ಉಗ್ರ ಹಣೆಪಟ್ಟಿ ಕಂಬಿ ಹಿಂದಿನ ಕರಾಳ ಬದುಕು

Update: 2016-01-26 17:39 GMT

ಸುಳ್ಳು ಆರೋಪ ಹೊತ್ತು ಹದಿನಾಲ್ಕು ವರ್ಷ ಕಾಲ ಜೈಲಿನಲ್ಲಿ ಹಿಂಸೆ ಅನುಭವಿಸಿದರೂ, ಸೆರೆಮನೆಯಿಂದ ಮುಕ್ತಿ ಯಾವಾಗ ಎನ್ನುವ ಖಚಿತತೆ ಇನ್ನೂ ಇಲ್ಲದ ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳಿ. ಇದು ಮುಹಮ್ಮದ್ ಆಮಿರ್ ಖಾನ್ ಎಂಬವರ ಕರುಣ ಕಥೆ. ಮಾತಿಗೆ ನಿಲುಕದ ಅನ್ಯಾಯ ಅವರ ಯೌವನವನ್ನು ಕಿತ್ತುಕೊಂಡಿತು.

ವಿಚಿತ್ರವೆಂದರೆ ಅವರದ್ದು ಸಹನೆ, ಪ್ರೀತಿ ಹಾಗೂ ನಿರೀಕ್ಷೆಯ ಕಥೆಯೂ ಹೌದು. ಎರಡು ವರ್ಷಗಳಿಂದ ನಾನು ಅವರನ್ನು ಬಲ್ಲೆ. ನನಗೆ ತಿಳಿದಿರುವಂತೆ ಆತ ಸಭ್ಯ, ಕೋಪ ಮತ್ತು ಕಹಿ ಭಾವನೆಯಿಂದ ಮುಕ್ತ. ನ್ಯಾಯ, ಪ್ರಜಾಪ್ರಭುತ್ವ, ಜಾತ್ಯತೀತ ಮೌಲ್ಯಗಳನ್ನು ಅರ್ಥ ಮಾಡಿಕೊಂಡವರು.
ನಂದಿತಾ ಹಸ್ತಕ್ ಅವರ ಜತೆ ಸೇರಿ ಅವರು ಬರೆದ ‘ಫ್ರೇಮ್ಡ್ ಆಸ್ ಎ ಟೆರರಿಸ್ಟ್; ಮೈ 14 ಇಯರ್ಸ್‌ ಸ್ಟ್ರಗಲ್ ಟೂ ಪ್ರೂವ್ ಮೈ ಇನ್ನೊಸೆನ್ಸ್’ ಎಂಬ ಕೃತಿಯಲ್ಲಿ ಇಪ್ಪತ್ತು ವರ್ಷದವರಿದ್ದಾಗ, 1998ರ ಫೆಬ್ರವರಿಯ ಚಳಿಗಾಲದ ಮುಸ್ಸಂಜೆಯಲ್ಲಿ ಮನೆಪಕ್ಕದಿಂದ ಮಫ್ತಿಯಲ್ಲಿ ಬಂದ ಪೊಲೀಸರು ಹೇಗೆ ಚಿತ್ರಹಿಂಸೆ ನೀಡುವ ಚೇಂಬರ್‌ಗೆ ಒಯ್ದರು ಎನ್ನುವುದನ್ನು ವಿವರಿಸಿದ್ದಾರೆ. ಆ ಕರಾಳ ರಾತ್ರಿಗಳನ್ನು ಮೆಲುಕು ಹಾಕಿದ್ದಾರೆ: ನಗ್ನವಾಗಿ, ಕಾಲುಗಳನ್ನು ತೀರಾ ಅಗಲಿಸುವಂತೆ ಮಾಡಿ, ಒದೆದು, ಎಲೆಕ್ಟ್ರಿಕ್ ಶಾಕ್‌ಗಳನ್ನು ನೀಡಿ, ಮುಸ್ಲಿಮ್ ವಿರೋಧಿ ಶಬ್ದಗಳಿಂದ ನಿಂದಿಸಿ, ತಂದೆ ತಾಯಿ ವಿರುದ್ಧವೂ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದ್ದರು. ಅಂತಿಮವಾಗಿ ಒತ್ತಡಗಳಿಗೆ ಮಣಿದು, ಹಲವು ಖಾಲಿ ಹಾಳೆಗಳಿಗೆ ಹಾಗೂ ದಿನಚರಿಗಳಿಗೆ ಸಹಿ ಮಾಡಿದರು. ಇದರ ಫಲವಾಗಿ ಭಯೋತ್ಪಾದನಾ ಕೃತ್ಯಗಳಿಗೆ ಸಂಬಂಧಿಸಿದಂತೆ 19 ಪ್ರಕರಣಗಳನ್ನು ಇವರ ಮೇಲೆ ದಾಖಲಿಸಲಾಯಿತು.
