಾರತದ ಭೂಪಟದಲ್ಲಿ ಪ್ರತಿಬಿಂಬಿತವಾಗಿದೆ. ಇದರಲ್ಲಿನ ಜಮ್ಮು- ಕಾಶ್ಮೀರ ಭೂಪಟವು ಗಿಲ್‌ಗಿಟ್ ಮತ್ತು ಬಲೂಚಿಸ್ತಾನಗಳನ್ನು ಒಳಗೊಂಡಿದೆ (ಇವು ಚೈನಾ ವಶದಲ್ಲಿರುವ ಪ್ರದೇಶಗಳು). ಇಲ್ಲಿ ನಿಯಂತ್ರಣ ರೇಖೆ ಯನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ. ಅಲ್ಲಿ ಇವರ ಕಾನೂನುಗಳನ್ನು ನಿರಾಕರಿಸಲಾಗಿರುವು ದನ್ನು ಒಪ್ಪಿಕೊಳ್ಳದೆ, ಪಾಕಿಸ್ತಾನಿ ಭಯೋ ತ್ಪಾದಕರ ಒಳನುಸುಳು ವಿಕೆಯನ್ನು ಒಪ್ಪಿ ಕೊಳ್ಳದೆ, ಸ್ಥಳೀಯ ‘ಆಝಾದಿ ಬೇಡಿಕೆ’ಯನ್ನು ಒಪ್ಪಿಕೊಳ್ಳದೆ, ಅಂತಿಮವಾಗಿ ಈ ಪ್ರದೇಶಗಳ ನೆಲಮಟ್ಟದ ವಾಸ್ತವಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ಮಾತುಕತೆಗಳ ಮೂಲಕ ರಾಜಕೀಯ ಪರಿಹಾರ ಕಂಡುಕೊಳ್ಳುವು ದಾದರೂ ಹೇಗೆ?
  ಹಿಂದೂ ಬಹುಸಂಖ್ಯಾತತೆಯ ಬಲದಿಂದ ಪುನರ್ವಶ ಮಾಡಿಕೊಳ್ಳುವ ನಡೆಗೆ ಪ್ರಾಮುಖ್ಯತೆ ನೀಡಲಾಗಿದ್ದು, ಒಳಗಿನ ಗೌರವಪೂರ್ಣ ಪ್ರತಿರೋಧಗಳನ್ನೂ ಹೊಸಕಿಹಾಕುವ ಮೂಲಕ ಭಾರತದ ಪ್ರಜಾಪ್ರಭುತ್ವದಲ್ಲಿರುವ ಸಾರ್ವತ್ರಿಕ ಅವಕಾಶಗಳನ್ನು ಕಸಿದುಕೊಳ್ಳಲಾಗಿದೆ. ಬಿಜೆಪಿ ಮತ್ತು ಅದರ ಸಹಯೋಗಿ ಸಂಘಪರಿವಾರ ಜನರ ಬೆಂಬಲ ಪಡೆಯುವ ತನ್ನ ರಾಜಕೀಯ ಸಿದ್ಧಾಂತವನ್ನು ನಿರ್ಮಿಸಲು ವಿಧಿವತ್ತಾಗಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಬಿತ್ತುತ್ತಿದೆ. ಇದಕ್ಕೆ ಪ್ರಚೋದಕವಾಗಿ ಹಿಂದೂ ಎಂಬ ‘ಜನರು’ ಒಂದು ಸದ್ಗುಣ ಸಂಪನ್ನ ಏಕಸ್ವರೂಪದ ಅಸ್ತಿತ್ವ ಎಂದು ಬಿಂಬಿಸುತ್ತಾ ಅದು ವ್ಯವಸ್ಥೆಯ ವಿರುದ್ಧ ಕಾರ್ಯಪ್ರವೃತ್ತವಾಗುತ್ತಿದೆ ಹಾಗೂ ತನ್ನನ್ನು ಸಮರ್ಥಿಸಿಕೊಳ್ಳಲು ಪ್ರಜಾಪ್ರಭುತ್ವದ ಕಾರ್ಯಶೈಲಿಯನ್ನು ದೂಷಿಸಲು ಆರಂಭಿಸುತ್ತಿದೆ. ಅನೇಕ ನಿರ್ಣಾಯಕ ಸಂದರ್ಭಗಳಲ್ಲಿ ಹಿಂದುತ್ವದ ರಾಜಕೀಯ ನಡೆ ಜರ್ಮನಿಯ ನಾಜಿ ನ್ಯಾಯಶಾಸ್ತ್ರಜ್ಞ ಮತ್ತು ಸಿದ್ಧಾಂತಿ ಕಾರ್ಲ್ ಸ್ಕಾಮಿಟ್ ಬೆಂಬಲಿಸುವ ರಾಜಕೀಯ ಸರ್ವಾಧಿಕಾರಿ ನೀತಿಯನ್ನು ಹೋಲುತ್ತದೆ. ರಾಜಕೀಯವನ್ನು ಗೆಳೆಯ/ಶತ್ರುಗಳನ್ನಾಗಿ ವಿಂಗಡಿಸುವ ವೈಷಮ್ಯವಾದದ ಅಂಶಗಳನ್ನು ಒಳಗೊಂಡಿದೆ. ಕೃತಕ ತಯಾರಿಕೆಯ ಈ ವೈಷಮ್ಯವಾದವನ್ನು ಕಾಶ್ಮೀರದಲ್ಲಿನ ‘ಇತರರು ಯಾ ಅವರು’ (ನಾವು ವಿರುದ್ಧ ಅವರು) ಎಂದು ವಿಭಾಗಿಸಲು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ‘ಅವರು’ ಎಂದು ಹೇಳುವಾಗ ಉಗ್ರಗಾಮಿಗಳು/ಅಪಾಯಕಾರಿಗಳು/ಪಾಕಿಸ್ತಾನಿ ಪಕ್ಷಪಾತಿಗಳು ಇತ್ಯಾದಿ ಪದಗಳನ್ನು ಹಿಂದೋಮುಂದೋ ಸೇರಿಸಲಾಗುತ್ತದೆ.

ಇದು ಕಾಶ್ಮೀರಿಗಳಿಗೆ (ಯಾರ ಹೆಸರಿನಲ್ಲಿ ಹಿಂದುತ್ವ ವಿಷ ಕಾರುತ್ತಿದೆಯೋ) ಮತ್ತು ಆತ್ಮಸಾಕ್ಷಿಯುಳ್ಳ ಭಾರತೀಯರಿಗೆ ಸಂಬಂಧಿಸಿದ ವಿಚಾರ. ಇವರು, ಒಂದು ಸಂಘಟಿತ ಆಡಳಿತ ತನ್ನ ನಿಜವಾದ ಉದ್ದೇಶವನ್ನು ತೊರೆದು ಧರ್ಮವಾರು ಧ್ರುವೀಕರಣಕ್ಕಿಳಿದಾಗ, ತುಳಿಯಲು ಪ್ರಯತ್ನಿಸಿದಾಗ, ಜನರ ಇಚ್ಛೆಗಳನ್ನು ನಿರಾಕರಿಸಿದಾಗ ‘ಅದು ನನ್ನ ಹೆಸರಿನಲ್ಲಿ ಬೇಡ’ ಎಂದು ಹೇಳುವುದು ಇವರಿಗೇ ಬಿಟ್ಟ ವಿಚಾರ

Writer - ನಿತಾಶಾ ಕೌಲ್

contributor

Editor - ನಿತಾಶಾ ಕೌಲ್

contributor

Similar News