ಇಲ್ಲಿಂದ ಆರಂಭವಾದ ದುಃಸ್ವಪ್ನಗಳು 14 ವರ್ಷ ಕಳೆದವು. ಸಾಮಾನ್ಯವಾಗಿ ತಿಹಾರ್ ಹಾಗೂ ಗಾಝಿಯಾಬಾದ್ ಜೈಲಿನಲ್ಲಿ ಒಂಟಿಯಾಗಿ ಕೂಡಿಹಾಕಲಾಗುತ್ತಿತ್ತು. ಹೊರಜಗತ್ತಿನ ಜತೆಗಿನ ಅವರ ಸಂಪರ್ಕ ಕೇವಲ ಕೋರ್ಟ್ ವಿಚಾರಣೆಯ ದಿನಗಳಲ್ಲಿ ಮಾತ್ರ. ಅವರಿಗೆ ನೀಡಿದ ಚಿತ್ರಹಿಂಸೆ ಬಗ್ಗೆ ಯಾವ ನ್ಯಾಯಾಧೀಶರೂ ಕೇಳಿಲ್ಲ. ವೈದ್ಯರೂ ಅವರ ಗಾಯಗಳ ಬಗ್ಗೆ ದಾಖಲೆ ನೀಡಿಲ್ಲ. ಒಂದು ಉಗ್ರಗಾಮಿ ಪ್ರಕರಣದಲ್ಲಿ ನಿರ್ದೋಷಿಯಾದರೆ ಇನ್ನೊಂದು ಆರಂಭವಾಗುತ್ತಿತ್ತು.
ಅವರ ವಿವರಣೆಗಳು ಎಂಥವರನ್ನೂ ಅಧೀರರಾಗಿಸುತ್ತವೆ. ‘‘ರಾತ್ರಿಯ ವೇಳೆ ಒಬ್ಬನೇ ಮಲಗಿಕೊಂಡು ನಿದ್ದೆ ಬರುವವರೆಗೂ ಅಳುತ್ತಿರುತ್ತೇನೆ. ಗೋಪುರದ ದೀಪವಷ್ಟೇ ನನಗೆ ಬೆಳಕು. ಕಾವಲುಗಾರರ ಬೂಟಿನ ಸದ್ದಷ್ಟೇ ಕೇಳುತ್ತದೆ. ಈ ಕೂಪದಲ್ಲೇ ನನ್ನ ಇಡೀ ಜೀವನ ಕಳೆದುಹೋಗುತ್ತದೆ ಎನಿಸುತ್ತದೆ.’’
ಅವರ ಸೆರೆವಾಸ, ಏಕಾಂತ, ಕ್ರೌರ್ಯ ಹಾಗೂ ಅಮಾನವೀಯ ಜೈಲು ಸ್ಥಿತಿಗತಿಗಿಂತ ಹೆಚ್ಚಾಗಿ ನ್ಯಾಯಾಲಯದ ಕಲಾಪವನ್ನು ಹೊರಗಿನಿಂದ ವೀಕ್ಷಿಸುವ ತಂದೆ ತಾಯಿಯ ದೈನ್ಯ ಸ್ಥಿತಿ ಅವರನ್ನು ಬಾಧಿಸಿದೆ.
ಆದರೆ ಅವರ ಪ್ರೀತಿ ಹಾಗೂ ತಾನು ನಿರಪರಾಧಿ ಎಂಬ ಅವರ ನಂಬಿಕೆಯೇ ಇಷ್ಟೊಂದು ಸುದೀರ್ಘ ಕಾಲದ ನರಳಿಕೆಯ ಯಾತನಾಮಯ ಬದುಕನ್ನು ಮುಂದುವರಿಸಿಕೊಂಡು ಬರಲು ಆಧಾರ. ಪ್ರತಿ ವಿಚಾರಣೆಯಲ್ಲಿ ತಮ್ಮ ತಂದೆ ಹಶೀಂ ಖಾನ್ ಹೇಗೆ ವೀಕ್ಷಿಸುತ್ತಾರೆ ಎನ್ನುವುದನ್ನು ವಿವರಿಸುತ್ತಾರೆ.
‘‘ಅಬ್ಬು ನ್ಯಾಯಾಲಯ ತೆರೆಯುವ ಮುನ್ನವೇ ಹಾಜರಾಗು ತ್ತಾರೆ. ನೇರವಾಗಿ ವಕೀಲರ ಚೇಂಬರ್‌ಗಳ ಸಾಲಿನ ಹೊರಗೆ ಇರುವ ಟೈಪಿಸ್ಟ್ ಬಳಿಗೆ ಹೋಗುತ್ತಾರೆ. ಬೇಗ ಬಂದು ತಮ್ಮ ಅರ್ಜಿಯನ್ನು ಟೈಪ್ ಮಾಡಿಸುತ್ತಾರೆ...ಲಾಕಪ್‌ನಲ್ಲಿ ನನ್ನನ್ನು ಭೇಟಿ ಮಾಡಲು ಅನುಮತಿ ಕೋರುವ ಪತ್ರ ಅದು..ಮನೆಯ ಆಹಾರವನ್ನು ನನಗೆ ನೀಡುವ ಸಲುವಾಗಿ...ಅರ್ಜಿಗಳನ್ನು ಹಿಡಿದುಕೊಂಡು ನನ್ನ ವಿಚಾರಣೆ ನಡೆಯುವ ನ್ಯಾಯಾಲಯದತ್ತ ಧಾವಿಸುತ್ತಾರೆ..ಕುತೂಹಲದಿಂದ ನನ್ನನ್ನು ನೋಡುವ ಸಲುವಾಗಿ ಇಷ್ಟಾಗಿಯೂ ಪೊಲೀಸರು ಪೋಷಕರಿಗೂ ಹಿಂಸೆ ಕೊಡುತ್ತಾರೆ. ವಕೀಲರಿಗೆ ಕೈಲಾಗದಷ್ಟು ಹಣ ನೀಡಬೇಕು..ಯಾರೂ ಸಹಾಯಕ್ಕೆ ಬರುತ್ತಿಲ್ಲ. ಏಕೆಂದರೆ ಉಗ್ರಗಾಮಿಯ ತಂದೆ ಎಂದೇ ಎಲ್ಲರೂ ಗುರುತಿಸುತ್ತಾರೆ’’ ಎಂದು ವಿಷಾದದಿಂದ ಹೇಳಿದ್ದಾರೆ.
‘‘2001ರಲ್ಲಿ ಒಂದು ವಿಚಾರಣೆ ವೇಳೆ ತಂದೆ ಗೈರುಹಾಜ ರಾದ್ದನ್ನು ನ್ಯಾಯಾಧೀಶರು ಗಮನಿಸಿದರು. ಅವರು ಆಸ್ಪತ್ರೆಯಲ್ಲಿದ್ದಾರೆ ಎಂದು ಪೊಲೀಸರು ವಿವರಿಸಿದರು. ಒಂದು ಗಂಟೆ ಕಾಲ ತಂದೆಯನ್ನು ಭೇಟಿ ಮಾಡಲು ನ್ಯಾಯಾಧೀಶರು ಅವಕಾಶ ಮಾಡಿಕೊಟ್ಟರು. ನಳಿಗೆಗಳನ್ನು ಅಳವಡಿಸಿದ್ದಲ್ಲಿಂದಲೇ ಅಬ್ಬು ಹೇಳಿದ ಮೊದಲ ಮಾತು, ನಾನು ನಿನ್ನ ವಿಚಾರಣೆಗೆ ಬರಲು ಸಾಧ್ಯವಾಗಲಿಲ್ಲ. ನನ್ನ ಬಗ್ಗೆ ತಂದೆ ಎಷ್ಟು ಕಾಳಜಿ ಹೊಂದಿದ್ದರು ಎನ್ನುವುದಕ್ಕೆ ಅದು ನಿದರ್ಶನ. ಆದರೆ 19 ಪ್ರಕರಣಗಳ ಪೈಕಿ 11ರಲ್ಲಿ ಖುಲಾಸೆ ಯಾದ್ದರಿಂದ ತೃಪ್ತರಾಗಿದ್ದರು’’ ಎಂದು ಆಮಿರ್ ವಿವರಿಸಿದ್ದಾರೆ.
ಕೆಲ ವಾರಗಳ ಬಳಿಕ ತಂದೆ ನಿಧನರಾದ ಬಗ್ಗೆ ಮಾಹಿತಿ ನೀಡಲಾ ಯಿತು. ದೇವರು ಎಲ್ಲವನ್ನೂ ನೋಡಿ ಕೊಳ್ಳುತ್ತಾನೆ ಎಂದು ನ್ಯಾಯಾಧೀಶರು ಸಮಾಧಾನಪಡಿಸಿದರು. ಸಹಕೈದಿಗಳು ತೋರಿದ ಮಾನವೀಯತೆಯನ್ನೂ ಆಮಿರ್‌ನೆನಪಿಸಿಕೊಂಡಿದ್ದಾರೆ. ಒಮ್ಮೆ ಏಕಾಂತದ ಜೈಲಿನಲ್ಲಿ ರೋಜಾ ಆಚರಿಸುತ್ತಿದ್ದಾಗ, ಸಿಖ್ ಕೈದಿಯೊಬ್ಬರು ಉಪವಾಸ ಅಂತ್ಯಗೊಳಿಸಲು ಖರ್ಜೂರ ಎಸೆಯುತ್ತಿದ್ದರು. ಕೆಲಮಂದಿ ನ್ಯಾಯಾಧೀಶರು ನ್ಯಾಯಸಮ್ಮತವಾಗಿರುವ ಕಾರಣದಿಂದ ಹದಿನಾಲ್ಕು ರ್ವಗಳಲ್ಲಿ ಹಲವು ಪ್ರಕರಣಗಳಲ್ಲಿ ಖುಲಾಸೆಯಾಗಲು ಸಾಧ್ಯವಾಯಿತು. ಸೆಪ್ಟಂಬರ್ 11ರ ಘಟನೆ ಹಾಗೂ ಸಂಸತ್ ಭವನದ ಮೇಲಿನ ದಾಳಿಯ ಸಂದರ್ಭದಲ್ಲಂತೂ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಕೋಮು ಆಧರಿತ ಆರೋಪ ಹೊರಿಸುವ ಸ್ಥಿತಿ ಇತ್ತು. ಜೈಲಿನ ಅಧಿಕಾರಿಗಳು ಮುಸ್ಲಿಮ್ ಕೈದಿಗಳನ್ನು ಬಹಿರಂಗವಾಗಿಯೇ ಅವಮಾನಿಸುತ್ತಿದ್ದರು. ಈ ಸಂದರ್ಭದಲ್ಲಿ ಜೈಲಿನಲ್ಲಿ ಮುಸ್ಲಿಮ್ ಕೈದಿಗಳ ಸಂಖ್ಯೆಯೂ ಹೆಚ್ಚಿತು. ನ್ಯಾಯಾಧೀಶರು ದೂರ ಸರಿದರು
ತಂದೆಯ ಸಾವಿನ ಬಳಿಕ ಎಲ್ಲ ಹೊರೆ ಒಬ್ಬಂಟಿ ತಾಯಿಯ ಮೇಲೆ ಬಿತ್ತು. ತೀರಾ ಅಪರಿಚಿತ ಹಾಗೂ ಪುರುಷರ ವಹಿವಾಟಿಗೇ ಸೀಮಿತವಾಗಿದ್ದ ನ್ಯಾಯಾಲಯ, ಜೈಲು, ವಕೀಲರ ಜಗತ್ತಿನ ಜೊತೆ ಹೊಂದಿಕೊಂಡರು. ಹೀಗೆ ಹನ್ನೊಂದು ವರ್ಷಗಳನ್ನು ಕಳೆದರು. ಈಗ ಪ್ರತಿ ನ್ಯಾಯಾಲಯ ಕಲಾಪಗಳಿಗೆ ಅವರೇ ಹಾಜರಾಗುತ್ತಿದ್ದಾರೆ. ಅರ್ಥವಾಗದ ಸಂದೇಶಗಳನ್ನು ವಕೀಲರ ಬಳಿ ಕೇಳಿ ತಿಳಿದುಕೊಳ್ಳುತ್ತಾರೆ. ಇದೀಗ ಕಾನೂನು ಸೇವಾ ವಕೀಲರು ಇವರನ್ನು ಪ್ರತಿನಿಧಿಸುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ನಿರಪರಾಧಿ ಎಂದು ಸಾಬೀತಾಗಿದ್ದರೆ ಮತ್ತೆ ಕೆಲ ಪ್ರಕರಣಗಳಲ್ಲಿ ಹೈಕೋರ್ಟ್‌ನಲ್ಲಿ ನಿರ್ದೋಷಿ ಎಂದು ಪರಿಗಣಿಸಲಾಗಿದೆ.
2012ರ ಜನವರಿಯ ಒಂದು ಚಳಿಗಾಲದ ಮುಸ್ಸಂಜೆಯಲ್ಲಿ ಜೈಲಿನಿಂದ ಬಿಡುಗಡೆಯಾಗಿರುವುದಾಗಿ ಘೋಷಿಸಲಾಯಿತು. ಅವರ ಪುಸ್ತಕದ ಅತ್ಯಂತ ಉತ್ಕಟವಾದ ಬಣ್ಣನೆ ಎಂದರೆ, ನಾನು ಜೈಲಿನಲ್ಲಿ ಕಳೆದ ಹದಿನಾಲ್ಕು ವರ್ಷಗಳಲ್ಲಿ ಜಗತ್ತು ಎಷ್ಟು ಬದಲಾಗಿದೆ ಎನ್ನುವ ಬಣ್ಣನೆ. ಇಂಟರ್‌ನೆಟ್ ಹಾಗೂ ಮೊಬೈಲ್ ಬಗ್ಗೆ ತಿಳಿದುಕೊಂಡರು. ಜೈಲಿಗೆ ಹೋಗುವ ಮುನ್ನ ಕೇವಲ ದೂರದರ್ಶನವನ್ನು ನೋಡಿದ್ದ ಆಮಿರ್ ಇದೀಗ ಎಷ್ಟು ಚಾನೆಲ್‌ಗಳು ಬಂದಿವೆ ಎಂದು ಅಚ್ಚರಿಪಡುತ್ತಿದ್ದಾರೆ. ಅವರು ಬಿಡುಗಡೆಯಾಗುವ ವೇಳೆಗೆ ತಾಯಿ ಹಾಸಿಗೆ ಹಿಡಿದಿದ್ದರು. ಅಲ್ಲಾಹ್ ಕೊನೆಗೂ ತಾಯಿಯ ಕೊನೆಯ ದಿನಗಳಲ್ಲಿ ಆಕೆಯ ಸೇವೆ ಮಾಡುವ ಕರುಣೆಯನ್ನು ನನಗೆ ಕಲ್ಪಿಸಿದ ಎಂದು ಯಾವಾಗಲೂ ಹೇಳುತ್ತಿರುತ್ತಾರೆ.
ಇವರ ಬಾಲ್ಯದ ಸ್ನೇಹಿತೆ, ಪ್ರಿಯತಮೆ ಅಲಿಯಾ ಅವರಿಗಾಗಿ 14 ವರ್ಷ ಕಾದಿದ್ದಳು. ‘‘ನಮ್ಮದು ಹಳೆಯ ಸಂಪ್ರದಾಯದ ಪ್ರೇಮ’’ ಎಂದು ಸಂಕೋಚದಿಂದ ಹೇಳುತ್ತಾರೆ. ಪರಸ್ಪರ ಮಾತನಾಡಿಕೊಂಡಿರುವುದೇ ಕಡಿಮೆ. ಬಹುತೇಕ ತಮ್ಮ ಯೌವನವನ್ನು ಜೈಲಿನಲ್ಲೇ ಕಳೆದ ವ್ಯಕ್ತಿಯ ಜೊತೆಗೆ ತಮ್ಮ ಮಗಳು ವಿವಾಹವಾಗುವುದು ಆಕೆಯ ತಂದೆಗೆ ಮೊದಲು ಇಷ್ಟವಿರಲಿಲ್ಲ. ಆದರೆ ಸ್ಥಳೀಯರ ಒಂದು ನಿಯೋಗ ಅವರನ್ನು ಭೇಟಿ ಮಾಡಿ ಮನವೊಲಿಸಿತು. ಈಗ ಅವರಿಗೆ ಒಬ್ಬಳು ಮಗಳಿದ್ದಾಳೆ. ಆಮಿರ್, ‘ಅನ್ಹಾದ್’ ಎಂಬ ಕೋಮುಸಾಮರಸ್ಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ.
2015ರ ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ದಿಲ್ಲಿ ಸರಕಾರಕ್ಕೆ ಶೋಕಾಸ್ ನೋಟಿಸ್ ಜಾರಿ ಮಾಡಿ, ಆಮಿರ್‌ಗೆ ಏಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡಿಲ್ಲ ಎಂದು ಪ್ರಶ್ನಿಸಿದೆ. ಉಗ್ರಗಾಮಿ ಎಂಬ ಸುಳ್ಳು ಪ್ರಕರಣ ದಾಖಲಿಸಿ, ಬಲಿಪಶುವಾಗಿ ಮಾಡಲಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಇದರಿಂದಾಗಿ ಅವರು ತಮ್ಮ ತಂದೆ- ತಾಯಿ, ವೃತ್ತಿ, ನಿರೀಕ್ಷೆ, ಕನಸು ಹಾಗೂ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಅವರ ಈ ಎಲ್ಲ ನಷ್ಟಕ್ಕೆ ಪರಿಹಾರ ಸಿಕ್ಕಿದರೆ ಖಂಡಿತಾ ಅಚ್ಚರಿ.
ಕೃಪೆ: ಹಿಂದುಸ್ತಾನ್ ಟೈಮ್ಸ್

Writer - ಹರ್ಷ್ ಮಂದರ್

contributor

Editor - ಹರ್ಷ್ ಮಂದರ್

contributor

Similar News